ಬುಧವಾರ, ಜುಲೈ 6, 2022
22 °C

ಬೆರಗಿನ ಬೆಳಕು | ಪ್ರಕೃತಿಯ ರೂಢಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ ? |
ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ ? ||
ಮಾಡುವಾ ಮಾಟಗಳನಾದನಿತು ಬೆಳಗಿಪುದು |
ರೂಢಿಯಾ ಪ್ರಕೃತಿಯದು – ಮಂಕುತಿಮ್ಮ|| 565 ||

ಪದ-ಅರ್ಥ: ಕಣ್ಣೊಲವ=ಕಣ್ಣಿನ+ಒಲವ, ಮಾಟಗಳನಾದನಿತು=ಮಾಟಗಳನ್ನು+ಆದ+ಅನಿತು, ರೂಢಿ=ಅಭ್ಯಾಸ

ವಾಚ್ಯಾರ್ಥ: ಕಾಡು ಹಕ್ಕಿಗೆ, ಹುಳಕ್ಕೆ ಅಷ್ಟು ಸುಂದರವಾದ ಬಣ್ಣಗಳೇಕೆ? ನೋಡುವವರ ಕಣ್ಣಿನ ಪ್ರೀತಿಯನ್ನೂ, ಅಭಿಮಾನವನ್ನು ಬೇಡುತ್ತಾಳೆಯೇ ಸೃಷ್ಟಿ? ಮಾಡುವ ಚೆಂದದ ಕೃತಿಯನ್ನು ಆದಷ್ಟು ಚೆನ್ನಾಗಿ ಮಾಡಿ ಬೆಳಗಿಸುವುದು ಪ್ರಕೃತಿಯ ಅಭ್ಯಾಸ.

ವಿವರಣೆ: ಒಂದು ದಿನ ನ್ಯಾಶನಲ್ ಜಿಯೋಗ್ರಾಫಿಕ್‌ನ ಒಂದು ಕಾರ್ಯಕ್ರಮ ನೋಡುತ್ತಿದ್ದೆ. ಲಂಕಾದ ಒಂದು ಅತ್ಯಂತ ಅಕ್ಷತ ಅರಣ್ಯದ ದೃಶ್ಯಗಳನ್ನು ತೋರಿಸುತ್ತಿದ್ದರು. ಅಲ್ಲಿ ನಾನೆಂದೂ ಕಂಡರಿಯದ ಪ್ರಪಂಚವೊಂದು ಅನಾವರಣವಾಗಿತ್ತು. ಅಲ್ಲಿಯ ಪಕ್ಷಿಗಳು, ಪ್ರಾಣಿಗಳು ತುಂಬ ಅಪರೂಪದವು. ಅವುಗಳ ಬಣ್ಣ, ಆಕಾರ ಎಷ್ಟು ಚೆಂದ! ಕೆಲವೊಂದು ಪಕ್ಷಿಗಳಂತೂ ಚಿತ್ರ ಬರೆದಂತೆ ವರ್ಣಮಯವಾಗಿದ್ದವು. ಆ ಕಾಡುಗಳಲ್ಲಿ ಸಾಮಾನ್ಯರು ಹೋಗುವುದೇ ಅಸಾಧ್ಯ. ಅಂಥ ದುರ್ಗಮ ಸ್ಥಳಗಳಲ್ಲಿ ಅಂಥ ಸುಂದರ ಪಕ್ಷಿಗಳು, ಪ್ರಾಣಿಗಳು! ಇವು ನಮ್ಮ ಕಣ್ಣಿಗೆ ಬೀಳುವ ಪ್ರಪಂಚದಲ್ಲಿದ್ದರೆ ಎಷ್ಟೊಂದು ಜನ ಸಂತೋಷಪಡಬಹುದಿತ್ತಲ್ಲ ಎಂದುಕೊಂಡೆ.

ನಂತರ ನನಗೆ ಹೊಳೆದದ್ದೆಂದರೆ ಪ್ರಕೃತಿ ಆ ಸುಂದರ ಜೀವಗಳನ್ನು ಸೃಷ್ಟಿಮಾಡಿದ್ದು ಮನುಷ್ಯರಿಂದ ಮೆಚ್ಚಿಗೆ ಪಡೆಯಲಿಕ್ಕಲ್ಲ. ಅದು ತನಗೆ ಸಾಧ್ಯವಾದದ್ದನ್ನು ತುಂಬ ಚೆನ್ನಾಗಿ ಮಾಡಿ ಅದ್ಭುತವಾಗಿ ಬೆಳಗಿಸುವುದು. ಪ್ರಕೃತಿ ಅದನ್ನೇ ಶತಶತಮಾನಗಳಿಂದ ಮಾಡುತ್ತ ರೂಢಿಯಾಗಿಸಿಕೊಂಡಿದೆ. ಕವಿ ಪು.ತಿ.ನರವರ ಕವನವೊಂದು ಹೀಗಿದೆ –

.....ಚಿಕವೂ ಕುವ್ವೆ? ಏನ್ ಸವಿ |
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿದೆ ಸೈ
ಇದನು ಹಿಡಿದು ಬಿಡುವಾಟದಿ
ಋತು ಋತು ಯುಗ ಯುಗವೂ

ಕೋಗಿಲೆಯ ಕೂಗು ಅಜರಾಮರವಾಗಿದೆ! ಕೋಗಿಲೆಯ ಆಯಸ್ಸು ಚಿಕ್ಕದು. ಆದರೆ ಪ್ರತಿ ಯುಗದ, ಪ್ರತಿ ಋತುಮಾನದಲ್ಲಿ ಬರುವ ಹೊಸ ಕೋಗಿಲೆಯ ‘ಚಿಕುಹೂ’ ಎಂಬ ಕೂಗು ವೃದ್ಧಾಪ್ಯಗಳಿಲ್ಲದೆ, ಸಾವಿಲ್ಲದೆ ಅಜರಾಮರವಾಗುತ್ತದೆ. ಇದು ಪ್ರಕೃತಿಯ ಅದ್ಭುತ ಮಾಟಗಾರಿಕೆ. ಕೋಟಿ ಕೋಟಿ ಕೋಗಿಲೆಗಳು ತರಗೆಲೆಗಳಂತೆ ಕಳೆದುಹೋಗಿದ್ದರೂ ಕೋಗಿಲೆಯ ಮನಸೆಳೆಯುವ ಕೂಗು ಕ್ಷಣವಾದರೂ ಅದರ ಮಾಧುರ್ಯವನ್ನು ಹಿಡಿದಿಟ್ಟಿದೆ. ಅದನ್ನೇ ಪು.ತಿ.ನ. ಈ ‘ಹಿಡಿದು ಬಿಡುವಾಟ’ ‘ಪುರಾಣ’ದಷ್ಟು ಹಳೆಯದು ಮತ್ತು ಬೆರಗು ಹುಟ್ಟಿಸುವಷ್ಟು ‘ನೂತನ’ ಎನ್ನುತ್ತಾರೆ.

ಸೃಷ್ಟಿಗೆ ಇದೇ ರೂಢಿ ಎನ್ನುತ್ತದೆ ಕಗ್ಗ. ಕೋಟಿ ಕೋಟಿ ವರ್ಷಗಳಲ್ಲಿ ಪ್ರಕೃತಿ ತನಗೆ ತೃಪ್ತಿಯಾಗುವಂತೆ ಅತ್ಯದ್ಭುತ ಪ್ರಾಣಿ, ಪಕ್ಷಿ ಪ್ರಪಂಚವನ್ನು ಸೃಷ್ಟಿಸಿ, ಯಾರ ಮೆಚ್ಚಿಗೆಗೂ ಕಾಯದೆ, ಅವುಗಳನ್ನು ಬೆಳಗಿಸುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು