ಭಾನುವಾರ, ಸೆಪ್ಟೆಂಬರ್ 25, 2022
20 °C

ಬೆರಗಿನ ಬೆಳಕು | ಪರತತ್ವ ಸಂದರ್ಶನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು |
ಸಂಧಿಪುದು ಕಡಲ ನೀರ್ಗಳನ್;‌ ಅಂತು ಜೀವನ್ ||
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ|
ಸಂದರುಶಿಪನು – ಮಂಕುತಿಮ್ಮ || 694 ||

ಪದ-ಅರ್ಥ: ಬಂಧನಗಳೆಲ್ಲವನು=ಬಂಧನಗಳು+ಎಲ್ಲವನು, ಸಂಧಿಪುದು=ಸೇರುವುದು, ನೀರ್ಗಳನ್=ನೀರುಗಳನ್ನು, ಜೀವನ್=ಜೀವಿ, ವ್ಯಕ್ತಿ, ಮೀರ್ದೀಕ್ಷೆಯೋಟದಿಂ=ಮೀರ್ದ (ಮೀರಿದ)+ಕಕ್ಷೆಯ (ದೃಷ್ಟಿಯ)+ಓಟದಿಂ, ಸಂದರುಶಿಪನು=ಸಂದರ್ಶಿಸುತ್ತಾನೆ, ಪರನ=ಪರಮಾತ್ಮನ, ಪರತತ್ವವನ್ನು

ವಾಚ್ಯಾರ್ಥ: ಪ್ರವಾಹದಲ್ಲಿ ಬಂದ ನದಿಯ ನೀರು ಎಲ್ಲ ಅಡೆತಡೆಗಳನ್ನು ದಾಟಿ ಸಮುದ್ರದ ಜಲರಾಶಿಯನ್ನು ಸೇರುವುದು. ಅದರಂತೆ ಮನುಷ್ಯ, ಇಂದ್ರಿಯಗಳ ಬಂಧನದಿಂದ ಮುಕ್ತನಾಗಿ ಪರತತ್ವವನ್ನು, ಪರಶಿವನನ್ನು ಸೇರುತ್ತಾನೆ.

ವಿವರಣೆ: ಬೆಟ್ಟದ ಮೇಲೆ ಹುಟ್ಟಿದ, ಬಿದ್ದ ಹನಿಹನಿ ನೀರು ಜಿನುಗುತ್ತ ಪುಟ್ಟ ತೊರೆಯಾಗುತ್ತದೆ. ಮತ್ತಷ್ಟು ತೊರೆಗಳನ್ನು ಸೇರಿಸಿಕೊಂಡು ಹಳ್ಳವಾಗುತ್ತದೆ. ಅದಕ್ಕೆ ಇನ್ನಷ್ಟು ಹಳ್ಳಗಳು ಜೊತೆಯಾದಾಗ ನದಿಯಾಗುತ್ತದೆ. ನದಿಯ ನೀರಿನ ಹನಿ ಒಂದು ಕ್ಷಣವೂ ನಿಂತಲ್ಲಿ ನಿಲ್ಲಲಾರದು. ಒಂದೇ ಸಮನೆ ಅದರ ಪ್ರಯಾಣ ಸಮುದ್ರದೆಡೆಗೆ. ದಾರಿಯಲ್ಲಿ ಬಂದ ಮಣ್ಣನ್ನು ಕೊಚ್ಚಿ, ಬಂಡೆಗಳನ್ನು ಸುತ್ತುವರೆದು, ಎದುರಿಗೆ ಬಂದ ಬಂಧನಗಳನ್ನೆಲ್ಲ ನಿವಾರಿಸಿಕೊಂಡು ಕೊನೆಗೆ ಸಮುದ್ರದ ನೀರಿನಲ್ಲಿ ತನ್ನ ಸಂಗಮದ ಸಂತೃಪ್ತಿಯನ್ನು ಪಡೆಯುತ್ತದೆ.

ಅದರಂತೆ ಮನುಷ್ಯನದೂ ಒಂದು ಯಾತ್ರೆ. ಅವನ ಗಮ್ಯಸ್ಥಳ ಪರಮಾತ್ಮ ಅಥವಾ ಪರತತ್ವ ಸಂದರ್ಶನ. ಈ ಪ್ರಯಾಣದಲ್ಲಿ ಅವನಿಗೆ ಅಡ್ಡಿಯಾಗಿ ನಿಲ್ಲುವುದು ಹೊರಗಿನ ವಸ್ತುಗಳಲ್ಲ. ಅವನವೇ ಆದ ಇಂದ್ರಿಯಗಳು. ಮತ್ತೆ, ಅವನು ತನ್ನ ಅಂತಿಮ ಗುರಿ ಎಂದುಕೊಂಡಿರುವ ಪರಸತ್ವವೂ ಹೊರಗಿರುವುದಲ್ಲ. ಅದು ಅವನಲ್ಲೇ ಇದೆ. ಹಾಗಾದರೆ ಇಂದ್ರಿಯಗಳು ತಡೆಗಳು ಹೇಗಾದವು? ಇಂದ್ರಿಯಗಳನ್ನು ಬಳಸಿಕೊಂಡು ಪರಮಸತ್ಯವನ್ನು ಕಾಣುವ ಹವ್ಯಾಸ ನಮಗೆ! ಅದು ಅಸಾಧ್ಯ. ಕಣ್ಣು ಕೇವಲ ಆಕಾರವನ್ನು ಕಾಣಬಹುದು, ನಿರಾಕಾರವನ್ನು ಕಾಣಬಹುದೆ? ಕಿವಿ ಇರುವುದೇ ಶಬ್ದಗಳನ್ನು ಕೇಳಲು. ಅದು ನಿಶ್ಯಬ್ದವನ್ನು ಕೇಳೀತೇ? ಚರ್ಮ ಸ್ಪರ್ಶವನ್ನು ಗುರುತಿಸಲು ಇರುವ ಸಾಧನ. ಅದು ಸ್ಪರ್ಶಾತೀತವಾದದ್ದರ ಅನುಭವವನ್ನು ಪಡೆದೀತೇ? ಹಾಗೆಯೇ ವಾಸನೆಯೇ ಇಲ್ಲದ ವಸ್ತುವನ್ನು ಮೂಗು, ರುಚಿಯೇ ಇಲ್ಲದ್ದನ್ನು ನಾಲಿಗೆ ಗುರುತಿಸುವುದು ಸಾಧ್ಯವಿಲ್ಲ.

ಹೀಗೆಂದರೇನಾಯಿತು? ಇಂದ್ರಿಯಗಳಿಂದ ದೇವ ಕಾಣಲಾರ. ಕಣ್ಣು ಸೊಗಸಾದದ್ದನ್ನು ನೋಡುತ್ತದೆ. ಆಸೆ ಬಿಗಿಯಿತು. ಮನುಷ್ಯನನ್ನು ನೆಲಕ್ಕೆ ಕಟ್ಟಿತು. ಶಬ್ದದ ಮೂಲಕ ಕಿವಿ, ಸ್ಪರ್ಶದ ಮೂಲಕ ಚರ್ಮ, ರುಚಿಯ ಮೂಲಕ ನಾಲಿಗೆ, ವಾಸನೆಯ ಮೂಲಕ ಮೂಗು ಒಂದೊಂದಾಗಿ ಮನುಷ್ಯನನ್ನು ಬಿಗಿದು ಅವನ ಪ್ರಯಾಣಕ್ಕೆ ಅಡ್ಡಿಯಾದವು. ಯಾರು ಈ ಇಂದ್ರಿಯಗಳ ಬಾಧೆಯಿಂದ ಬಿಡಿಸಿಕೊಂಡು ಏಕಮನಸ್ಸಿನಿಂದ ಮುಂದುವರೆದನೋ ಅವನು ಪರತತ್ವವನ್ನು, ಪರಮಾತ್ಮನನ್ನು ತಲುಪುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು