ಶನಿವಾರ, ಜುಲೈ 2, 2022
20 °C

ಬೆರಗಿನ ಬೆಳಕು: ಪ್ರಯತ್ನದ ಫಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ ? ||
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |
ಗಟ್ಟಿತನ ಗರಡಿ ಫಲ - ಮಂಕುತಿಮ್ಮ || 588 ||

ಪದ-ಅರ್ಥ: ಗೆಲ್ಲದೊಡೆ=ಗೆಲ್ಲದಿದ್ದರೆ, ಗರಡಿಯ=ಗರಡಿ ಮನೆಯ, ವಿಫಲವೆನ್ನುವೆಯೇಂ=ವಿಫಲ+ಎನ್ನುವೆಯೇಂ (ಎನ್ನುತ್ತೀಯಾ)

ವಾಚ್ಯಾರ್ಥ: ಪೈಲವಾನ್‌ನೊಬ್ಬ ಕುಸ್ತಿಯಲ್ಲಿ ಗೆಲ್ಲದಿದ್ದರೆ ಅವನು ಇದುವರೆಗೂ ಮಾಡಿದ ಸಾಮು, ಪಟ್ಟು, ವರಸೆಗಳೆಲ್ಲ ವಿಫಲವಾದವು ಎನ್ನಬಹುದೆ? ಅವನ ಮೈಯನ್ನು ಮುಟ್ಟಿ ನೋಡು, ಕಬ್ಬಿಣದಂತೆ ಗಟ್ಟಿಯಾಗಿದೆ. ಅವನ ಗಟ್ಟಿತನ ಬಂದದ್ದು ಗರಡಿಯ ಶ್ರಮದ ಫಲ.

ವಿವರಣೆ: ಅವನೊಬ್ಬ ತರುಣ. ಯಾವಾಗಲೂ ಒಂದಿಲ್ಲೊಂದು ರೋಗ. ಯಾವುದೋ ತೊಂದರೆಯಿಂದ ಅವನಿಗೆ ಎಲ್ಲರಂತೆ ಇರಲು ಆಗಲೇ ಇಲ್ಲ. ವೈದ್ಯರೆಲ್ಲ ಮುಗಿದರು, ಎಲ್ಲ ದೇವಸ್ಥಾನಗಳಲ್ಲಿ ಹರಕೆ, ಪೂಜೆಗಳು ಮುಗಿದವು. ಒಂದು ಬಾರಿ ಯಾರೋ ಹಿರಿಯರು ಹತ್ತಿರದ ಶಿವ ದೇವಾಲಯದ ಬಗ್ಗೆ ಹೇಳಿ, ಅಲ್ಲಿ ಹತ್ತು ದಿನ ಸೇವೆ ಮಾಡಿದರೆ ಶಿವನೇ ಬಂದು ಪರಿಹಾರ ಕೊಡುತ್ತಾನೆ ಎಂದು ಹೇಳಿದರು. ಆತ ಉತ್ಸಾಹದಿಂದ ಹೋದ. ಸೇವೆಯ ಹತ್ತನೇ ದಿನ ಕನಸಿನಲ್ಲಿ ಶಿವ ಬಂದ. ಹೇಳಿದ, ‘ನಿನ್ನ ಮನೆಯ ಹಿಂದೆ ಒಂದು ಬೆಟ್ಟವಿದೆಯಲ್ಲ, ಅಲ್ಲಿ ದಾರಿಯ ಪಕ್ಕ ಒಂದು ದೊಡ್ಡ ಬಂಡೆ ಇದೆ. ಅದನ್ನು ದಿನಾಲು ಎರಡು ಬಾರಿ ಹೋಗಿ ಜೋರಾಗಿ ತಳ್ಳುತ್ತ ಬೆಟ್ಟದ ತುದಿಗೆ ತೆಗೆದುಕೊಂಡು ಹೋಗು. ಅದು ಸುಮಾರು ಎರಡು ತಿಂಗಳು ತೆಗೆದುಕೊಳ್ಳುತ್ತದೆ. ಆಗ ನಿನ್ನ ಆರೋಗ್ಯ ಚೆನ್ನಾಗಾಗುತ್ತದೆ’. ತರುಣ ಉತ್ಸಾಹದಿಂದ ಮರಳಿ ಬಂದು ಬೆಟ್ಟಕ್ಕೆ ಹೋಗುವಾಗ ಆ ಬಂಡೆಯನ್ನು ನೋಡಿದಾಗ ಉತ್ಸಾಹ ಜರ‍್ರನೇ ಇಳಿದು ಹೋಯಿತು. ಇಷ್ಟು ದೊಡ್ಡ ಬಂಡೆಯನ್ನು ಮೇಲೆ ತಳ್ಳಲಾದೀತೇ? ಶಿವ ಹೇಳಿದ ಮೇಲೆ ಪ್ರಯತ್ನ ಮಾಡುತ್ತೇನೆಂದು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ಅದನ್ನು ಮೇಲಕ್ಕೆ ತಳ್ಳುತ್ತ ಬಂದ. ಎರಡು ತಿಂಗಳಾದರೂ ಅದು ಅಲುಗಾಡಲೂ ಇಲ್ಲ. ಮತ್ತೆ ಶಿವನ ಬಳಿ ತನ್ನ ವೈಫಲ್ಯವನ್ನು ಹೇಳಿಕೊಂಡ. ಶಿವ ಕನಸಿನಲ್ಲಿ ಬಂದು ಹೇಳಿದ, ‘ಮೂರ್ಖ, ಬಂಡೆಯನ್ನು ಬೆಟ್ಟದ ಮೇಲೆ ತಳ್ಳುವುದು ಅಸಾಧ್ಯವೆಂದು ನನಗೆ ಗೊತ್ತಿತ್ತು. ಆದರೆ ಈಗ ನಿನ್ನ ಆರೋಗ್ಯ ಹೇಗಿದೆಯೆಂದು ನೋಡು. ಬಂಡೆಯನ್ನು ಶಕ್ತಿ ಹಾಕಿ ತಳ್ಳಿದ್ದರಿಂದ ನಿನ್ನ ಸ್ನಾಯುಗಳು ಗಟ್ಟಿಯಾಗಿವೆ, ಮಾಂಸ ಬಲಿಷ್ಠವಾಗಿದೆ. ಶ್ರಮದಿಂದ ಹಸಿವೆಯಾಗಿ, ಚೆನ್ನಾಗಿ ಊಟ ಮಾಡುತ್ತಿದ್ದೀಯಾ, ನಿದ್ರೆ ಬರುತ್ತಿದೆ. ನಿನಗೆ ಯಾವ ರೋಗದ ಲಕ್ಷಣವೂ ಇಲ್ಲದೆ ಸಂಪೂರ್ಣ ನಿರೋಗಿಯಾಗಿರುವೆ’. ತರುಣ ಗಮನಿಸಿದ. ಹೌದು. ಅವನಿಗೆ ಈಗ ಯಾವ ರೋಗವೂ ಇಲ್ಲ. ಆತ ತಾರುಣ್ಯದ ಶಕ್ತಿಯಿಂದ ಹೊಳೆಯುತ್ತಿದ್ದಾನೆ.

ಕಗ್ಗದ ಮಾತು ಇದನ್ನು ತಿಳಿಸುತ್ತದೆ. ಕುಸ್ತಿಯ ಪೈಲವಾನನೊಬ್ಬ ಕುಸ್ತಿಯ ಸ್ಪರ್ಧೆಯಲ್ಲಿ ಸೋತ ಎಂದಿಟ್ಟುಕೊಳ್ಳಿ. ಅವನನ್ನು ವಿಫಲನೆನ್ನಲಾಗುತ್ತದೆಯೇ? ಅವನು ಆ ಪ್ರಯತ್ನದಲ್ಲಿ ವಿಫಲವಾಗಿರಬಹುದು ಆದರೆ ಅವನು ವಿಫಲನಲ್ಲ. ಹತ್ತಿರ ಹೋಗಿ ಅವನ ತೋಳುಗಳನ್ನು ಮುಟ್ಟಿ ನೋಡು. ಅವು ಕಬ್ಬಿಣದ ತೊಲೆಗಳಂತೆ ಗಟ್ಟಿಯಾಗಿವೆ. ಅವನು ಒಂದು ಕುಸ್ತಿ ಪ್ರಯತ್ನದಲ್ಲಿ ಸೋತರೂ, ಇಷ್ಟು ವರ್ಷಗಳ ಕಾಲ ಅವನು ಮಾಡಿದ ಪರಿಶ್ರಮದ ಫಲವಾಗಿ ಅವನ ದೇಹ ಬಲಿತು ನಿಂತಿದೆ. ಅದು ಸಾಧನೆಯಲ್ಲವೆ?

ಇದು ದೇಹಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಬದುಕಿನ ಪ್ರತಿಯೊಂದು ಪ್ರಯತ್ನವೂ ಯಶಸ್ಸನ್ನು ಕೊಡುತ್ತದೆಂದಲ್ಲ. ಆದರೆ ಪ್ರತಿ ಪ್ರಯತ್ನ ಮನುಷ್ಯನನ್ನು ಹೆಚ್ಚು ಪ್ರಬುದ್ಧನನ್ನಾಗಿ ಮಾಡುತ್ತದೆ, ಮುಂದಿನ ಸಮಸ್ಯೆಗಳನ್ನು ಎದುರಿಸಲು ಸಮರ್ಥನನ್ನಾಗಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು