ಮಂಗಳವಾರ, ಮೇ 11, 2021
27 °C

ಗುರುರಾಜ ಕರಜಗಿ ಅಂಕಣ| ಹೊಸ ಯೋಜನೆಯ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮಾತ್ಯರೆಲ್ಲ ಮಹೋಷಧಕುಮಾರನ ಬುದ್ಧಿವಂತಿಕೆಗೆ ಶರಣಾದ ಮೇಲೆ ಕುಮಾರನೇ ಪ್ರಧಾನ ಅಮಾತ್ಯ ಹಾಗೂ ಅರ್ಥಧರ್ಮಾನುಶಾಸಕನಾದ. ತನ್ನ ರಾಜ್ಯವನ್ನು, ರಾಜನನ್ನು ಕಾಪಾಡುವ ಅದನ್ನು ಅಭಿವೃದ್ಧಿಗೊಳಿಸುವ ಒಂದೇ ಚಿಂತನೆ ಅವನದು. ನಗರವನ್ನು ಅತ್ಯಂತ ಬಲಿಷ್ಠ ಮಾಡುವುದಕ್ಕಾಗಿ ಆತ ನಗರದ ಸುತ್ತಲೂ ಕಂದಕಗಳನ್ನು ನಿರ್ಮಿಸಿದ. ಒಂದು ನೀರಿನ ಕಂದಕ, ಮತ್ತೊಂದು ಕೆಸರಿನ ಕಂದಕ, ಇನ್ನೊಂದು ಮರಳಿನ ಕಂದಕ. ನಗರದ ಹಳೆಯ ಮನೆಗಳನ್ನು ದುರಸ್ತಿ ಮಾಡಿಸಿದ. ದೊಡ್ಡ ಕೆರೆಗಳನ್ನು ಕಟ್ಟಿಸಿ, ಮಳೆಗಾಲದಲ್ಲಿ ಬಂದ ನದಿಯ ನೀರಿನಿಂದ ಅವುಗಳನ್ನು ತುಂಬಿಸಿದ. ನಗರದಲ್ಲಿ ವಿಶಾಲವಾದ ಉಗ್ರಾಣಗಳನ್ನು ಕಟ್ಟಿಸಿ, ಅಪಾರವಾದ ಧಾನ್ಯ ಸಂಗ್ರಹ ಮಾಡಿಸಿದ. ನೀರಿನ ಕಾಲುವೆಗಳನ್ನು, ಚರಂಡಿಗಳನ್ನು ಸ್ವಚ್ಛ ಮಾಡಿಸಿ ಹಿಮಾಲಯದಿಂದ ತರಿಸಿದ ಜಲ-ಕಮಲಗಳನ್ನು ಬೆಳೆಸಿದ.

ನಂತರ, ನಗರದ ಬಂದ ವ್ಯಾಪಾರಿಗಳನ್ನು ಭೆಟ್ಟಿಯಾಗಿ, ಅವರು ಬಂದ ದೇಶ, ರಾಜರುಗಳ ವಿವರಗಳನ್ನು ತೆಗೆದುಕೊಂಡು, ಯಾರಿಂದ ತಮಗೆ ಸಹಾಯವಾಗಬಹುದು, ಯಾರಿಂದ ಅಪಾಯ ಬರಬಹುದು ಎಂದು ಯೋಚಿಸಿ ಪಟ್ಟಿ ಮಾಡಿಟ್ಟ. ತನ್ನ ಅತ್ಯಂತ ನಂಬಿಕಸ್ಥರಾದ ಸೈನಿಕರನ್ನು ಮಾರುವೇಷದಲ್ಲಿ ಸುತ್ತಮುತ್ತಲಿನ ಎಲ್ಲ ರಾಜ್ಯಗಳಿಗೆ ಕಳುಹಿಸಿ ಅಲ್ಲಿಯ ರಾಜರ ಚಲನವಲನಗಳನ್ನು ಕಾಲಕಾಲಕ್ಕೆ ತಿಳಿಯುತ್ತಿದ್ದ. ಬಹಳಷ್ಟು ಜನ ಮರಳಿ ಬಂದು ವಿದೇಹ ರಾಜನ ಬಗ್ಗೆ ಯಾರಿಗೂ ತಕರಾರು ಇಲ್ಲವೆಂದು ಹೇಳಿದರು. ಆದರೆ ಉತ್ತರದ ಪಾಂಚಾಲನಗರದ ರಾಜನ ಬಗ್ಗೆ ಮಾತ್ರ ವಿರುದ್ಧ ಅಭಿಪ್ರಾಯ ಬಂದಿತು. ಆ ದೇಶದ ರಾಜ ಬ್ರಹ್ಮದತ್ತ. ಅವನಿಗೆ ಪಂಡಿತನಾದ, ಚತುರನಾದ ಕೇವಟ ಎನ್ನುವವನು ಅಮಾತ್ಯನಾಗಿದ್ದ. ಆತ ಪ್ರಚಂಡ. ಆ ರಾಜನನ್ನು ಹಾಗೂ ಮಂತ್ರಿಯನ್ನು ಹಿಂಬಾಲಿಸಲು ಮಹೋಷಧಕುಮಾರ ತಾನು ಅತ್ಯಂತ ಪ್ರೀತಿಯಿಂದ ಸಾಕಿದ್ದ ಗಿಳಿಮರಿಯನ್ನು ಕಳುಹಿಸಿದ.

ಒಂದು ದಿನ ಬೆಳಿಗ್ಗೆ ಕೇವಟ ಕನಸಿನಲ್ಲಿ ತಾನು ಅತ್ಯಂತ ಅಲಂಕೃತವಾದ ಶಯನಾಗಾರದಲ್ಲಿ ಇದ್ದಂತೆ, ಸುತ್ತಲೂ ಅತುಲ ಐಶ್ವರ್ಯವಿದ್ದಂತೆ ಕಂಡ. ತಾನು ಹಾಗೆಯೇ ಆಗಬೇಕಾದರೆ ರಾಜ ಬ್ರಹ್ಮದತ್ತನನ್ನು ಇಡೀ ಜಂಬೂದ್ವೀಪಕ್ಕೆ ಒಡೆಯನನ್ನಾಗಿ ಮಾಡಿ ತಾನು ರಾಜಪುರೋಹಿತನಾಗಬೇಕು. ಅದನ್ನು ಆಗ ಮಾಡುವುದು ಹೇಗೆ ಎಂದು ಯೋಚಿಸಿ ಒಂದು ಯೋಜನೆಯನ್ನು ಮಾಡಿದ. ಮರುದಿನ ರಹಸ್ಯಾಲೋಚನೆ ಎಂದು ಹೇಳಿ ರಾಜನನ್ನು ಕರೆದುಕೊಂಡು ಉದ್ಯಾನವನಕ್ಕೆ ಬಂದು ಮರದ ಕೆಳಗೆ ಕುಳಿತ. ಮಹೋಷಧಕುಮಾರ ಕಳುಹಿಸಿದ ಗಿಳಿಮರಿ ಮರದ ಮೇಲೆ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ಕೇವಟ ಹೇಳಿದ, ‘ಮಹಾರಾಜ, ನನ್ನದೊಂದು ಯೋಜನೆ ಇದೆ. ಅದರಂತೆ ಮಾಡಿದರೆ ತಾವು ಇಡೀ ಜಂಬೂದ್ವೀಪಕ್ಕೆ ಒಡೆಯರಾಗುತ್ತೀರಿ’. ರಾಜನೂ ಮಹಾತೃಷ್ಣೆಗೆ ಒಳಗಾಗಿದ್ದ. ‘ನಾನು ಏನು ಮಾಡಬೇಕು?’ ಎಂದು ಕೇಳಿದ. ಅಮಾತ್ಯ ಹೇಳಿದ, ‘ಮಹಾರಾಜಾ, ನಾವು ಸೇನೆಯನ್ನು ಬಲಪಡಿಸಿ ಮೊದಮೊದಲು ಸಣ್ಣ ಸಣ್ಣ ನಗರಗಳನ್ನು ಮುತ್ತೋಣ. ಚಿಕ್ಕ ದ್ವಾರಗಳಿಂದ ಅರಮನೆಯನ್ನು ಕೆಲವರು ಸೇರಿ ರಾಜನನ್ನು ಸೆರೆಹಿಡಿದು ನಮ್ಮ ಅಧಿಪತ್ಯವನ್ನು ಒಪ್ಪಿಕೊಂಡರೆ ನಿನ್ನನ್ನೇ ರಾಜನಾಗಿ ಮುಂದುವರೆಸುತ್ತೇವೆ, ಇಲ್ಲವಾದರೆ ನಮ್ಮ ಭಾರೀ ಸೈನ್ಯ ಹೊರಗೆ ಕಾದಿದೆ, ನಿಮ್ಮ ರಾಜ್ಯವನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿ ಅವರನ್ನು ನಮ್ಮ ಹಿಡಿತದಲ್ಲಿ ತೆಗೆದುಕೊಳ್ಳೋಣ. ಇಂಥ ನೂರು ರಾಜರನ್ನು ನಮ್ಮ ಉದ್ಯಾನವನದಲ್ಲಿ ಸುರಾಪಾನಕ್ಕೆ ಕರೆದು, ಅದರಲ್ಲಿ ವಿಷ ಹಾಕಿ ಕೊಂದರೆ ಎಲ್ಲ ರಾಜ್ಯಗಳೂ ನಮ್ಮದೇ ಆಗುತ್ತವೆ’. ರಾಜನಿಗೆ ಇದು ಒಪ್ಪಿತವಾಯಿತು. ಗಿಳಿಮರಿ ಈ ವಿಷಯವನ್ನು ತಂದು ಮಹೋಷಧಕುಮಾರನಿಗೆ ಹೇಳಿತು. ಅದನ್ನು ಕೇಳಿ ನಕ್ಕ ಕುಮಾರ ಪ್ರತಿ ಯೋಜನೆಯನ್ನು ಮಾಡಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು