ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೃಷ್ಟಿ ಚುಕ್ಕೆ

Last Updated 8 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ದೃಷ್ಟಿ ಚುಕ್ಕೆಯದೊಂದನೆಲ್ಲ ಚಂದಂಗಳ್ಗ |

ಮಿಟ್ಟಿಹನು ಪರಮೇಷ್ಠಿ, ಶಶಿಗೆ ಮಶಿಯವೊಲು ||

ಗುಟ್ಟೇನೊ? ರಕ್ಷೆಯೋ? ಸಿಂಗರವೊ? ಹೇಳನವೊ ? |

ಮಷ್ಟು ಸೃಷ್ಟಿಗೆ ಬೊಟ್ಟು – ಮಂಕುತಿಮ್ಮ || 447 ||

ಪದ-ಅರ್ಥ: ದೃಷ್ಟಿ ಚುಕ್ಕೆಯದೊಂದನೆಲ್ಲ=ದೃಷ್ಟಿಚುಕ್ಕೆ+ಅದೊಂದನು+ಎಲ್ಲ, ಚಂದಂಗಳ್ಗಮಿಟ್ಟಿಹನು=ಚಂದಂಗಳ್ಗೆ(ಚೆಂದವಾದವುಗಳಿಗೆಲ್ಲ)+
ಇಟ್ಟಿಹನು, ಶಶಿ=ಚಂದ್ರ, ಮಶಿ=ಮಸಿ, ಕಪ್ಪು, ಹೇಳನ=ಚೇಷ್ಟೆ, ಮಷ್ಟು=ಕೊಳೆ.

ವಾಚ್ಯಾರ್ಥ: ಎಲ್ಲ ಚೆಂದಗಳಿಗೆ ಪರಬ್ರಹ್ಮ ಒಂದು ದೃಷ್ಟಿ ಚುಕ್ಕೆಯನ್ನಿಟ್ಟಿದ್ದಾನೆ, ಚಂದ್ರನಲ್ಲಿ ಕಪ್ಪನಿಟ್ಟಂತೆ. ಇದೊಂದು ಗುಟ್ಟೋ, ರಕ್ಷಣೆಯ ಬಗೆಯೋ, ಶೃಂಗಾರವೊ, ಅಥವಾ ಚೇಷ್ಟೆಯೋ? ಈ ಸುಂದರವಾದ ಸೃಷ್ಟಿಗೆ ಬಗ್ಗಡದ ಕೊಳೆಯೇ ದೃಷ್ಟಿ ಚುಕ್ಕೆ.

ವಿವರಣೆ: ಪ್ರಪಂಚದಲ್ಲಿ ಯಾವುದೂ ಪರಿಪೂರ್ಣವಲ್ಲ. ಯಾವುದೋ ಒಂದು ಕೊರತೆ ಅದಕ್ಕಿರುತ್ತದೆ. ಅಧ್ಯಾತ್ಮದಲ್ಲಿ ಹೇಳುವುದೆಂದರೆ ಪರಮಾತ್ಮನೊಬ್ಬನನ್ನುಳಿದು ಯಾವುದೂ ಸಂಪೂರ್ಣ ಸುಂದರವಲ್ಲ. ಅಷ್ಟು ಚೆಂದದ ಚಂದ್ರ ಆದರೆ ಅವನ ಮೈಮೇಲೆ ಕಪ್ಪು ಕಲೆಗಳು. ಸೂರ್ಯ ಅತ್ಯದ್ಭುತ. ಆದರೆ ಹತ್ತಿರ ಹೋದರೆ ಸುಟ್ಟುಬಿಟ್ಟಾನು. ಹಿಮಾಲಯದ ದೃಶ್ಯ ಮನೋಹರವಾದದ್ದು. ಅಲ್ಲಿ ಯಾವಾಗ ಹಿಮಪಾತವಾದೀತು, ಭೂಕುಸಿತ ಉಂಟಾದೀತು ಹೇಳುವುದು ಅಸಾಧ್ಯ. ಮನೋಹರವಾದ ಪರ್ವತದ ಹೃದಯದಲ್ಲಿ ಆಪತ್ತಿನ ಕಂಪನ. ಹುಲಿ, ಸಿಂಹಗಳೆಷ್ಟು ಚಂದ ನೋಡಲು? ಆದರೆ ಅವುಗಳ ಕ್ರೂರತೆ?

ಹೀಗೆ ಸೃಷ್ಟಿಯ ಪ್ರತಿಯೊಂದರಲ್ಲೂ, ಯಾವುದೋ ಒಂದು ಕೊರತೆ ಕಾಣುತ್ತದೆ. ಇದನ್ನು ಕಗ್ಗ ದೃಷ್ಟಿ ಚುಕ್ಕೆ ಎಂದು ಕರೆಯುತ್ತದೆ. ದೃಷ್ಟಿ ಬೊಟ್ಟನ್ನು ಮಕ್ಕಳಿಗೆ ಹಚ್ಚುತ್ತಾರೆ. ಪುಟ್ಟ ಮಕ್ಕಳನ್ನು ನೋಡುವುದೇ ಸಂತೋಷ. ಮುದ್ದಾದ ಹಾಲ್ಗೆನ್ನೆ, ಬಟ್ಟಲು ಕಂಗಳು, ಪುಟ್ಟ ಪುಟ್ಟ ಕೈಗಳು, ಫಕ್ಕನೆ ಅರಳುವ ಮುಖ, ತೊದಲು ಮಾತು ಯಾರನ್ನು ಸೆಳೆಯುವುದಿಲ್ಲ? ಹೀಗೆ ಮಕ್ಕಳು ಕಣ್ಮನ ಸೆಳೆಯುವ ಕೇಂದ್ರಬಿಂದುಗಳು. ಎಲ್ಲರಿಂದ ಮುದ್ದಾಡಿಸಿಕೊಂಡು ಮನೆಗೆ ಬಂದ ಮಗು ಕಿರಿಕಿರಿ ಮಾಡುತ್ತದೆ, ಅಳುತ್ತದೆ. ಆಗ ತಾಯಿಯೋ, ಮನೆಯ ಹಿರಿಯರೋ, ಮಗುವಿಗೆ ದೃಷ್ಟಿಯಾಗಿರಬೇಕು ಎಂದುಕೊಂಡು ದೃಷ್ಟಿಯನ್ನು ತೆಗೆಯುತ್ತಾರೆ. ಮರುದಿನ ಮಗುವಿಗೆ ಅಲಂಕಾರ ಮಾಡಿ ದೃಷ್ಟಿ ಬೊಟ್ಟು ಇಡುತ್ತಾರೆ. ಮಗುವಿಗೆ ಚೆಂದದ ಅಲಂಕಾರ ಮಾಡಿ ಅದರ ಕೆನ್ನೆಯ ಮೇಲೆ ಒಂದು ಚಿಕ್ಕ ಸಾದಿನ ಬೊಟ್ಟು ಇಡುತ್ತಾರೆ. ಇದರಿಂದ ಎರಡು ಕೆಲಸಗಳಾಗುತ್ತವೆ. ಮೊದಲನೆಯದು, ಮಗುವಿನ ಸೊಗಸು ಮತ್ತಷ್ಟು ಚೆನ್ನಾಗಿ ಕಾಣುತ್ತದೆ. ವಿಶಾಲವಾದ ಹಣೆಯ ಮೇಲೆ ಅಥವಾ ಕೆನ್ನೆಯ ಮೇಲಿನ ಕಪ್ಪು ಚುಕ್ಕೆ, ಏಕತಾನತೆಯನ್ನು ಮರೆಮಾಚುತ್ತದೆ. ಎರಡನೆಯದಾಗಿ, ಕಪ್ಪುಚುಕ್ಕೆ ಮಗುವಿನ ಅಂದವನ್ನು ಮರೆಮಾಚಿ, ನೋಡುವವರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುತ್ತದೆ. ಆದ್ದರಿಂದಲೇ ಅದು ದೃಷ್ಟಿಬೊಟ್ಟು – ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವುದು.

ಈ ಕಗ್ಗ ಪರಮೇಷ್ಠಿಯ ಚತುರತೆಯ ಬಗ್ಗೆ ಹೇಳುತ್ತದೆ. ಇಡೀ ಪ್ರಪಂಚದಲ್ಲಿ ತಾನು ಸೃಷ್ಟಿಸಿದ ಪ್ರತಿಯೊಂದರಲ್ಲೂ ಒಂದು ಕೊರತೆಯ ದೃಷ್ಟಿಬೊಟ್ಟನ್ನು ಏಕೆ ಇಟ್ಟಿದ್ದಾನೆ? ಏನದರ ಗುಟ್ಟು? ಅದು ವ್ಯವಸ್ಥೆಯ ರಕ್ಷಣೆಗೋಸ್ಕರವೊ? ಅಲಂಕಾರವೊ? ಅಥವಾ ಒಂದು ಚೇಷ್ಟೆಯೋ? ಹಾಗಾದರೆ, ಜಗತ್ತಿನಲ್ಲಿರುವ ಕೊಳೆ ಕೂಡ ಅವನೇ ಯೋಜಿಸಿದ ದೃಷ್ಟಿಬೊಟ್ಟು ಇರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT