ಭಾನುವಾರ, ಮೇ 16, 2021
22 °C

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ಪ್ರಸಿದ್ಧಿಯ ಪರೀಕ್ಷೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಏಳು ವರ್ಷಕ್ಕೇ ಬಲಶಾಲಿಯಾದ ಮಹೋಷಧಕುಮಾರ ಒಂದು ವಿಶೇಷ ನಗರವನ್ನು ನಿರ್ಮಾಣ ಮಾಡಲು ಯೋಜಿಸಿದ. ಒಬ್ಬ ಅತ್ಯಂತ ಪ್ರಸಿದ್ಧನಾದ ನಗರ ಯೋಜಕನನ್ನು ಕರೆತಂದರು. ಆತ ಅಷ್ಟು ಅನುಭವಸ್ಥನಾದರೂ ಮಹೋಷಧಕುಮಾರನ ಚಿಂತನೆಯನ್ನು ತಿಳಿಯಲು ಸಾಧ್ಯವಾಗಲಿಲ್ಲ. ಇಷ್ಟು ವಿಶಾಲವಾದ ಕಲ್ಪನೆಯನ್ನು ಆತ ಎಂದೂ ಕಂಡಿರಲಿಲ್ಲ. ಮಹೋಷಧಕುಮಾರನೇ ದೊಡ್ಡ ಪಟದ ಮೇಲೆ ಇಡೀ ನಗರ ನಕ್ಷೆಯನ್ನು ಸುಂದರವಾಗಿ ಚಿತ್ರಿಸಿದ. ಕಲ್ಪನೆ ಅದ್ಭುತವಾಗಿತ್ತು.

ಇಡೀ ನಗರದ ಮಧ್ಯೆ ಒಂದು ಶಾಲೆಯಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಅನಾಥಮಕ್ಕಳ ಕುಟೀರ, ಅನಾಥರ ವಸತಿ, ಅನಾಥ ಸ್ತ್ರೀಯರ ಹೆರಿಗೆಮನೆ ಇದ್ದರೆ ಮತ್ತೊಂದೆಡೆಗೆ ಆಗುಂತಕ ಶ್ರಮಣ- ಬ್ರಾಹ್ಮಣರ ವಸತಿಗಳು, ಇನ್ನೊಂದೆಡೆಗೆ ಆಗಂತುಕ ವ್ಯಾಪಾರಿಗಳ ವಸತಿನಿಲಯಗಳು ಇದ್ದವು. ಇನ್ನಷ್ಟು ದೂರದಲ್ಲಿ ಬಹುದೊಡ್ಡ ಮಾರಾಟ ಮಳಿಗೆಗಳು, ವಸ್ತುಗಳನ್ನು ಸಂಗ್ರಹಿಸಿ ಇಡಲು ಗೋದಾಮುಗಳು ಇದ್ದವು. ಅನತಿ ದೂರದಲ್ಲೇ ಕ್ರೀಡಾಭವನ, ಬೃಹತ್ ನ್ಯಾಯಾಲಯದ ಅಂಗಸಂಸ್ಥೆಗಳು, ಮುಖ್ಯವಾದ ಧರ್ಮಸಭೆ ಇವೆಲ್ಲವನ್ನು ಕುಮಾರ ಸ್ಪಷ್ಟವಾಗಿ ಚಿತ್ರಿಸಿದ್ದ. ಇಡೀ ನಗರ ಇಂದ್ರನ ಸುಧರ್ಮಸಭೆಯಂತಾಗಿತ್ತು. ಜನರೆಲ್ಲ ಈ ನಕ್ಷೆಯನ್ನು ಕಂಡು ಬೆರಗಾದರು. ನಂತರ ಮಹೋಷಧಕುಮಾರ ತಾನೇ ಮತ್ತೊಮ್ಮೆ ನಕ್ಷೆಯನ್ನು ಆಳವಾಗಿ ಗಮನಿಸಿ, ಅದರಲ್ಲಿ ಕೊರತೆಗಳಿರುವುದನ್ನು ಕಂಡ. ಎಲ್ಲವೂ ಚೆನ್ನಾಗಿದೆ ಆದರೆ ಆಳವಾಗಿ ಗಮನಿಸಿ, ಎಲ್ಲವೂ ಚೆನ್ನಾಗಿದೆ ಆದರೆ ಜನರ ಮನರಂಜನೆಗೆ ವ್ಯವಸ್ಥೆ ಮಾಡಬೇಕಲ್ಲ ಎಂದು ಸಾವಿರ ಪುಷ್ಕರಿಣಿಗಳನ್ನು ಚಿತ್ರಿಸಿದ. ಅವು ಬೇರೆ ಬೇರೆ ಆಕಾರದ ಪುಷ್ಕರಣಿಗಳು. ಕೆಲವು ವೃತ್ತಾಕಾರದವು, ಕೆಲವು ಬಿಲ್ಲಿನಾಕಾರದವು ಮತ್ತೆ ಕೆಲವು ಚೌಕಾಕಾರದವುಗಳು. ಅವುಗಳ ಸುತ್ತ ಹೂವಿನ ಉದ್ಯಾನವನಗಳು, ಹಣ್ಣಿನ ಗಿಡಬಳ್ಳಿಗಳು. ಇವೆಲ್ಲಕ್ಕಿಂತ ಮುಖ್ಯವಾಗಿ ಈ ನಗರದ ನಾಲ್ಕು ಬದಿಗಳಲ್ಲಿ ದೊಡ್ಡ ದೊಡ್ಡ ದಾನಶಾಲೆಗಳನ್ನು ಚಿತ್ರಿಸಿದ.

ಒಮ್ಮೆ ನಗರದ ಚಿತ್ರಣ ಪೂರ್ಣವಾದ ಮೇಲೆ, ಕಾರ್ಯ ಪ್ರಾರಂಭವಾಯಿತು. ಈ ನಗರ ನಿರ್ಮಾಣದ ವಿಷಯ ಎಲ್ಲೆಡೆಗೆ ಹರಡಿತು. ದೂರದೂರದಿಂದ ಜನ ಈ ನಿರ್ಮಾಣವನ್ನು ನೋಡಲು ಆಗಮಿಸತೊಡಗಿದರು. ಎಲ್ಲಿ ನೋಡಿದರೆ ಅಲ್ಲಿ ಮಹೋಷಧಕುಮಾರನ ಗುಣಗಾನವೇ ನಡೆಯುತ್ತಿತ್ತು. ಕೆಲವರು ಪ್ರವಾಸಿಗರು ಮಹೋಷಧಿಕುಮಾರನಿಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದರು. ಆತ ಸಲಹೆ ಸರಿಯಾಗಿದ್ದರೆ ಅದನ್ನೊಪ್ಪಿಕೊಂಡು ನಕ್ಷೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದ. ಆತ ಈಗ ಕೇವಲ ನಗರ ನಿರ್ಮಾಪಕನಾಗಿರಲಿಲ್ಲ, ಸಮಾಜದಲ್ಲಿ ನಾಯಕನಾಗಿದ್ದ. ಅವನಿಗೆ ಆಗ ಬರೀ ಎಂಟು ವರ್ಷ ವಯಸ್ಸು! ಜನ ಅವನ ಬಳಿಗೆ ತಮ್ಮ ಸಮಸ್ಯೆಗಳನ್ನು, ಜಗಳಗಳನ್ನು ತೆಗೆದುಕೊಂಡು ಬರುತ್ತಿದ್ದರು. ಆತನ ಬಳಿಗೆ ಬಂದರೆ ಎಲ್ಲ ಸಮಸ್ಯೆಗಳಿಗೆ, ಜಗಳಗಳಿಗೆ ಪರಿಹಾರ ದೊರಕುತ್ತಿತ್ತು.

ಈ ವಿಷಯ ಮಿಥಿಲೆಯ ರಾಜನಿಗೆ ತಲುಪಿತು. ಆತ ಅಮಾತ್ಯರನ್ನು ಕರೆಸಿ ಮಾತನಾಡಿದ. ತನಗೆ ಕನಸುಬಿದ್ದ ದಿನಕ್ಕೆ ತಾಳೆ ಹಾಕಿ ನೋಡಿದ. ಅದೂ ಎಂಟು ವರ್ಷಗಳ ಹಿಂದೆಯೇ ಬಿದ್ದ ಕನಸು. ಅಂದರೆ ಅಂದು ಕನಸಿನಲ್ಲಿ ಮಿಣುಕು ಹುಳವಾಗಿ ಕಂಡ ಬೆಳಕು ಈಗ ಬೆಂಕಿಯ ಸ್ಥಂಭಗಳನ್ನು ದಾಟಿ ಪ್ರಕಾಶಮಾನವಾಗಿದೆ. ಮಂತ್ರಿಗಳು ಚಿಂತಿಸಿದರು. ಈ ಹುಡುಗ ಈಗಲೇ ಇಷ್ಟು ಪ್ರಸಿದ್ಧನಾದರೆ ತಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು ಎಂದುಕೊಂಡು ಅವನನ್ನು ಪರೀಕ್ಷಿಸಲು ತೀರ್ಮಾನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು