ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಒಗಟಿನ ಪ್ರಶ್ನೋತ್ತರ

Last Updated 16 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಾಜನ ಬಳಿ ಇರುವಾಗ ಮಹೋಷಧಕುಮಾರನಾದ ಬೋಧಿಸತ್ವನಿಗೆ ಹದಿನಾರು ತುಂಬಿತು. ಅವನ ಅಕ್ಕನಂತೆಯೇ ಇದ್ದ ರಾಣಿ ಉದುಂಬರದೇವಿಯೇ ಅವನ ಆರೈಕೆಯನ್ನು ನೋಡಿಕೊಳ್ಳುತ್ತಿದ್ದಳು. ಇನ್ನು ನನ್ನ ತಮ್ಮ ಚಿಕ್ಕವನಾಗಿಲ್ಲ. ಅವನ ಮರ್ಯಾದೆ, ಐಶ್ವರ್ಯವೂ ಹೆಚ್ಚಾಗಿದೆ. ಅವನಿಗೆ ಮದುವೆ ಮಾಡುವುದು ಉಚಿತ ಎಂದು ತೀರ್ಮಾನ ಮಾಡಿ ಅವನಿಗೆ ಹೇಳಿದಳು. ಕುಮಾರ ‘ಅಕ್ಕಾ, ನೀನು ಹುಡುಕಿದ ಹುಡುಗಿ ನನಗೆ ಇಷ್ಟವಾಗಲಿಕ್ಕಿಲ್ಲ. ಆದ್ದರಿಂದ ನಾನೇ ಸರಿಯಾದ ಹುಡುಗಿಯನ್ನು ಹುಡುಕಿ ತರುತ್ತೇನೆ. ಮಹಾರಾಜರಿಗೆ ಈ ವಿಷಯವನ್ನು ಈಗಲೇ ಹೇಳುವುದು ಬೇಡ’ ಎಂದ.

ಮರುದಿನ ಆತ ರಾಣಿಗೆ ನಮಸ್ಕರಿಸಿ ಹೊರಟ. ಸ್ನೇಹಿತರಿಗೆ ಹೇಳಿ ಅರಳೆಯನ್ನು ಹಿಂಜುವ ಸಾಮಾನುಗಳನ್ನು ತೆಗೆದುಕೊಂಡು, ತನ್ನ ವೇಷ ಬದಲಿಸಿಕೊಂಡು ಉತ್ತರದ ದಿಕ್ಕಿಗೆ ನಡೆದ. ಪುರಾತನವಾದ ಯವಮಜ್ಝ ಗ್ರಾಮಕ್ಕೆ ಬಂದ. ಅದು ಹಿಂದೆ ಅತ್ಯಂತ ಶ್ರೀಮಂತರಾದ ಶ್ರೇಷ್ಠಿಗಳ ನಾಡು. ಈಗ ಅದು ದರಿದ್ರವಾಗಿತ್ತು. ಒಂದು ದೊಡ್ಡ ಮನೆತನದ ಹುಡುಗಿ ಅಮರಾದೇವಿ ಅತ್ಯಂತ ಚೆಲುವೆ, ಸರ್ವಲಕ್ಷಣ ಸಂಪನ್ನೆ. ಅದಕ್ಕಿಂತ ಮಿಗಿಲಾಗಿ ಬುದ್ಧಿವಂತೆ, ಪುಣ್ಯವತಿ. ಮಹೋಷಧಕುಮಾರ ಅಂಥ ಹುಡುಗಿಯನ್ನೇ ಹುಡುಕುತ್ತಿದ್ದ.

ಆಕೆ ಬೆಳಿಗ್ಗೆ ತೆಳ್ಳಗೆ ಕಿಚಡಿಯನ್ನು ಮಾಡಿಕೊಂಡು ತಂದೆಯ ಹೊಲಕ್ಕೆ ಹೊರಟಿದ್ದಳು. ದಾರಿಯಲ್ಲಿ ಆಕೆಯನ್ನು ಕುಮಾರ ಕಂಡ. ಈ ಹುಡುಗಿ ಸರ್ವಲಕ್ಷಣ ಸಂಪನ್ನೆಯಾಗಿದ್ದಾಳೆ. ಆಕೆಯ ಮದುವೆಯಾಗಿಲ್ಲದಿದ್ದರೆ ನನ್ನ ಹೆಂಡತಿಯಾಗಲು ಸರಿಯಾಗಿದ್ದಾಳೆ. ಆಕೆ ವಿವಾಹಿತಳೋ, ಅವಿವಾಹಿತಳೋ ಎಂಬುದನ್ನು ತಿಳಿದುಕೊಳ್ಳಬೇಕೆಂದು ಆಕೆಯ ಮುಂದೆ ಬಂದು ತನ್ನ ಮುಷ್ಟಿಯನ್ನು ತೋರಿಸಿದ. ಆಕೆಗೆ ಆ ಸಂಜ್ಞೆ ತಿಳಿಯಿತು. ಮೆಲ್ಲಗೆ ನಕ್ಕು ತನ್ನ ಹಸ್ತವನ್ನು ತೆರೆದು ಅಂಗೈ ತೋರಿಸಿದಳು. ಆಕೆ ಅವಿವಾಹಿತಳು ಎಂದು ಆತನಿಗೆ ತಿಳಿಯಿತು. ಆಕೆಯ ಹತ್ತಿರ ಬಂದು, ‘ಭದ್ರೆ, ನಿನ್ನ ಹೆಸರೇನು?’ ಎಂದು ಕೇಳಿದ.

ಆಕೆ, ‘ಸ್ವಾಮಿ, ಭೂತ, ಭವಿಷ್ಯ, ವರ್ತಮಾನಗಳಲ್ಲಿ ಇಲ್ಲದ್ದು ನನ್ನ ಹೆಸರು’ ಎಂದಳು

‘ಭದ್ರೆ, ಈ ಲೋಕದಲ್ಲಿ ಯಾರೂ ಅಮರರಲ್ಲ. ನಿನ್ನ ಹೆಸರು ಅಮರಾ ಇರಬೇಕು’.

‘ಹೌದು ಸ್ವಾಮಿ, ನಾನು ಅಮರಾದೇವಿ’.

‘ಆಹಾರವನ್ನು ಯಾರಿಗಾಗಿ ತೆಗೆದುಕೊಂಡು ಹೋಗುತ್ತೀ?’

‘ಸ್ವಾಮಿ, ನನ್ನ ಪೂರ್ವದೇವತೆಗೆ’

‘ಭದ್ರೆ, ತಂದೆತಾಯಿಗಳೇ ಪೂರ್ವದೇವತೆಗಳು. ತಂದೆಗೆ ಆಹಾರ ತೆಗೆದುಕೊಂಡು ಹೋಗುತ್ತಿದ್ದೀ’.

‘ಹೌದು ಸ್ವಾಮಿ, ಈ ಆಹಾರ ನನ್ನ ತಂದೆಗೆ’.‌

‘ನಿನ್ನ ತಂದೆ ಏನು ಮಾಡುತ್ತಾರೆ?’

‘ಅವರು ಒಂದನ್ನು ಎರಡು ಮಾಡುತ್ತಾರೆ’.

‘ಒಂದನ್ನು ಎರಡು ಮಾಡುವುದೆಂದರೆ ನೆಲವನ್ನು ಸೀಳುವುದು. ನಿನ್ನ ತಂದೆ ವ್ಯವಸಾಯ ಮಾಡುತ್ತಾರೆ ಎಂದು ತಿಳಿಯಿತು. ಅವರು ಯಾವ ಸ್ಥಳದಲ್ಲಿ ಉಳುತ್ತಾರೆ?’

‘ಒಮ್ಮೆ ಹೋದ ಮೇಲೆ ಮರಳಿ ಬಾರದ ಜಾಗೆಯಲ್ಲಿ’.

‘ಓಹೋ, ಹಿಂದಿರುಗದ ಜಾಗವೆಂದರೆ ಸ್ಮಶಾನ. ನಿಮ್ಮ ತಂದೆಯ ಹೊಲ ಸ್ಮಶಾನದ ಹತ್ತಿರವಿದೆ ಎಂದಾಯ್ತು’.
ಹೀಗೆ ಒಗಟಿನಲ್ಲಿಯೇ ಪ್ರಶ್ನೆ ಮತ್ತು ಅದಕ್ಕೆ ಒಗಟಿನಲ್ಲಿಯೇ ಉತ್ತರ ನಡೆಯಿತು. ಮಹೋಷಧಕುಮಾರ ಅಮರಾದೇವಿಯೇ ತನಗೆ ಸರಿಯಾದ ಪತ್ನಿ ಎಂದು ತೀರ್ಮಾನ ಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT