ಮಂಗಳವಾರ, ಮಾರ್ಚ್ 28, 2023
33 °C

ಬೆರಗಿನ ಬೆಳಕು: ಅನುಭವದಿಂದ ತತ್ವ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ವನಜಂತುಗಳ ಸಸ್ಯಮೂಲಿಕಾಹಾರದಿಂ |
ಗುಣವನರಿತವರಾದಿ ವೈದ್ಯಕಾಷಧದೊಳ್ ||
ವಣತರ್ಕಗಳಿನೇನು? ಜೀವನದ ವಿವಿಧರಸ - |
ದನುಭವದಿ ತತ್ವ್ತವೆಲೊ – ಮಂಕುತಿಮ್ಮ || 818 ||

ಪದ-ಅರ್ಥ: ವನಜಂತುಗಳ=ಕಾಡುಮೃಗಗಳ, ಸಸ್ಯಮೂಲಿಕಾಹಾರದಿಂ=ಸಸ್ಯ+ಮೂಲಿಕ
(ಬೇರುಗಳು)+ಆಹಾರದಿಂ(ಆಹಾರದಿಂದ),ಗುಣವನರಿತವರಾದಿವೈದ್ಯಕಾಷಧದೊಳ್= ಗುಣವನು+ಅರಿತವರು+ಆದಿವೈದ್ಯರು+ಔಷಧದೊಳ್(ಔಷಧದಲ್ಲಿ), ವಿವಿಧರಸದನುಭವದಿ=
ವಿವಿಧ+ರಸದ+ಅನುಭವದಿ
ವಾಚ್ಯಾರ್ಥ: ಕಾಡು ಪ್ರಾಣಿಗಳು ತಮ್ಮ ಆರೋಗ್ಯಕ್ಕಾಗಿ ಎಲೆ, ಬೇರುಗಳನ್ನು ತಿಂದದ್ದನ್ನು ಕಂಡು ಅವುಗಳ ಗುಣವನ್ನು ಅರಿತವರು ಔಷಧಶಾಸ್ತ್ರದಲ್ಲಿ  ಆದಿ ವೈದ್ಯರಾದರು. ಬರೀ ತರ್ಕದಿಂದ ಯಾವ ಪ್ರಯೋಜನವೂ ಇಲ್ಲ. ನಿಜವಾದ ತತ್ವ್ತದರ್ಶನ  ಸಾಧ್ಯವಾಗುವುದು, ಜೀವನದ ವಿವಿಧ ರಸಗಳ ಅನುಭವದಿಂದ.
ವಿವರಣೆ: ನಾವು ಸಣ್ಣವರಿದ್ದಾಗ ಹಳ್ಳಿಯಲ್ಲಿ ಮನೆಯಲ್ಲಿದ್ದ ನಾಯಿ ಬೆಕ್ಕುಗಳನ್ನು ಗಮನಿಸುತ್ತಿದ್ದೆವು. ಒಂದು ದಿನ ನಾಯಿ ಮನೆಯ ಮುಂದಿದ್ದ ಹುಲ್ಲನ್ನು ತಿನ್ನುತ್ತಿತ್ತು. ನನಗೆ ಬಲು ಆಶ್ಚರ್ಯ! ಸ್ವಲ್ಪ ಹೊತ್ತಿನ ನಂತರ ಎಲ್ಲ ಹುಲ್ಲನ್ನು ವಾಂತಿಮಾಡಿಕೊಂಡಿತು. ಅಜ್ಜನಿಗೆ ಇದನ್ನು ಹೇಳಿದಾಗ ಆತ, ಅದು ನಾಯಿ ತನ್ನ ಆರೋಗ್ಯ ರಕ್ಷಣೆಗೆ ಮಾಡಿಕೊಂಡ ವಿಧಾನ ಎಂದು ಹೇಳಿದ. ಪ್ರಾಣಿಗಳಿಗೆ ಅನಾರೋಗ್ಯವಾದರೆ ಯಾವ ಸಸ್ಯವನ್ನು, ಮೂಲಿಕೆಯನ್ನು ತಿನ್ನುಬೇಕೆಂಬ ಅರಿವಿದೆ. ವಿಷದ ಹಾವಿನ ಜೊತೆಗೆ ಸೆಣಸಾಡುವ ಮುಂಗುಸಿ, ಹಾವಿನಿಂದ ಕಚ್ಚಿಸಿದಾಗಲೊಮ್ಮೆ ಪೊದೆಯಲ್ಲಿ ಹೋಗಿ ಯಾವುದೋ ಎಲೆಯನ್ನೋ, ಬೇರನ್ನೋ ತಿಂದು ಮರಳಿ ಬರುತ್ತದೆ. ವಿಷದ ಪರಿಣಾಮ ಅದರ ಮೇಲೆ ಆಗುವುದೇ ಇಲ್ಲ. ನಿಸರ್ಗದಲ್ಲೇ ಪ್ರತಿಯೊಂದು ಆರೋಗ್ಯ ಸಮಸ್ಯೆಗೆ ಉತ್ತರವಿದೆ. ಹಿಂದೆ ಮನುಷ್ಯ ಪ್ರಾಣಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲೆ ಬೇರುಗಳನ್ನು ತಿನ್ನುವುದನ್ನು ಕಂಡು, ಅವು ಮನುಷ್ಯನಿಗೂ ಪ್ರಯೋಜನವಾಗಬಹುದು ಎಂದು ಪರೀಕ್ಷಿಸಿ, ಪ್ರಯೋಗಿಸಿ ಔಷಧಿಗಳನ್ನು ಸಿದ್ಧಪಡಿಸಿದ. ಅವನೇ ಪ್ರಪಂಚದ ಆದಿವೈದ್ಯನಾದ. ಅವನಿಗೆ ಔಷಧಗಳ ಸಿದ್ಧಿಯಾದದ್ದು ಎಚ್ಚರದ ಗಮನಿಸುವಿಕೆಯಿಂದ ಮತ್ತು ಪ್ರಯೋಗಗಳಿಂದ. ಅವನು ಕೇವಲ ತರ್ಕಮಾಡುತ್ತ ಕುಳಿತುಕೊಳ್ಳಲಿಲ್ಲ. ಯಾಕೆ ಪ್ರಾಣಿಗಳು ಈ ಮೂಲಿಕೆಯನ್ನು ತಿನ್ನುತ್ತವಲ್ಲ? ಮಾಂಸ ತಿನ್ನುವ ಪ್ರಾಣಿಗಳೂ ಸಸ್ಯಗಳನ್ನು ತಿನ್ನುವುದು ಏಕೆ? ಈ ಕುತೂಹಲದ ಪ್ರಶ್ನೆಗಳು ಅವಶ್ಯಕ. ಅವೇ ಮುಂದೆ ಸಂಶೋಧನೆಗೆ ದಾರಿ. ಆದರೆ ಕೇವಲ ತರ್ಕ ಮಾಡುತ್ತ, ಪ್ರಯೋಗ ಮಾಡದಿದ್ದರೆ ಅದು ಒಣ ತರ್ಕವಾಗುತ್ತದೆ. ಅದು ಕಟ್ಟೆಯ ಹರಟೆ. ಜೀವನದಲ್ಲಿ ನಮಗೆ ತತ್ವ ದೊರಕುವುದು ಅನುಭವದಿಂದ, ಒಣ
ತರ್ಕದಿಂದಲ್ಲ. ಪ್ರಕೃತಿ ತನ್ನ ನೂರು, ನೂರು ಮುಖಗಳಿಂದ ವಿವಿಧ ರಸಗಳನ್ನು ತಂದು ಸುರಿಯುತ್ತದೆ. ಅವುಗಳನ್ನು ಸಂತೋಷದಿಂದ ಅನುಭವಿಸಿದಾಗ, ಆ ರಸ ನಮ್ಮ ಉಜ್ಜೀವನಕ್ಕೆ ಕಾರಣವಾಗುತ್ತದೆ. ಜೀವನದ ಪ್ರತಿಯೊಂದು ಅನುಭವ, ಸುಖ-ದುಃಖ, ಆಸೆ-ನಿರಾಸೆ, ಏರು-ಇಳಿವುಗಳು, ಮನುಷ್ಯನನ್ನು ಪಕ್ಕಾಗಿಸುತ್ತವೆ. ಯಾಕೆ ಹೀಗಾಯಿತು ಎಂದು ಕೇವಲ ತರ್ಕದಲ್ಲೇ ಕಾಲ ಕಳೆಯುವುದಕ್ಕಿಂತ, ಅನುಭವದಿಂದ ತತ್ವ್ತದರ್ಶನ ಪಡೆಯುವುದು ಮೇಲು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು