ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ವಾಸ

Last Updated 3 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ ? |
ಹೃದಯದೊಳೊ ಮೆದುಳಿನೊಳೊ
ಹುಬ್ಬಿನಿರುಕಿನೊಳೊ ? ||
ಇದನೆನಿತೊ ತರ್ಕಿಸಿಹರ್, ಎನ್ನೆಣಿಕೆಯನು ಕೇಳು |
ಉದರಾತ್ಮನಿವಾಸ – ಮಂಕುತಿಮ್ಮ || 351 ||

ಪದ-ಅರ್ಥ: ಹುದುಗಿಹುದದೆಲ್ಲಿ=ಹುದುಗಿಹುದು (ಅಡಗಿಹುದು)+ಅದು+ಎಲ್ಲಿ, ಹುಬ್ಬಿನಿರುಕಿನೊಳೊ=ಹುಬ್ಬಿನ+ಇರುಕಿನೊಳೊ(ಕೂಡುವ ಸ್ಥಾನದಲ್ಲೊ), ಇದನೆನಿತೊ=ಇದನು+ಎನಿತೊ(ಎಷ್ಟೋ), ತರ್ಕಿಸಿಹರ್=ತರ್ಕಮಾಡಿದ್ದಾರೆ, ಎನ್ನೆಣಿಕೆಯನು=ಎನ್ನ+ಎಣಿಕೆಯನು(ವಿಚಾರವನ್ನು), ಉದರಾತ್ಮನಿವಾಸ=ಉದರ+ಆತ್ಮನಿವಾಸ(ಆತ್ಮದ ಸ್ಥಾನ).

ವಾಚ್ಯಾರ್ಥ: ಪರಮಾತ್ಮ ಈ ದೇಹದಲ್ಲಿ ಎಲ್ಲಿ ಅಡಗಿದ್ದಾನೆ? ಹೃದಯದಲ್ಲೊ, ಮೆದುಳಿನಲ್ಲೊ, ಹುಬ್ಬುಗಳ ಮಧ್ಯವೊ? ಇದನ್ನು ಎಷ್ಟೋ ಪಂಡಿತರು ಎಷ್ಟೆಷ್ಟೋ ಚರ್ಚೆ ಮಾಡಿದ್ದಾರೆ, ಆದರೆ ನನ್ನ ಚಿಂತನೆಯನ್ನು ಕೇಳಿದರೆ ಪರಮಾತ್ಮನ ನಿವಾಸವಿರುವುದು ಹೊಟ್ಟೆಯಲ್ಲಿ.

ವಿವರಣೆ: ಶ್ವೇತಾಶ್ಪತರ ಉಪನಿಷತ್ತಿನ ಒಂದು ಮಂತ್ರ ಹೀಗಿದೆ.

ಏಕೋ ದೇವ: ಸರ್ವಭೂತೇಷು ಗೂಢ:

ಸರ್ವವ್ಯಾಪೀ ಸರ್ವಭೂತಾನ್ತರಾತ್ಮಾ |

ಕರ್ಮಾದ್ಯಕ್ಷ: ಸರ್ವಭೂತಾದಿವಾಸ :

ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ ||

ದೇವರು ಒಬ್ಬನೇ. ಎಲ್ಲ ವಸ್ತುಗಳಲ್ಲಿಯೂ ಗೂಢವಾಗಿ ನೆಲೆಯಾಗಿದ್ದಾನೆ, ಎಲ್ಲೆಡೆಗೂ ಹರಡಿದ್ದಾನೆ, ಎಲ್ಲ ಪ್ರಾಣಿಗಳ ಒಳಗೂ ಆತ್ಮರೂಪನಾಗಿದ್ದಾನೆ. ಎಲ್ಲಾ ಕಾರ್ಯಗಳಿಗೆ ಅಧ್ಯಕ್ಷನಾಗಿದ್ದಾನೆ. ಅವನು ಎಲ್ಲ ಪ್ರಾಣಿಗಳಲ್ಲಿ ಅಧಿಕಾರಿಯಾಗಿರುವ ಚೈತನ್ಯ. ಕೇವಲ ಸಾಕ್ಷಿಯಾಗಿದ್ದು, ಪ್ರೇರಕನಾಗಿದ್ದು ತಾನೇ ನಿರ್ಗುಣನಾಗಿದ್ದಾನೆ.

ದೇವರು ಪ್ರತಿಯೊಂದು ಪ್ರಾಣಿಯಲ್ಲಿ ಸ್ಥಿತನಾಗಿದ್ದಾನೆಂಬುದನ್ನು ನಂಬಿದರೆ, ಮುಂದಿನ ಪ್ರಶ್ನೆ, ‘ದೇಹದಲ್ಲಿ ಎಲ್ಲಿದ್ದಾನೆ?’. ಅದನ್ನೇ ಕಗ್ಗ ಕೇಳುತ್ತದೆ. ಅವನು ದೇಹದ ಯಾವ ಭಾಗದಲ್ಲಿದ್ದಾನೆ? ಉಪನಿಷತ್ತು ಹೇಳುವಂತೆ, ಹೃದಯಕುಹರ ಮಧ್ಯೇ ಕೇವಲಂ ಬ್ರಹ್ಮ ಮಾತ್ರಂ ಎಂದರೆ ಬ್ರಹ್ಮ, ಹೃದಯವೆಂಬ ಗುಹೆಯಲ್ಲಿ ವಾಸವಾಗಿದ್ದಾನೆಯೆ? ಚಿಂತನೆಯ ಕೇಂದ್ರವಾದ ಮೆದುಳಿನಲ್ಲಿ ನೆಲೆ ಮಾಡಿಕೊಂಡಿದ್ದಾನೆಯೆ? ಅಥವಾ ಯೋಗಿಗಳು ಹೇಳುವಂತೆ ಕುಂಡಲಿನಿಯ ಚಕ್ರದ ಆರನೇ ಸ್ಥಾನವಾದ ಆಜ್ಞಾಚಕ್ರದಲ್ಲಿ ಇದ್ದಾನೆಯೆ? ಆಜ್ಞಾಚಕ್ರದ ಸ್ಥಾನ, ಹುಬ್ಬುಗಳು ಕೂಡುವ ಸಂಧಿಸ್ಥಾನ. ಈ ಬಗೆಯ ಅನೇಕ ತರ್ಕಗಳ ಪ್ರವಾಹ ಶತಶತಮಾನಗಳಿಂದ ಹೊರಟಿದೆ. ಪ್ರತಿಯೊಂದು ತರ್ಕಕ್ಕೂ ಅದರದೇ ಆದ ತೀರ್ಮಾನ. ಡಿ.ವಿ.ಜಿ ಹೇಳುತ್ತಾರೆ, ‘ತರ್ಕಗಳೆಲ್ಲ ಬೇಡ. ನನ್ನ ಅಭಿಪ್ರಾಯವನ್ನು ಕೇಳುವುದಾದರೆ ಭಗವಂತ ಇರುವುದು ಹೊಟ್ಟೆಯಲ್ಲಿ’.

ಮೇಲ್ನೋಟಕ್ಕೆ ಇದು ತಮಾಷೆಯಂತೆ ಕಂಡೀತು. ಆದರೆ ಅದು ಸತ್ಯ. ಪಂಚಕೋಶಗಳ ಮೊದಲನೆಯದು ಅನ್ನಮಯ ಕೋಶ. ಮೊದಲು ಜೀವಿಗೆ ಬೇಕಾದದ್ದು ಆಹಾರ. ಬದುಕಿದ ಮೇಲೆ ಉಳಿದ ಉನ್ನತ ಸ್ತರಗಳು. ಅನ್ನದಿಂದ ಪ್ರಾಣ, ಪ್ರಾಣದಿಂದ ಮುಂದುವರೆದಾಗ ವಿಜ್ಞಾನ, ವಿಜ್ಞಾನದಿಂದ ಮನಸ್ಸಿನೆಡೆಗೆ ಪ್ರಯಾಣ. ಅಲ್ಲಿಂದ ಕೊನೆಗೆ ಆನಂದಮಯ ಕೋಶಕ್ಕೆ ದಾರಿ. ಎಲ್ಲಕ್ಕೂ ಮೂಲವಾದದ್ದು ಅನ್ನ. ಅದೇ ಕಾರಣಕ್ಕೆ ಹೊಟ್ಟೆ. ಅದು ಭಗವಂತನ ಮೊದಲ ನಿವಾಸ. ಹೊಟ್ಟೆ ತುಂಬಿದ ಮೇಲೆಯೇ ಚೈತನ್ಯದ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT