ಶುಕ್ರವಾರ, ಮೇ 20, 2022
19 °C

ಬೆರಗಿನ ಬೆಳಕು: ಶಾಸ್ತ್ರ-ವಿಜ್ಞಾನಗಳ ಚಿರಂತನತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ ? |
ನಿಗಮಸಂತತಿಗೆ ಸಂತತಿಯಾಗದಿಹುದೆ? ||
ಬಗೆಬಗೆಯ ಜೀವಸತ್ತ್ವ ವಿಕಾಸವಾಗುತಿರ- |
ಲೊಗೆವುದೈ ವಿಜ್ಞಾನ – ಮಂಕುತಿಮ್ಮ || 525 ||

ಪದ-ಅರ್ಥ: ಕರಟಿರಲಹುದೆ=ಕರಟಿರಲು(ಮುರುಟಿರಲು, ಕರಡಾಗಿರಲು, ಒಣಗಿರಲು)+ಅಹುದೆ, ಒಗೆವುದು=ಹುಟ್ಟುವುದು.

ವಾಚ್ಯಾರ್ಥ: ಜಗತ್ತು ಬೆಳೆದು ಚಿಗುರುತ್ತಿರುವಾಗ ಶಾಸ್ತ್ರಗಳು ಒಣಗಿರುವುದು ಸಾಧ್ಯವೆ? ಶಾಸ್ತ್ರಗಳಿಗೆ ಹೊಸ ಶಾಸ್ತ್ರಗಳು ಬರಲಾರವೆ? ಬಗೆಬಗೆಯ ಜೀವನ ಸತ್ವಗಳು ವಿಕಾಸವಾಗುವಾಗ ಹುಟ್ಟುವುದೆ ವಿಜ್ಞಾನ.

ವಿವರಣೆ: ನಮ್ಮ ಮನೆಯ ಹತ್ತಿರ ಒಂದು ದೊಡ್ಡ ಸಂಪಿಗೆಯ ಮರವಿತ್ತು. ಸಾವಿರಾರು ಹೂವುಗಳು ಅರಳಿ, ಇಡೀ ಪ್ರದೇಶಕ್ಕೆ ಸುವಾಸನೆಯನ್ನು ಬೀರುತ್ತಿದ್ದವು. ಒಂದು ದಿನ ಮರದ ಎಲೆಗಳು ಅಕಾಲದಲ್ಲಿ ಉದುರತೊಡಗಿದವು. ಏನು ಕಾರಣವಿರಬೇಕು ಎಂದು ಎಲ್ಲರೂ ಚಿಂತಿಸಿದರು. ಕೆಲವರು ಎಲೆಗಳ ಮೇಲೆ ಔಷಧಿಗಳನ್ನು ಸಿಂಪಡಿಸಿದರು. ಯಾವ ಪ್ರಯೋಜನವೂ ಆಗಲಿಲ್ಲ. ದಿನಕಳೆದಂತೆ ಮರ ಒಣಗುತ್ತ ಬಂದಿತು. ಮರತಜ್ಞರು ಬಂದು ಪರೀಕ್ಷಿಸಿ, ಮರದ ಬೇರಿಗೆ ಹುಳ ಹಿಡಿದಿದ್ದರಿಂದ ಮರ ಒಣಗುತ್ತಿದೆಯೆಂದೂ, ಅದಿನ್ನು ಉಳಿಯಲಾರದೆಂದು ಹೇಳಿ ಹೋದರು. ಕೆಲವೇ ತಿಂಗಳಲ್ಲಿ ಮರ ಬಿದ್ದು ಹೋಯಿತು. ಅಷ್ಟು ದೊಡ್ಡ ಮರದ ಉಳಿವು ಅವಲಂಬಿಸಿದ್ದು ಬೇರಿನ ಶಕ್ತಿಯನ್ನು ಎಲ್ಲಿಯವರೆಗೂ ಕಣ್ಣಿಗೆ ಕಾಣದ ಬೇರು ಸಾರಸರ್ವಸ್ವವನ್ನು ನೆಲದಿಂದ ಹೀರಿ ಇಡೀ ಮರಕ್ಕೆ ಪೂರೈಸುತ್ತಿತ್ತೋ, ಅಲ್ಲಿಯವರೆಗೆ ಮರ ಜೀವಂತವಾಗಿತ್ತು. ಎಂದು ಬೇರು ಶಕ್ತಿರಹಿತವಾಯಿತೋ ಅಂದೇ ಮರದ ಬೆಳವಣಿಗೆ, ಇರುವಿಕೆ ನಾಶವಾಗಿತ್ತು.

ಒಂದು ಮರಕ್ಕೇ ಹೀಗೆ ಬೇರು ಜೀವಮೂಲವಾಗಿರುವಾಗ, ಈ ಬೃಹತ್ ಪ್ರಪಂಚಕ್ಕೆ ಆಧಾರವಾಗಿರುವ, ಚಿಂತನೆಯ ಮೂಲಗಳಾಗಿರುವ, ಶಾಸ್ತ್ರಗಳು ಒಣಗಿರಲು ಸಾಧ್ಯವೆ? ಪ್ರಪಂಚ ಸದಾಕಾಲ ಚಿಗುರುತ್ತಲೇ ಇದೆ, ವಿಸ್ತಾರವಾಗುತ್ತಲೇ ಇದೆ. ಅದು ಹಾಗೆ ಬೆಳೆಯುತ್ತಿದ್ದರೆ, ಅದರ ಮೂಲವಾದ ಶಾಸ್ತ್ರಗಳು, ಚಿಂತನೆಗಳು ಗಟ್ಟಿಯಾಗಿವೆ ಎಂದರ್ಥ. ಅಂದಿದ್ದ ಶಾಸ್ತ್ರಗಳು ಹಾಗೆಯೇ ಇರುವುದು ಸಾಧ್ಯವಿಲ್ಲ. ಅವುಗಳಿಗೆ ಹೊಸ ಸಾಂದರ್ಭಕ ಚಿಂತನೆಗಳು, ಆಲೋಚನೆಗಳು ಸೇರಿ ಹೊಸ ಶಾಸ್ತ್ರಗಳಾಗುತ್ತವೆ. ಅದನ್ನು ಕಗ್ಗ ಸುಂದರವಾಗಿ ‘ನಿಗಮಸಂತತಿಗೆ ಸಂತತಿಯಾಗದಿಹುದೆ?’ ಎಂದು ಕೇಳುತ್ತದೆ. ಅಂದಿನ ನಿಗಮಗಳ ಸಂತತಿಗೆ ಹೊಸ ಕಾಲಧರ್ಮದ ವಿಚಾರಗಳು ಸೇರಿ ನವೀನ ನಿಗಮಗಳ ಸಂತತಿ ಸಮಾಜವನ್ನು ಪೋಷಿಸುತ್ತವೆ.

ಪ್ರಪಂಚ ಬೆಳೆಯುತ್ತಿದ್ದಂತೆ, ಹೊಸ ಹೊಸ ವಿಷಯಗಳ ಅವಿಷ್ಕಾರವಾಗುತ್ತದೆ. ಜ್ಞಾನದ ಅಂಚು ಹಿಗ್ಗುತ್ತಲೇ ಹೋಗುತ್ತದೆ. ಮನುಷ್ಯ ಈಗ ಭೂಮಿಯ ಪಾತಾಳಕ್ಕೇ ಇಳಿದು, ಸೂರ್ಯಮಂಡಲದಾಚೆ ದೃಷ್ಟಿ ಹರಿಸಿ, ಸಮುದ್ರದ ಆಳಕ್ಕೆ ಹೋಗಿ, ತನ್ನ ಅರಿವಿನ ಪರಿಧಿಗೆ ಬಂದ ಎಲ್ಲ ಜೀವಿಗಳ ವೈವಿಧ್ಯವನ್ನು ಗುರುತಿಸಿ, ಅಧ್ಯಯನ ಮಾಡಿದ್ದಾನೆ. ಮನುಷ್ಯನ ದೇಹದ ಪ್ರತಿ ಕಣಕಣವನ್ನು ಕಂಡು ಅದರ ವ್ಯವಸ್ಥೆಯನ್ನು ತಿಳಿಯಲು ಪ್ರಯತ್ನಿಸಿದ್ದಾನೆ. ಇದೇ ವಿಜ್ಞಾನ. ವಿಜ್ಞಾನವೆಂದರೆ ಬರೀ ಪ್ರಯೋಗಶಾಲೆಯಲ್ಲಿ ಮಾಡುವ ಕ್ರಿಯೆಗಳಲ್ಲ. ವಿಜ್ಞಾನವೆಂದರೆ, ವಿಶೇಷ ಜ್ಞಾನ. ವಿ-ಜ್ಞಾನ. ಅದು ಯಾವ ಕ್ಷೇತ್ರದಲ್ಲೇ ಆಗಬಹುದು. ವಿಷಯವನ್ನು ತಲಸ್ಪರ್ಶಿಯಾಗಿ ತಿಳಿಯುವುದು ವಿಶೇಷ ಜ್ಞಾನ. ಹೀಗೆ ವಿವಿಧ ಜೀವಸತ್ವಗಳ ತಿಳಿವಳಿಕೆ ಹೆಚ್ಚಾಗುವುದೆ ವಿಜ್ಞಾನದ ಹುಟ್ಟು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.