ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಭೇದಾತೀತವಾದ ಸ್ಥಿತಿ

Last Updated 8 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಭೋಜನದಿ ಪರಮಭೋಜನ ಪರಬ್ರಹ್ಮರಸ |
ಯಾಚಿಸಲ್ಕೇನಿರ್ಪುದದನುಂಡ ಬಳಿಕ ? ||
ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ |
ರಾಜ ನೀಂ ಜಗಕೆಲ್ಲ – ಮಂಕುತಿಮ್ಮ || 752 ||

ಪದ-ಅರ್ಥ: ಪರಮ ಭೋಜನ=ಶ್ರೇಷ್ಠ ಭೋಜನ, ಯಾಚಿಸಲ್ಕೇನಿರ್ಪುದದನುಂಡ=ಯಾಚಿಸಲ್ಕೆ (ಯಾಚಿಸಲು)+ಏನಿರ್ಪುದು (ಏನಿದೆ)+ಅದನು+ಉಂಡ, ತ್ಯಾಜಕ=ತ್ಯಾಗಮಾಡುವವ, ತ್ಯಾಗ=ತ್ಯಾಗದ ಕ್ರಿಯೆ, ಸಂತ್ಯಾಜ್ಯ=ತ್ಯಾಗ ಮಾಡಿದ್ದು,
ಭೇದಗಳಿರದೆ=ಭೇದಗಳು+ಇರದೆ.

ವಾಚ್ಯಾರ್ಥ: ಎಲ್ಲ ಭೋಜನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಬ್ರಹ್ಮವಸ್ತುವಿನ ಅರಿವಿನಿಂದಾಗುವ ರಸದೌತಣ. ಅದನ್ನೇ ಉಂಡಮೇಲೆ ಮತ್ತೆ ಬೇಡಲು ಏನಿದೆ? ಆಗ ತ್ಯಾಗಮಾಡುವವ, ತ್ಯಾಗದ ಕ್ರಿಯೆ ಮತ್ತು ತ್ಯಾಗ ಮಾಡಿದ ವಸ್ತುಗಳೊಳಗೆ ಯಾವ ಭೇದವೂ ಉಳಿಯದು. ಹಾಗಾದಾಗ ಜಗತ್ತಿಗೆ ನೀನೇ ರಾಜ.

ವಿವರಣೆ: ಭಗವಾನ್ ಬುದ್ಧ, ರಾಜಕುಮಾರನಾಗಿದ್ದವನು. ಅವನು ಅಪೇಕ್ಷಿಸಿದ್ದು ಕ್ಷಣದಲ್ಲೇ ದೊರೆಯುತ್ತಿತ್ತು. ಸಕಲ ಸೌಭಾಗ್ಯ ಸುತ್ತಮುತ್ತ ತುಂಬಿಕೊಂಡಿತ್ತು. ಸುಂದರಳಾದ ಪತ್ನಿ, ಪುಟ್ಟ ಮಗು, ಬದುಕು ತುಂಬಿತ್ತು. ಹೀಗೆ ಎಲ್ಲವೂ ಸಮೃದ್ಧವಾಗಿ ಹರಡಿಕೊಂಡಿದ್ದಾಗ ಆತ ಏನನ್ನು ಹುಡುಕಿಕೊಂಡು ರಾಜ ವೈಭವವನ್ನು ಬಿಟ್ಟುಹೋದ? ಇಲ್ಲಿ ದೊರೆಯದ್ದು ಮತ್ತೆಲ್ಲಾದರೂ ದೊರಕೀತೆಂಬ ನಂಬಿಕೆಯೆ? ಮಹಾವೀರ ಸುಂದರಾಂಗ, ರಾಜಕುಮಾರ. ಅವನು ನೋಡಿದ್ದನ್ನು ತಂದೊಪ್ಪಿಸುವ ಶ್ರದ್ಧೇಯ ಪರಿವಾರ. ಭೋಗಗಳಿಗೆ ಕೊರತೆಯೇ? ಯಾವ ಶಕ್ತಿ, ಯಾವ ವಿಶೇಷ ಬಯಕೆ, ಅವನನ್ನು ರಾಜಸಿಂಹಾಸನದಿಂದ ದೂರಕ್ಕೆಳೆದು ದಿಗಂಬರನನ್ನಾಗಿ ನಿಲ್ಲಿಸಿತು?

ಕೃಷ್ಣನೂ ರಾಜಕುಮಾರ. ಅಸಾಮಾನ್ಯ ದೇಹ ಶಕ್ತಿ, ಬುದ್ಧಿ ಶಕ್ತಿ, ಯೋಜಕ ಶಕ್ತಿಯ ಸಂಗಮ ಆತ. ಅನೇಕ ಚಕ್ರವರ್ತಿಗಳ ಕಿರೀಟಗಳು ಆತನ ಪದತಲದಲ್ಲಿ ಇದ್ದರೂ ಆತ ಎಂದಿಗೂ ರಾಜನಾಗಲಿಲ್ಲ. ತನಗಾಗಿ ಏನನ್ನೂ ಬಯಸಲಿಲ್ಲ. ತನ್ನ ಸ್ನೇಹಿತ, ಶಿಷ್ಯ ಅರ್ಜುನನ ಬಂಡಿಯ ಬೋವನಾಗಿ ಕುದುರೆಗಳನ್ನು ತೊಳೆದು ಕಟ್ಟಿದ. ಚಾಟಿ ಬೀಸುತ್ತಲೇ ಭಗವದ್ಗೀತೆ ಹೇಳಿದ. ಕಾಲದ ದೀರ್ಘವಾದ ದಾರಿಯಲ್ಲಿ ಇಂತಹ ಅನೇಕ ಚಿತ್ರಗಳು ಹಾದುಬರುತ್ತವೆ. ಹೊರಗಡೆ ಎಲ್ಲವೂ ಸಿದ್ಧವಿದ್ದಾಗ ಅವರ ಅನ್ವೇಷಣೆ ಏನಾಗಿತ್ತು? ಬಹುಶ: ಅವರೆಲ್ಲ ಒಂದು ವಿಶೇಷವನ್ನು ಗಮನಿಸಿದರು. ದೇಹ ಜಗತ್ತಿನ ಅನೇಕ ವಸ್ತುಗಳ ಮೇಲೆ ಅವಲಂಬಿತವಾದದ್ದು. ಜೀವ, ದೇಹದ ಮೇಲೆ ಅವಲಂಬಿಸಿದ್ದು. ಅದು ಸ್ವತಂತ್ರ ಅಸ್ತಿತ್ವ ಉಳ್ಳದ್ದಲ್ಲ. ಈ ಜೀವಭಾವ, ದೇಹಭಾವ ಅಡಗಿದಾಗ ಅಲ್ಲಿ ತುಂಬಿ ನಿಲ್ಲುವುದು ಪರವಸ್ತು. ಅದು ಯಾವುದರ ಮೇಲೂ ಅವಲಂಬಿತವಾದದ್ದಲ್ಲ. ಆ ಅವಸ್ಥೆಯನ್ನು ಹೊಂದಿದವನು ಏನನ್ನು ಬೇರೆ ಅಪೇಕ್ಷಿಸಿಯಾನು? ಆಗ ತ್ಯಾಗ, ತ್ಯಾಗಿ ಮತ್ತು ತ್ಯಾಗದ ವಸ್ತುವಿನ ಚಿಂತನೆಯೇ ಅಪ್ರಸ್ತುತವಾಗುತ್ತದೆ. ಯಾಕೆಂದರೆ ಆ ನಿರಾಭಾರಿಗೆ ಎಲ್ಲವೂ ಒಂದೇ ವಸ್ತು, ಅದೇ ಪರವಸ್ತು. ಭೇದಗಳೆಲ್ಲ ಅಳಿದು ಎಲ್ಲವೂ ಒಂದೇ ಶಕ್ತಿಯ ರೂಪಾಂತರಗಳಂತೆ ಕಂಡಾಗ ಅವನೇ ಪ್ರಪಂಚಕ್ಕೆ ರಾಜನಿದ್ದಂತೆ. ಕೊಡುವವನೂ ಅವನೇ, ಪಡೆಯುವವನೂ ಅವನೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT