ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬದುಕಿನಲ್ಲಿ ಆಯ್ಕೆ

Last Updated 7 ಮೇ 2020, 19:30 IST
ಅಕ್ಷರ ಗಾತ್ರ

ರಾಮನಿರ್ದಂದು ರಾವಣನೊಬ್ಬನಿರ್ದನಲ |
ಭೀಮನಿರ್ದಂದು ದುಶ್ಯಾಸನನದೊರ್ವನ್ ||
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು ? |
ರಾಮ ಭಟನಾಗು ನೀಂ - ಮಂಕುತಿಮ್ಮ || 288 ||

ಪದ-ಅರ್ಥ: ರಾಮನಿರ್ದಂದು=ರಾಮನು+ ಇರ್ದಂದು (ಇದ್ದಾಗ), ದುಶ್ಯಾಸನನ ದೊರ್ವನ್=ದುಶ್ಯಾಸನು+ಅದು+ಒರ್ವನ್ (ಒಬ್ಬ), ಮಹಿಯೊಳನ್ಯಾಯಕಾರಿಯಿಲ್ಲದುದೆಂದು=ಮಹಿಯೊಳು (ಪ್ರಪಂಚದಲ್ಲಿ)+ಅನ್ಯಾಯಕಾರಿ+ಇಲ್ಲದು+ಅದೆಂದು

ವಾಚ್ಯಾರ್ಥ: ರಾಮನಿದ್ದ ಕಾಲದಲ್ಲಿ ರಾವಣನೊಬ್ಬ ಇದ್ದನಲ್ಲವೆ? ಭೀಮನಿದ್ದಾಗಲೇ ದುಶ್ಯಾಸನನೂ ಇದ್ದ. ಈ ಪ್ರಪಂಚದಲ್ಲಿ ಅನ್ಯಾಯವನ್ನೇ ಮಾಡದವನು ಇದ್ದ ಕಾಲ ಯಾವುದು? ನೀನು ರಾಮಭಟನಾಗು.

ವಿವರಣೆ: ನನ್ನಜ್ಜ ಹೇಳುತ್ತಿದ್ದ, ‘ನಾವು ಚಿಕ್ಕವರಾಗಿದ್ದಾಗ ಜಗತ್ತು ತುಂಬ ಚೆನ್ನಾಗಿತ್ತು. ಅನ್ಯಾಯಗಳಿರಲಿಲ್ಲ, ಜನ ಸಮೃದ್ಧಿಯಿಂದ ಇದ್ದರು, ಸಂತೋಷವಾಗಿದ್ದರು’. ನಾನು ಹೇಳಿದೆ, ‘ಅಜ್ಜ, ಈ ಮಾತನ್ನು ಪ್ರತಿಯೊಂದು ತಲೆಮಾರಿನವರು ಮುಂದಿನ ತಲೆಮಾರುಗಳಿಗೆ ಹೇಳುತ್ತಲೇ ಇರುತ್ತಾರೆ. ಹಿಂದೆ ಮುಗಿದು ಹೋದದ್ದು ಸುಂದರವಾಗಿಯೇ ಕಾಣುತ್ತದೆ. ಯಾಕೆಂದರೆ ಆಗ ಪಟ್ಟ ಕಷ್ಟ ಮರೆತು ಹೋಗಿರುತ್ತದೆ’, ಅಲ್ಲವೆ?. ಆಗ ಒಂದೂರಿನಿಂದ ಮತ್ತೊಂದೂರಿಗೆ ಹೋಗುವುದು ಎಷ್ಟು ಕಷ್ಟದ ಕೆಲಸ? ಒಂದು ಟೈಪಾಯಿಡ್ ರೋಗ ಬಂದರೆ ಸಾವಿರಾರು ಜನ ಸತ್ತು ಹೋಗುತ್ತಿದ್ದರು, ಹೆಣ್ಣುಮಕ್ಕಳು ಅಡುಗೆಮನೆ ಬಿಟ್ಟು ಹೊರಬಂದು ಪ್ರಪಂಚವನ್ನು ನೋಡುವುದೇ ಅಪರೂಪವಾಗಿತ್ತು. ಇದನ್ನು ಹೇಳಿದ ಉದ್ದೇಶ, ಇಂದಿಗೂ ನಾವು ಹೇಳುತ್ತೇವೆ, ನಮ್ಮ ದೇಶ ರಾಮರಾಜ್ಯವಾಗಬೇಕು. ರಾಮನಿದ್ದಾಗ ಅದೆಂಥ ಧರ್ಮ, ಶಾಂತಿ, ಸಹಬಾಳ್ವೆಗಳಿದ್ದವು ಎಂದು ಉದ್ಗಾರ ತೆಗೆಯುತ್ತೇವೆ. ರಾಮಾಯಣವನ್ನು ಓದಿದರೆ ರಾಮನ ಕಷ್ಟ ಪರಂಪರೆ ತಟ್ಟುತ್ತದೆ. ಅಲ್ಲಿಯೂ ಅಸೂಯಾಪರಳಾದ ಮಂಥರೆ ಇದ್ದಳು, ಶೂರ್ಪನಖಿ ಇದ್ದಳು, ರಾವಣ, ಕುಂಭಕರ್ಣರೂ ಇದ್ದರು. ಕೊನೆಗೆ ರಾಮ ರಾಜ್ಯಾಭಿಷೇಕವಾಗಿ ಸಂತೋಷದಿಂದ ನೆಲೆಸಿದ ಎನ್ನುವಾಗ ಹಿಂದಾದದ್ದನ್ನು ನೆನೆಸಿ, ಮನಸ್ಸನ್ನು ಕೆಡಸಿ, ಸೀತೆಯನ್ನು ಕಾಡಿಗೆ ಕಳುಹಿಸುವಂತಹ ಕೊಂಕು ಮಾತಿನ ಜನರೂ ಇದ್ದರು. ಅಂಥವರು ರಾಮರಾಜ್ಯದಲ್ಲಿ ಮಾತ್ರವಲ್ಲ, ಇಂದಿಗೂ ಇದ್ದಾರೆ. ಈಗ ಅವರ ಸಂಖ್ಯೆ ಸ್ವಲ್ಪ ಹೆಚ್ಚಿರಬಹುದು ಅಷ್ಟೆ.

ಅದರಂತೆಯೇ ಮಹಾ ಪರಾಕ್ರಮಶಾಲಿಯಾದ, ಜ್ಞಾನಿಯಾದ ಭೀಮಸೇನನಿದ್ದಾಗಲೇ ಅತ್ಯಂತ ನೀಚಬುದ್ಧಿಯ, ತನ್ನ ತಾಯಿಯ ಸ್ಥಾನದಲ್ಲಿದ್ದ ಅತ್ತಿಗೆ ದ್ರೌಪದಿಯ ಅವಮಾನಕ್ಕೆ ಕೈ ಹಾಕಿದ ದುಶ್ಯಾಸನನೂ ಇದ್ದನಲ್ಲ!

ಅಂದರೆ ನಮ್ಮ ಮಾನವ ಇತಿಹಾಸದ ಪ್ರತಿಯೊಂದು ಘಟ್ಟದಲ್ಲೂ ಮಾರ್ಗದರ್ಶಿಗಳಾದ ಮಹಾನುಭಾವರು ಇದ್ದಂತೆ ಸಮಾಜಘಾತಕರು, ಮೋಸಗಾರರು, ಅನ್ಯಾಯಕಾರಿಗಳೂ ಇದ್ದರು. ಯಾವ ಕಾಲವೂ ಅನ್ಯಾಯಕಾರಿಗಳಿಲ್ಲದೆ ಉಳಿದಿಲ್ಲ. ಅವರೂ ಇತಿಹಾಸದ ಭಾಗವೇ ಆಗಿದ್ದಾರೆ. ಗಾಂಧೀ ಚರಿತ್ರೆಯಲ್ಲಿ ಗೋಡ್ಸೆಗೂ ಒಂದು ಸ್ಥಾನವಿದೆ, ಕರುಣಾಮಯಿಯಾದ ಏಸುಕ್ರಿಸ್ತನ ಬದುಕಿನಲ್ಲಿ ಅವನಿಗೆ ವಿಶ್ವಾಸದ್ರೋಹ ಮಾಡಿದ ಜುದಾಸನೂ ಕಾಣುತ್ತಾನಲ್ಲವೆ?

ಈ ಕಗ್ಗ ತಿಳಿಸುವ ಸಂದೇಶ ಇದು. ಪ್ರತಿಯೊಂದು ಕಾಲದಲ್ಲಿ ಒಳ್ಳೆಯವರೂ ಇರುತ್ತಾರೆ, ಅನ್ಯಾಯಿಗಳೂ ಇರುತ್ತಾರೆ. ಅನ್ಯಾಯ ಮಾಡುವವರು ಇಲ್ಲದಿದ್ದ ಕಾಲವೇ ಇಲ್ಲ. ಆದರೆ ಆಯ್ಕೆ ನಮಗಿದೆ. ನಾವು ಯಾರನ್ನು ಅನುಸರಿಸಬೇಕು? ಇಲ್ಲಿ ಕಗ್ಗ ಖಚಿತವಾಗಿ ಹೇಳುತ್ತದೆ, ‘ನೀನು ರಾಮಭಟನಾಗು’ ಎಂದು. ಹಾಗೆಂದರೆ ಬದುಕಿನಲ್ಲಿ ಆಯ್ಕೆ ಎದುರಾದಾಗ ಸತ್ಯವನ್ನು, ಋಜತೆಯನ್ನು, ಸುಂದರವನ್ನು, ಶಿವವನ್ನು ಆರಿಸಿಕೊ, ನಿನ್ನ ಬಾಳು ಭದ್ರವಾಗುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT