ಬುಧವಾರ, ಜನವರಿ 19, 2022
26 °C

ಬೆರಗಿನ ಬೆಳಕು: ಬೆರಗಿನ ಕ್ಷೇತ್ರಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅರುಣೋದಯ ಪ್ರಭೆಯ, ಗಿರಿಶೃಂಗದುನ್ನತಿಯ|
ವರುಣಾಲಯಾಯತಿಯ ನಿರುಕಿಸಿದೊಡಹುದೇಂ?||
ಬೆರಗು, ಬರಿ ಬೆರಗು, ನುಡಿಗರಿದೆನಿಪ್ಪಾನಂದ|
ಪರಮಪೂಜೆಯುಮಂತು – ಮಂಕುತಿಮ್ಮ ||495||

ಪದ-ಅರ್ಥ: ವರುಣಾಲಯಾಯತಿಯ= ವರುಣಾಲಯ (ಸಮುದ್ರ)+ ಆಯತಿಯ (ವಿಸ್ತಾರದ), ನಿರುಕಿಸಿದೊಡಹುದೇಂ= ನಿರುಕಿಸಿದೊಡೆ (ನಿರೀಕ್ಷಿಸಿದರೆ, ನೋಡಿದರೆ)+ ಅಹುದೇಂ, ನುಡಿಗರಿದೆನಿಪ್ಪಾನಂದ= ನುಡಿಗೆ (ಮಾತಿಗೆ)+ ಅರಿದು (ಮೀರಿದ್ದು)+ ಎನಿಪ್ಪ (ಎನ್ನಿಸುವ)+ ಆನಂದ, ಪರಮಪೂಜೆಯುಮಂತು= ಪರಮಪೂಜೆಯುಂ+ ಅಂತು

ವಾಚ್ಯಾರ್ಥ: ಸೂರ್ಯೋದಯದ ಬೆಳಕನ್ನು, ಪರ್ವತ ಶಿಖರಗಳ ಉನ್ನತಿಯನ್ನು, ಸಮುದ್ರದ ವಿಸ್ತಾರವನ್ನು ನೋಡಿದರೆ ಏನಾದೀತು? ಬೆರಗು, ಕೇವಲ ಬೆರಗು, ಮಾತನ್ನು ಮೀರಿದ ಆನಂದವಾಗುತ್ತದೆ. ಪರಮಾತ್ಮನ ಪೂಜೆಯೂ ಹಾಗೆಯೇ.

ವಿವರಣೆ: ಒಂದು ಸೂರ್ಯೋದಯ ಮತ್ತೊಂದು ದಿನದ ಸೂರ್ಯೋದಯದಂತೆ ಇರದು. ಕ್ಷಣ ಕ್ಷಣಕ್ಕೆ ಬದಲಾಗುವ ಅವರ್ಣನೀಯ ಚಿತ್ರಪಟ. ಬಾನಿನಂಗಳದಲ್ಲಿ ವಿಶಿಷ್ಠ ವಿನ್ಯಾಸ, ಹೊಳಪು, ರಂಗಿನಾಟದೊಂದಿಗೆ ಮನವನ್ನು ಮೋಹಕತೆಯ ಬಂಧನದಲ್ಲಿ ಬಿಗಿದು ಚುಂಬಕದಂತೆ ಸೆಳೆಯುತ್ತದೆ ಸೂರ್ಯೋದಯ. ಅದೆಷ್ಟು ಕವಿಗಳು, ಅದೆಷ್ಟು ಬಗೆಯಿಂದ ಈ ಸೂರ್ಯೋದಯವನ್ನು ಹೊಗಳಿ, ಮಾತು ನಿಲ್ಲಿಸಿಲ್ಲ? ಯಾಕೆಂದರೆ ಆ ಅನುಭವ ಮಾತನ್ನು ಮೀರಿದ್ದು. ಅದರಂತೆಯೇ ಬೆರಗು ಹುಟ್ಟಿಸುವುದು ಪರ್ವತದ ಶಿಖರಗಳ ದರ್ಶನ. ನನ್ನ ಕೆಲವು ಸ್ನೇಹಿತರು ಮಾನಸಸರೋವರದ ಯಾತ್ರೆಗೆ ಹೋಗಿ ಬಂದು ತಮ್ಮ ಅನುಭವಗಳನ್ನು ಹೇಳುತ್ತಿದ್ದರು. ಅವರು ಕೈಲಾಸ ಪರ್ವತದ ಪ್ರದಕ್ಷಿಣೆಗೆ (ಪರಿಕ್ರಮ) ಹೊರಟಿದ್ದರು. ಬೆಳಿಗ್ಗೆ ಸುಮಾರು ಆರೂವರೆ, ಆರೂಮುಕ್ಕಾಲಿನ ಸಮಯಕ್ಕೆ ಅವರ ತಂಡದ ನಾಯಕರು ಪರ್ವತದ ಶಿಖರವನ್ನೇ ನೋಡುತ್ತ, ನಿಶ್ಚಲವಾಗಿ ನಿಲ್ಲಲು ಹೇಳಿದರಂತೆ. ಇವರೆಲ್ಲ ಎವೆಯಿಕ್ಕದೆ ಅದನ್ನೇ ನೋಡುತ್ತ ನಿಂತಾಗ, ಒಂದು ಕ್ಷಣದಲ್ಲಿ ಸೂರ್ಯೋದಯವಾಗಿ, ಸೂರ್ಯನ ಕಿರಣಗಳು ಕೈಲಾಸ ಪರ್ವತದ ಶಿಖರವನ್ನು ಚುಂಬಿಸಿದಾಗ, ಕಲ್ಪನಾತೀತವಾದ ಹೊಂಬಣ್ಣ ಉದ್ಭವಿಸಿ, ಕೆಲ ಕ್ಷಣವಿದ್ದು ಮಾಯವಾಯಿತಂತೆ. ಅವರು ಹೇಳಿದರು, ‘ಅದೊಂದು ಕ್ಷಣ ಭಗವಂತನ ದರ್ಶನವಾದಂತಾಯಿತು. ಅದನ್ನು ವಿವರಿಸುವುದು ಅಸಾಧ್ಯ. ಆದರೆ ಅದು ಬದುಕಿನುದ್ದಕ್ಕೂ ನಮ್ಮನ್ನು ಆವರಿಸಿಕೊಳ್ಳುವ ಅಮೃತಕ್ಷಣವಾಯಿತು’. ಉನ್ನತವಾದ ಹಿಮಾಲಯದ ಶ್ರೇಣಿಗಳನ್ನು ಕಂಡಾಗ, ನಾವು ಎಷ್ಟು ಸಣ್ಣವರೆಂಬ ಅರಿವಾಗುತ್ತದೆ. ಅವುಗಳ ಔನ್ನತ್ಯ ಬೆರಗಾಗಿಸುತ್ತದೆ. ಇನ್ನೊಂದು ನಮ್ಮನ್ನು ಸದಾಕಾಲದ ಬೆರಗಿಗೆ ಈಡುಮಾಡುವುದು ಸಮುದ್ರದ ಆಳ ಮತ್ತು ವಿಸ್ತಾರ. ಸಮುದ್ರ ತೀರದಲ್ಲಿ ನಿಂತಾಗ ಸಂತೋಷ ತರುವ ದೃಶ್ಯ, ನಾವೆಯಲ್ಲಿ ದೂರ ಸಾಗಿದಾಗ ಭಯಕ್ಕೆ ಕಾರಣವಾಗುತ್ತದೆ.

ಸೂರ್ಯೋದಯ, ಪರ್ವತಗಳ ಉನ್ನತ ಶ್ರೇಣಿಗಳು ಮತ್ತು ಅನಂತವಾದ ಸಾಗರ ಮೂರೂ ನಮ್ಮ ವಚನಶಕ್ತಿಯನ್ನು ಮೀರಿದವುಗಳು. ಅದಕ್ಕೇ ಅವು ಅವರ್ಣನೀಯ. ಅವುಗಳನ್ನು ವರ್ಣಿಸಲು ಸಾಧ್ಯವಾಗದೆ ಹೋದಾಗ ಬೆರಗು ಮಾತ್ರ ಮೂಡುತ್ತದೆ. ಅದು ಎಂಥದ್ದು ಎಂದು ಅಲ್ಲಮಪ್ರಭು ಹೇಳುತ್ತಾನೆ. ‘ಅರಿದು ಮರೆದು ಬೆರಗು ಹತ್ತಿತ್ತು. ಏನೆಂದರಿಯದೆ, ಅದೆಂತೆಂದರಿಯದೆ ಗುಹೇಶ್ವರಾ, ಗುಹೇಶ್ವರಾ ಎನುತ ಅಲ್ಲಿಯೇ ನಿಂದಿತ್ತು’.

ಭಗವಂತನ ಪೂಜೆಯೂ ಅಂಥದ್ದೆ ಎಂದು ಕಗ್ಗ ಹೇಳುತ್ತದೆ. ಈ ಪೂಜೆ ಮನಸ್ಸು, ಬುದ್ಧಿಗಳನ್ನು ಮೀರಿದ್ದು. ಅದಕ್ಕೇ ಅದು ‘ಯೋ ಬುದ್ಧೇ: ಪರತಸ್ತು ಸ:’ ಅದು ಬುದ್ಧಿಯ ಅತೀತವಾದದ್ದು. ಕೇವಲ ಬೆರಗಿಗೆ ಒಳಗಾಗುವಂಥದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.