ಶನಿವಾರ, ಡಿಸೆಂಬರ್ 5, 2020
24 °C

ವಂಚನೆಯ ಮುಖ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿ, ಬೆಳೆದು, ತಕ್ಷಶಿಲೆಗೆ ಹೋಗಿ ವಿದ್ಯೆ ಕಲಿತು ಬಂದ. ಮದುವೆಯಾದ ಎರಡು ವರ್ಷದಲ್ಲಿ ಮಗ ಹುಟ್ಟಿದ. ಮಗನಿಗೆ ನಾಲ್ಕು ವರ್ಷವಾಗುವುದರಲ್ಲಿ ಹೆಂಡತಿ ತೀರಿಹೋದಳು. ಸಂಸಾರದಲ್ಲಿ ಆಸಕ್ತಿ ಕಳೆದುಕೊಂಡ ಬೋಧಿಸತ್ವ ಮಗನನ್ನು ಕಟ್ಟಿಕೊಂಡು ಕಂದಮೂಲಗಳನ್ನು ಸೇವಿಸುತ್ತ ಇದ್ದುಬಿಟ್ಟ. ಮಗನಿಗೂ ಧರ್ಮಬೋಧನೆ ಮಾಡುತ್ತಿದ್ದ.

ಒಂದು ದಿನ ವರ್ಷಋತುವಿನಲ್ಲಿ ಜೋರಾಗಿ ಮಳೆ ಬರುತ್ತಿತ್ತು. ಹೊರಗೆ ಹೋಗುವಂತಿಲ್ಲ, ಮರಗಟ್ಟಿಸುವ ಚಳಿ ಇತ್ತು. ಆಗ ಅಪ್ಪ ಮಗ ಸೇರಿ ಪರ್ಣಕುಟಿಯಲ್ಲಿ ರಕ್ಷಿಸಿ ಇಟ್ಟಿದ್ದ ಒಣಗಿದ ಮರ-ಕಡ್ಡಿಗಳನ್ನು ಸೇರಿಸಿ ಬೆಂಕಿ ಹಾಕಿ ಪರ್ಣಕುಟಿಯನ್ನು ಬೆಚ್ಚಗಾಗಿಸಿದರು. ಅಪ್ಪ ಮಂಚದ ಮೇಲೆ ಮಲಗಿದ್ದಾಗ ಮಗ ಅವನ ಕಾಲುಗಳನ್ನು ಒತ್ತುತ್ತ ಅವನ ಮಾತುಗಳನ್ನು ಕೇಳುತ್ತಿದ್ದ. ಆಗ ಅಲ್ಲಿಗೆ ಒಂದು ಕಾಡುಕೋತಿ ಬಂದಿತು. ಪರ್ಣಕುಟಿಯಲ್ಲಿದ್ದ ಬೆಂಕಿಯನ್ನು ಕಂಡು ಅದರೊಳಗೆ ಹೋಗಬೇಕೆಂದು ಯೋಚಿಸಿತು. ಅದೊಂದು ಪ್ರಚಂಡವಾದ, ಉಪದ್ವ್ಯಾಪಿ ಕೋತಿ. ಅದು ಏನು ದೊರೆತರೂ ಅದನ್ನು ಹಾಳು ಮಾಡುವುದು ಹೇಗೆ ಎಂದೇ ಚಿಂತಿಸುವುದು. ಯಾರು ಸಹಾಯ ಮಾಡಿದರೂ ಪ್ರತಿಯಾಗಿ ಅವರಿಗೆ ತೊಂದರೆ ಮಾಡುವುದು ಅದರ ಸ್ವಭಾವ. ತಾನು ಪರ್ಣಕುಟಿಯನ್ನು ಪ್ರವೇಶಿಸಿದರೆ ಒಳಗಿದ್ದವರು, ‘ಕೋತಿ, ಕೋತಿ’ ಎಂದು ಕೋಲಿನಿಂದ ಹೊಡೆದು ಹೊರಗೆ ಅಟ್ಟಿಬಿಡುವರು. ಆದ್ದರಿಂದ ಮೋಸದಿಂದ ಒಳಗೆ ಹೋಗಬೇಕು ಎಂದು ಚಿಂತಿಸಿ ಸ್ವಲ್ಪದೂರದಲ್ಲಿ ಬಿದ್ದಿದ್ದ ಒಬ್ಬ ಸತ್ತ ಸನ್ಯಾಸಿಯ ವಲ್ಕಲವನ್ನು ಮೈಗೆ ಸುತ್ತಿಕೊಂಡು, ಮುಖ ಕಾಣದಂತೆ ಮರೆಸಿ ಕೈಯ್ಯಲ್ಲೊಂದು ಕೋಲು ಹಿಡಿದು ಪರ್ಣಕುಟಿಯನ್ನು ಪ್ರವೇಶಿಸಿತು. ಹೊರಗಡೆಗೆ ಬೆಳಕು ಕಡಿಮೆ ಇದ್ದುದರಿಂದ ಬಂದವರು ಯಾರು ಎಂದು ಸ್ಪಷ್ಟವಾಗಿ ಕಾಣಿಸಲಿಲ್ಲ. ಕೋತಿ ಮೂಲೆಯಲ್ಲಿ ಮುದುರಿ ಕುಳಿತುಕೊಂಡಿತು. ಅದನ್ನು ಕಂಡ ಪಬ್ಬಜಿತನ ಕುಮಾರ ಯಾರೋ ಅತ್ಯಂತ ವೃದ್ಧನಾದ ಸನ್ಯಾಸಿ ಮಳೆಯಲ್ಲಿ ನೆನೆದು, ಚಳಿಯಿಂದ ಪಾರಾಗಲು ಇಲ್ಲಿಗೆ ಬಂದಿರಬೇಕೆಂದು ಭಾವಿಸಿದ. ತಂದೆಗೆ ಹೇಳಿದ, ‘ತಂದೆಯೇ, ಪಾಪ ಯಾರೋ ಅತೀ ವೃದ್ಧ ಸನ್ಯಾಸಿ ಚಳಿಯಿಂದ ರಕ್ಷಣೆ ಪಡೆಯಲು ಬಂದು ಬಾಗಿಲಲ್ಲಿ ಕುಳಿತಿದ್ದಾರೆ. ಅವರನ್ನು ಒಳಗೆ ಕರೆದು ಬೆಂಕಿಯಿಂದ ಮೈಕಾಯಿಸಿಕೊಳ್ಳಲು ಹೇಳಲೇ?’. ತಂದೆ ಮೇಲಕ್ಕೆದ್ದು ನಾಲ್ಕು ಹೆಜ್ಜೆ ಬಾಗಿಲ ಕಡೆಗೆ ಹೋಗಿ ನೋಡಿದ. ಅದು ಕೋತಿ! ನಾಟಕದ ವೇಷಧಾರಿಯಂತೆ ಸನ್ಯಾಸಿಯಾಗಿ ಬಂದಿದೆ. ಒಳ್ಳೆಯ ಕೋತಿಯಾಗಿದ್ದರೆ ಮುಗ್ಧವಾಗಿ ಹಾಗೆಯೇ ಬರುತ್ತಿತ್ತು. ಇದು ನಾಟಕಮಾಡುವ ಮೋಸದ ಕೋತಿ. ಅದನ್ನು ಬೆಂಕಿಯ ಹತ್ತಿರ ಕರೆದರೆ ಬೆಂಕಿಯಿಂದ ಪರ್ಣಕುಟಿಯನ್ನೇ ಸುಟ್ಟು ಹಾಕುತ್ತದೆ ಎಂದು ಬಂದು ಉರಿಯುತ್ತಿದ್ದ ಕೊಳ್ಳಿಯನ್ನು ತೆಗೆದುಕೊಂಡು ಬೀಸಿ ಕೋತಿಯನ್ನು ಬೆದರಿಸಿ ಹೊರಗೆ ಓಡಿಸಿ ಬಾಗಿಲು ಹಾಕಿಬಿಟ್ಟ. ತಾನು ಹಾಗೆ ಮಾಡಿದ್ದು ಯಾಕೆ ಎಂದು ಮಗನಿಗೆ ವಿವರಿಸಿದ.

ಆಗಾಗ ಕಪಟದಿಂದ ವೇಷ ಬದಲಿಸುವ ಜನರಿಂದ ತುಂಬ ಎಚ್ಚರಿಕೆಯಿಂದಿರಬೇಕು. ಇರುವ ಮುಖವನ್ನು ಮರೆಮಾಚಿ ಬೇರೊಂದು ರೂಪ ತೋರುವ ವಂಚಕರಿಂದ ಎಷ್ಟು ದೂರವಿದ್ದರೆ ಅಷ್ಟು ಒಳ್ಳೆಯದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.