ಸೋಮವಾರ, ಅಕ್ಟೋಬರ್ 3, 2022
24 °C
ಗುರುರಾಜ ಕರಜಗಿ ಅಂಕಣ

ಬೆರಗಿನ ಬೆಳಕು | ತತ್ವದ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು|
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||
ತತ್ತ್ವವೊಂದರ ಹಿಡಿತಕೊಗ್ಗದ ಬಾಳೇನು? |
ಕಿತ್ತ ಗಾಳಿಯ ಪಟವೊ – ಮಂಕುತಿಮ್ಮ || 691 ||

ಪದ-ಅರ್ಥ: ಖಗ=ಪಕ್ಷಿ, ನೆನಪೆಳೆಯುವುದು=ನೆನಪು+ಎಳೆಯುವುದು, ಗೊತ್ತುನೂಲ್=ದನವನ್ನು ಕಟ್ಟಿಹಾಕಲು ನೆಲದಲ್ಲಿ ಹಾಕಿದ ಗೂಟದ ಹಗ್ಗ, ಪಿಡಿದಿಹುದು=ಹಿಡಿದಿಹುದು, ಹಿಡಿತಕೊಗ್ಗದ=ಹಿಡಿತಕೆ+ಒಗ್ಗದ(ಸಿಕ್ಕದ)

ವಾಚ್ಯಾರ್ಥ: ಪಕ್ಷಿ ಆಕಾಶದಲ್ಲಿ ಎಷ್ಟೇ ದೂರ ಹಾರಿದರೂ ಗೂಡಿನ ನೆನಪು ಅದನ್ನು ಎಳೆಯುತ್ತದೆ. ಬಯಲಿನಲ್ಲಿದ್ದ ದನವನ್ನು ಹಿಡಿದದ್ದು ಗೂಟಕ್ಕೆ ಕಟ್ಟಿದ ಹಗ್ಗ. ಅಂತೆಯೇ ಯಾವುದೊ ಒಂದು ತತ್ವಕ್ಕೆ ತನ್ನನ್ನು ಒಡ್ಡಿಕೊಳ್ಳದ ಬಾಳು ಎಂತಹದು? ಅದೊಂದು ಕಿತ್ತುಹೋದ ಗಾಳಿಯ ಪಟ.

ವಿವರಣೆ: ನಾವು ಸ್ಟೇಶನ್ನಿಗೋ, ಬಸ್‌ಸ್ಟಾಂಡಿಗೋ ನಮ್ಮ ಸರಂಜಾಮುಗಳನ್ನು ತೆಗೆದುಕೊಂಡು ಹೋದಾಗ, ಎಲ್ಲಿಗೆ ಹೋಗಬೇಕೆನ್ನುವ ಸ್ಪಷ್ಟ ಕಲ್ಪನೆ ಇರಬೇಕು. ಎಲ್ಲಿಗೆ ಹೋಗಬೇಕೆಂಬುದು ಗೊತ್ತಿಲ್ಲದಿದ್ದರೆ ಎಲ್ಲಿಯೋ ಹೋಗಿ ಬಿಡುತ್ತೇವೆ. ಈ ವಿಷಯ ಕೇವಲ ಪ್ರವಾಸಕ್ಕೆ ಸಂಬಂಧಿಸಿದ್ದಲ್ಲ, ಬದುಕಿಗೆ ಸಂಬಂಧಿಸಿದ್ದು. ನಮ್ಮ ಬದುಕಿಗೊಂದು ಗುರಿ ಇಲ್ಲದಿದ್ದರೆ, ಅದಕ್ಕೊಂದು ತತ್ವದ ತಳಹದಿಯಿರದಿದ್ದರೆ, ಬದುಕು ದಾರ ಕಿತ್ತಿದ ಗಾಳಿಪಟದಂತೆ ಎತ್ತೆತ್ತಲೋ ಹೋಗಿ ಬೀಳುತ್ತದೆ.

ಲೇಸಿ ಹಾಲ್ ಎಂಬ ಖ್ಯಾತ ಮನಶಾಸ್ತ್ರಜ್ಞ ಹೇಳುತ್ತಾನೆ, ‘ಪ್ರತಿಯೊಂದು ಜೀವ ಯಶಸ್ಸಿ ಗಾಗಿಯೇ ಹುಟ್ಟಿದೆ. ಅದು ಯಶಸ್ಸನ್ನು ಕಾಣದೆ ಹೋದರೆ ಅದೊಂದು ದುರ್ದೈವ’. ಅದನ್ನೇ ಸ್ವಾಮಿ ವಿವೇಕಾನಂದರು, ‘Every soul is potentially divine’ ಎಂದರು.

ಲೇಸಿ ಹಾಲ್ ಮುಂದುವರೆದು ಹೇಳುತ್ತಾನೆ, “ಹಾಗಾದರೆ, ಯಾಕೆ ಪ್ರತಿಯೊಂದು ಜೀವ ಶ್ರೇಷ್ಠತೆಯನ್ನು ಪಡೆಯುವುದಿಲ್ಲ? ಯಾರು ಯಾರು ತಮ್ಮ ಬದುಕಿಗೊಂದು ಗುರಿಯನ್ನು, ಆದರ್ಶವನ್ನು ಇಟ್ಟುಕೊಂಡು ನಡೆದರೋ ಅವರೆಲ್ಲ ಯಶಸ್ಸು ಪಡೆದರು. ಬದುಕಿನಲ್ಲಿ ಯಾವುದನ್ನೂ ಗಟ್ಟಿಯಾಗಿ ನಂಬದೆ ಹೇಗೆ ಬಂತೋ ಹಾಗೆ ನಡೆದವರು ನಾವಿಕನಿಲ್ಲದ ನಾವೆಯಲ್ಲಿ ಪ್ರಯಾಣಿಸುವವರಂತೆ ದಿಕ್ಕು ತಪ್ಪಿ ಮರೆಯಾದರು”. ಇಂಥ ಅನೇಕ ಜನರನ್ನು ನಾವು ಕಂಡಿಲ್ಲವೆ?

ಅಸಾಧ್ಯ ಭರವಸೆಯನ್ನು ಹುಟ್ಟು ಹಾಕಿದ ತರುಣ-ತರುಣಿಯರು ಯಾವುದೋ ಧ್ಯೇಯವನ್ನು ನಂಬದೆ ಗುರಿಯಿಂದ ವಿಚಲಿತರಾಗಿ ಹೋಗಿದ್ದಾರೆ. ಅವನೊಬ್ಬ ಒಳ್ಳೆಯ ಕ್ರಿಕೆಟ್ ಆಟಗಾರ.

ಬಹುದೊಡ್ಡ ಭವಿಷ್ಯವನ್ನು ಹೊಂದಿದವನು. ಕೊಂಚ ಯಶ ಬಂದೊಡನೆ ತಲೆ ತಿರುಗಿತು, ನೆಲಕಾಣದಾಯಿತು. ಚಟಗಳು ಬೆನ್ನತ್ತಿ ಬಂದವು. ಗುರಿ ಕರಗಿ ಮರೆಯಾಯಿತು. ಬದುಕು ಸೊರಗಿ ಹೋಯಿತು. ಆದರೆ ಆದರ್ಶದ ಬೆನ್ನು ಹತ್ತಿದ ಗಾಂಧೀ, ಅಂಬೇಡ್ಕರ್, ವಿವೇಕಾನಂದ, ಸುಭಾಸ್ ಚಂದ್ರ ಬೋಸ್‌ರು ಬದುಕಿನ ಬೆಂಕಿಯಲ್ಲಿ ಹಾದು ಬಂದರೂ ಶಾಶ್ವತರಾದರು. ಅದಕ್ಕೆ ಕಾರಣ ಅವರ ಬದುಕನ್ನು ನಿರ್ದೇಶಿಸಿದ ತತ್ವ, ಗುರಿ. ಕಗ್ಗ ಅದನ್ನು ಸ್ಪಷ್ಟಪಡಿಸುತ್ತದೆ.

ಆಕಾಶದಲ್ಲಿ ದೂರ ದೂರ ಹಾರುವ ಪಕ್ಷಿಯನ್ನು ಗೂಡಿನ ನೆನಪು ಎಳೆದು ತರುತ್ತದೆ. ನೆಲದಲ್ಲಿ ಹಾಕಿದ ಗೂಟಕ್ಕೆ ಕಟ್ಟಿದ ಹಗ್ಗ ದನವನ್ನು ಸಿಕ್ಕಲ್ಲಿ ಹೋಗಲು ಬಿಡುವುದಿಲ್ಲ. ಅಂತೆಯೇ ತತ್ವವನ್ನು, ಗುರಿಯನ್ನು ನಂಬಿಕೊಳ್ಳದ ಬಾಳು ದಾರ ಕಿತ್ತ ಗಾಳಿಯ ಪಟವಿದ್ದಂತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು