ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮತ್ತೊಂದು ಪರೀಕ್ಷೆ

Last Updated 16 ಫೆಬ್ರುವರಿ 2021, 22:04 IST
ಅಕ್ಷರ ಗಾತ್ರ

ಮಿಥಿಲೆಯ ರಾಜ ವಿದೇಹನ ನಾಲ್ಕು ಜನ ಅಮಾತ್ಯರಿಗೆ ಮಹೋಷಧಕುಮಾರನನ್ನು ಎಷ್ಟು ಪರೀಕ್ಷಿಸಿದರೂ ತೃಪ್ತಿ ಇರಲಿಲ್ಲ. ಯಾಕೆಂದರೆ ಆತ ರಾಜನ ಬಳಿಗೆ ಬಂದುಬಿಟ್ಟರೆ ತಮ್ಮ ಸ್ಥಾನಕ್ಕೆ ಚ್ಯುತಿ ಬರುತ್ತದೆಂಬ ಭಯವಿತ್ತು. ಮತ್ತೆ ಪರೀಕ್ಷೆಗಳನ್ನು ಮಾಡುತ್ತಲೇ ಇದ್ದರು.

ಒಂದು ಬಾರಿ ಅವರು ಇಂದ್ರ ಬಳಿ ಮಹೋಷಧಕುಮಾರನನ್ನು ಹೇಗಾದರೂ ಸೋಲಿಸಬೇಕೆಂದು ಬೇಡಿಕೊಂಡರು. ಇಂದ್ರನಿಗೂ ಈ ಮಹೋಷಧಕುಮಾರನ ಬಗ್ಗೆ ಬಹಳ ಕುತೂಹಲವಿತ್ತು. ಅವನ ಬುದ್ಧಿಮತ್ತೆಯ ಬಗ್ಗೆ ತುಂಬ ಕೇಳಿದ್ದ. ಅವನನ್ನು ಸರಿಯಾಗಿ ಪರೀಕ್ಷೆ ಮಾಡಬೇಕೆಂದು ಭೂಮಿಗೆ ಬಂದ. ಅಲ್ಲಿ ಒಂದು ರಥ ಹೋಗುತ್ತಿರುವುದನ್ನು ನೋಡಿದ. ತಕ್ಷಣವೇ ಓಡುತ್ತ ರಥದ ಹಿಂಭಾಗವನ್ನು ಹಿಡಿದುಕೊಂಡ. ಅದನ್ನು ಗಮನಿಸಿ ರಥದ ಮಾಲಿಕ ಕೇಳಿದ, ‘ಯಾರು ನೀನು? ಯಾಕೆ ರಥವನ್ನು ಹಿಡಿದುಕೊಂಡೆ?’. ಇಂದ್ರ ಹೇಳಿದ, ‘ನಾನೊಬ್ಬ ಅನಾಥ. ನಿಮ್ಮ ಸೇವೆ ಮಾಡಿಕೊಂಡಿರುತ್ತೇನೆ’. ಮಾಲಿಕ, ‘ನನಗೆ ಸೇವಕ ಬೇಕಾಗಿಲ್ಲ’ ಎಂದ. ರಥದ ಹಿಂದೆ ಓಡುತ್ತಲೇ ಇಂದ್ರ ಹೇಳಿದ, ‘ಸ್ವಾಮಿ, ನನಗೆ ನೀವೇ ದಾತರು. ದಯವಿಟ್ಟು ಸೇವೆಯ ಅವಕಾಶ ಮಾಡಿಕೊಡಿ’. ಮಾಲಿಕನ ಮನಸ್ಸು ಕರಗಿ, ‘ಆಯ್ತು, ರಥದ ಹಿಂದೆಯೇ ಓಡುತ್ತ ಬಾ’ ಎಂದ. ರಥ ಸಾಗಿತು.

ಕೊಂಚ ಮುಂದೆ ಹೋದ ಮೇಲೆ ರಥದ ಮಾಲಿಕನಿಗೆ ದೇಹಬಾಧೆಯಾಯಿತು. ಅದಕ್ಕೆ ಆತ ರಥವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ದೇಹಬಾಧೆ ತೀರಿಸಿಕೊಳ್ಳಲು ಕೆಳಗಿಳಿದು, ಹೊಸ ಸೇವಕನಿಗೆ ರಥವನ್ನು ಗಮನಿಸುವಂತೆ ಹೇಳಿ ಹೋದ. ಮಾಲಿಕ ಮರೆಯಾದೊಡನೆ ಇಂದ್ರ ರಥವನ್ನೇರಿ ಕುದುರೆಗಳನ್ನು ಓಡಿಸಿಕೊಂಡು ಹೊರಟುಬಿಟ್ಟ. ಅದನ್ನು ಕಂಡು ಮಾಲಿಕ, ‘ಅಯ್ಯೋ ಕಳ್ಳ, ಕಳ್ಳ, ನನ್ನ ರಥವನ್ನು ತೆಗೆದುಕೊಂಡು ಹೋಗುತ್ತಿದ್ದಾನೆ’ ಎಂದು ಅರಚುತ್ತ ರಥದ ಹಿಂದೆಯೇ ಜೋರಾಗಿ ಓಡುತ್ತ ಬಂದ. ಇವನ ಕೂಗನ್ನು ಕೇಳಿ ದಾರಿಯಲ್ಲಿ ಹೋಗುತ್ತಿದ್ದ ಜನ ರಥವನ್ನು ತಡೆದು ನಿಲ್ಲಿಸಿದರು. ಮಾಲಿಕ ಬಂದು ಇಂದ್ರನನ್ನು ಹೀಗೇಕೆ ಮಾಡಿದೆ ಎಂದು ಕೇಳಿದ. ಇಂದ್ರ ಹೇಳಿದ, ‘ಇದು ನನ್ನದೇ ರಥ. ನಿನಗೇನು ಸಂಬಂಧ?’ ಮಾಲಿಕ ಗಾಬರಿಯಾದ, ಗದ್ದಲ ಮಾಡಿ ರಥ ತನ್ನದೇ ಎಂದ. ಇಂದ್ರನೂ ತನ್ನದೇ ಎಂದು ವಾದಿಸಿದ. ಸುತ್ತಲೂ ನೆರೆದ ಜನರಿಗೆ ಇಬ್ಬರ ವಾದವೂ ಸರಿಯೇ ಎನ್ನಿಸಿತು. ರಥ ನಿಜವಾಗಿಯೂ ಯಾರದು ಎಂಬುದು ತಿಳಿಯದಂತಾಯಿತು.

ಜನ ಇಬ್ಬರನ್ನು ಕರೆದುಕೊಂಡು ಮಹೋಷಧಕುಮಾರನ ಬಳಿಗೆ ಬಂದರು. ಅವನ ತೀರ್ಮಾನವನ್ನು ಕೇಳಿದರು. ಆಗ ಕುಮಾರ ಕೇಳಿದ, ‘ನಾನು ನೀಡುವ ತೀರ್ಪಿಗೆ ನೀವಿಬ್ಬರೂ ಒಪ್ಪುತ್ತೀರಾ?’. ಇಬ್ಬರೂ ಒಪ್ಪಿದರು. ಮಹೋಷಧಕುಮಾರ ಒಂದು ಉಪಾಯವನ್ನು ಯೋಚಿಸಿ ಹೇಳಿದ, ‘ನಾನು ರಥವನ್ನು ತೆಗೆದುಕೊಂಡು, ಕುದುರೆಗಳನ್ನು ಜೋರಾಗಿ ಓಡಿಸುತ್ತ ಹೋಗುತ್ತೇನೆ. ನೀವಿಬ್ಬರೂ ರಥವನ್ನು ಹಿಂದಿನಿಂದ ಬಿಗಿಯಾಗಿ ಹಿಡಿದು ಓಡಬೇಕು. ಯಾರು ಹೆಚ್ಚು ಹೊತ್ತು ಓಡುತ್ತಾರೋ ಅವರದೇ ರಥ’. ಇಂದ್ರ ಸಂತೋಷದಿಂದ ಮತ್ತು ನಿಜವಾದ ಮಾಲಿಕ ಅನಿವಾರ್ಯವಾಗಿ ಒಪ್ಪಿದರು. ರಥ ಓಡತೊಡಗಿತು. ಸ್ವಲ್ಪ ದೂರ ಇಬ್ಬರೂ ರಥವನ್ನು ಹಿಡಿದು ಓಡಿದರು.

ಯಾವಾಗ ರಥದ ವೇಗ ವಿಪರೀತವಾಯಿತೋ, ಮಾಲಿಕ ನಿಂತುಬಿಟ್ಟ ಆದರೆ ಇಂದ್ರ ಅನಾಯಾಸವಾಗಿ ಓಡುತ್ತಿದ್ದ. ಒಂದು ದೊಡ್ಡ ಸುತ್ತನ್ನು ಹಾಕಿ ಮರಳಿ ಜನರ ಮಧ್ಯೆ ರಥವನ್ನು ತಂದ ಮಹೋಷಧಕುಮಾರ. ತೀರ್ಮಾನಕ್ಕೆ ಕಾದಿದ್ದ ಜನರಿಗೆ ಹೇಳಿದ. ‘ಓಡುವುದನ್ನು ನಿಲ್ಲಿಸಿದವನು ನಿಜವಾದ ಯಜಮಾನ. ಆಯಾಸವಾಗದೆ ಓಡಿದವನು ಇಂದ್ರ. ಅವನ ಹಣೆಯ ಮೇಲೆ ಬೆವರು ಕೂಡ ಬಂದಿಲ್ಲ, ಕಣ್ಣು ಪಿಳುಕಿಸುವುದಿಲ್ಲ. ಅದು ಮನುಷ್ಯ ಲಕ್ಷಣವಲ್ಲ’ ಇಂದ್ರ ತೀರ್ಮಾನವನ್ನು ಒಪ್ಪಿದ. ಮಹೋಷಧಕುಮಾರ ಅವನಿಗೆ ಎಚ್ಚರಿಕೆ ನೀಡಿ, ಈ ರೀತಿ ಪರೀಕ್ಷೆ ಮಾಡಬಾರದೆಂದು ತಿಳಿಸಿ ಕಳುಹಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT