ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸತ್ಯ ಒಂದೇ

Last Updated 1 ನವೆಂಬರ್ 2021, 17:46 IST
ಅಕ್ಷರ ಗಾತ್ರ

ನರರವೊಲೆ ಸುರರುಮಲೆದಲೆದು ಮರೆಯಾಗಿಹರು|
ಭರತದೇಶದೊಳಮೈಗುಪ್ತಯವನರೊಳಂ||
ಸುರ ನಾಮ ರೂಪಗಳಸಂಖ್ಯಾತ, ನಿಜವೊಂದು|
ತೆರೆಕೋಟಿ ಕಡಲೊಂದು – ಮಂಕುತಿಮ್ಮ ||487||

ಪದ-ಅರ್ಥ: ನರರವೊಲೆ= ನರರಂತೆ, ಸುರರುಮಲೆದಲೆದು= ಸುರರುಮ್ (ಸುರರು ಕೂಡ)+ ಅಲೆದಲೆದು, ಭರತದೇಶದೊಳಮೈಗುಪ್ತಯವನರೊಳಂ= ಭರತದೇಶದೊಳಮ್ (ಭರತದೇಶದಲ್ಲಿ)+ ಐಗುಪ್ತ (ಇಜಿಪ್ತ)+ ಯವನರೊಳ್ (ಗ್ರೀಸ್ ದೇಶದವರಲ್ಲಿ), ರೂಪಗಳಸಂಖ್ಯಾತ= ರೂಪಗಳು+ ಅಸಂಖ್ಯಾತ.

ವಾಚ್ಯಾರ್ಥ: ನರರಂತೆ ಸುರರು ಕೂಡ ತಮ್ಮ ಕಾಲಾವಧಿಯ ನಂತರ ಮರೆಯಾಗಿದ್ದಾರೆ. ಭಾರತದೇಶದಲ್ಲಿ, ಇಜಿಪ್ತ ಮತ್ತು ಗ್ರೀಸ್ ದೇಶಗಳಲ್ಲಿ ದೇವತೆಗಳ ಅಸಂಖ್ಯಾತ ಹೆಸರು, ರೂಪಗಳಿವೆ ಆದರೆ ಸತ್ಯ ಒಂದೇ. ಕೋಟಿ ತೆರೆಗಳಿದ್ದರೂ ಸಮುದ್ರ ಒಂದೇ.

ವಿವರಣೆ: ಮನುಷ್ಯರು ಹೇಗೆ ಪ್ರಪಂಚದಲ್ಲಿ ಬದುಕಿ, ಕೆಲಕಾಲ ಇದ್ದು ಮರೆಯಾಗಿ ಹೋಗುವಂತೆ ದೇವತೆಗಳೂ ಕೂಡ ಮರೆಯಾಗುತ್ತಾರೆ. ಒಂದು ಕಾಲದಲ್ಲಿ ಅತ್ಯಂತ ಪ್ರಚಲಿತವಾಗಿದ್ದ, ನಿರಾಕಾರವಾದ ಅಗ್ನಿ, ವಾಯು, ಭೂಮಿ, ನೀರು, ಆಕಾಶಗಳನ್ನು ಪೂಜಿಸುತ್ತಿದ್ದ ಮನುಷ್ಯ ನಿಧಾನವಾಗಿ ಆಕಾರಸಿದ್ಧವಾದ, ತಮ್ಮ ಮನಸ್ಸಿಗೆ ಹೊಂದುವಂಥ ವಿಗ್ರಹಗಳ ಪೂಜೆಗೆ ಮನಸ್ಸು ಮಾಡಿದ. ಹೀಗಾಗಿ ನೂರಾರು, ಸಾವಿರಾರು ದೇವತೆಗಳ ಕಲ್ಪನೆಗೆ ದಾರಿಯಾಯಿತು. ಇದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲೆಡೆಗೆ ಕಂಡುಬಂದ ಚಿಂತನೆ. ಒಂದು ಬಾರಿ ತರುಣನೊಬ್ಬ ಸೂಫೀ ಸಂತರಾದ ಆಗಾ ಬಳಿಗೆ ಬಂದು, ‘ಗುರುಗಳೇ, ಜಗತ್ತಿನಲ್ಲಿ ಇಷ್ಟೊಂದು ದೇವತೆಗಳಿದ್ದಾರಲ್ಲ, ಇವರಲ್ಲಿ ನಿಜವಾದ ದೇವರು ಯಾರು?’ ಗುರು ಒಂದು ಪುಟ್ಟ ಕಥೆ ಹೇಳಿದ. ಒಂದು ಸಲ ಒಬ್ಬ ಪರ್ಶಿಯನ್, ಒಬ್ಬ ಟರ್ಕಿ ಪ್ರಜೆ, ಒಬ್ಬ ಅರಬ್, ಮತ್ತೊಬ್ಬ ಗ್ರೀಕ್ ಮನುಷ್ಯ ಜೊತೆಯಾಗಿ ಪ್ರವಾಸಕ್ಕೆ ಹೊರಟಿದ್ದರು. ಪರ್ಶಿಯನ್ ಹೇಳಿದ ‘ನನಗೆ ಅಂಗೂರ್ ಬೇಕು’, ಟರ್ಕಿ ಹೇಳಿದ, ‘ಅದಾರಿಗೆ ಬೇಕು? ನನಗೆ ಉಜುಮ್ ಬೇಕು’. ಅರಬ್, ‘ನನಗೆ ಅವು ಬೇಡ. ನನಗೆ ಇನಾಬ್ ಮಾತ್ರ ಸಾಕು’ ಎಂದ. ಕೊನೆಗೆ ಗ್ರೀಕ್ ಹೇಳಿದ,

‘ಅವೆಲ್ಲವೂ ನನಗೆ ಪ್ರಯೋಜನವಿಲ್ಲ, ನನಗೆ ಸ್ಟಾಫಿಲ್ ಮಾತ್ರ ಬೇಕು’. ಅವರಲ್ಲಿ ಜಗಳ ಪ್ರಾರಂಭವಾಯಿತು. ಅಲ್ಲೊಬ್ಬ ಬಹುಭಾಷಾ ತಜ್ಞ ಬಂದ. ಇವರ ವಾದಗಳನ್ನು ಕೇಳಿದ. ಅವರ ಹತ್ತಿರವಿದ್ದ ಹಣವನ್ನು ತೆಗೆದುಕೊಂಡು ಹೋಗಿ, ದ್ರಾಕ್ಷಿ ಹಣ್ಣಿನ ಬುಟ್ಟಿಯನ್ನು ತಂದು ಕೊಟ್ಟ. ಎಲ್ಲರಿಗೂ ಸಂತೋಷವಾಯಿತು. ‘ಇದೇ ಅಂಗೂರ್’ ಎಂದ ಪರ್ಶಿಯನ್, ಇದೇ ಉಜುಮ್ ಎಂದ ಟರ್ಕಿ, ಇದನ್ನೇ ನಾವು ಇನಾಬ್ ಎನ್ನುತ್ತೇವೆ ಎಂದ ಅರಬ್, ಗ್ರೀಕ್ ಹೇಳಿದ, ‘ನಮ್ಮ ಭಾಷೆಯಲ್ಲಿ ಇದನ್ನೇ ಸ್ಟಾಫಿಲ್ ಎನ್ನುತ್ತೇವೆ’.

ಗುರು ಆಗಾ ಹೇಳಿದ, ಪ್ರಪಂಚದ ಸಾಮಾನ್ಯ ಜನರೆಲ್ಲ ಈ ಪ್ರವಾಸಿಗರಿದ್ದ ಹಾಗೆ. ಅವರಿಗೆ, ತಮ್ಮನ್ನು ಮೀರಿದ, ಎಲ್ಲವನ್ನು ನಿಗ್ರಹಿಸುವ ಯಾವುದೋ ಶಕ್ತಿ ಇದೆಯೆಂದು ತಿಳಿದಿದೆ. ಅದನ್ನು ಕಾಣುವ ಆಂತರಿಕ ತುಡಿತವಿದೆ. ಅದಕ್ಕೆ ಯಾವುದೋ ಒಂದು ಹೆಸರನ್ನು ಕೊಡುತ್ತಾರೆ. ಅದನ್ನೇ ದೇವರೆಂದು ಪೂಜಿಸುತ್ತಾರೆ. ಆದರೆ ನಿಜವಾದ ಧರ್ಮಜ್ಞ, ಬಹುಭಾಷಾ ವಿದ್ವಾಂಸನಂತೆ. ಅವನಿಗೆ ಗೊತ್ತು, ಅವೆಲ್ಲ ಒಂದೇ ಶಕ್ತಿಯ ಬೇರೆ ಬೇರೆ ಹೆಸರುಗಳು. ಕಗ್ಗ ಅದನ್ನು ವಿಶದಪಡಿಸುತ್ತದೆ. ‘ದೇವನೊಬ್ಬ ನಾಮ ಹಲವು’ ಎನ್ನುವಂತೆ, ಭಾರತ, ಇಜಿಪ್ತ, ಗ್ರೀಕ್ ದೇಶಗಳಲೆಲ್ಲ ಅಸಂಖ್ಯಾತ ನಾಮರೂಪಗಳಿಂದ ಪೂಜಿಸಿದರೂ, ಕೋಟಿ ತೆರೆಗಳಿದ್ದರೂ ಸಮುದ್ರ ಒಂದೇ ಎನ್ನುವಂತೆ, ಸತ್ಯದ ಸ್ವರೂಪ ಒಂದೇ ಆಗಿದೆ. ಅದು ನಾಮರೂಪಾತೀತವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT