ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಹರ್ಷಿಗಳ ಮತ

Last Updated 23 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ|
ಕಿವಿಗಾ ರಹಸ್ಯದುಲಿ ಕಾವ್ಯಗಾನಗಳಿಂ ||
ಭುವನದಾಚಿನ ರಹಸ್ಯದ ಕೀರ್ತಿ ವೇದಗಳ |
ರವದಿನೆಂದಾರ್ಷಮತ – ಮಂಕುತಿಮ್ಮ || 464||

ಪದ-ಅರ್ಥ: ಸ್ರವಿಸುವುದು=ಹುಟ್ಟುವುದು, ಹೃದಯಗರ್ತದ=ಹೃದಯ+ಗರ್ತದ(ಕೊಳ್ಳದ, ಗವಿಯ), ರಹಸ್ಯದುಲಿ=ರಹಸ್ಯದ+ಉಲಿ(ಗುಟ್ಟಿನ ಕೂಗು), ಭುವನದಾಚಿನ=ಭುವನದ+ಆಚಿನ, ರವದಿನೆಂದಾರ್ಷಮತ=ರವದಿಂ(ಶಬ್ದದಿಂದ)+ಎಂದು+ಆರ್ಷಮತ(ಮಹರ್ಷಿಗಳ ಮತ).

ವಾಚ್ಯಾರ್ಥ: ಹೃದಯದಾಳದ ತಳದಲ್ಲಿ ಜೀವರಸ ಹುಟ್ಟುತ್ತದೆ. ಕಾವ್ಯ, ಹಾಡುಗಳಿಂದ ಅದರ ಗುಟ್ಟಿನ ಕೂಗು ಕಿವಿಗೆ ಕೇಳಿಸುತ್ತದೆ. ನಮ್ಮ ತಿಳಿವನ್ನು ಮೀರಿದ, ಪ್ರಪಂಚದ ಜ್ಞಾನವನ್ನು ಮೀರಿದ ರಹಸ್ಯ ನಮಗೆ ದೊರೆಯುವುದು ವೇದಗಳಿಂದ ಎಂಬುದು ಮಹರ್ಷಿಗಳ ಮತ.

ವಿವರಣೆ: ನಮ್ಮ ಸಂತೋಷಕ್ಕೆ ಸಾಧನವಾದವುಗಳು ಎರಡು. ಒಂದು ದೇಹ, ಮತ್ತೊಂದು ಮನಸ್ಸು. ಮನಸ್ಸಿನ ಸ್ಥಾನ ಹೃದಯ. ನಮ್ಮ ದೇಹಕ್ಕೆ ಸಂತೋಷವಾಗುವುದು ಅದು ಪಡುವ ಅನುಭವದಲ್ಲಿ. ಒಳ್ಳೆಯ ಊಟ, ಗಾಢ ನಿದ್ರೆ, ಪ್ರೇಯಸಿಯೊಡನೆ ಪ್ರಣಯದಾಟ, ಸುಗಂಧ ದ್ರವ್ಯಗಳ ವಾಸನೆ, ಸುರಮ್ಯ ಕಣ್ಣಿನ ನೋಟ, ಇವೆಲ್ಲ ಸುಖ ಕೊಡುತ್ತವೆ. ಅವು ತುಂಬ ಕ್ಷಣಿಕವಾದವುಗಳು. ದೇಹ ಅವುಗಳನ್ನು ಅನುಭವಿಸುವುದು ಅವುಗಳೊಂದಿಗಿದ್ದಾಗ ಮಾತ್ರ. ಅವು ಮರೆಯಾದೊಡನೆ ದೇಹ ಅದನ್ನು ಮರೆಯುತ್ತದೆ. ಆದರೆ ದೇಹ ಹೊಂದಿದ ಸಂತೋಷ ಮನಸ್ಸಿನಲ್ಲಿ ಮಾತ್ರ ಬಹುಕಾಲ ನೆಲೆಯಾಗಿ ನಿಲ್ಲುತ್ತದೆ. ಒಂದು ಸಂತಸದ ಕ್ಷಣ ಅಮೃತವಾಗುತ್ತದೆ.

ಜೀವರಸ ನಮ್ಮ ಹೃದಯದ ಆಳದ ಗುಹೆಯಲ್ಲಿ ಸೃಷ್ಟಿಯಾಗುತ್ತದೆ. ಅದು ಗೂಢವಾಗಿರುತ್ತದೆ. ಅದು ಹೊರಬಂದು ನಮ್ಮಲ್ಲಿ ಸಂತೋಷದ ಚಿಲುಮೆಯನ್ನು ಉಕ್ಕಿಸುವುದು ಸಂಗೀತ, ಕಾವ್ಯ, ನಟನೆ, ಚಿತ್ರ ಮುಂತಾದ ಕಲಾ ಪ್ರಕಾರಗಳ ಪ್ರಚೋದನೆಯಿಂದ. ಅದನ್ನು ಕಗ್ಗ ಸೊಗಸಾಗಿ ‘ರಹಸ್ಯದುಲಿ’ ಎಂದು ಕರೆಯುತ್ತದೆ. ಅದು ಗುಟ್ಟಿನ ಕೂಗು. ಹೃದಯದ ರಹಸ್ಯ, ದೇಹಕ್ಕೆ ಗುಟ್ಟಾಗಿ ನೀಡುವ ಕರೆ. ಹೀಗೆಂದರೆ ನಮ್ಮ ಎಲ್ಲರಲ್ಲಿ ಸದಾಕಾಲವೂ ರಹಸ್ಯವಾಗಿ, ಹೃದಯದಲ್ಲಿ ಹರಿಯುತ್ತಿರುವ ಜೀವರಸದ ಅನುಭವ ನಮಗಾಗುವುದು, ಬಾಹ್ಯದ ಸುಂದರ ಪ್ರಚೋದನೆಗಳಿಂದ.

ಆದರೆ ಇಲ್ಲೊಂದು ತೊಂದರೆ ಇದೆ. ನಮ್ಮ ಹೃದಯ, ಮನಸ್ಸುಗಳು ಗ್ರಹಿಸುವುದು ಇಂದ್ರಿಯಗಳ ಅನುಭವಕ್ಕೆ ಬಂದ ವಸ್ತುಗಳು, ಚಿಂತನೆಗಳಿಂದ. ದೈಹಿಕ ಅನುಭವಕ್ಕೆ ಬಾರದ್ದನ್ನು ಹೃದಯ ಗ್ರಹಿಸಲಾರದು. ನೀವು ಎಂದೂ ಕಂಡಿರದ, ಕೇಳಿರದ ಪ್ರಾಣಿಯ ಹೆಸರನ್ನು ಯಾರಾದರೂ ಹೇಳಿದರೆ ಅದರ ಚಿತ್ರ ಮನದಲ್ಲಿ ಮೂಡಲಾರದು. ಆಗ ನಾವು ಶಾಸ್ತ್ರದಲ್ಲಿ ಶ್ರದ್ಧೆಯನ್ನಿಟ್ಟು ಮುಂದುವರೆಯಬೇಕು. ಶ್ರದ್ಧೆ ಎಂದರೆ ಕುರುಡು ನಂಬಿಕೆಯಲ್ಲ. ವೈದ್ಯನ ಔಷಧಿ, ತಾಯ ಕೈತುತ್ತಿನಲ್ಲಿರುವ ನಂಬಿಕೆ ಅಂಥದ್ದು.

ಮಾತಿಗೆ ಸಿಕ್ಕದ, ವಿವರಣೆಗೆ ದೊರಕದ, ಕೇವಲ ಅಂತರನುಭವಕ್ಕೆ ಬರುವ ಸತ್ಯಾಂಶಗಳೇ ರಹಸ್ಯ. ದೇವರು, ದೈವ, ವಿಧಿ, ಕರ್ಮ, ಇಂತಹ ಇಂದ್ರಿಯಾತೀತವಾದ ವಿಷಯಗಳಲ್ಲಿ ಶಾಸ್ತ್ರಗಳೇ ನಮಗೆ ಆಧಾರ. ಯಾಕೆಂದರೆ ಅವು ಇಂದ್ರಿಯಗಳ ಅನುಭವಕ್ಕೆ ದೊರಕುವುವಲ್ಲ. ಅವು ಶತಶತಮಾನಗಳ, ಸಹಸ್ರಾರು ದುಷ್ಟಾರರ ಅನುಭವಗಳ ಸಾರ. ಅದಕ್ಕೇ ಅವು ವೇದ. ವೇದವೆಂದರೆ ಅಪೌರುಷೇಯವಾದ ಜ್ಞಾನದ ಶಬ್ದರಾಶಿ. ಇದೇ ಮಹರ್ಷಿಗಳ ಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT