ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸರ್ವರ ಸಂತೋಷ ಭಾಗಿ

Last Updated 18 ಅಕ್ಟೋಬರ್ 2022, 22:45 IST
ಅಕ್ಷರ ಗಾತ್ರ

ತನಗೆ ಬಾರದ ಲಾಭ ತನಯಂಗೆ ಬಂದಾಗ |

ಜನಕನ್ ಅದು ತನದೆಂದು ಸಂತಸಿಪ ತೆರದಿ ||
ಜನದೊಳರ‍್ಗಾವ ಸೊಗವಾದೊಡಂ ತನದೆನ್ನು-
ತನುಭವಿಪನೊ ಜ್ಞಾನಿ - ಮಂಕುತಿಮ್ಮ || 738 ||

ಪದ-ಅರ್ಥ: ತನಯ=ಮಗ, ಜನಕನ್=ತಂದೆ, ಸಂತಸಿಪ=ಸಂತೋಷಪಡುವ, ಜನದೊಳರ‍್ಗಾವ=ಜನದೊಳ್ (ಜನರಲ್ಲಿ)+ರ‍್ಗೆ(ಯಾರಿಗೆ)+ಆವ(ಯಾವ), ಸೊಗವಾದೊಡಂ=ಸೊಗವು(ಸಂತೋಷವು)+ಆದೊಡಂ(ಆದರೆ)

ವಾಚ್ಯಾರ್ಥ: ತನಗೆ ದೊರೆಯದ ಲಾಭ ಮಗನಿಗೆ ಸಿಕ್ಕಿದಾಗ, ತಂದೆ ಅದು ತನಗೇ ದೊರೆತಂತೆ ಸಂತೋಷಪಡುವಂತೆ, ಬೇರೆ ಜನರಿಗೆ ಯಾವುದೇ ಲಾಭ, ಸಂತೋಷ ದೊರೆತಾಗ, ಅದು ತನ್ನದೇ ಎಂದು ಅನುಭವಿಸುವವನೇ ಜ್ಞಾನಿ.

ವಿವರಣೆ: ಇದೊಂದು ನಡೆದ ಘಟನೆ. ನನ್ನ ಸ್ನೇಹಿತರೊಬ್ಬರು ತಹಶೀಲ್ದಾರರಾಗಿ ರಿಟೈರ್ ಆದರು. ಕೆಲದಿನಗಳ ಹಿಂದೆ ನಮ್ಮ ಆಫೀಸಿಗೆ ಬಂದಿದ್ದರು. ಅವರ ಸಂತೋಷ ಅವರ ಮುಖದಲ್ಲಿ, ಮಾತಿನಲ್ಲಿ, ನಡೆಯಲ್ಲಿ ಎದ್ದು ತೋರುತ್ತಿತ್ತು. ಅವರು ನಡೆಯುತ್ತಿರಲಿಲ್ಲ, ಕುಣಿಯುತ್ತಲೇ ಬಂದರು. ಬಂದವರೇ, “ಸರ್, ನಿಮಗೆ ಒಂದು ಭಾರೀ ಸಂತೋಷದ ವಿಷಯ ಹೇಳಬೇಕು” ಎಂದು ಗಟ್ಟಿಯಾಗಿ ಹೇಳಿ, ಚೀಲದಿಂದ ಸಿಹಿ ತಿಂಡಿಯನ್ನು ಹೊರಗೆ ತೆಗೆದಿಟ್ಟರು. “ಸ್ವಾಮಿ, ತಮ್ಮ ಸಂತೋಷದ ಅಬ್ಬರ ನೋಡಿದರೆ ಏನೋ ಭಾರೀ ಒಳ್ಳೆಯ ಘಟನೆಯೇ ಆಗಿದೆ. ಹೇಳಿ ಸ್ವಾಮಿ, ನಿಮ್ಮ ಸಂತೋಷದ ಕಾರಣ” ಎಂದೆ. ಅವರು ನನ್ನ ಕೈಯನ್ನು ಬಲವಾಗಿ ಹಿಡಿದು ಒತ್ತಿ “ಸರ್, ನನ್ನ ಮಗ IAS ಪಾಸಾಗಿ ಬಿಟ್ಟ. ಹೋದ ಪರೀಕ್ಷೆಯೊಳಗೆ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ನನಗೆ ಎಲ್ಲಿ ಇವನಿಗೆ ಅದು ಸಿಗದೇ ಹೋಗಿ ಬಿಡುತ್ತೋ ಎಂದು ಹೆದರಿದ್ದೆ. ನಿಮಗೆ ಗೊತ್ತಿಲ್ಲ ಸರ್, ನಾನು ಮೂರಿ ಬಾರಿ IAS ಪರೀಕ್ಷೆಯಲ್ಲಿ ಫೇಲಾಗಿದ್ದೆ. ಕೊನೆಗೆ ಸರ್ಕಾರಿ ನೌಕರಿ ಸೇರಿಕೊಂಡೆ.

ನನಗೆ ಭಾರೀ ಸಂತೋಷವೆಂದರೆ ನಾನು ಯಾವುದನ್ನು ಸಾಧಿಸಲಾಗಲಿಲ್ಲವೊ ಅದನ್ನು ನನ್ನ ಮಗ ಮಾಡಿ ತೋರಿಸಿದ್ದಾನೆ” ಎಂದಾಗ ಅವರ ಹಿಗ್ಗು ಆಕಾಶವನ್ನು ಮುಟ್ಟಿತ್ತು. ಕಗ್ಗದ ಮೊದಲೆರಡು ಸಾಲುಗಳು ಮೇಲಿನ ಘಟನೆಗೆ ವ್ಯಾಖ್ಯೆಯಂತಿವೆ. ತನಗೆ ದಕ್ಕದ ಭಾಗ್ಯ ಮಗನಿಗೆ ಬಂದಾಗ ಆಗುವ ಸಂತೋಷದಂತೆ, ಜ್ಞಾನಿ ಪ್ರಪಂಚದಲ್ಲಿ ಯಾರಿಗೇ ಸಂತೋಷವಾದರೂ, ಲಾಭವಾದರೂ, ತನಗೇ ಆದಂತೆ ಸಂತೋಷಪಡುತ್ತಾನೆ. ಅಥವಾ ಹಾಗೆ ಸಂತೋಷಪಡುವವನೇ ಜ್ಞಾನಿ. ತನ್ನ ರಾಣಿ ಸಂತೋಷವಾಗಿರಲಿ, ಕಷ್ಟದಿಂದ ಪಾರಾಗಲಿ ಎಂದು ಝಾನ್ಸಿ ಲಕ್ಷ್ಮಿಬಾಯಿ ಸೇವಕಿ ಜಲ್ಕರಿಬಾಯಿ ತನ್ನ ಬದುಕನ್ನು ಬಲಿ ಕೊಟ್ಟದ್ದು. ಇದು ಒಂದು ಘಟನೆ. ಮತ್ತೊಬ್ಬರಿಗೋಸ್ಕರ ತಮ್ಮ ಆಶಯಗಳನ್ನು, ಬದುಕನ್ನು ತ್ಯಾಗ ಮಾಡುವವರು ಒಂದು ವರ್ಗವಾದರೆ, ಜಗತ್ತಿನಲ್ಲಿ ಯಾರಿಗಾದರೂ ಒಳ್ಳೆಯದಾಗಲಿ ತಮಗೇ ಆದಂತೆ ಸಂತೋಷ ಪಡುವವರು ಇನ್ನೊಂದು ವರ್ಗ. ಈ ವರ್ಗದ ಜನ ತುಂಬ ಉದಾತ್ತವಾದ ಮನೋಧರ್ಮದವರು. ಎಲ್ಲವೂ ತಮಗೇ ದೊರೆಯಲಿ ಎಂಬ ಸ್ವಾರ್ಥ ಭಾವವನ್ನು ತೊರೆದು ಎಲ್ಲರ ಸುಖವೂ, ತಮ್ಮದೆಂಬಂತೆ ಸಂತೋಷಿಸುವವರು ಜ್ಞಾನಿಗಳು. ಯಾಕೆಂದರೆ ಸರ್ವವೂ, ಸರ್ವರೂ ಈಶ್ವರನ ಅಂಶವೆಂದು ಅರಿತ ಈ ಜನರು ಎಲ್ಲರಲ್ಲೂ ತಮ್ಮನ್ನು ಮತ್ತು ತಮ್ಮಲ್ಲಿ ಎಲ್ಲರನ್ನೂ ಕಾಣುವವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT