ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹೊಟ್ಟೆರಾಯನ ಕಥೆ

Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ಉದರದೈವಕೆ ಜಗದೊಳೆದುರು ದೈವವದೆಲ್ಲಿ ? |
ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ ||
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ |
ಹದದೊಳಿರಿಸುವುದೆಂತೊ ? – ಮಂಕುತಿಮ್ಮ || 377 ||

ಪದ-ಅರ್ಥ: ಉದರ=ಹೊಟ್ಟೆ, ಜಗದೊಳೆದುರು=ಜಗದೊಳು+ಎದುರು, ಮಿಕ್ಕೆಲ್ಲವದರಿಂದ-ಮಿಕ್ಕ+ಎಲ್ಲ+ಅದರಿಂದ, ಮದಿಸುವುದದಾದರಿಸೆ=ಮದಿಸುವುದು (ಸೊಕ್ಕುವುದು)+ಅದು+ಆದರಿಸೆ, ಹದದೊಳಿರಿಸುವುದೆಂತೊ=ಹದದೊಳು+ಇರಿಸುವುದು+ಎಂತೊ.

ವಾಚ್ಯಾರ್ಥ: ಹೊಟ್ಟೆಯ ದೈವಕ್ಕಿಂತ ಮಿಗಿಲಾದ ದೈವ ಜಗತ್ತಿನಲ್ಲಿದೆಯೇ? ಮೊದಲು ಅದರ ಪೂಜೆಯಾಗಬೇಕು ನಂತರ ಉಳಿದ ಎಲ್ಲ ದೈವಗಳ ಪೂಜೆ. ಅದನ್ನು ಹೆಚ್ಚು ಆದರಿಸಿದರೆ ಮದವೇರಿ ಕುಳಿತುಕೊಳ್ಳುತ್ತದೆ, ಆದರಿಸದಿದ್ದರೆ ಕುದಿದು ಸಂಕಟವನ್ನುಂಟು ಮಾಡುತ್ತದೆ. ಇದನ್ನು ಸರಿಯಾದ ಹದದಲ್ಲಿ ಇಡುವುದೆಂತು ?

ವಿವರಣೆ: ಹೊಟ್ಟೆಯ ಅಂದರೆ ಹಸಿವಿನ ಉಸಾಬರಿಯೊಂದು ಮನುಷ್ಯನಿಗೆ ಇಲ್ಲದೆ ಹೋಗಿದ್ದರೆ ಏನಾಗುತ್ತಿತ್ತು? ಪ್ರಪಂಚ ಹೇಗಿರುತ್ತಿತ್ತು ಎಂದೊಮ್ಮೆ ವಿದ್ಯಾರ್ಥಿ ಸಮೂಹವನ್ನು ಕೇಳಿದ್ದೆ. ಉತ್ತರಗಳು ಅದ್ಭುತವಾಗಿದ್ದವು. ಕೆಲವು ಹಾಸ್ಯಭರಿತವಾಗಿದ್ದರೆ, ಕೆಲವು ವೈಜ್ಞಾನಿಕವಾಗಿದ್ದವು. ಮತ್ತೆ ಕೆಲವು ತುಂಬ ವಿಚಾರಪೂರಿತವಾಗಿ ಅಧ್ಯಾತ್ಮದ ನೆಲೆಯನ್ನು ತಟ್ಟುತ್ತಿದ್ದವು. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ದಾಸರು ಹಾಡಿದ್ದು ಸರಿಯಾಗಿದೆ. ಯಾಕೆಂದರೆ ನಮ್ಮ ಹೆಚ್ಚಿನ ಕೆಲಸಗಳನ್ನು ಮಾಡುವುದು ಹೊಟ್ಟೆಗಾಗಿಯೇ. ಅದನ್ನು ತೋರಿಸುವಂತೆಯೇ ಏನೋ ದೇವರು ಹೊಟ್ಟೆಯನ್ನು ದೇಹದ ಕೇಂದ್ರಭಾಗದಲ್ಲೇ ಇಟ್ಟಿದ್ದಾನೆ. ಕಾರಿಗೆ ಪೆಟ್ರೋಲ್ ಹಾಕದಿದ್ದರೆ ಚಲಿಸದೆನಿಂತು ಬಿಡುವಂತೆ ಆಹಾರವಿಲ್ಲದ ಶರೀರ ನಿಸ್ತೇಜವಾಗುತ್ತದೆ. ಹಸಿವು ಎಲ್ಲರಿಗೂ ಸಮಾನವಾಗಿ ಬೇಕಾಗಿಯೇ ತೀರುವ ಒಂದು ಅವಶ್ಯಕತೆ. ಎಬ್ರಹಾಂಮ್ಯಾಸ್ಲೋ ಹೇಳಿರುವಂಥ ಅವಶ್ಯಕತೆಗಳ ಏಣಿಯಲ್ಲಿ ಮೊದಲನೆಯದೇ ಆಹಾರ. ಅದು ದೊರೆತ ಮೇಲೆ ಎತ್ತರದ ಅವಶ್ಯಕತೆಗಳಾದ ಭದ್ರತೆ, ಪ್ರೀತಿ, ಅಂತ:ಕರಣ, ಸಂಬಂಧಗಳು, ಸಾಧನೆಯ ಅಪೇಕ್ಷೆಗಳು ಮತ್ತು ಕೊನೆಗೆ ಸಚ್ಚಿದಾನಂದದ ಅರಿವು ಇವುಗಳ ಚಿಂತನೆ. ಇದಕ್ಕಾಗಿಯೇ ಹಸಿವನ್ನು ತಣಿಸುವುದು ಅತ್ಯಂತ ಮುಖ್ಯವಾದದ್ದು. ಅದಕ್ಕೇ ಸ್ವಾಮೀ ವಿವೇಕಾನಂದರು ಹೇಳಿದರು,‘ಹಸಿದ ಹೊಟ್ಟೆಯ ಮುಂದೆ ಅಧ್ಯಾತ್ಮವನ್ನು ಉಸುರಬೇಡ’. ಹೊಟ್ಟೆ ಹಸಿದಾಗ ಯಾವ ಅಧ್ಯಾತ್ಮ ತಟ್ಟೀತು? ಮರಾಠಿಯಲ್ಲಿ ಒಂದು ಮಾತಿದೆ, ‘ಪೆಹಲೆ ಪೋಟೋಬಾ, ನಂತರ ವಿಠೋಬಾ’ ಅಂದರೆ ಮೊದಲು ಹೊಟ್ಟೆರಾಯ, ಆಮೇಲೆ ವಿಠ್ಠಲರಾಯ. ಆದರೆ ಹೊಟ್ಟೆಯ ಹಸಿವು ಅವಶ್ಯಕವೆಂದು ಅದನ್ನು ಹೆಚ್ಚು ಕಾಳಜಿಯಿಂದ ನೋಡಿಕೊಂಡರೆ ಅದೂ ಕಷ್ಟ. ಎರಡು ರೀತಿಯಿಂದ ಕಷ್ಟ. ಒಂದು ದೈಹಿಕವಾಗಿ. ನಮಗರಿವಿರದಂತೆಯೇ ಹೊಟ್ಟೆ ಉಬ್ಬಿ ಹೊರಬರುವ ಬಗ್ಗೆ ಸೋಜಿಗ. ದಿನನಿತ್ಯವೂ ಹೊಳೆಯದೇ ಹೋಗುವ ಸತ್ಯ ಬಟ್ಟೆ ತೊಡುವಾಗ, ಅವು ಬಿಗಿಯಾಗಿ ಹೊಳೆದುಬಿಡುತ್ತದೆ. ‘ಈಗ ಎಷ್ಟನೆಯ ತಿಂಗಳು?’ ಎಂದು ಗಂಡಸರಿಗೂ ಕೇಳಿದಾಗ, ಹೊಟ್ಟೆ ಅವಶ್ಯಕ್ಕಿಂತ ಹೆಚ್ಚು ಸೊಕ್ಕಿದೆ ಎಂಬುದು ಅರಿವಿಗೆ ಬರುತ್ತದೆ. ಇದರೊಂದಿಗೆ ಹೊಟ್ಟೆ ಸೇರಿದ ಆಹಾರ ಮದವನ್ನು ಹುಟ್ಟಿಸುತ್ತದೆ, ದೇಹವನ್ನು ಪ್ರಚೋದಿಸುತ್ತದೆ, ಕೆಣಕುತ್ತದೆ.

ಉಸಿರು ಹುಟ್ಟಿದ ತಕ್ಷಣ ಮಗು ಅಳುವುದು ಹೊಟ್ಟೆಗಾಗಿಯೇ. ಅಲ್ಲಿಂದ ಪ್ರಾರಂಭವಾಗುವ ಹೊಟ್ಟೆಯ ಬೇಡಿಕೆ ನಿಲ್ಲುವುದು ಉಸಿರು ನಿಂತಾಗಲೇ. ಅದಕ್ಕೇ ಕಗ್ಗ ಅದನ್ನು ಮಿಕ್ಕೆಲ್ಲ ದೈವಗಳಿಗಿಂತ ಹೊಟ್ಟೆ ಪ್ರಮುಖವಾದದ್ದು ಎನ್ನುತ್ತದೆ. ಅದನ್ನು ಅತಿಯಾಗಿ ಪೋಷಿಸಿದರೆ ಕೊಬ್ಬಿ, ಕೆಣಕುತ್ತದೆ. ಅದನ್ನು ಸಂಪೂರ್ಣವಾಗಿ ನಿಗ್ರಹಿಸಿದರೆ ಕುದಿದು ಕ್ಷೋಭೆಯನ್ನುಂಟು ಮಾಡುತ್ತದೆ. ಅದನ್ನು ಒಂದು ಹದದಲ್ಲಿ ಕಾಪಿಡುವುದು ಕಷ್ಟದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT