ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ| ಗುಟ್ಟು ಕೀಲುಗಳು

Last Updated 7 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಹೊಟ್ಟೆಯಲಿ ಹಸಿವು, ಮನದಲಿ ಮಮತೆ - ಈಯೆರಡು |
ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ ||
ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ |
ಸೊಟ್ಟಾಗಿಪುವು ನಿನ್ನ – ಮಂಕುತಿಮ್ಮ || 384 ||

ಪದ-ಅರ್ಥ: ಗುಟ್ಟು-ಕೀಲುಗಳು=ಕಣ್ಣಿಗೆ ಕಾಣದ, ಆದರೆ ಅವಶ್ಯವಾದ ಕೀಲುಗಳು, ಕೀಳಿಪುವು=ಕೀಳಿಸುತ್ತವೆ, ಸೊಟ್ಟಾಗಿಪವು=ವಕ್ರವಾಗಿಸುವವು.

ವಾಚ್ಯಾರ್ಥ: ಹೊಟ್ಟೆಯಲ್ಲಿಯ ಹಸಿವು ಮತ್ತು ಮನದಲ್ಲಿಯ ಮಮತೆಗಳು ಈ ಸೃಷ್ಟಿಯಂತ್ರದ ಎರಡು ಗುಟ್ಟಾದ ಕೀಲುಗಳು. ಅವು ಕೋಟೆಗಳನ್ನು ಕಟ್ಟಿಸುತ್ತವೆ,ತಾರೆಗಳನ್ನು ಕೀಳಿಸುತ್ತವೆ. ಅದರೊಂದಿಗೆ ಮನುಷ್ಯರನ್ನು ಸೊಟ್ಟಗಾಗಿಸುತ್ತವೆ.

ವಿವರಣೆ: ಹಸಿವು ಏನೆಲ್ಲ ಕೆಲಸಗಳನ್ನು ಮಾಡಿಸುತ್ತದೆ. ಹೊಟ್ಟೆಯ ಹಸಿವನ್ನು ತಣಿಸಲು ಮನುಷ್ಯ ದುಡಿಯುತ್ತಾನೆ, ದುಡಿತಕ್ಕೂ ಹೊಟ್ಟೆ ತುಂಬದೆ ಹೋದರೆ ಕಳ್ಳತನ ಮಾಡುತ್ತಾನೆ. ಹಸಿವನ್ನು ತಣಿಸಲು ಕೊಲೆಗಳಾಗಿವೆ, ಹುಡುಗಿಯರು ವೇಶ್ಯೆಯರಾಗಿದ್ದಾರೆ. ಇಗ್ನೇಶಿಯೋ ಮಾರನ್ ಎಂಬ ಪತ್ರಕರ್ತ, ಬಡತನದ ಬೆಂಕಿಯಲ್ಲಿ ಸುಡುತ್ತಿರುವ ವೆನೆಜುಯೆಲಾ ದೇಶದ ಕಾರಕಾಸ್ ನಗರಕ್ಕೆ ವರದಿಗೆಂದು ಹೋಗಿ ಭಯಭೀತನಾದ. ಒಂದು ತಿಂಗಳು ಅಲ್ಲಿ ಬದುಕಿದ್ದು ಅವನಿಗೊಂದು ವಿಶೇಷ ಮನುಷ್ಯ ಸ್ವಭಾವವನ್ನು ತೋರಿಸಿತು. ಮನುಷ್ಯ ಹೀಗೂ ಮೃಗದಂತಿರಬಹುದೇ ಎಂದು ಆತ ಯೋಚನೆ ಕೂಡ ಮಾಡಿರಲಿಲ್ಲ. ಹತ್ತು, ಹನ್ನೆರಡು ವರ್ಷದ ಹುಡುಗರು ಕೈಯಲ್ಲಿ ಬಂದೂಕು ಹಿಡಿದುಕೊಂಡು ಸಿಕ್ಕ ಸಿಕ್ಕ ಅಂಗಡಿಗಳ ಮೇಲೆ ದಾಳಿ ಮಾಡಿ ತಿನ್ನಲು ಸಿಕ್ಕ ವಸ್ತುವನ್ನು ಚೀಲಗಳಲ್ಲಿ ತುಂಬಿಕೊಂಡು ಓಡುತ್ತಿದ್ದರು.

ಫ್ರೆಡ್ಡಿ ಎನ್ನುವ ಹದಿನಾರು ವರ್ಷದ ಹುಡುಗ ಹತ್ತು ವರ್ಷಕ್ಕೇ ಮೊದಲ ಕೊಲೆ ಮಾಡಿದ್ದ. “ಏನು ಮಾಡಲಿ?” ಅಮ್ಮ ಒದ್ದಾಡುತ್ತಿದ್ದಳು, ತಂಗಿ ಏನೂ ತಿನ್ನದೆ ಎರಡು ದಿನವಾಗಿತ್ತು. ಹೊರಗೆ ಒಬ್ಬ ಒಂದು ಚೀಲದಲ್ಲಿ ಬ್ರೆಡ್ ತೆಗೆದುಕೊಂಡು ಹೋಗುತ್ತಿದ್ದ. ಕೊಡು ಎಂದರೆ ಕೊಡಲಿಲ್ಲ. ಹತ್ತಿರದಲ್ಲೇ ಇದ್ದ ಕಬ್ಬಿಣದ ಸಲಾಕೆಯಿಂದ ಅವನನ್ನು ಹೊಡೆದೆ. ಅವನು ಸತ್ತೇ ಹೋದ. ಆಗ ಗಾಬರಿಯಾಯಿತು. ಮುಂದೆ ಎಂದೂ ಗಾಬರಿಯಾಗಲಿಲ್ಲ. ಹಾಗೆ ಏಳೆಂಟು ಜನರನ್ನು ಹೊಡೆದಿದ್ದೇನೆ”. ಹಸಿವೆ ಮನುಷ್ಯನನ್ನು ಮೃಗವಾಗಿಸಬಲ್ಲದು. ಹಸಿವೆಯಂತೆ ಮಮತೆ ಕೂಡ ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗಿಸುತ್ತದೆ. ಸಾಧನೆಗಳನ್ನು ಮಾಡಿಸುತ್ತದೆ. ತನ್ನ ಮಮತೆಗೆ ಧಕ್ಕೆ ಬರುತ್ತದೆಂದಾಗ ಅನ್ಯಾಯಗಳನ್ನು ಮಾಡಿಸುತ್ತದೆ. ಧೃತರಾಷ್ಟ್ರ ಮಾಡಿದ್ದು ಅದೇ. ತನ್ನ ಮಮತೆಯ ಕುಡಿಗಳನ್ನು ಕಾಪಾಡಲು ಹೆಣಗುವರಲ್ಲಿ ಧೃತರಾಷ್ಟ್ರನೇ ಕಡೆಯವವನಲ್ಲ. ಇಂದಿಗೂ ಅಂಥ ಅನೇಕ ಮಂದಿ ನಮ್ಮ ಸುತ್ತಮುತ್ತಲೂ ಇದ್ದಾರೆ.

ಕಗ್ಗದ ಮಾತು ಇದೇ. ಹಸಿವು ಮತ್ತು ಮಮತೆಗಳು ಮನುಷ್ಯನನ್ನು ಸಾಧನೆಯ ಶಿಖರಕ್ಕೆ ಏರಿಸಬಹುದು ಇಲ್ಲವೆ ಕ್ರೌರ್ಯದ ಪ್ರಪಾತಕ್ಕೆ ಎಳೆಯಬಹುದು. ಇವೆರಡು ಕಣ್ಣಿಗೆ ಕಾಣದ ಕೀಲುಗಳು. ಅವು ಕಣ್ಣಿಗೆ ಕಾಣಿಸದಿದ್ದರೂ ಸೃಷ್ಟಿಯಂತ್ರ ನಡೆಯುವುದು ಈ ಕೀಲುಗಳಿಂದಲೇ. ಇವು ಕೋಟೆಗಳನ್ನು ಕಟ್ಟಿಸಬಲ್ಲವು ಎಂದರೆ ವ್ಯವಸ್ಥೆಯನ್ನು ಭದ್ರಪಡಿಸಬಲ್ಲವು. ಅಂತೆಯೇ ತಾರೆಗಳನ್ನು ಕೀಳಿಸಬಲ್ಲವು, ಎಂದರೆ ಇದ್ದ, ಸ್ಥಿರವಾದ, ವ್ಯವಸ್ಥೆ ಯನ್ನು ಕಿತ್ತುಹಾಕಬಲ್ಲವು. ಹೀಗೆ ಮಾಡುವ ಪ್ರಯತ್ನ ದಲ್ಲಿ ಅವು ಮನುಷ್ಯನನ್ನು ಸೊಟ್ಟುಮಾಡುತ್ತವೆ, ಅವನ ಸ್ವಭಾವವನ್ನೇ ಬದಲಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT