ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪುಷ್ಕರಿಣಿಯಲ್ಲಿ ಇಲ್ಲದ ಮಣಿ

Last Updated 2 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮಹೋಷಧಕುಮಾರನ ಬುದ್ಧಿಮತ್ತೆಯಿಂದ ರಾಜ ಎಷ್ಟು ಪ್ರಭಾವಿತನಾಗಿದ್ದನೆಂದರೆ ಆತ ಶ್ರೇಷ್ಠಿಯನ್ನು ಕರೆದು, ‘ಶ್ರೇಷ್ಠಿ, ಇನ್ನು ಮೇಲೆ ಮಹೋಷಧಕುಮಾರ ನಿನ್ನ ಪುತ್ರನಲ್ಲ, ನನ್ನ ಪುತ್ರ. ಅವನನ್ನು ಬಿಟ್ಟುಕೊಡು’ ಎಂದು ಕೇಳಿದ. ಶ್ರೇಷ್ಠಿ, ‘ಪ್ರಭೂ, ನನ್ನ ಮಗ ಇನ್ನೂ ಬಾಲಕ. ಅವನ ಬಾಯಿಯಿಂದ ಇನ್ನೂ ತಾಯಿಯ ಹಾಲಿನ ಸುಗಂಧ ಬರುತ್ತಿದೆ’ ಎಂದ. ರಾಜ ಕೇಳಲಾರ, ‘ಈ ದಿನದಿಂದ ಕುಮಾರ ನನ್ನ ಮಗ. ಅವನ ಮೇಲಿನ ಮಮತೆಯನ್ನು ಮರೆತುಬಿಡು. ಇನ್ನು ಮೇಲೆ ಅವನ ವಾಸ ಅರಮನೆಯಲ್ಲೇ’ ಎಂದು ಹೇಳಿ ಅಲ್ಲಿಯೇ ಉಳಿಸಿಕೊಂಡ.

ನಿತ್ಯವೂ ಕುಮಾರನೊಂದಿಗೆ ಮಾತು, ಚರ್ಚೆ ರಾಜನ ಮನಸ್ಸನ್ನೂ ತುಂಬಿತು. ಅಂತೆಯೇ ಅದು ಅಮಾತ್ಯರ ಹೃದಯದಲ್ಲಿ ಕಹಿಯನ್ನು ತುಂಬಿತು. ಒಂದು ದಿನ ಅರಮನೆಯ ಸೇವಕರು ಬಂದು ರಾಜನಿಗೊಂದು ವಿಷಯವನ್ನು ತಿಳಿಸಿದರು. ನಗರದ ದಕ್ಷಿಣದ್ವಾರದ ಬಳಿಯಿದ್ದ ಪುಷ್ಕರಿಣಿಯ ತಳದಲ್ಲಿ ಒಂದು ಅಪೂರ್ವವಾದ ಮಣಿ ಹೊಳೆಯುತ್ತಿದೆ. ವಿಚಿತ್ರವೆಂದರೆ ಅದು ಕೇವಲ ಬೆಳಿಗ್ಗೆ ಸೂರ್ಯೋದಯವಾದ ಎರಡು ತಾಸು ಮಾತ್ರ ಇರುತ್ತದೆ. ನಂತರ ಮಾಯವಾಗುತ್ತದೆ. ಅದನ್ನು ತಿಳಿದವರಿಂದ ಪರೀಕ್ಷಿಸಬೇಕು. ರಾಜ ತನ್ನ ಪ್ರಧಾನ ಅಮಾತ್ಯನಾದ ಸೆನಕನಿಗೆ ಅದನ್ನು ಪರೀಕ್ಷಿಸಲು ಹೇಳಿದ. ಆತ ಬೆಳಿಗ್ಗೆ ಹೋಗಿ ನೋಡಲಾಗಿ ತಳದಲ್ಲಿ ಮಣಿ ಹೊಳೆಯುವುದು ಕಂಡಿತು. ತಕ್ಷಣವೇ ಆತ ನೂರಾರು ಜನ ಸೇವಕರನ್ನು ಕರೆದು, ಅವರನ್ನು ತಳಕ್ಕಿಳಿಸಿ ಶೋಧಿಸಲು ಹೇಳಿದ. ಅವರು ಇಡೀ ಪುಷ್ಕರಿಣಿಯ ತಳವನ್ನು ಕಿತ್ತು ಹಾಕಿದರು, ಕಸ, ಕೆಸರನ್ನು ಎತ್ತಿ ಹಾಕಿದರು. ಕಸದ ಪ್ರತಿಯೊಂದು ಕಣವನ್ನು ತೊಳೆ ತೊಳೆದು ನೋಡಿದರು. ಆದರೆ ಮಣಿ ಸಿಗಲಿಲ್ಲ. ಮರುದಿನ ಮತ್ತೆ ನೂರು ಜನ ಅದೇ ಕಾರ್ಯವನ್ನು ಪುನಃ ಮಾಡಿದರು. ಪುಷ್ಕರಿಣಿಯ ತಳ ಕನ್ನಡಿಯಂತೆ ಶುದ್ಧವಾಯಿತೇ ವಿನಃ ಮಣಿ ಸಿಗಲಿಲ್ಲ. ಸೆನಕನಿಗೆ ಆಶ್ಚರ್ಯ! ಮರುದಿನ ಬೆಳಿಗ್ಗೆ ಮತ್ತೆ ಮಣಿ ತಳದಲ್ಲಿ ಹೊಳೆಯುತ್ತಿದೆ! ಆದರೆ ಬಿಸಿಲು ಏರಿದಂತೆ ಅದು ಮಾಯವಾಗುತ್ತದೆ. ಅವನಿಗೆ ತಲೆ ಕೆಟ್ಟು ಹೋಯಿತು.

ಮರುದಿನ ಮಹೋಷಧಕುಮಾರ ರಾಜನನ್ನು ಕರೆದುಕೊಂಡು ಪುಷ್ಕರಿಣಿಗೆ ಹೋದ. ಸೆನೆಕ ಪಂಡಿತ ಇವನನ್ನು ಪರೀಕ್ಷೆ ಮಾಡಲು ಮಣಿಯನ್ನು ತಳದಲ್ಲಿ ತೋರಿಸಿ, ಮೇಲೆ ತರುವ ಉಪಾಯವನ್ನು ಕೇಳಿದ. ಕುಮಾರ ಪುಷ್ಕರಿಣಿಯ ತಡಿಯಲ್ಲಿ ಕುಳಿತು, ಏಕಾಗ್ರತೆಯಿಂದ ಮಣಿಯನ್ನೇ ನೋಡುತ್ತ ಕುಳಿತ. ಸ್ವಲ್ಪ ಸಮಯದ ಮೇಲೆ ಮಣಿ ಮಾಯವಾಯಿತು. ಕುಮಾರ ನಕ್ಕು, ಮೇಲೆ ಎಲ್ಲೆಡೆ ನೋಡಿ ಹೇಳಿದ, ‘ಪ್ರಭೂ, ಮಣಿ ಪುಷ್ಕರಿಣಿಯಲ್ಲಿಲ್ಲ. ಈ ಬದಿಯಿರುವ ತಾಳೆಯ ಮರದ ಮೇಲೆ ಕಾಗೆಯ ಗೂಡಿನಲ್ಲಿದೆ. ಸೇವಕರನ್ನು ಮರ ಹತ್ತಲು ಹೇಳಿ, ಮಣಿಯನ್ನು ತರಿಸಿ’ ಎಂದ. ಅವರು ಹಾಗೆ ಮಾಡಲಾಗಿ ಮಣಿ ದೊರೆಯಿತು. ನಿನಗೆ ಅದು ಹೇಗೆ ತಿಳಿಯಿತು ಎಂದು ಕೇಳಿದಾಗ, ‘ಮಣಿ ಬೆಳಿಗ್ಗೆ ಹೊಳೆದು ನಂತರ ಮರೆಯಾದರೆ ಅದು ಪ್ರತಿಫಲನವೇ ಇರಬೇಕು. ಇಲ್ಲವಾದರೆ ತಳದಲ್ಲಿ ಹುಡುಕಿಸಿದಾಗ ಸಿಗಬೇಕಿತ್ತಲ್ಲವೇ?’ ಎಂದು ನಕ್ಕ.

ಪಂಡಿತನೆಂದರೆ ಮಹೋಷಧಕುಮಾರನಂತಿರಬೇಕು ಎಂದು ಎಲ್ಲರೂ ಅವನನ್ನು ಕೊಂಡಾಡಿದರು. ಇದ್ದದ್ದನ್ನು ಕಾಣುವುದು ದೃಷ್ಟಿ, ಕಾಣದಿದ್ದನ್ನು ತಿಳುವಳಿಕೆಯಿಂದ, ಅರಿತುಕೊಳ್ಳುವುದು ಜ್ಞಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT