ಮಂಗಳವಾರ, ಆಗಸ್ಟ್ 9, 2022
23 °C

ಬೆರಗಿನ ಬೆಳಕು: ಎರಡು ಲೆಕ್ಕಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನರನೊಂದುವೆವಹಾರಕೆರಡಾಯವೆಯ ಲೆಕ್ಕ|
ಹೊರಗಣನುಭೋಗಕೊಂದೊಳನೀತಿಗೊಂದು||
ವರಮಾನ ದೇಹಕಾದೊಡೆ ಮಾನಸಕದೇನು?|
ಪರಿಕಿಸಾ ಲೆಕ್ಕವನು – ಮಂಕುತಿಮ್ಮ ||664||

ಪದ-ಅರ್ಥ: ನರನೊಂದುವೆವಹಾರಕೆರಡಾಯವೆಯ= ನರನ+ ಒಂದು+ ವೆವಹಾರಕೆ (ವ್ಯವಹಾರಕ್ಕೆ)+ ಎರಡು+ ಆಯ+ ವೆಯ (ವ್ಯಯ), ಹೊರಗಣನುಭೋಗಕೊಂದೊಳನೀತಿಗೊಂದು= ಹೊರಗಣ+ ಅನುಭೋಗಕೊಂದು+ ಒಳನೀತಿಗೊಂದು, ಮಾನಸಕದೇನು= ಮಾನಸಕೆ (ಮನಸ್ಸಿಗೆ)+ ಅದೇನು, ಪರಿಕಿಸಾ= ಪರಿಕಿಸು (ಪರೀಕ್ಷಿಸು)+ ಆ.

ವಾಚ್ಯಾರ್ಥ: ಮನುಷ್ಯನ ಒಂದು ವ್ಯವಹಾರಕ್ಕೆ ಎರಡು ಲೆಕ್ಕಗಳಿವೆ. ಒಂದು ಆದಾಯ-ಆಯ, ಮತ್ತೊಂದು ವ್ಯಯ-ವೆಚ್ಚ. ಹೊರಗಿನ ಅನುಭೋಗಕ್ಕೊಂದು ಲೆಕ್ಕ, ಒಳನೀತಿಗೊಂದು. ವರಮಾನ ದೇಹಕ್ಕಾದರೆ ಅದರ ಪರಿಣಾಮ ಮನಸ್ಸಿನ ಮೇಲೆ ಏನು? ಆ ಲೆಕ್ಕವನ್ನು ಸರಿಯಾಗಿ ತಿಳಿದುಕೋ.

ವಿವರಣೆ: ಮನುಷ್ಯನ ಪ್ರತಿಯೊಂದು ವ್ಯವಹಾರದಲ್ಲಿ ಲಾಭ-ನಷ್ಟದ ಚಿಂತನೆ ಇದ್ದೇ ಇರುತ್ತದೆ. ಅದು ಹಣದ ವ್ಯವಹಾರ ಮಾತ್ರವಲ್ಲ. ಹಣದ ವ್ಯವಹಾರದಲ್ಲಂತೂ ಅದು ತುಂಬ ಸ್ಪಷ್ಟವಾಗಿರುತ್ತದೆ. ಎಷ್ಟು ಹಣ ಲಾಭವಾಯಿತು, ನಷ್ಟದ ಮೊತ್ತ ಎಷ್ಟು ಎನ್ನುವುದನ್ನು ಅಳೆಯುವುದಕ್ಕೆ ಹಣದ ಮಾಪನವಿದೆ. ಬದುಕಿನ ವ್ಯಾಪಾರದಲ್ಲಿ ಎಲ್ಲವೂ ಹಣಕ್ಕಾಗಿಯೇ ಮಾಡಿದ ವ್ಯವಹಾರಗಳಲ್ಲ. ಪ್ರತಿಯೊಂದು ಅನುಭವ ದೇಹದ ಮೇಲಾಗುತ್ತದೆ. ನಾವು ನೋಡಿದ ಸ್ಥಳಗಳು, ಕೇಳಿದ ಸಂಗೀತ, ಸವಿದ ಊಟ, ಮುಟ್ಟಿದ ಸ್ಪರ್ಶ, ಮೂಸಿದ ಸುಗಂಧ ಇವೆಲ್ಲ ಪಂಚೇಂದ್ರಿಯಗಳಿಂದ ದೇಹಕ್ಕೆ ದೊರೆತ ಅನುಭವಗಳು. ಇವುಗಳಲ್ಲಿಯೂ ಎರಡು ಲೆಕ್ಕಗಳಿವೆ. ಪಡೆದ ಸುಖಾನುಭವ ಆಯವಾದರೆ, ದುಃಖದ ಅನುಭವ ವ್ಯಯವಾಗುತ್ತದೆ. ಹಾಗಾದರೆ ದೇಹಕ್ಕೆ ಸುಖವಾದದ್ದೆಲ್ಲ ಮನಸ್ಸಿಗೂ ಸುಖವೆ? ಈ ಪ್ರಶ್ನೆಯನ್ನೇ ಕಗ್ಗ ಕೇಳುತ್ತದೆ. ದೇಹಕ್ಕೆ ಲಾಭವಾದರೆ ಮನಸ್ಸಿಗೆ ಅದರಿಂದೇನು?

ದುರ್ಯೋಧನ ಮೋಸದಿಂದ ದಾಯಾದಿಗಳಾದ ಪಾಂಡವರನ್ನು ಜೂಜಿನಲ್ಲಿ ಸೋಲಿಸಿ ಕಾಡಿಗೆ ಕಳುಹಿಸಿದ. ಮುಂದಿನ ಹದಿಮೂರು ವರ್ಷಗಳ ಕಾಲ ಯಾವ ಅಡೆತಡೆಯೂ ಇಲ್ಲದೆ ಕುರುರಾಜ್ಯ ಚಕ್ರವರ್ತಿಯಾದ. ಅವನ ಭೋಗಭಾಗ್ಯಗಳಿಗೆ ಏನು ಕೊರತೆ? ಅವನ ದೇಹಕ್ಕೆ ಬೇಕಾದ ಅನುಕೂಲತೆಗಳೆಲ್ಲ ಸಮೃದ್ಧವಾಗಿದ್ದವು. ಆದರೆ ಮನಸ್ಸು? ಒಳಗೆ ಕೊತಕೊತನೆ ಕುದಿಯುತ್ತಿತ್ತು. ಕಾಡಿನಲ್ಲಿದ್ದ ಪಾಂಡವರು ಪಡುವ ಕಷ್ಟವನ್ನು ಕಣ್ಣಾರೆ ನೋಡಬೇಕು, ಅವರ ಹೊಟ್ಟೆ ಉರಿಸಬೇಕು ಎಂದು ತನ್ನ ಹೊಟ್ಟೆ ಉರಿಸಿಕೊಂಡ! ಅರಮನೆಯ ಸುಖಭೋಗದಲ್ಲಿದ್ದರೂ ಪಾಂಡವರ ಚಿಂತೆಯ ನರಳಿಕೆ ಅವನ ಮನಸ್ಸನ್ನು ಹಿಂಡಿತು. ದೇಹ ಸ್ವರ್ಗದಲ್ಲಿ, ಮನ ನರಕದಲ್ಲಿ! ರಾಜ ಡಂಕನ್‍ನ್ನು ಕೊಂದ ಮ್ಯಾಕ್‍ಬೆಥ್ ರಾಜನಾದರೂ, ಅಪರಾಧಿಭಾವ ಅವನನ್ನು ಹಣ್ಣುಮಾಡಿತು. ದೇವೇಂದ್ರನೊಡನೆ ದೇಹಸುಖ ಪಡೆದ ಅಹಲ್ಯೆ ಮುಂದೆ ಶತಮಾನಗಳ ಕಾಲ ಪಾಪಪ್ರಜ್ಞೆಯಲ್ಲಿ ಕುದಿದು ಕಲ್ಲಾದಳು.

ಕಗ್ಗ ತಿಳಿಹೇಳುತ್ತದೆ, ನಮಗೆ ಎರಡು ಲೆಕ್ಕಗಳಿವೆ. ಹೊರಗಿನ ಅನುಭವಕ್ಕೊಂದು, ಒಳಗಿನ ನೀತಿಗೊಂದು. ದೇಹದ ಲಾಭಕ್ಕೋಸ್ಕರ ನಾವು ಏನೆಲ್ಲ ಮಾಡುತ್ತೇವೆ, ಆದರೆ ಅದು ಮನಸ್ಸಿಗೂ ಲಾಭವಾದೀತೇ? ಮನಸ್ಸಿಗೆ ಲಾಭವಾಗದಿದ್ದರೆ, ಮನಸ್ಸು ಆನಂದದಲ್ಲಿ ನೆಲೆ ನಿಲ್ಲದಿದ್ದರೆ ದೇಹದ ಲಾಭದಿಂದ ಏನು ಪ್ರಯೋಜನ? ಆದ್ದರಿಂದ ನಮ್ಮ ವ್ಯವಹಾರಗಳಲ್ಲಿ ದೇಹಕ್ಕೂ, ಮನಸ್ಸಿಗೂ
ಸಂತೋಷವಾಗುವುದನ್ನು ಚಿಂತಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.