ಭಾನುವಾರ, ಆಗಸ್ಟ್ 9, 2020
25 °C

ಬೆರಗಿನ ಬೆಳಕು | ಮುಂದಕ್ಕೆ ಹಾಕಿದ ಶಿಕ್ಷೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಒಂದು ಜನ್ಮದ ಲೆಕ್ಕವಂದೆ ಮುಗಿವಂತೇಕೆ |
ಸಂಧಿಸವು ಕಾಲ ಕಾರಣ ಕರಣ ಕಾರ್ಯ? ||
ಮುಂದಕೇತಕೆ ಮಿಗಿಸಿ ಕರ್ಮಋಣಶೇಷಗಳ |
ಬಂಧಿಪನು ವಿಧಿ ನಿನ್ನ ? – ಮಂಕುತಿಮ್ಮ || 312 ||

ಪದ-ಅರ್ಥ: ಲೆಕ್ಕವಂದೆ=ಲೆಕ್ಕವು+ಅಂದೆ, ಮುಗಿವಂತೇಕೆ=ಮುಗಿವಂತೆ+ಏಕೆ, ಮುಂದಕೇತಕೆ=ಮುಂದಕೆ+ಏತಕೆ, ಮಿಗಿಸಿ=ಉಳಿಸಿ

ವಾಚ್ಯಾರ್ಥ: ಯಾವುದೇ ಕಾರ್ಯದ ಕಾಲ, ಕಾರಣ ಮತ್ತು ಅದಕ್ಕೆ ಕಾರಣವಾದ ವ್ಯಕ್ತಿ ಎಲ್ಲವೂ ಒಂದೇ ಕಾಲದಲ್ಲಿ ಸಂಧಿಸಿ ಆ ಜನ್ಮದ ಲೆಕ್ಕ ಅಂದೇ ಮುಗಿವಂತೆ ಯಾಕೆ ಮಾಡಬಾರದು? ಅದನ್ನು ಮುಂದೆ ಹಾಗೆಯೇ ಉಳಿಸಿ ಕರ್ಮ, ಋಣ ಶೇಷಗಳಿಂದ ಮನುಷ್ಯನನ್ನು ಬಂಧಿಸುವುದೇಕೆ?

ವಿವರಣೆ: ಮೊನ್ನೆ ಒಬ್ಬ ಐದು ವರ್ಷದ ಪುಟ್ಟ ಬಾಲಕ ಸೋಂಕಿಗೆ ಸಿಕ್ಕಿ ಮೃತನಾದ. ಅಲ್ಲಿ ನೆರೆದವರು ಹೇಳುತ್ತಿದ್ದರಂತೆ, ‘ಪಾಪ! ಪುಟ್ಟ ಹುಡುಗ, ಅವನು ಏನು ಪಾಪ, ಅನ್ಯಾಯ ಮಾಡಿದ್ದಾನೆ? ಅವನಿಗೇಕೆ ಹೀಗೆ ಸಾವು ಬರಬೇಕಿತ್ತು?’ ಅಲ್ಲಿದ್ದ ಹಿರಿಯರೊಬ್ಬರು ಹೇಳಿದರು, ‘ಈ ಜನ್ಮದಲ್ಲಿ ಏನು ಪಾಪ ಮಾಡುತ್ತಾನೆ? ಇನ್ನೂ ಚಿಕ್ಕ ಮಗು. ಆದರೆ ಪ್ರಾರಬ್ಧ ಕರ್ಮ ಇದೆಯಲ್ಲ, ಅದು ಬಿಡುತ್ತದೆಯೆ? ಹಿಂದಿನ ಜನ್ಮದಲ್ಲಿ ಅದೇನು ಮಾಡಿದ್ದನೋ?’.

ಅಂದರೆ ಹೋದ ಜನ್ಮದಲ್ಲಿ ಮಾಡಿದ ಪಾಪದ ಲೆಕ್ಕ ಈಗ ಚುಕ್ತಾ ಆಯಿತೇ? ಅದು ಹೋದ ಜನ್ಮದಲ್ಲೇ ಯಾಕೆ ಮುಗಿದು ಹೋಗಲಿಲ್ಲ? ಅದರ ಭಾರ ಮುಂದಿನ ಜನ್ಮಕ್ಕೆ ಯಾಕೆ ಸಾಗಿ ಬಂತು? ಹಿಂದಿನ ಜನ್ಮದಲ್ಲೇ ಒಬ್ಬ ವ್ಯಕ್ತಿ ಮಾಡಿದ ಕರ್ಮ, ಆ ಕರ್ಮಕ್ಕೆ ಕಾರಣ, ಕರ್ಮಕ್ಕಾಗಿ ಬಳಸಿದ ವ್ಯಕ್ತಿಗಳು, ವಿಧಾನಗಳು, ಆ ಸಮಯ ಮತ್ತು ಆದ ಪರಿಣಾಮ ಇವೆಲ್ಲವುಗಳನ್ನು ಒಂದೇ ಬಾರಿ ಗಮನಿಸಿ, ಭಗವಂತ ತೀರ್ಪು ಕೊಟ್ಟಿದ್ದರೆ, ಆಗ ಮಾಡಿದ ತಪ್ಪಿಗೆ ಅಥವಾ ಒಳ್ಳೆಯ ಕಾರ್ಯಕ್ಕೆ ಶಿಕ್ಷೆಯೋ, ಪುರಸ್ಕಾರವೋ ಆಗಿ ಮುಗಿದುಹೋಗುತಿತ್ತು. ಆದರೆ ಹಾಗೆ ಆಗುವುದಿಲ್ಲ.

ಕರ್ಮದ ವಿಧಾನವೇ ಬೇರೆ. ಕರ್ಮವೆಂದರೆ ಲೋಕ ವ್ಯವಹಾರ. ಹೀಗೆಂದರೆ, ಪ್ರಪಂಚದಿಂದ ಒಂದಷ್ಟನ್ನು ತಾನು ಪಡೆದುಕೊಳ್ಳುವುದು ಮತ್ತು ಪ್ರಪಂಚಕ್ಕೆ ನನ್ನದಾದದ್ದನ್ನು ಒಂದಷ್ಟು ಕೊಡುವುದು. ಈ ವ್ಯವಹಾರದಲ್ಲಿ ಕೆಲ ಕರ್ಮಗಳು ಸ್ವಾರ್ಥ ಪೋಷಕವಾಗಿರುತ್ತವೆ, ಕೆಲವು ಸ್ವಾರ್ಥ ಶೋಷಕವಾಗಿರುತ್ತವೆ. ಕೇವಲ ನಮ್ಮ ಸ್ವಾರ್ಥಕ್ಕಾಗಿ, ಪ್ರತಿಷ್ಠೆಗಾಗಿ ಮಾಡುವ ಕರ್ಮಗಳಿಂದ ಜಗತ್ತಿಗೆ ನೀಡುವುದು ಕಡಿಮೆಯಾಗುತ್ತದೆ, ಋಣ ಬೆಳೆಯುತ್ತದೆ. ಈ ಋಣ ತೀರಿಕೆಗಾಗಿ ಮತ್ತೆ ಪರಿಶ್ರಮ. ಆ ಪರಿಶ್ರಮದಲ್ಲಿ ಸ್ವಾರ್ಥ ರಹಿತತೆ ಇದ್ದರೆ ಋಣದಂಶ ಕಡಿಮೆಯಾದೀತು. ಅದು ಹೆಚ್ಚಾದರೆ ಮುಂದಿನ ಜನ್ಮದಲ್ಲೂ ಕಾಡೀತು.

ಈ ಚಿಂತನೆಯೇ ಪ್ರಸ್ತುತ ಕಗ್ಗದಲ್ಲಿರುವುದು. ಕೆಲವೊಮ್ಮೆ ನಾವು ಮಾಡಿದ ತಪ್ಪುಗಳಿಗೆ ತಕ್ಷಣವೇ ಶಿಕ್ಷೆ ದೊರೆಯುತ್ತದೆ. ಮತ್ತೆ ಕೆಲ ಸಂದರ್ಭಗಳಲ್ಲಿ ಅದು ವರ್ಷಗಳನ್ನು, ಜನ್ಮಗಳನ್ನು ದಾಟಿ ದೊರೆತೀತು. ಆದರೆ ಶಿಕ್ಷೆ ಮಾತ್ರ ತಪ್ಪಲಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.