ಸೋಮವಾರ, ಮೇ 10, 2021
22 °C

ಬೆರಗಿನ ಬೆಳಕು: ರಹಸ್ಯಗಳ ಬಯಲು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ರಾಜ ವಿದೇಹ ಮಹೋಷಧಕುಮಾರನನ್ನು ಕೊಲ್ಲಲು ಅಪ್ಪಣೆ ಮಾಡಿದ್ದನ್ನು ಕೇಳಿದ ರಾಣಿ, ರಾಜ ಮಲಗುವವರೆಗೂ ಸುಮ್ಮನಿದ್ದು, ಅವನು ಮಲಗಿದ ತಕ್ಷಣ ಪಕ್ಕದ ಕೊಠಡಿಗೆ ಹೋಗಿ ಮಹೋಷಧನಿಗೆ ಒಂದು ಪತ್ರ ಬರೆದಳು. ‘ತಮ್ಮಾ, ನಾಲ್ವರು ಪಂಡಿತರು ರಾಜನ ಮನಸ್ಸನ್ನು ಒಡೆದಿದ್ದಾರೆ. ನಾಳೆ ಬೆಳಿಗ್ಗೆ ಅರಮನೆಗೆ ಬರಬೇಡ. ಬಂದರೆ ಅವರು ಕೊಲ್ಲುತ್ತಾರೆ. ಬರುವುದೇ ಆದರೆ, ನಗರವನ್ನು ಕೈವಶ ಮಾಡಿಕೊಂಡು ಬಾ’. ಪತ್ರವನ್ನು ಒಂದು ಲಾಡುವಿನಲ್ಲಿ ಇಟ್ಟು, ಅದನ್ನು ಈಗಲೇ ಮಹೋಷಧಕುಮಾರನಿಗೆ ಕೊಟ್ಟು ಬಾ ಎಂದು ನಂಬಿಗೆಯ ದಾಸಿಯನ್ನು ಕಳುಹಿಸಿದಳು.

ಅದನ್ನು ಓದಿಕೊಂಡು ಮಹೋಷಧಕುಮಾರ ರಾತ್ರಿಯೇ ಮನೆಯನ್ನು ಬಿಟ್ಟು ಹೊರಟ. ಸೂರ್ಯೋದಯಕ್ಕಿಂತ ಮೊದಲೇ ತನಗೆ ಆಪ್ತರಾದವರನ್ನು ಕರೆದು, ತನ್ನ ನಂಬಿಕಸ್ತ ಸೈನಿಕರಿಗೆ ಆಯಕಟ್ಟಿನ ಸ್ಥಳಗಳಲ್ಲಿರುವಂತೆ ವ್ಯವಸ್ಥೆ ಮಾಡಿ, ಇಡೀ ನಗರವನ್ನು ತನ್ನ ಕೈವಶ ಮಾಡಿಕೊಂಡು ಅರಮನೆಗೆ ಬಂದ. ರಾಜನ ಕಾಲಿಗೆ ನಮಸ್ಕಾರ ಮಾಡಿದ. ರಾಜ, ‘ಬೆಳಿಗ್ಗೆ ಅರಮನೆಗೆ ಯಾಕೆ ಬರಲಿಲ್ಲ?’ ಎಂದು ಕೇಳಿದ. ಮಹೋಷಧಕುಮಾರ ನಕ್ಕ. ‘ಬಂದಿದ್ದರೆ ನಿಮ್ಮ ಅಮಾತ್ಯ ಸೆನೆಕ ನನ್ನ ತಲೆ ಕತ್ತರಿಸುತ್ತಿದ್ದನಲ್ಲ’ ಎಂದ. ‘ಇದನ್ನು ನಿನಗೆ ಯಾರು ಹೇಳಿದರು?’ ಆಶ್ಚರ್ಯದಿಂದ ರಾಜ ಕೇಳಿದ. ‘ನನಗೆ ಎಲ್ಲರ ರಹಸ್ಯಗಳೂ ತಿಳಿದಿವೆ. ನಿನ್ನೆ ರಾತ್ರಿ ನೀನು ರಾಣಿಗೆ ಈ ವಿಷಯವನ್ನು ಹೇಳಿದ್ದು ನನಗೆ ಗೊತ್ತಿದೆ’ ಎಂದ ಕುಮಾರ. ರಾಜ ದುರುಗುಟ್ಟಿಕೊಂಡು ರಾಣಿಯನ್ನು ನೋಡಿದ, ಅವಳೇ ರಹಸ್ಯವನ್ನು ಬಯಲು ಮಾಡಿರಬೇಕೆಂದು. ಕುಮಾರ ಹೇಳಿದ, ‘ಪ್ರಭೂ, ಅಕ್ಕ ನನಗೆ ಏನನ್ನೂ ಹೇಳಲಿಲ್ಲ, ನನಗೆ ಎಲ್ಲ ತಿಳಿದು ಹೋಗುತ್ತದೆ. ಉದಾಹರಣೆಗೆ ಅಮಾತ್ಯ ಸೆನೆಕ ಕಾಲವನದಲ್ಲಿ ವೇಶ್ಯೆಯೊಂದಿಗೆ ಅಸಭ್ಯ ಪಾಪಕರ್ಮವನ್ನು ಮಾಡಿ, ಸ್ನೇಹಿತನೊಂದಿಗೆ ಸೇರಿ ಅವಳನ್ನು ಕೊಂದು, ಅವಳ ಆಭರಣಗಳನ್ನು ಸ್ನೇಹಿತನ ಮನೆಯಲ್ಲಿ ಇಟ್ಟಿದ್ದು ತಿಳಿದಿದೆ’. ರಾಜ, ಸೆನೆಕನನ್ನು, ‘ಹೌದೇ?’ ಎಂದು ಕೇಳಿದ. ಅವನು ಹೌದೆಂದು ಗೋಣು ಹಾಕಿದೊಡನೆ ಅವನನ್ನು ಜೈಲಿಗೆ ಹಾಕಿಸಿದ.

‘ಮಹಾರಾಜ, ಅದಷ್ಟೇ ಅಲ್ಲ, ಅಮಾತ್ಯನ ಪುಕ್ಕಸನ ತೊಡೆಯಲ್ಲಿ ಕುಷ್ಠರೋಗವಿದೆ. ಅವನ ತಮ್ಮ ನಿತ್ಯ ಔಷಧಿ ಮಾಡುತ್ತಾನೆ. ಅದೂ ನನಗೆ ತಿಳಿದಿದೆ’ ಎಂದ ಕುಮಾರ. ಹೌದೇ ಎಂಬಂತೆ ಪುಕ್ಕಸನನ್ನು ನೋಡಿದಾಗ ಆತ ತಲೆ ತಗ್ಗಿಸಿದ್ದನ್ನು ಕಂಡು, ಅವನನ್ನೂ ಕಾರಾಗೃಹಕ್ಕೆ ತಳ್ಳಿಸಿದ. ಅಂತೆಯೇ ಕಾವಿಂದನ ರಹಸ್ಯವನ್ನು ತಿಳಿಸಿದ. ‘ಪ್ರಭೂ, ಈ ಕಾವಿಂದ ನರದೇವ ಎಂಬ ಯಕ್ಷನ ಕಾಯಿಲೆಯಿಂದ ನರಳುತ್ತಿದ್ದಾನೆ. ಅದನ್ನು ಏಕಾಂತದಲ್ಲಿ ಮಗನಿಗೆ ಹೇಳಿದ್ದು ನನಗೆ ತಿಳಿದಿದೆ’. ಗಾಬರಿಯಿಂದ ಮುಖ ತಗ್ಗಿಸಿದ ಕಾವಿಂದನನ್ನು ಜೈಲಿಗೆ ಹಾಕಿಸಿದ ರಾಜ. ಇನ್ನು ಉಳಿದವನು ಅಮಾತ್ಯ ದೇವಿಂದ. ‘ಇವನದೇನಾದರೂ ರಹಸ್ಯವಿದೆಯೇ?’ ಎಂದ ರಾಜ ಕೇಳಿದ. ‘ಹೌದು, ಮಹಾಪ್ರಭು. ಇಂದ್ರ ನಿಮ್ಮ ಮುತ್ತಜ್ಜನಿಗೆ ಕೊಟ್ಟ ಮಣಿರತ್ನವನ್ನು ಈತ ಕದ್ದು, ತನ್ನ ತಾಯಿಗೆ ಕೊಟ್ಟಿದ್ದಾನೆ. ಆ ರಹಸ್ಯ ನನಗೆ ಗೊತ್ತು’ ಎಂದ ಮಹೋಷಧಕುಮಾರ. ದೇವಿಂದನೂ ಜೈಲು ಸೇರಿದ. ಆಗ ಮಹೋಷಧಕುಮಾರ ಬೋಧೆ ಮಾಡಿದ. ‘ಮಹಾರಾಜ, ರಹಸ್ಯ, ರಹಸ್ಯವಾಗಿಯೇ ಇರಬೇಕು. ಕೆಲವು ರಹಸ್ಯಗಳು ಮಹತ್ವದ್ದಾಗಿರುವುದಿಲ್ಲ. ಅವುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಬಹುದು. ಆದರೆ ಕೆಲವು ಮುಖ್ಯವಾದ ರಹಸ್ಯಗಳನ್ನು ಪ್ರಕಟ ಮಾಡಬಾರದು. ತಾವು ಹೆಂಡತಿಗೆ ಹೇಳಿದ ರಹಸ್ಯ, ಸೆನೆಕ ಮಿತ್ರನಿಗೆ ಹೇಳಿದ್ದು, ಪುಕ್ಕಸ ತಮ್ಮನಿಗೆ ತಿಳಿಸಿದ್ದು, ಕಾವಿಂದ ಮಗನ ಮುಂದೆ ಬಾಯಿಬಿಟ್ಟಿದ್ದು, ದೇವಿಂದ ತಾಯಿಗೆ ಹೇಳಿದ ರಹಸ್ಯಗಳೆಲ್ಲ ಬಯಲಾದವು. ಅದ್ದರಿಂದ ಕೆಲಸ ಮುಗಿಯುವವರೆಗೆ ರಹಸ್ಯವನ್ನು ಜ್ಞಾನಿಗಳು, ದಕ್ಷ ಆಡಳಿತಗಾರರು ಬಿಟ್ಟುಕೊಡುವುದಿಲ್ಲ’.

ರಾಜ ಕುಮಾರನಿಗೆ ಅಪಾರವಾದ ಹಣವನ್ನು ಕೊಟ್ಟು ಮುಖ್ಯ ಅಮಾತ್ಯನನ್ನಾಗಿ ಮಾಡಿ ಮರ್ಯಾದೆ ಮಾಡಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.