ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಮೃತವಾಗುವ ಕ್ಷಣದ ಸೌಂದರ್ಯ

Last Updated 27 ಜುಲೈ 2021, 19:30 IST
ಅಕ್ಷರ ಗಾತ್ರ

ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ |
ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ ||
ಪೊಂಗುವಾನಂದವದನನುಭವಿಸಿದವನ್ ಅಜನ |
ಹಂಗಿಪನೆ ಕೃಪಣತೆಗೆ ? – ಮಂಕುತಿಮ್ಮ ||443||

ಪದ-ಅರ್ಥ: ತಿಂಗಳಾರರ= ಆರು ತಿಂಗಳುಗಳ, ಬೆಳೆತ= ಬೆಳವಣಿಗೆ, ಕಂಗೊಳಿಪುದದರ= ಕಂಗೊಳಿಪುದು+ ಅದರ, ಸಿರಿಯರೆಗಳಿಗೆಯಲರೊಳ್= ಸಿರಿಯ+ ಅರೆಗಳಿಗೆಯ+ ಅಲರೊಳ್(ಅಲರ್=ಹೂವು)=ಹೂವಿನಲ್ಲಿ.
ಪೊಂಗುವಾನಂದವದನನುಭವಿಸಿದವನ್= ಪೊಂಗುವ (ಹೊಂದುವ, ಪಡೆಯುವ)+ ಆನಂದವ+ ಅದನು+ ಅನುಭವಿಸಿದವನ್,
ಅಜನ= ಬ್ರಹ್ಮನ, ಹಂಗಿಪನೆ= ಹಂಗಿಸುವನೆ, ಕೃಪಣತೆಗೆ=ಜಿಪುಣತನಕ್ಕೆ

ವಾಚ್ಯಾರ್ಥ: ಆರು ತಿಂಗಳುಗಳ ದುಡಿತದಿಂದ ಸುಂದರವಾದ ಗುಲಾಬಿ ಬೆಳೆಯುತ್ತದೆ. ಹೂವಿನ ಸೌಂದರ್ಯ ಅರೆಗಳಿಗೆ ಮಾತ್ರ ಕಂಗೊಳಿಸಿದರೂ, ಆಗ ಪಡೆಯುವ ಆನಂದವನ್ನು ಅನುಭವಿಸಿದವನು, ಬ್ರಹ್ಮನನ್ನು ಜಿಪುಣ ಎಂದು ಟೀಕಿಸುತ್ತಾನೆಯೇ?

ವಿವರಣೆ: ಚಾರ್ಲ್ಸ್‌ ಬ್ರಾನ್ಸನ್ ಎಂಬ ಮಹಾ ಉದ್ಯಮಿ, ನಟ ಒಂದು ಕನಸು ಕಂಡ. ಆಕಾಶಯಾನವನ್ನು ಒಂದು ಪ್ರವಾಸವನ್ನಾಗಿ ಮಾಡಬೇಕು. ಜನ ಭೂಮಿಯ ಗುರುತ್ವಾಕರ್ಷಣೆಯನ್ನು ದಾಟಿ ಹೋಗಿ ನಿರ್ವಾತದಲ್ಲಿ ತೇಲಾಡಿ, ಪೃಥ್ವಿಯ ವಕ್ರತೆಯನ್ನು ಕಂಡುಬರಬೇಕೆಂಬುದು ಅವನ ಅಪೇಕ್ಷೆ. ಅದಕ್ಕಾಗಿ ಏನೆಲ್ಲ ಪ್ರಯತ್ನಗಳು! ಸಾವಿರಾರು ಕೋಟಿ ಹಣ ತೊಡಗಿಸಿ, ಗಗನನೌಕೆಯ ತಯಾರಿ, ಅದನ್ನು ಗಗನಕ್ಕೇರಿಸುವ, ಮತ್ತೆ ಕೆಳಗಿಳಿಸುವ ಎಲ್ಲ ಸುರಕ್ಷಾ ವಿಧಾನಗಳ ಸಿದ್ಧತೆಗಳು ವರ್ಷಗಳ ಕಾಲ ನಡೆದವು. ಕೊನೆಗೆ ಆ ಕ್ಷಣ ಬಂದಿತು. ಬ್ರಾನ್ಸನ್‍ನ ಜೊತೆಗೆ ಮತ್ತೆ ಐದುಮಂದಿ ಆ ಆಕಾಶನೌಕೆಯಲ್ಲಿ ಕುಳಿತು, ನಭಕ್ಕೇರಿ, ನಿರ್ವಾತವನ್ನನುಭವಿಸಿ, ಪೃಥ್ವಿಯ ಗೋಲವನ್ನು ಕಂಡು, ಮರಳಿ ಧರೆಗೆ ಬಂದರು. ಇದು ಆದದ್ದು ಎರಡೇ ತಾಸಿನಲ್ಲಿ! ಈ ಎರಡು ತಾಸಿನ ಅನುಭವಕ್ಕೆ ಅದೆಷ್ಟು ವರ್ಷಗಳ ತಯಾರಿ! ಅದೆಷ್ಟು ಹಣದ ಖರ್ಚು! ಹಾಗಾದರೆ ಈ ಪ್ರಯತ್ನ ವ್ಯರ್ಥ ಎನ್ನೋಣವೆ? ಇಲ್ಲ. ಆ ಎರಡು ತಾಸಿನ ಅನುಭವ ಮಾತ್ರ ಅನ್ಯಾದೃಶವಾದದ್ದು, ವರ್ಣನಾತೀತವಾದದ್ದು. ಅದು ಆ ವ್ಯಕ್ತಿಗಳು ಬದುಕಿರುವವರೆಗೂ ಉಳಿಯುವಂಥದ್ದು. ಬೆಳಿಗ್ಗೆಯಿಂದ ಅಡುಗೆಮನೆಯಲ್ಲಿ ಒದ್ದಾಡಿ, ಒಲೆಯ ಬಿಸಿಯಲ್ಲಿ ಕೈಸುಟ್ಟುಕೊಂಡು ಪರಿಶ್ರಮಪಟ್ಟು ತಾಯಿ ತಯಾರಿಸಿದ ಹಲವಾರು ಪದಾರ್ಥಗಳು ಹತ್ತೇ ನಿಮಿಷದ ಊಟದಲ್ಲಿ ಮುಗಿದು ಹೋಗುತ್ತವಲ್ಲ! ಅದು ವ್ಯರ್ಥವೇ? ಇಲ್ಲ. ಊಟ ಮಾಡುವಾಗ ತನ್ನವವರ ಮುಖದಲ್ಲಿ ಹೊಳೆದ ತೃಪ್ತಿಯ ಮಿಂಚು, ಆ ನಾಲ್ಕು ತಾಸಿನ ಪ್ರಯತ್ನಕ್ಕೆ ಸಂದ ಪ್ರತಿಫಲ. ಹೀಗೆ ಕ್ಷಣಕಾಲದ ತೃಪ್ತಿಗೆ ದೀರ್ಘಕಾಲದ ಪರಿಶ್ರಮದ ಅಗತ್ಯ. ಒಬ್ಬ ತರುಣ ಅಥವಾ ತರುಣಿ ಹದಿನೈದು ವರ್ಷ ಸತತ ಪ್ರಯತ್ನ ಮಾಡಿ, ದೇಹವನ್ನು ಬಾಗಿಸಿ, ದುಡಿಸಿ, ಹದಮಾಡಿ, ಆಹಾರವನ್ನು ಅದಕ್ಕೆ ಹೊಂದಿಸಿ ಒಂದೇ ಲಕ್ಷ್ಯದಿಂದ ಸಾಧನೆ ಮಾಡಿದಾಗ ಒಲಿಂಪಿಕ್ ಬಂಗಾರದ ಪದಕ ಕೊರಳಿಗೆ ಬಿದ್ದೀತು. ಆ ಪದಕ ಹಾಕಿಸಿಕೊಂಡದ್ದು ಎಷ್ಟು ಕ್ಷಣ? ಆದರೆ ಆ ಕ್ಷಣ ಪಟ್ಟ ಪರಿಶ್ರಮವನ್ನು ಸಾರ್ಥಕ ಮಾಡುತ್ತದೆ ಮತ್ತು ಆ ಕ್ಷಣವನ್ನು ಅಮೃತವಾಗಿಸುತ್ತದೆ. ಕಗ್ಗದ ಮಾತು ಅದೇ. ತೋಟದಲ್ಲಿ ಮಾಲಿ ಆರು ತಿಂಗಳು ಸತತವಾಗಿ ದುಡಿಯುತ್ತಾನೆ. ಮಣ್ಣು ಹದಮಾಡಿ, ಗೊಬ್ಬರ ಹಾಕಿ, ಗುಲಾಬಿಯ ಕಂಟಿಯನ್ನು ನೆಟ್ಟು ಪೋಷಿಸುತ್ತಾನೆ. ಆಗೊಂದು ಮುಗುಳು ಮೂಡಿ, ಅರಳಿ ಸುಂದರವಾದ ಹೂವಾಗುತ್ತದೆ. ಅದರ ಆಯುಸ್ಸು ಎಷ್ಟು? ಕೇವಲ ಕೆಲವು ಗಳಿಗೆಗಳು. ಆದರೆ ಅದರ ಕ್ಷಣಕಾಲದ ಬದುಕು ನೀಡುವ ಆನಂದವೆಂಥದ್ದು? ಹೂವಿನ ಸೌಂದರ್ಯವನ್ನು ಕಂಡು ಆನಂದಿಸುವ ಮನುಷ್ಯ, ಆ ಸುಂದರತೆಯನ್ನು ಸೃಷ್ಟಿಸಿದ ಬ್ರಹ್ಮನನ್ನು ಜಿಪುಣ ಎನ್ನುವುದು ಸಾಧ್ಯವೇ? ದೀರ್ಘಕಾಲದ ಪರಿಶ್ರಮಕ್ಕೆ ಕ್ಷಣಕಾಲದ ಸೌಂದರ್ಯ, ಅದರಿಂದ ಅನಂತಕಾಲದ ಆನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT