ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕಾರಕ, ಪ್ರೇರಕ ಶಕ್ತಿಗಳು

Last Updated 6 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ |
ಜಾವದಿನ ಬಂದು ಪೋಗುವುವು; ಕಾಲ ಚಿರ ||
ಜೀವದ ವ್ಯಕ್ತಿ ಸಾಯ್ಪುದು; ಜೀವಸತ್ತ್ವ ಚಿರ |
ಭಾವಿಸಾ ಕೇವಲವ – ಮಂಕುತಿಮ್ಮ || 404 ||

ಪದ-ಅರ್ಥ: ದೇವರ್ಕಳುದಿಸಿ (ದೇವರುಗಳು)+ ಉದಿಸಿ, ಮರೆಯಹರು (ಮರೆಯಾಗಿದ್ದಾರೆ), ಚಿರ= ಶಾಶ್ವತ, ಜಾವ= ಬೆಳಗು, ಪೋಗುವುವು= ಹೋಗುವುವು, ಕೇವಲವ= ಕೈವಲ್ಯವನ್ನು

ವಾಚ್ಯಾರ್ಥ: ದೇವರುಗಳು ಉದಿಸಿ ಮರೆಯಾಗುತ್ತಾರೆ ಆದರೆ ದೇವತ್ವ ಶಾಶ್ವತ. ಬೆಳಗು, ದಿನಗಳು ಬಂದು ಹೋಗುತ್ತವೆ ಆದರೆ ಕಾಲ ಶಾಶ್ವತವಾದದ್ದು. ಒಂದು ಜೀವವಿರುವ ವ್ಯಕ್ತಿ ಸಾಯುತ್ತದೆ ಆದರೆ ಜೀವಸತ್ವ ಶಾಶ್ವತ. ಈ ಅನಂತವಾದ ಸತ್ಯವನ್ನು ಚಿಂತಿಸು.

ವಿವರಣೆ: ಪ್ರಾಚೀನ ಕಾಲದಲ್ಲಿ ಪ್ರಕೃತಿಯ ಅದೃಶ್ಯ ಶಕ್ತಿಯನ್ನು ದೇವರೆಂದು ಕರೆದು, ಜನ ಆ ದೇವರುಗಳನ್ನೇ ಆಗೋಚರ ಶಕ್ತಿಯ ಸಂಕೇತಗಳನ್ನಾಗಿ ಪೂಜಿಸಿದರು. ಅಗ್ನಿ, ಆಕಾಶ, ಭೂಮಿ, ನೀರು, ವಾಯುಗಳೇ ದೇವರಾದವು. ನಿರಾಕಾರವನ್ನು ಕಲ್ಪಿಸಿ ಪೂಜೆ ಮಾಡಲು ಕಷ್ಟವೆಂದರಿತ ಮಾನವ, ತನ್ನ ಮಿತಿಯನ್ನು ಮೀರಿದ, ಕಲ್ಪನೆಗೆ ನಿಲುಕದ ಶಕ್ತಿಗಳಿಗೆ ರೂಪ ಕೊಟ್ಟ. ಆತ ಯಾವ ರೂಪ ಕೊಡಬಹುದಿತ್ತು? ಖ್ಯಾತ ನೋಬೆಲ್ ಪ್ರಶಸ್ತಿ ಪುರಸ್ಕತ, ಚಿಂತಕ ಡಾ. ಬಟ್ರಾಂಡ್ ರಸೆಲ್ ಹೇಳುತ್ತಾರೆ, ‘ಒಂದು ಇರುವೆ ದೇವರನ್ನು ಕಲ್ಪಿಸುವುದಾದರೆ ಅದೊಂದು ಅತ್ಯಂತ ದೊಡ್ಡ ಇರುವೆಯಾಗಿರುತ್ತದೆ’. ಅಂತೆಯೇ ನಾವು ದೇವರಿಗೆ ಮನುಷ್ಯರೂಪ ಕಲ್ಪಿಸಿದೆವು. ಅವನು ಅನಂತ, ಅಸಾಧಾರಣ ಮತ್ತು ಶಾಶ್ವತನಾದ್ದರಿಂದ ಅವನಿಗೆ ವಿರಾಟ್ ರೂಪ ಕೊಟ್ಟೆವು. ಭಗವಂತನಿಗೆ ವಿಶ್ವವೇ ಕಣ್ಣು, ವಿಶ್ವವೇ ಮುಖ, ವಿಶ್ವವೇ ಬಾಹು, ವಿಶ್ವವೇ ಪಾದ. ಅವನು ಸರ್ವವ್ಯಾಪಿ. ಮುಂದೆ ಅವತಾರಗಳ ಕಲ್ಪನೆ ಬಂದಿತು. ಈ ಅವತಾರಗಳ ಕಲ್ಪನೆ ಜೀವದ ವಿಕಾಸದ ಹಂತಗಳು. ಮೊದಲು ಜೀವ ಹುಟ್ಟಿದ್ದು ನೀರಿನಲ್ಲಿ ಆದ್ದರಿಂದ ಮತ್ಸ್ಯಾವತಾರ, ನಂತರ ಅದು ನೆಲ-ನೀರು ಎರಡರಲ್ಲಿಯೂ ನೆಲಸಿತು, ಆದ್ದರಿಂದ ಕೂರ್ಮಾವತಾರ. ಆಮೇಲೆ ಅದು ಭೂಮಿಯ ಮೇಲೆ ಹೆಚ್ಚು ನೆಲೆಸಿತು. ಅದನ್ನು ವರಾಹವತಾರ ಎಂದೆವು.

ಹೀಗೆ ಜೀವವಿಕಾಸದ ಹಂತಗಳಲ್ಲಿ ಮನುಷ್ಯನ ಮನಸ್ಸು ಬೆಳೆಯುತ್ತ ಬೇರೆ ಬೇರೆ ದೇವರ ಕಲ್ಪನೆಗಳು ಬಂದವು. ನಂತರ ಮಹಾನ್ ಸಾಧಕರು ದೇವರಾದರು. ರಾಮ, ಕೃಷ್ಣ, ಪರಶುರಾಮ, ಬುದ್ಧ, ಮಹಾವೀರ, ಝರತುಷ್ಟ್ರ, ಶಂಕರ, ಬಸವಣ್ಣ ಹೀಗೆ ದೇವರುಗಳ ಚಿಂತನೆ ಮುಂದುವರೆಯಿತು. ಕಗ್ಗ ಈ ಮಾತನ್ನು ಹೇಳುತ್ತದೆ. ಕಾಲಕಾಲಕ್ಕೆ ನಮ್ಮ ದೇವರುಗಳ ಕಲ್ಪನೆ ಬದಲಾಗುತ್ತ ಬಂದರೂ ದೇವತ್ವವೆಂಬುದು ಒಂದಿದೆ ಎಂಬುದನ್ನು ಮನುಷ್ಯ ಒಪ್ಪಿದ್ದಾನೆ. ನಮ್ಮ ಶಕ್ತಿಯ, ಚಿಂತನೆಯ ಮಿತಿಗಳನ್ನು ದಾಟಿದ ಮಹಾನ್ ಶಕ್ತಿಯೊಂದು ನಮ್ಮನ್ನು ಕಾಪಿಡುತ್ತದೆ ಎನ್ನುವ ನಂಬಿಕೆ ಮಾತ್ರ ಅನೂಚಾನವಾಗಿ ಬಂದು ಶಾಶ್ವತವಾಗಿದೆ. ದೇವರುಗಳು ಬದಲಾಗುತ್ತಾರೆ ಆದರೆ ದೇವತ್ವ ಶಾಶ್ವತ. ಅದರಂತೆ ಎಂದಿನಿಂದಲೂ ಋತುಗಳು ಬದಲಾಗುತ್ತವೆ, ಬೆಳಗು, ದಿನ, ರಾತ್ರಿಗಳು ಚಕ್ರದಂತೆ ಸುತ್ತುತ್ತವೆ. ಆದರೆ ಕಾಲ ಶಾಶ್ವತವಾಗಿದೆ. ವ್ಯಕ್ತಿಗಳು ಸಾಯುತ್ತಾರೆ. ಆದರೆ ಮಾನವ ಜನಾಂಗ ನಿಂತಿದೆ. ಅಂದರೆ ಸದಾಕಾಲ ಬದಲಾಗುವ ವಿಶ್ವದ ಹಿಂದೆ ಎಂದಿಗೂ ಬದಲಾಗದ, ಅನಂತವಾದ, ಕರ್ಮಾತೀತವಾದ, ಸರ್ವಶಕ್ತವಾದ, ಕೈವಲ್ಯವಿದೆ. ನಮ್ಮ ಚಿಂತನೆಯನ್ನು ಅದರೆಡೆಗೆ ತಿರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT