ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಗೂಢವಾದ ಋಣದ ಮಾರ್ಗ

Last Updated 1 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ನಿನ್ನೇಳು ಬೀಳುಗಳು ನಿನ್ನ ಸೊಗ ಗೋಳುಗಳು |
ನಿನ್ನೊಬ್ಬನೋಸುಗವೆ ನಡೆವ ಯೋಜನೆಯೇಂ? ||
ಇನ್ನದೆನಿಬರ ಜೀವಪಾಕವದರಿಂದಹುದೊ ! |
ಛನ್ನವಾ ಋಣಮಾರ್ಗ – ಮಂಕುತಿಮ್ಮ || 510 ||

ಪದ-ಅರ್ಥ: ನಿನ್ನೇಳು=ನಿನ್ನ+ಏಳು, ಇನ್ನದೆನಿಬರ=ಇನ್ನು+ಅದು+ಎನಿಬರ(ಎಷ್ಟು ಜನರ), ಜೀವಪಾಕವದರಿಂದಹುದೊ=ಜೀವಪಾಕ+
ಅದರಿಂದ+ಅಹುದೊ, ಛನ್ನ=ಗೂಢ, ರಹಸ್ಯ

ವಾಚ್ಯಾರ್ಥ: ನಿನ್ನ ಜೀವನದಲ್ಲಿ ಬರುವ ಏಳು ಬೀಳುಗಳು, ನಿನ್ನ ಸುಖ ದುಃಖಗಳು, ನಿನ್ನೊಬ್ಬನಿಗಾಗಿ ಮಾತ್ರ ನಡೆಯುವ ಯೋಜನೆಯೇ? ಅದೆಷ್ಟು ಜನರ ಜೀವಪಾಕ ಅದರಿಂದ ಆಗಿಹುದೊ? ಋಣದ ಮಾರ್ಗ ಒಂದು ರಹಸ್ಯ.

ವಿವರಣೆ: ಪ್ರಪಂಚದಲ್ಲಿ ಸಂಪೂರ್ಣ ಪ್ರತ್ಯೇಕತೆ ಎಂಬುವುದು ಇಲ್ಲ. ಎಲ್ಲವೂ ಪರಸ್ಪರ ಸಂಬಂಧದಿಂದ, ಪರಸ್ಪರ ಪ್ರಭಾವಗಳಿಂದ ಕೂಡಿದೆ. ಜಗತ್ತು ಒಂದು ಚಿತ್ರವಿದ್ದಂತೆ. ಅದರಲ್ಲಿ ಪ್ರತಿಯೊಂದು ಗೆರೆ, ಪ್ರತಿಯೊಂದು ಬಣ್ಣ ಪರಸ್ಪರ ಸಂಬಂಧದಿಂದ ಕೂಡಿದೆ. ಅದನ್ನು ಚಿತ್ರದಿಂದ ಬೇರ್ಪಡಿಸಿದರೆ ಅರ್ಥ ಕಳೆದುಕೊಳ್ಳುತ್ತದೆ. ಮೇಲ್ನೋಟಕ್ಕೆ ಬೇರೆಯೆಂದು ತೋರುವ ವಸ್ತುಗಳು ಆಳದಲ್ಲಿ ಸಂಬಂಧಿಗಳಾಗಿವೆ. ಹೂವು ಮತ್ತು ಗೊಬ್ಬರ ಬೇರೆಯೆಂದು ಕಂಡರೂ, ಗೊಬ್ಬರ ಮರವನ್ನು ಸೇರಿ ಹೂವಾಗುತ್ತದೆ, ಹೂವು ಕೊಳೆತು ಗೊಬ್ಬರವಾಗುತ್ತದೆ. ಅಂತೆಯೇ, ಆಂತರಿಕ, ಪ್ರಾಕೃತಿಕ ಮತ್ತು ಸಾಮಾಜಿಕ ವಾತಾವರಣಗಳು ಮನುಷ್ಯನ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಅಂದರೆ ನಾನು, ನಾನಾಗಿರುವುದಕ್ಕೆ ಅನೇಕ ಕಾರಣಗಳು. ಆಂತರಿಕವಾಗಿ ನನಗೆ ಬಂದ ವಂಶವಾಹಿನಿಗಳು ನನ್ನ ಸ್ವಭಾವವನ್ನು, ದೇಹಲಕ್ಷಣಗಳನ್ನು ತೀರ್ಮಾನಿಸುತ್ತವೆ. ನಮಗೆ ಅರಿವಿಲ್ಲದಂತೆ ಪ್ರಕೃತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಬಾಲ್ಯದಲ್ಲಿಯ ನೈಸರ್ಗಿಕ ಪರಿಸರ, ನೀರು, ಗಾಳಿ, ಹಸಿರು, ಸುತ್ತಮುತ್ತಲಿನ ನೈರ್ಮಲ್ಯ ಇವೆಲ್ಲ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಕೊನೆಯದಾದ ಸಾಮಾಜಿಕ ಅಥವಾ ಮಾನವೀಯ ವಾತಾವರಣ ನಮ್ಮ ಬದುಕಿನ ಗತಿಯನ್ನು ನಿರ್ಧರಿಸುತ್ತದೆ. ನೆರೆಹೊರೆಯ ಜನರು, ಸ್ನೇಹಿತರು ಮುಂತಾದವರು ವ್ಯಕ್ತಿತ್ವದ ನಿರ್ಧಾರಕ ಅಂಶಗಳಾಗುತ್ತಾರೆ. ಕೆಲವೊಮ್ಮೆ ಆಕಸ್ಮಿಕವಾಗಿಯೋ, ಪ್ರಯತ್ನಪೂರ್ಣವಾಗಿಯೋ ಸಂಧಿಸಿದ ಜನರು ವ್ಯಕ್ತಿತ್ವದ ವಿಕಾಸದಲ್ಲಿ ತಿರುವನ್ನು ತರುತ್ತಾರೆ.

ವಿವೇಕಾನಂದರ ಜೀವನದಲ್ಲಿ ಶ್ರೀ ರಾಮಕೃಷ್ಣರ ಆಗಮನ ತಂದ ಬದಲಾವಣೆ ಅಭೂತಪೂರ್ವವಾದದ್ದು. ನಂತರ ವಿವೇಕಾನಂದರಿಂದ ಪ್ರಭಾವಿತರಾಗಿ ಜೀವನವನ್ನು ಬದಲಿಸಿಕೊಂಡ ಜನರೆಷ್ಟೊ? ಹೀಗೆ ಯಾರಾದರೂ ಬದುಕಿನಲ್ಲಿ ತುಂಬ ಏರಿಳಿತಗಳನ್ನು ಕಂಡಿದ್ದರೆ, ಅನೇಕ ಬಾರಿ, ಅವರಿಗೆ ಅದರ ಗೊತ್ತೇ ಇರುವುದಿಲ್ಲ. ಅದಾವ ಕಾರಣಕೊ, ಯಾವ ಋಣ ಸಂದಾಯಕ್ಕೋ, ಅವರು ಅದರ ಭಾಗವಾಗುತ್ತಾರೆ. ಒಬ್ಬ ಜನಮನ್ನಣೆಯನ್ನು ಗಳಿಸಿದ ವಿಜ್ಞಾನಿ, ಯಾವ ಹುದ್ದೆಯನ್ನೂ ಅಪೇಕ್ಷಿಸದ ವ್ಯಕ್ತಿ, ಮತ್ತಾವ ಕಾರಣಕ್ಕೋ, ರಾಷ್ಟ್ರದ ಅತ್ಯಂತ ಎತ್ತರದ ಹುದ್ದೆಗೆ ಏರಿಬಿಡುತ್ತಾರೆ. ಅದು ಅವರ ಯೋಜನೆಯೇ ಆಗಿರಲಿಲ್ಲ. ಮತ್ತೊಬ್ಬ ವ್ಯಕ್ತಿ ಪ್ರಾಮಾಣಿಕವಾಗಿ, ತನ್ನ ಮನಸ್ಸಿಗೊಪ್ಪಿದ ಕೆಲಸವನ್ನು ಮಾಡುತ್ತ ದಶಕಗಳನ್ನು ಕಳೆದಾಗ, ಯಾವುದೋ ವಿಧಾನಕ್ಕೆ, ಯಾರಿಗೋ ಸೂಕ್ತ ವ್ಯಕ್ತಿಯಾಗಿ ಕಂಡು, ದೇಶದ ಅತ್ಯುನ್ನತ ಪದವಿಗೆ ಭಾಜನರಾಗುತ್ತಾರೆ. ಮತ್ತೆ ಕೆಲವರು ಉನ್ನತ ಹುದ್ದೆಯಲ್ಲಿದ್ದವರು, ಅವರಿಗರಿವಿಲ್ಲದಂತೆ, ಅವರಿಗೆ ಸಂಬಂಧವಿಲ್ಲದ ಮತ್ತಾವುದೋ ಸಂಚಿಗೆ ಸಿಲುಕಿ ಅಧಿಕಾರ ಕಳೆದುಕೊಳ್ಳುತ್ತಾರೆ.

ಕಗ್ಗ ಅದನ್ನು ಚಿತ್ರಿಸುತ್ತದೆ. ನಮ್ಮ ಏಳು ಬೀಳುಗಳು ನಮ್ಮ ಯೋಜನೆಗಳಲ್ಲ. ಅದಾವ ಕಾರಣಕೋ ನಾವು ಅದರ ಭಾಗವಾಗುತ್ತೇವೆ. ಅದರಿಂದ ಎಷ್ಟು ಜನರ ಮೇಲೆ ಪ್ರಭಾವವಾಗುತ್ತದೋ? ಆದ್ದರಿಂದ ಈ ಋಣದ ಮಾರ್ಗ ಗೂಢವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT