ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಂತರಂಗ - ಬಹಿರಂಗ

Last Updated 7 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ |
ಸಾಕೆನದೆ ಬೇಕೆನದೆ ನೋಡು ನೀನದನು ||
ತಾಕಿಸದಿರಂತರಾತ್ಮಂಗಾ ವಿಚಿತ್ರವನು |
ಹಾಕು ವೇಷವ ನೀನು – ಮಂಕುತಿಮ್ಮ || 751 ||

ಪದ-ಅರ್ಥ: ಚಿತ್ರವಿಂದ್ರಜಾಲದ=ಚಿತ್ರವು+ಇಂದ್ರಜಾಲದ, ಸಾಕೆನದೆ=ಸಾಕು+ಎನದೆ, ನೀನದನು=ನೀನು+ಅದನು,
ತಾಕಿಸದಿರಂತರಾತ್ಮಂಗಾವಿಚಿತ್ರವನು=ತಾಕಿಸದಿರು+ಅಂತರಾತ್ಮಂಗೆ+ಆ+ವಿಚಿತ್ರವನು.

ವಾಚ್ಯಾರ್ಥ: ಲೋಕವೆಂಬ ಚಿತ್ರ ಅದೊಂದು ಇಂದ್ರಜಾಲದ ಕಾರ್ಯ. ಅದನ್ನು ನೀನು ಸಾಕೆನದೆ, ಬೇಕೆನದೆ ನೋಡು. ಆದರೆ ಆ ವಿಚಿತ್ರವನ್ನು ಅಂತರಾತ್ಮಕ್ಕೆ ತಾಗಿಸಬೇಡ. ಕರ್ತವ್ಯಕ್ಕಾಗಿ ನೀನು ವೇಷವನ್ನು ಹಾಕು.

ವಿವರಣೆ: ಅದ್ಭುತವಾದ ವೈವಿಧ್ಯಗಳಿಂದ ಕೂಡಿದ ಪ್ರಪಂಚದ ವಿಸ್ತಾರ, ಮೆರಗು, ಬೆರಗು ಹುಟ್ಟಿಸುತ್ತದೆ. ಪ್ರತಿಬಾರಿಯೂ, ಪ್ರತಿಕ್ಷಣವೂ ಹೊಸತಾಗಿರುವಂತೆ ತೋರುತ್ತದೆ. ಶತಶತಮಾನಗಳಿಂದ ಮನುಷ್ಯ ಅದನ್ನು ಅರ್ಥಮಾಡಿಕೊಳ್ಳಲು ಹೆಣಗಿ ಸೋತಿದ್ದಾನೆ. ಯಾಕೆಂದರೆ ಪ್ರತಿಯೊಂದು ವಸ್ತುವಿಗೂ ಅನೇಕ ಮುಖಗಳು. ಒಮ್ಮೆ ಕಂಡದ್ದು ಮತ್ತೊಮ್ಮೆ ಬೇರೆಯಾಗಿಯೇ ಕಂಡೀತು. ಐವತ್ತು ವರ್ಷ ಜೊತೆಯಾಗಿಯೇ ಬದುಕಿದ ಗಂಡನಿಗೆ ಹೆಂಡತಿ ಅರ್ಥವಾಗಿಲ್ಲ, ಹೆಂಡತಿಗೆ ಗಂಡ ಅರ್ಥವಾಗಿಲ್ಲ. ಇನ್ನು ಪ್ರಪಂಚ ಅರ್ಥವಾಗುವುದು ಹೇಗೆ? ಮಳೆನೀರಿನ ತುಂತುರು ಹನಿಗಳ ಮತ್ತು ತೂರಿಬರುವ ಸೂರ್ಯಕಿರಣಗಳ ದಾಂಪತ್ಯ ಫಲ ಕಾಮನಬಿಲ್ಲು. ಏನದರ ಸೊಬಗು, ಚಿತ್ತಾರ! ಅದನ್ನು ನೋಡುವ ಕವಿಗೆ, ಕವಿಹೃದಯಕ್ಕೆ ಭಾವೋನ್ಮಾದ. ಆ ಕಾಮನಬಿಲ್ಲಿನಲ್ಲಿ ಏನಿದೆ? ಮೇಲೇರಿ ಕಾಣಹೋದರೆ ಸಿಕ್ಕೀತೇನು? ಬರೀ ಆವಿ! ಕಾಮನಬಿಲ್ಲನ್ನು ದೂರದಿಂದ, ಅದು ಇರುವತನಕ, ನೋಡಿ ಸಂತೋಷಪಡಬೇಕು. ಅದನ್ನು ಹುಡುಕಿದರೆ ಏನೂ ಇಲ್ಲ. ಬರೀ ಮಾಯೆ.

ಕಗ್ಗ ಹೇಳುತ್ತದೆ, ಈ ಪ್ರಪಂಚವೆಲ್ಲ ಒಂದು ಇಂದ್ರಜಾಲದಂತೆ, ಕಾಮಬಿಲ್ಲಿನಂತೆ. ಅದನ್ನು ನೋಡು. ನೋಡುವುದಕ್ಕೆ ಬೇಸರ ಬೇಡ, ಸಾಕೆನಬೇಡ. ಇನ್ನೂ ನೋಡಬೇಕು ಎಂದು ಅತಿಯಾಸೆಯೂ ಬೇಡ. ಯಾಕೆಂದರೆ ನೀನು ಬೇಕೆಂದರೆ ಅದು ಇರುವುದೂ ಇಲ್ಲ. ಆದರೆ ಈ ನೊರೆಯಂತಿರುವ, ಮಾಯೆಯ ಪ್ರಪಂಚವನ್ನು ಅಂತರಂಗಕ್ಕೆ ತಾಕಿಸಬೇಡ. ಅಲ್ಲಿ ನಿರ್ಲಿಪ್ತತೆ ಇರಲಿ. ಅಲ್ಲಮನಾದಿಯಾಗಿ ಅನೇಕ ವಚನಕಾರರು ಅಣ್ಣ ಬಸವಣ್ಣನನ್ನು ಹಲವಾರು ರೀತಿಗಳಲ್ಲಿ ವರ್ಣಿಸಿದ್ದಾರೆ. ಅವನದು ಅನನ್ಯವಾದ ನಿರ್ಲಿಪ್ತ ಬದುಕು. ಹಾಗಾದರೆ ಪ್ರಪಂಚದ ಚಟುವಟಿಕೆಗಳಲ್ಲಿ ಆತ ಭಾಗವಹಿಸಲಿಲ್ಲವೆ? ಬಸವಣ್ಣನ ಸುತ್ತ ಬಹುದೊಡ್ಡ ಸಮಾಜ ಹರಡಿಕೊಂಡಿತ್ತು. ಮೈತುಂಬ ಜವಾಬ್ದಾರಿಯ ಕೆಲಸ. ಅಲ್ಲಿ ಒಂದಿನಿತೂ ತಪ್ಪು ಆಗಬಾರದು. ಅದರೊಂದಿಗೆ ಮಹಾಮನೆಗೆ ಬಂದ ಸಾವಿರಾರು ಸಂತರು, ಅತಿಥಿಗಳ ಆದರ ಸತ್ಕಾರದ ಹೊಣೆ. ಅವೆಲ್ಲ ಹೊರವೇಷಗಳು. ಬಸವಣ್ಣ ಹೊರಗೆ ಸತತವಾಗಿ ಪ್ರಪಂಚಕ್ಕೆ ಒಳಿತಾಗಲು ದುಡಿದಂತೆ, ಅಂತರಂಗದಲ್ಲಿ ನಿರ್ಮೋಹಿ, ನಿರ್ಲಿಪ್ತ. ಹೊರಗೆ ಜವಾಬ್ದಾರಿಯ ಭಾರ, ಒಳಗೆ ಸಂತತ್ವ. ಬಹಿರಂಗದಲ್ಲಿ ಲೋಕದ ಗದ್ದಲದ ಪ್ರಪಂಚದಲ್ಲಿ ಮುಖ್ಯ ಸೂತ್ರಧಾರ ಆದರೆ ಅಂತರಂಗದಲ್ಲಿ ಪ್ರಶಾಂತ ಮಹಾಮೌನಿ. ಬಹಿರಂಗದಲ್ಲಿ ಕರ್ಮಯೋಗಿಯಾದರೂ ಅಂತರಂಗದಲ್ಲಿ ಜೀವನ್ಮುಕ್ತ. ಇದು ಸಾರ್ಥಕ ಬದುಕಿಗೆ ಬೇಕಾದ ಗುಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT