ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಜೀವ–ಜೀವ ಪ್ರೀತಿ

Last Updated 6 ಜೂನ್ 2021, 19:31 IST
ಅಕ್ಷರ ಗಾತ್ರ

ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ |
ಮರುನುಡಿಯ ನುಡಿವನೇನ್ ಒಡಲ
ತೋರದನು ? ||
ಪರಿತಪಿಸುವುದು ಜೀವ ಜೀವಸರಸವನೆಳಸಿ |
ನರಧರ್ಮಸೂಕ್ಷ್ಮವಿದು – ಮಂಕುತಿಮ್ಮ || 425 ||

ಪದ-ಅರ್ಥ: ನಿನ್ನನುರಾಗವೆಲ್ಲವನು= ನಿನ್ನ+ ಅನುರಾಗ+ ಎಲ್ಲವನು, ಮರುನುಡಿ= ಪ್ರತಿಯಾಗಿ ಉತ್ತರ, ಜೀವಸರಸವನೆಳಸಿ= ಜೀವ+ ಸರಸವ+ ಎಳಸಿ (ಬಯಸಿ).

ವಾಚ್ಯಾರ್ಥ: ಭಗವಂತನಿಗೆ ನಿನ್ನ ಪ್ರೀತಿಯೆಲ್ಲವನು ಸಲ್ಲಿಸುವೆನೆಂದರೆ ದೇಹವನ್ನೇ ತೋರದ ಅವನು ಪ್ರತಿನುಡಿಯ ನೀಡುತ್ತಾನೆಯೇ? ಒಂದು ಜೀವ ಮತ್ತೊಂದು ಜೀವದೊಂದಿಗೆ ಸರಸವನ್ನಪೇಕ್ಷಿಸುತ್ತದೆ. ಇದೇ ಮನುಷ್ಯ ಧರ್ಮದ ಸೂಕ್ಷ್ಮ.

ವಿವರಣೆ: ಚಾತಕ ಪಕ್ಷಿ ಎನ್ನುವುದು ಒಂದು ಕಾಲ್ಪನಿಕ ಪಕ್ಷಿ. ನಂಬಿಕೆಯ ಪ್ರಕಾರ, ಈ ಹಕ್ಕಿ ನೀರನ್ನು ಯಾವ ಮೂಲದಿಂದಲೂ ಕುಡಿಯುವುದಿಲ್ಲ. ಆಕಾಶದಲ್ಲಿ ಮೋಡ ಕವಿದಾಗ ಅದು ಬಾಯಿತೆರೆದುಕೊಂಡು ನಿಲ್ಲುತ್ತದಂತೆ. ನೇರವಾಗಿ ಆಕಾಶದಿಂದ ಬೀಳುವ ನೀರಹನಿಗಳಿಂದಲೇ ಅದರ ದಾಹ ತೃಪ್ತಿ. ಅಂತಹ ಪಕ್ಷಿಗೆ ಒಬ್ಬ ಸಂಸ್ಕೃತ ಸುಭಾಷಿತಕಾರ ಹೇಳುತ್ತಾನೆ. ‘ನನ್ನ ಸ್ನೇಹಿತನಾದ ಚಾತಕ ಪಕ್ಷಿಯೇ, ಸಾವಧಾನವಾಗಿ ನಾನು ಹೇಳುವುದನ್ನು ಕೇಳು. ಆಕಾಶದಲ್ಲಿ ಎಲ್ಲ ಮೋಡಗಳೂ ನೀರನ್ನು ಸುರಿಸುವುದಿಲ್ಲ. ಕೆಲವು ಮಾತ್ರ ಸಿಂಚನದಿಂದ ಭೂಮಿಯನ್ನು ತಂಪು ಮಾಡುತ್ತವೆ, ಬಹಳಷ್ಟು ಕೇವಲ ಸದ್ದು ಮಾಡಿ ಮರೆಯಾಗುತ್ತವೆ. ಆದ್ದರಿಂದ ಎಲ್ಲರ ಮುಂದೆ ಬಾಯಿ ತೆರೆದು ನಿಲ್ಲದೆ ನೀರು ಕೊಡುವ ಮೋಡಗಳನ್ನು ಮಾತ್ರ ಕೇಳು’. ಅಂದರೆ ಯಾರು ನಿನ್ನ ಬೇಡಿಕೆಗಳನ್ನು, ಅಪೇಕ್ಷೆಗಳನ್ನು ಪೂರೈಸಬಹುದೋ ಅವರನ್ನು ಮಾತ್ರ ಯಾಚಿಸು. ಇದು ನಮ್ಮ ಬದುಕಿಗೂ ಅನ್ವಯಿಸುವಂಥದ್ದು.

ನಮ್ಮ ಮನವಿಯನ್ನು ಪುರಸ್ಕರಿಸದವರ ಮುಂದೆ ಬೇಡಿಕೆ ಏಕೆ? ಅದು ಸುಂಕದವನ ಮುಂದೆ ಕಷ್ಟ-ಸುಖ ಹೇಳಿಕೊಂಡಂತೆ. ಯಾರು ನಿಮ್ಮ ಸಂಪರ್ಕಕ್ಕೇ ಬರುವುದಿಲ್ಲವೋ ಅವರೊಂದಿಗೆ ನಿಮ್ಮ ಅನುರಾಗವೇಕೆ? ಇದೇ ಧಾಟಿಯಲ್ಲಿ, ಕಗ್ಗ ಒಂದು ವಿನೋದದ ಪ್ರಶ್ನೆಯನ್ನು ಕೇಳುತ್ತದೆ. ಭಗವಂತನಿಗೆ ನೀನು ಎಲ್ಲ ಅನುರಾಗವನ್ನು ಕೊಡಬೇಕು ಎಂದು ಹಾತೊರೆಯುತ್ತೀಯಾ, ಆದರೆ ತನ್ನ ದೇಹವನ್ನೇ ತೋರದೆ ಮರೆಮಾಚಿಕೊಂಡವನು ನಿನ್ನ ಅನುರಾಗಕ್ಕೆ ಸ್ಪಂದಿಸುತ್ತಾನೆಯೇ? ಇದುವರೆಗೂ ನಿನಗವನು ಕಂಡಿಲ್ಲ, ಅವನ ಧ್ವನಿಯನ್ನು ನೀನು ಕೇಳಿಲ್ಲ. ಅಂಥವನ ಬಗ್ಗೆ ಅನುರಾಗವೇಕೆ? ಅದಕ್ಕೆ ಬದಲಾಗಿ, ನಿನ್ನ ಸುತ್ತಮುತ್ತಲಿರುವ, ನಿನ್ನ ಭಾವನೆಗಳಿಗೆ ಪ್ರತಿಕ್ರಿಯಿಸುವ ಜೀವಗಳ ಜೊತೆಗೆ ಸರಸ ಒಳ್ಳೆಯದು. ಅದಕ್ಕಾಗಿಯೇ, ಪರಿವಾರದಲ್ಲಿ, ಊರಿನಲ್ಲಿ, ದೇಶದಲ್ಲಿ, ವಿಶ್ವದಲ್ಲಿ ಜೀವಗಳು ಮತ್ತಷ್ಟು ಜೀವಗಳೊಡನೆ ಅನುರಾಗವನ್ನು ಹಂಚಿಕೊಳ್ಳುವುದಕ್ಕಾಗಿ ಪರಿತಪಿಸುತ್ತವೆ. ನಿಮ್ಮ ಧ್ವನಿಗೆ ಅವು ಮಾರ್ದನಿ ನೀಡುತ್ತವೆ. ಆದರೆ ಒಂದು ತಮಾಷೆ. ಹೀಗೆ ಜೀವಜೀವಗಳ ನಡುವಿನ ಪ್ರೇಮ, ಕೊನೆಗೆ ಆ ಕಣ್ಣಿಗೆ ಕಾಣದ ಚೇತನದ ಕಡೆಗೇ ಸೆಳೆದೊಯ್ಯುತ್ತದೆ. ದ.ರಾ. ಬೇಂದ್ರೆಯವರ ಕವನದ ಎರಡು ಸಾಲುಗಳು ಆ ದರ್ಶನ ಮಾಡಿಸುತ್ತವೆ. ‘ನಾನೂ ನೀನೂ ಒಳಗ ಕೂಡಿ, ಪ್ರೀತಿ ಹಾಂಗ ಹೊರಮೂಡಿ, ಹೂವಾಗಿ ಬರಬೇಕು ಬಣ್ಣಾ, ಬಣ್ಣಾ, ಆವಾಗ ತೆರಿತಾವ ಒಳಗಾನ ಕಣ್ಣ!’ ಎರಡು ಜೀವಗಳು ಪ್ರೀತಿಯಿಂದ ಕೂಡಿ, ಅನುರಾಗದ ಪುಷ್ಪ ಫಲಿತಾಗ, ನಮ್ಮ ಒಳಗಣ್ಣು ತೆರೆಯುತ್ತದೆ. ಆಗ, ದೇಹ ತೋರದ, ಮೇಲ್ನೋಟಕ್ಕೆ ಪ್ರತಿಕ್ರಿಯೆ ನೀಡದ ಆ ಶಕ್ತಿಯ ದರ್ಶನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT