ಶನಿವಾರ, ಆಗಸ್ಟ್ 13, 2022
22 °C

ಬೆರಗಿನ ಬೆಳಕು| ತತ್ವದರ್ಶನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ |
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು – ಮಂಕುತಿಮ್ಮ || 332 ||

ಪದ-ಅರ್ಥ: ಸತ್ಯವೆಂಬುದದೆಲ್ಲಿ=ಸತ್ಯವೆಂಬುದು+ಅದೆಲ್ಲಿ, ನಿನ್ನಂತರಂಗದೊಳೊ=ನಿನ್ನ+ಅಂತರಂಗದೊಳೊ, ನೀನನುಭವಿಪ=ನೀನು+ಅನುಭವಿಪ (ಅನುಭವಿಸುವ), ಯುಕ್ತಿಯಿಂದೊಂದನೊಂದಕೆ=ಯುಕ್ತಿಯಿಂದ+ಒಂದನು+ಒಂದಕೆ.
ವಾಚ್ಯಾರ್ಥ: ಸತ್ಯ ಎಂಬುದು ಎಲ್ಲಿಹುದು? ನಿನ್ನ ಅಂತರಂಗದಲ್ಲೋ, ನೀನು ಅನುಭವಿಸುತ್ತಿರುವ ಪ್ರಪಂಚ ಆಗುಹೋಗುಗಳಲ್ಲೋ? ಯುಕ್ತಿಯಿಂದ ಒಂದನ್ನು ಮತ್ತೊಂದಕ್ಕೆ ಸರಿಹೊಂದಿಸಿದಾಗ ತತ್ವದರ್ಶನ ದೊರೆಯುತ್ತದೆ.

ವಿವರಣೆ: ಕಗ್ಗದಲ್ಲಿರುವ ಮೂಲಪ್ರಶ್ನೆ ಸತ್ಯಕ್ಕೆ ಸಂಬಂಧಿಸಿದ್ದು. ಯಾವುದು ಸತ್ಯ? ಸದಾಕಾಲ ನಾವು ಸಂವಾದ ಮಾಡುತ್ತಿರುವ ಪ್ರಪಂಚದ ಆಗುಹೋಗುಗಳಲ್ಲಿ ನಮ್ಮ ಅನುಭವಕ್ಕೆ ಬಂದದ್ದು ಸತ್ಯವೋ? ಅಥವಾ ನಾನು ಆದ ಅನುಭವವನ್ನು ಅಂತರಂಗದಲ್ಲಿ ಧ್ಯಾನಿಸಿದಾಗ ದೊರೆತದ್ದು ಸತ್ಯವೋ? ಹಾಗೆಂದರೆ ಅಂತರಂಗದಲ್ಲಿ ಒಂದು ಮತ್ತು ಬಾಹ್ಯಪ್ರಪಂಚದಲ್ಲೊಂದು ಎನ್ನುವಂತೆ ಎರಡು ಸತ್ಯಗಳಿರುತ್ತವೆಯೇ?. ಇವುಗಳನ್ನು ನಮ್ಮ ಪೂರ್ವಿಕರು ಎರಡು ಪದಗಳಲ್ಲಿ ವಿವರಿಸುತ್ತಾರೆ. ಅವು ಋತ ಮತ್ತು ಸತ್ಯ. ಶಬ್ದಕೋಶಗಳಲ್ಲಿ ಅವೆರಡಕ್ಕೂ ಒಂದೇ ಅರ್ಥ ಕಾಣುತ್ತದೆ.
ಆದರೆ ವೇದಗಳಲ್ಲಿ, ಉಪನಿಷತ್ತುಗಳಲ್ಲಿ ಅವುಗಳನ್ನು ಭಿನ್ನಾರ್ಥಕ ಪದಗಳನ್ನಾಗಿ ಬಳಸಿದಂತೆ ತೋರುತ್ತದೆ.

ಋತಂ ವದಿಷ್ಯಾಮಿ, ಸತ್ಯಂ ವದಿಷ್ಯಾಮಿ ||
ಋತಂ ತಪ: ಸತ್ಯಂ ತಪ: ||

ಋತವನ್ನು ಹೇಳುತ್ತೇನೆ, ಸತ್ಯವನ್ನು ಹೇಳುತ್ತೇನೆ ಎಂದಾಗ ಋತ ಮತ್ತು ಸತ್ಯ ಬೇರೆ ಬೇರೆಯೆ? ಎರಡೂ ಒಂದೇ ಎಂದಾದರೆ ವ್ಯತ್ಯಾಸವೇನು? ಅವೆರಡು ಪದಗಳ ನಡುವೆ ಸೂಕ್ಷ್ಮವಾದ ಆದರೆ ಮುಖ್ಯವಾದ ವ್ಯತ್ಯಾಸವಿದೆ. ಅದನ್ನು ಸಾಯಣಾಚಾರ್ಯರ ಭಾಷ್ಯದ ಒಂದು ಮಾತು ತಿಳಿಸುತ್ತದೆ.

ಋತಂ ಮನಸಾ ಯಥಾರ್ಥ ವಸ್ತುಚಿಂತನಂ |
ಸತ್ಯಂ ವಾಚಾ ಯಥಾರ್ಥಭಾಷಣಂ ||
ಮನಸ್ಸಿನಲ್ಲಿ ಯಥಾರ್ಥವನ್ನು ಕುರಿತು ಮಾಡಿದ ಚಿಂತನೆ ‘ಋತ’. ಮಾತಿನಿಂದ ಬಾಹ್ಯದಲ್ಲಿ ಹೇಳಿದ ಯಥಾರ್ಥವರ್ಣನೆ ‘ಸತ್ಯ’.

ಉದಾಹರಣೆಗೆ, ರಾಮ, ಭೀಮ, ಸೋಮ ಎಂಬ ಮೂವರು ಸ್ನೇಹಿತರು ಒಂದು ಕೋಣೆಯಲ್ಲಿ ಕುಳಿತಾಗ ರಾಮ ಮತ್ತು ಸೋಮರ ನಡುವೆ ವಾದವಿವಾದ ಬೆಳೆದು, ಸೋಮ ಥಟ್ಟನೆ ಮೇಲೆದ್ದು ರಾಮನನ್ನು ಥಳಿಸಿದ. ರಾಮನ ತಲೆಗೆ ಪೆಟ್ಟು ಬಿದ್ದು ಅಸ್ಪತ್ರೆ ಸೇರಿದ. ರಾಮ ನ್ಯಾಯಾಲಯಕ್ಕೆ ಹೋದ. ಈ ಪ್ರಕರಣಕ್ಕೆ ಸಾಕ್ಷಿ ಭೀಮ ಒಬ್ಬನೆ. ನ್ಯಾಯಾಧೀಶರು ಭೀಮನ ಸಾಕ್ಷ್ಯ ಕೇಳಿದರು. ಭೀಮನಿಗೆ ಗೊತ್ತು, ಸೋಮನೇ ರಾಮನಿಗೆ ಹೊಡೆದದ್ದೆಂದು. ಅದು ಋತ. ಆದರೆ ಸೋಮನೂ ಸ್ನೇಹಿತನೇ. ಅವನನ್ನು ಬಿಡುವುದು ಹೇಗೆ? ಆತ ಹೇಳಿದ, “ಮಹಾಸ್ವಾಮಿ, ಆ ಘಟನೆ ನಡೆದಿದ್ದಾಗ ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ, ಏನು ನಡೆಯಿತೋ ತಿಳಿಯದು”. ಇದು ಸತ್ಯ. ಯಾವುದು ನಮಗೆ ಆಂತರ್ಯದಲ್ಲಿ ಸತ್ಯ ಎಂದು ಗೋಚರವಾಗಿದೆಯೋ ಅದು ‘ಋತ’. ಅದನ್ನು ಬಾಯಿಬಿಟ್ಟು ಹೇಳಿದಾಗ ‘ಸತ್ಯ’. ಋತದ ಬಹಿರಂಗ ರೂಪ ಸತ್ಯ, ಸತ್ಯದ ಆಂತರ್ಯದ ಯಥಾರ್ಥತೆ ಋತ. ಕಗ್ಗ ಹೇಳುವುದು ಇದನ್ನೇ. ಅಂತರಂಗದ ಋತ ಮತ್ತು ಬಾಹ್ಯದ ಸತ್ಯ ಎರಡೂ ಒಂದಾದಾಗ ತತ್ವದರ್ಶನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು