ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕೊರಳಲಿಕ್ಕಿದ ವಿಧಿಯ ಕಣ್ಣಿ

Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಆತುರತೆಯೇನಿರದು ವಿಧಿಯಂತ್ರ ಚಲನೆಯಲಿ |
ಭೀತತೆಯುಮಿರದು, ವಿಸ್ಮೃತಿಯುಮಿರದೆಂದು ||
ಸಾಧಿಪುದದೆಲ್ಲವನು ನಿಲದೆ, ತಪ್ಪದೆ, ಬಿಡದೆ |
ಕಾತರತೆ ನಿನಗೇಕೆ ? – ಮಂಕುತಿಮ್ಮ || 363 ||

ಪದ-ಅರ್ಥ: ಆತುರತೆಯೇನಿರದು=
ಆತುರತೆ+ಏನೂ+ಇರದು, ಭೀತತೆಯುಮಿ
ರದು=ಭೀತತೆಯುಂ(ಹೆದರಿಕೆಯು)+ಇರದು, ವಿಸ್ಮೃತಿಯುಮಿರದೆಂದುಂ=ವಿಸ್ಮೃತಿಯುಂ(ಮರೆವು)+ಇರದು+ಎಂದೆಂದುಂ(ಎಂದೆಂದಿಗೂ), ಸಾಧಿಪುದದೆಲ್ಲವನು=ಸಾಧಿಪುದು(ಸಾಧಿಸುವುದು)+ಅದು+ಎಲ್ಲವನು, ಕಾತರ=ಆತಂಕ, ತಲ್ಲಣ

ವಾಚ್ಯಾರ್ಥ: ವಿಧಿಯ ಯಂತ್ರದ ಚಲನೆಯಲ್ಲಿ ಯಾವ ಅವಸರವೂ ಇಲ್ಲ. ಅಲ್ಲಿ ಯಾವ ಹೆದರಿಕೆಯಿಲ್ಲ. ಮರೆವಿಲ್ಲ, ತಪ್ಪದೆ, ಬಿಡದೆ, ಕ್ಷಣವೂ ಬೇಸರಿಸದೆ ಎಲ್ಲವನ್ನೂ ಸಾಧಿಸಿಯೇ ಬಿಡುತ್ತದೆ. ಹಾಗಿರುವಾಗ ನಿನಗೆ ಆತಂಕ, ತಲ್ಲಣ ಏಕೆ?

ವಿವರಣೆ: ಏನಾಗಬೇಕೋ ಅದು ಆಗಿಯೇ ತೀರುತ್ತದೆ ಎಂಬುದು ಪೂರ್ವಿಕರ ಮಾತು. ಮುಂದೇನಾದೀತು ಎಂಬುದರ ಅರಿವು ನಮಗಿಲ್ಲ. ಯಾವುದೋ ಕರ್ತವ್ಯವನ್ನು ಮಾಡುತ್ತೇವೆ. ಅದರ ಪರಿಣಾಮ ಏನಾದೀತು, ಯಾವಾಗ ಆದೀತು ತಿಳಿದಿಲ್ಲ. ಕೆಲವು ದೂರದರ್ಶಿಗಳಿಗೆ ಮಹಾಜ್ಞಾನಿಗಳಿಗೆ ಮಾತ್ರ ಗೋಚರವಾದೀತೇನೋ.

ಮಹಾಭಾರತದಲ್ಲಿ, ಕಾಡಿನಲ್ಲಿ ಪಾಂಡುರಾಜ ತೀರಿ ಹೋದಾಗ ಕುಂತಿ ತನ್ನ ಐದು ಮಕ್ಕಳನ್ನು ಕರೆದುಕೊಂಡು ಹಸ್ತಿನಾವತಿಗೆ ಬರುತ್ತಾಳೆ. ಅವರಿನ್ನು ದುರ್ಯೋಧನಾದಿಗಳೊಂದಿಗೆ ಬದುಕಬೆಕು. ಆಗ ಭಗವತ್ ಸ್ವರೂಪಿಗಳಾದ ವೇದವ್ಯಾಸರು ತನ್ನ ತಾಯಿ ಸತ್ಯವತಿಗೆ ಹೇಳುತ್ತಾರೆ, ‘ಪ್ರಥವೀ ಗತ ಯೌವನಾ’. ‘ಅಮ್ಮಾ, ನಿಮ್ಮ ಪಾಲಿಗೆ ಇನ್ನು ಮೇಲೆ ಈ ಧರೆಯ ಯೌವನ ಕಳೆದುಹೋಯಿತು. ಇನ್ನು ಇಲ್ಲಿರುವುದು ಸಾಕು’. ಕುಮಾರವ್ಯಾಸನ ಮಾತು ಇನ್ನೂ ಸುಂದರ, ‘ಹೇಳಬಾರದು ಮುಂದಣದು ದುಷ್ಕಾಲವಿಂದಿಗೆ ನಾಳೆ ನಾಳೆಗೆ ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆ ಹೋಯ್ತು’. ವೇದವ್ಯಾಸರಿಗೆ ಮುಂದಾಗುವುದು ತಿಳಿದಿದ್ದರೂ ತಾಯಿಗೆ ಹೇಳುವುದಿಲ್ಲ. ಸಾಕಿನ್ನು ಇಲ್ಲಿಯ ವಾಸ, ನಡೆ ವಾನಪ್ರಸ್ತಾಶ್ರಮಕ್ಕೆ ಎನ್ನುತ್ತಾರೆ. ಎಲ್ಲರಿಗೂ ವೇದವ್ಯಾಸರ ದಿವ್ಯದೃಷ್ಟಿ ಇರುವುದು ಸಾಧ್ಯವೇ? ಆದರೆ ಅವರಿಗೂ ಮುಂದಾಗುವುದನ್ನು ತಪ್ಪಿಸಲು ಆಗಲಿಲ್ಲ. ಅನಾಹುತ ಮರುದಿನವೇ ಆಗಲಿಲ್ಲ, ಮುಂದೆ ಮೂವತ್ತು ವರ್ಷಗಳಾಚೆ ನಡೆಯುವುದು ತಪ್ಪಲಿಲ್ಲ. ಕುಮಾರವ್ಯಾಸನ ದೇಸೀ ಭಾಷೆ ಇದನ್ನು ಎಷ್ಟು ಸೊಗಸಾಗಿ ಹೇಳುತ್ತದೆ, ‘ಕೊರಳಲಿಕ್ಕಿದ ವಿಧಿಯ ಕಣ್ಣಿಯ ಹುರಿ ಬಲುಹಲೇ’. ಕಣ್ಣಿ ಎಂದರೆ ದನಕ್ಕೆ ಹಾಕುವ ಮೂಗುದಾರ. ಅದರಿಂದಲೇ ದನ ನಿಯಂತ್ರಣಕ್ಕೆ ಸಿಗುವುದು. ಅಂತೆಯೇ ವಿಧಿ ಕೂಡ ಮಾನವನನ್ನು ನಿಯಂತ್ರಿಸುವ ಕಣ್ಣಿಯ ಹಗ್ಗವನ್ನು ಹುರಿ ಮಾಡಿ ಕೊರಳಿಗೆ ಸಿಕ್ಕಿಸಿದೆ. ಅದನ್ನು ತಪ್ಪಿಸಿಕೊಳ್ಳುವುದು ಕಷ್ಟ.

ಬೇಟೆಯಾಡಲು ಹೋದ ದಶರಥ, ಕತ್ತಲಲ್ಲಿ ಸದ್ದನ್ನು ಕೇಳಿ, ಪ್ರಾಣಿಯೆಂದು ಬಾಣ ಬಿಟ್ಟು ಕೊಂದದ್ದು ಒಬ್ಬ ಬ್ರಾಹ್ಮಣ ಬಾಲಕ ಶ್ರವಣಕುಮಾರನನ್ನು. ಅದೊಂದು ಆಕಸ್ಮಿಕ. ಆದರೆ ದೈವ ಆಕಸ್ಮಿಕದ ರೂಪದಲ್ಲಿ ಬಂದು ರಾಮಾಯಣದ ಗತಿಯನ್ನೇ ಬದಲಿಸಿ, ದಶರಥನನ್ನು ಹಣ್ಣು ಮಾಡುತ್ತದೆ. ಕಗ್ಗ ಅದನ್ನು ಕಂಡರಿಸುತ್ತದೆ. ವಿಧಿಗೆ ಯಾವ ಆತುರತೆ ಇಲ್ಲ. ಅದು ಕಾಯುತ್ತದೆ, ಆದರೆ ತಪ್ಪುವುದಿಲ್ಲ. ಅದಕ್ಕೆ ಭಯವಿಲ್ಲ. ಮರೆವಿಲ್ಲ. ಆದ್ದರಿಂದ ಅದಕ್ಕಾಗಿ ನಾವು ತಲ್ಲಣ, ಆತಂಕಗಳನ್ನು ಪಡುವುದು ಬೇಕಿಲ್ಲ. ಯಾಕೆಂದರೆ ಏನಾಗಬೇಕೆಂದು ವಿಧಿ ನಿರ್ಧರಿಸಿದೆಯೋ ಅದು ಆಗಿಯೇ ತೀರುತ್ತದೆ. ಅದನ್ನು ಭರಿಸುವುದು ಮಾತ್ರ ನಮಗಿರುವ ಉಪಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT