ಗುರುವಾರ , ಆಗಸ್ಟ್ 11, 2022
21 °C

ಬೆರಗಿನ ಬೆಳಕು: ಮೋಸದ ದಯೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |
ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||
ತುಟಿಸುಟ್ಟು ರಸನೆಗೆಟುಕದ ಕೀರು ದೈವಕೃಪೆ |
ತಟವಟವೊ ಸೃಷ್ಟಿದಯೆ – ಮಂಕುತಿಮ್ಮ || 364 ||

ಪದ-ಅರ್ಥ: ನಟಿಪುದೊಮ್ಮೊಮ್ಮೆ=
ನಟಿಪುದು (ನಟನೆ ಮಾಡುವುದು) + ಒಮ್ಮೊಮ್ಮೆ, ಮರುಕ=ಕರುಣೆ, ಕಟುಕನಿನಿಸಕ್ಕಿಯನು=
ಕಟುಕನು+ಇನಿಸು+ಅಕ್ಕಿಯನು, ಹಕ್ಕಿಗೆರಚುವವೊಲ್=ಹಕ್ಕಿಗೆ+ಎರಚುವ+ಓಲ್, ರಸನೆಗೆಟುಕದ=ರಸನೆಗೆ(ರುಚಿಗೆ)+ಎಟುಕದ (ದೊರೆಯದ), ತಟವಟ=ಮೋಸ

ವಾಚ್ಯಾರ್ಥ: ಒಮ್ಮೊಮ್ಮೆ ದೈವ ಮನುಷ್ಯರಲ್ಲಿ ಕರುಣೆ ತೋರಿದಂತೆ ನಟಿಸುತ್ತದೆ. ಅದು ಬೇಟೆಗಾರ, ಹಕ್ಕಿಯನ್ನು ಹಿಡಿಯುವ ಮುನ್ನ ಒಂದಿಷ್ಟು ಅಕ್ಕಿಯನ್ನು ಎರಚುವ ಹಾಗೆ. ತುಂಬ ರುಚಿಯಾದ, ಬಿಸಿಯಾದ ಪಾಯಸವನ್ನು ಕುಡಿಯಲು ಅವಸರ ಮಾಡಿ ತುಟಿ ಸುಟ್ಟುಕೊಂಡು ರುಚಿಯನ್ನು ಕಳೆದುಕೊಂಡಂತೆ ದೈವಕೃಪೆ. ಸೃಷ್ಟಿ ನಮಗೆ ತೋರುವ ದಯೆಯೂ ಇಂಥ ಮೋಸದ್ದೆ.

ವಿವರಣೆ: ನೀವು ನಿಮ್ಮ ಜೀವನದ ಗುರಿ, ಉದ್ದೇಶಗಳನ್ನು ಕುರಿತು ಇನ್ನೂರು ಪದಗಳಲ್ಲಿ ಒಂದು ಪುಟ್ಟ ಲೇಖನವನ್ನು ಬರೆದು ನಮ್ಮ ವಿಳಾಸಕ್ಕೆ ಕಳುಹಿಸಿ. ಅದು ಆಯ್ಕೆಯಾದರೆ ನಿಮಗೆ ದೊಡ್ಡ ಬಹುಮಾನ ದೊರಕಬಹುದು ಎಂಬ ಜಾಹೀರಾತು ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸಿತ್ತು. ಅದೊಂದು ಅಂತರರಾಷ್ಟ್ರೀಯ ಕಂಪನಿ ಎಂಬ ಪ್ರಚಾರ. ಗೆಳೆಯನೊಬ್ಬ ತನ್ನ ಲೇಖನವನ್ನು ಚೆನ್ನಾಗಿ ಬರೆದು ಕಳುಹಿಸಿದ. ಹದಿನೈದು ದಿನಗಳಲ್ಲಿ ಅವನಿಗೊಂದು ಮೇಲ್ ಬಂದಿತ್ತು. ಗೆಳೆಯನನ್ನು ಅಭಿನಂದಿಸಿ ಅವನಿಗೆ ಒಂದು ಕೋಟಿ ರೂಪಾಯಿಗಳ ಬಹುಮಾನ ಬಂದಿದೆ ಎಂದು ಅಭಿನಂದಿಸಿತ್ತು. ನಿಮ್ಮ ಒಂದು ಸಂಕ್ಷಿಪ್ತ ಸ್ವವಿವರದ ಜೊತೆಗೆ ಫೋಟೊ ಹಾಗೂ ನಿಮ್ಮ ಬ್ಯಾಂಕಿನ ವಿವರಗಳನ್ನು ಕಳುಹಿಸಿ ಎಂಬ ಸೂಚನೆ ಬಂತು. ಗೆಳೆಯ ಸಂತೋಷದಲ್ಲಿ ಗಗನಕ್ಕೇರಿದ. ಒಂದು ಕೋಟಿ ರುಪಾಯಿಗಳನ್ನು ಯಾರಾದರೂ ಸುಲಭವಾಗಿ ಕೊಡುತ್ತಾರೆಯೇ? ಆತ ಅವರು ಕೇಳಿದ ವಿವರಗಳನ್ನೆಲ್ಲ ನೀಡಿದ. ಮತ್ತೆ ಒಂದು ವಾರದಲ್ಲಿ ಇನ್ನೊಂದು ಮೇಲ್ ಬಂತು. ನಿಮಗೆ ಈ ಕೋಟಿ ರೂಪಾಯಿಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲೇ ಕೊಡಲು ತೀರ್ಮಾನಿಸಿದ್ದರಿಂದ ನಿಮ್ಮ ವಿಮಾನದ ಟಿಕೆಟ್‌ ಅನ್ನು, ಇಲ್ಲಿಯ ವಾಸದ ವ್ಯವಸ್ಥೆಯನ್ನು ತಿಳಿಸುತ್ತೇವೆ, ಅದಕ್ಕಾಗಿ ನಿಮ್ಮ ಪಾಸ್‌ಪೋರ್ಟ್‌ ವಿವರಗಳನ್ನು ಕಳಿಸಿ ಎಂದು ತಿಳಿಸಿದ್ದರು. ಗೆಳೆಯನಿಗೆ ಇನ್ನು ಸಂತೋಷ, ಪುಕ್ಕಟೆ ಅಮೆರಿಕ ಯಾತ್ರೆ. ನಾಲ್ಕು ದಿನಕ್ಕೆ ಮತ್ತೊಂದು ಮೇಲ್, ನಿಮ್ಮ ಪಾಸಪೋರ್ಟಿಗೆ ವೀಸಾ ಹಾಗೂ ತೆರಿಗೆಗಾಗಿ ನಾವು ಕಳಿಸುವ ಅಕೌಂಟಿಗೆ ಐವತ್ತು ಸಾವಿರ ಕಟ್ಟಿ ಎಂಬ ಸಂದೇಶ. ಕೋಟಿ ರೂಪಾಯಿ ಬರುವಾಗ ಐವತ್ತು ಸಾವಿರ ಹೆಚ್ಚೇ? ಈತ ಕಳುಹಿಸಿದ. ಮರುದಿನವೇ ಕಂಪನಿಯವರು ಫೋನ್ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್‌ ಹಾಗೂ ಪಿನ್ ನಂಬರನ್ನು ಹೇಳಿ, ಯಾಕೆಂದರೆ ವೀಸಾ ಆಫೀಸಿನಲ್ಲಿ ಅದು ಬೇಕಾಗಿದೆ ಎಂದರು. ಈತ ಹೇಳಿದ. ಅಷ್ಟೇ. ಮರುದಿನ ಈತ ಬ್ಯಾಂಕಿಗೆ ಹೋದರೆ ಇವನ ಅಕೌಂಟಿನಲ್ಲಿ ಇದ್ದ ನಾಲ್ಕು ಲಕ್ಷ ರೂಪಾಯಿ ಸ್ವಚ್ಛವಾಗಿದೆ. ಯಾವುದೋ ದೂರದ ಆಸೆಗೆ ತನ್ನೆಲ್ಲವನ್ನು ಕಳೆದುಕೊಂಡಿದ್ದ.

ಈ ತರಹದ ಮೃಗಜಲದಂತೆ ಆಸೆಗಳನ್ನು ವಿಧಿ ನಮ್ಮ ಮುಂದೆ ಇಟ್ಟು ಸೆಳೆಯುತ್ತದೆ. ದೈವ ನಮ್ಮಲ್ಲಿ ಕರುಣೆ ತೋರಿತು ಎಂದು ಭಾಸವಾಗುತ್ತದೆ. ಆದರೆ ಅದು ಬೇಟೆಗಾರ ಹಕ್ಕಿಯನ್ನು ಹಿಡಿಯುವ ಮೊದಲು ಅದನ್ನು ಆಕರ್ಷಿಸಲು ಎರಚುವ ಅಕ್ಕಿಯಂತೆ. ಅಕ್ಕಿಯ ಆಸೆಗೆ ಪಕ್ಷಿ ಪ್ರಾಣ ಕಳೆದುಕೊಳ್ಳುತ್ತದೆ. ರುಚಿಯಾದ ಪಾಯಸವನ್ನು ಬೇಗನೆ ಕುಡಿಯಲು ಹೋಗಿ ತುಟಿ ಸುಟ್ಟರೆ ಮುಂದೆ ರುಚಿ ತಿಳಿದೀತೇ? ದೈವಕೃಪೆ ಇಂಥದ್ದು ಎನ್ನುತ್ತದೆ ಕಗ್ಗ. ಕರುಣೆಯನ್ನು ತೋರಿದಂತೆ ಮಾಡಿ ನಮ್ಮನ್ನು ಪರೀಕ್ಷಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.