ಭಾನುವಾರ, ಮೇ 29, 2022
23 °C

ಗುರುರಾಜ ಕರಜಗಿ| ಶಾಂತಿಗೆ ಹೃದಯದ ಅಬ್ಬರ ಇಳಿಯಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃದಯದಬ್ಬರವೇನು ಹೊಟ್ಟೆಯುಬ್ಬರದಂತೆ |
ಅದರಿಳಿತ ಕೊರಳನಾದದ ಸದ್ದಿನಿಂದ ||
ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು | ಅದನಿಳಿಸೆ ಶಾಂತಿಯೆಲೋ – ಮಂಕುತಿಮ್ಮ || 386 ||

ಪದ-ಅರ್ಥ

ಹೃದಯದ ಬ್ಬರವೇನು =ಹೃದಯದ ಅಬ್ಬರ+ಏನು, ಹೊಟ್ಟೆಯುಬ್ಬರ=
ಹೊಟ್ಟೆಯ+ಉಬ್ಬರ, ಅದರಿಳಿತ=
ಅದರ+ಇಳಿತ, ತೆಗಳುಗಳು=ತೆಗಳಿಕೆಗಳು, ಅದನಿಳಿಸೆ=ಅದನು+ಇಳಿಸೆ

ವಾಚ್ಯಾರ್ಥ

ಹೃದಯದ ಅಬ್ಬರವೂ ಹೊಟ್ಟೆಯ ಉಬ್ಬರದಂತೆ. ಅದರ ಇಳಿತ ಕೂಡ ಕೊರಳಿನಿಂದ ಬರುವ ಸದ್ದಿನಿಂದ. ಆ ಹೃದಯದ ಇಳಿತದ ಸದ್ದುಗಳೇ ನಗು, ದುಗುಡ, ಹೊಗಳಿಕೆ ಮತ್ತು ತೆಗಳಿಕೆಗಳು. ಅವುಗಳನ್ನು ಕಡಿಮೆ ಮಾಡಿದರೆ ದೊರೆಯುವುದು ಶಾಂತಿ.

ವಿವರಣೆ

ಹೊಟ್ಟೆಗೆ ಹಿತವಾದ, ಸಾತ್ವಿಕ ಆಹಾರದಿಂದ ಪುಷ್ಟಿ ದೊರೆಯುತ್ತದೆ. ಆದರೆ ಬಾಯಿ ಚಪಲಕ್ಕೆಂದು ಹೆಚ್ಚು ಮಸಾಲೆಯುಳ್ಳ, ಖಾರದ, ತಾಮಸಿಕವಾದ ಆಹಾರವನ್ನು ತಿಂದಾಗ ಹೊಟ್ಟೆ ಬಿಗಿದಂತೆ ಅನುಭವವಾಗುತ್ತದೆ. ಕಮರು ತೇಗು ಬರುತ್ತದೆ, ಹೊಟ್ಟೆ ಉಬ್ಬರಿಸಿಕೊಳ್ಳುತ್ತದೆ. ಆ ಉಬ್ಬರ ಇಳಿಯುವವರೆಗೆ ಸುಖವಿಲ್ಲ. ಅದಕ್ಕಾಗಿ ಏನೇನೋ ಪ್ರಯೋಗಗಳು. ಸೋಡಾ ತೆಗೆದುಕೊಂಡಿದ್ದಾಯಿತು, ಬಿಸಿ ನೀರು ಕುಡಿದದ್ದಾಯಿತು, ತಾನಾಗಿಯೇ ಹೊತ್ತುಕೊಂಡ ಈ ಭಾರವನ್ನು ಕರಗಿಸಲು ಶತಪಥ ಇಟ್ಟದ್ದಾಯಿತು. ಕೊನೆಗೆ ಢರ್ರೆಂದು ತೇಗು ಬಂದಾಗ ಸ್ವರ್ಗಸುಖ. ಹೀಗೆ ಹತ್ತಾರು ತೇಗುಗಳು ಗಂಟಲಿನಿಂದ ಅಬ್ಬರಿಸಿ ಬಂದಾಗ ಹೊಟ್ಟೆಯ ಭಾರ ಕಡಿಮೆ. ಹೊಟ್ಟೆಯ ಭಾರವನ್ನು ಏರಿಸಿಕೊಂಡದ್ದೇ ನಾವು, ಅದನ್ನು ಇಳಿಸಬೇಕಾದದ್ದು ನಾವೇ.

ಈ ಹೊಟ್ಟೆಯ ಉಬ್ಬರವನ್ನು ಇಳಿಸಿಕೊಳ್ಳಲು ಕೆಲವು ದೈಹಿಕವಾದ ಉಪಾಯಗಳಿವೆ. ಆದರೆ ಇದಕ್ಕಿಂತ ಕಷ್ಟವಾದದ್ದು ಹೃದಯದ ಅಬ್ಬರ. ಹೊಟ್ಟೆಯ ಉಬ್ಬರದಂತೆ, ಹೃದಯದ ಅಬ್ಬರವನ್ನು ನಾವೇ ಸೃಷ್ಟಿಸಿಕೊಂಡದ್ದು. ನಾಲಿಗೆ ರುಚಿಯಾದ ಆಹಾರವನ್ನು ಬೇಡುವಂತೆ, ಹೃದಯವೂ ಬೇಡುತ್ತದೆ. ಅದಕ್ಕೆ ಬೇಕಾದ ಆಹಾರಗಳೆಂದರೆ ಒಲವು, ಸಾಹಿತ್ಯ, ಸಂಗೀತ, ಕೆಳೆಕೂಟ, ನಗು, ಹರಟೆ, ಸೌಂದರ್ಯದರ್ಶನಗಳು. ಅವೆಲ್ಲವೂ ಒಂದು ಮಿತಿಯಲ್ಲಿದ್ದಾಗ ಹೃದಯದ ಸ್ಪಂದನವೂ ಆರೋಗ್ಯಕರವಾಗಿರುತ್ತದೆ. ಆದರೆ ಕೆಲವೊಂದು ಭಾವನೆಗಳು ಅತಿಯಾದಾಗ ಅಥವಾ ಇಲ್ಲದೇ ಹೋದಾಗ ಹೃದಯದ ಅಬ್ಬರ ಹೆಚ್ಚಾಗುತ್ತದೆ. ಅದರ ಅಬ್ಬರವನ್ನು ನಿಭಾಯಿಸುವುದು ಹೊಟ್ಟೆಯ ಉಬ್ಬರಕ್ಕಿಂತ ತುಂಬ ಕಷ್ಟವಾದದ್ದು. ಹೊಟ್ಟೆಯ ಉಬ್ಬರ ಕೊರಳನಾಳದ ತೇಗಿನಿಂದ ಇಳಿಯುವಂತೆ ಹೃದಯದ ಅಬ್ಬರವೂ ಕೊರಳಿನಿಂದಲೇ ಬರುವುದು. ಅದು ನಗುವಾಗಿ, ನೋವಾಗಿ ಹೊರಬರುತ್ತದೆ. ಸಂತೋಷದ ಒತ್ತಡ ಹೆಚ್ಚಾದಾಗ ನಗುವಿನ ರೂಪದಲ್ಲೋ, ಹೊಗಳಿಕೆಯ ರೀತಿಯಲ್ಲೋ ಪ್ರಕಟವಾಗುತ್ತದೆ. ದುಗುಡದ, ನೋವಿನ ಅಬ್ಬರ ಹೆಚ್ಚಾದಾಗ ಅದು ಅಳುವಿನ ಧ್ವನಿಯಾಗಿ ಇಲ್ಲವೆ ಮತ್ತೊಬ್ಬರನ್ನು ತೆಗಳುವ ಮಾತಿನಂತೆ ಹೊರಬರುತ್ತದೆ.

ಒಟ್ಟಿನಲ್ಲಿ ಹೊಟ್ಟೆಯ ಉಬ್ಬರವೊ, ಹೃದಯದ ಅಬ್ಬರವೊ ಅವುಗಳನ್ನು ಆದಷ್ಟು ಬೇಗ ಇಳಿಸಿಕೊಳ್ಳದೆ ಸುಖವಿಲ್ಲ. ಅದಕ್ಕೆ ಎರಡು ದಾರಿಗಳು. ಮೊದಲನೆಯದು, ಆದಷ್ಟು ಮಟ್ಟಿಗೆ ಮಿತವಾದ, ಸಾತ್ವಿಕ ಆಹಾರ ಮತ್ತು ಚಿಂತನೆಗಳ ಸ್ವೀಕಾರ. ಎರಡನೆಯದು, ಅಬ್ಬರ, ಉಬ್ಬರ ಆಗುತ್ತಿರುವುದು ತಿಳಿದಂತೆಯೇ ಅದರ ಇಳಿಕೆಗೆ ಪ್ರಯತ್ನ ಮಾಡುವುದು. ಮೆಲುವಾದ, ಸುಸಂಸ್ಕೃತವಾದ ಮಾತು, ನಗೆ, ನೈಜ ಪ್ರಾಮಾಣಿಕ ಹೊಗಳಿಕೆಯ ನುಡಿಗಳು, ಸಜ್ಜನರ ಸಹವಾಸಗಳು ಹೃದಯ ದಬ್ಬರದ ಇಳಿಕೆಗೆ ಪೂರಕ. ಅದರಿಂದ ಮನಸ್ಸಿಗೆ ಶಾಂತಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.