ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬೇರೆ ಮತಿ ಬೇರೆ ಮತ

Published 24 ಜುಲೈ 2023, 19:38 IST
Last Updated 24 ಜುಲೈ 2023, 19:38 IST
ಅಕ್ಷರ ಗಾತ್ರ

ನೂರಾರು ಮತವಿಹುದು ಲೋಕದುಗ್ರಾಣದಲಿ |
ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ||
ಸಾರದಡುಗೆಯನೊಳವಿಚಾರದೊಲೆಯಲಿ ಮಾಡು |
ಬೇರೆ ಮತಿ ಬೇರೆ ಮತ – ಮಂಕುತಿಮ್ಮ || 934 ||

ಪದ-ಅರ್ಥ: ಮತವಿಹುದು=ಮತವು+ಇಹುದು, ಲೋಕದುಗ್ರಾಣದಲಿ=ಲೋಕದ+ಉಗ್ರಾಣದಲಿ, ರುಚಿಗೊಪ್ಪುವುದನದರೊಳ್=ರುಚಿಗೆ+ಒಪ್ಪುವುದನು+ಅದರೊಳ್ (ಅದರಲ್ಲಿ),
ಸಾರದಡುಗೆಯನೊಳವಿಚಾರದೊಲೆಯಲಿ=ಸಾರದ+ಅಡುಗೆಯನು+ಒಳ+ವಿಚಾರದ+ಒಲೆಯಲಿ.

ವಾಚ್ಯಾರ್ಥ: ಲೋಕವೆಂಬ ಉಗ್ರಾಣದಲ್ಲಿ ನೂರಾರು ಮತಗಳಿವೆ. ನಿನ್ನ ರುಚಿಗೆ ಯಾವುದು ತಕ್ಕುದೋ ಅದನ್ನು ಆರಿಸಿಕೊ. ಅದರ ಸಾರದ ಅಡುಗೆಯನ್ನು ಚಿಂತನೆಯೆಂಬ ಒಲೆಯಲ್ಲಿ ಮಾಡು. ಬೇರೆ ಬುದ್ಧಿ, ಬೇರೆ ಮತ.

ವಿವರಣೆ: ಈ ಪ್ರಪಂಚವೊಂದು ಬಹುದೊಡ್ಡದಾದ ಮಾರಾಟದ ಅಂಗಡಿ. ಅಲ್ಲಿ ಸಿಗದೆ ಇರುವ ಪದಾರ್ಥವೇ ಇಲ್ಲ. ಕಲ್ಪನಾತೀತವಾದ ವಸ್ತುಗಳು, ಚಿಂತನೆಗಳು, ಅಲ್ಲಿವೆ. ಪ್ರತಿಯೊಬ್ಬರ ರುಚಿಗೆ, ಅವರ ಸಾಮರ್ಥ್ಯಕ್ಕೆ ತಕ್ಕಂತಹ ಸಾಮಗ್ರಿ ಅಲ್ಲಿ ಶೇಖರವಾಗಿವೆ.

ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು. ತೆಗೆದುಕೊಳ್ಳುವುದು ನಿಮ್ಮ ಆಯ್ಕೆ ಮತ್ತು ಅದನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಇಲ್ಲಿ ನೂರಾರು ಋಷಿಮುನಿಗಳು, ಸಂತರು, ಜ್ಞಾನಿಗಳು, ತತ್ವಜ್ಞರು, ಸಮಾಜ ಸುಧಾರಕರು, ರಾಜಕಾರಣಿಗಳು, ಸರ್ವಾಧಿಕಾರಿಗಳು ಹೇಳಿದ ಮಾತುಗಳು, ಅವರು ಪ್ರಚಾರ ಮಾಡಿದ ಮತಗಳೂ ಇವೆ. ಕೆಲವು ಒಂದಕ್ಕೊಂದು ವಿರೋಧವೂ ಆಗಿವೆ. ಅವುಗಳನ್ನೆಲ್ಲ ಗಮನಿಸು. ಅವನ್ನೆಲ್ಲ ನಿನ್ನ ಚಿಂತನೆಯ ಒಲೆಯಲ್ಲಿ ಚೆನ್ನಾಗಿ ಬೇಯಿಸು. ನಂತರ ನಿನಗೆ, ನಿನ್ನ ಪರಿಸ್ಥಿತಿಗೆ, ಮನೋಧರ್ಮಕ್ಕೆ ಯಾವುದು ಸರಿಯೋ ಅದನ್ನು ಆರಿಸಿ ಬಳಸು. ನನ್ನಜ್ಜ ನನಗೊಬ್ಬ ಸರ್ವಜ್ಞ. ಆತ ನನಗೆ ತಿಳಿಹೇಳಿದ ರೀತಿ ಅನನ್ಯವಾದದ್ದು.

ಒಂದು ಸಲ ನನಗೆ ಹೇಳಿದ, “ನೋಡೋ, ನೀನು ತರಕಾರಿ ತರಲು ಅಂಗಡಿಗೆ ಹೋಗುತ್ತೀ. ಅಲ್ಲಿ ಐವತ್ತು ತರಹದ ತರಕಾರಿಯನ್ನು ಜೋಡಿಸಿ ಇಟ್ಟಿರುತ್ತಾರೆ. ಅದರಲ್ಲಿ ನಿನಗೆ ಯಾವ, ಯಾವ ತರಕಾರಿ ಬೇಕೋ ಆರಿಸಿ ತೆಗೆದುಕೊಂಡು ಬಾ. ಆ ಇನ್ನೊಂದು ತರಕಾರಿ ಏಕೆ ಇಟ್ಟಿದ್ದೀರಿ ಎಂದು ಅಂಗಡಿಯವನೊಡನೆ ಜಗಳವಾಡುತ್ತ ನಿಲ್ಲಬೇಡ. ಯಾಕೆಂದರೆ ಆ ತರಕಾರಿಯನ್ನು ಅಪೇಕ್ಷಿಸುವ ನಾಲ್ಕು ಜನರಿದ್ದಾರೆ. ಅದು ಅವರ ಆಯ್ಕೆ”. ಇದು ನನಗೆ ಅತ್ಯಂತ ಪ್ರಯೋಜನಕಾರಿಯಾದ ಸಲಹೆಯಾಗಿದೆ. ಹೌದಲ್ಲವೇ? ಎಲ್ಲರೂ ತಮಗೆ ಬೇಕಾದುದನ್ನು ತೆಗೆದುಕೊಂಡರೆ ಯಾವ ತಕರಾರೂ ಇಲ್ಲ. ತಕರಾರು ಬರುವುದು, ನನಗೆ ಇಷ್ಟವಿಲ್ಲದ್ದನ್ನು ಮತ್ತೊಬ್ಬರು ಅಪೇಕ್ಷಿಸಿದಾಗ, ನಾನು ಜಗಳಕ್ಕೆ ನಿಂತಾಗ. ಕಗ್ಗ ಆ ಮಾತನ್ನು ಹೇಳುತ್ತದೆ.

ಈ ಜಗತ್ತೆಂಬ ಉಗ್ರಾಣದಲ್ಲಿರುವ ನೂರಾರು ಮತಗಳಲ್ಲಿ ನಿನಗೆ ಬೇಕಾದುದನ್ನು ಆರಿಸಿಕೋ. ಅದು ಸರಿಯೇ ಎಂಬುದನ್ನು ನಿನ್ನ ವಿವೇಕದ ಬೆಳಕಿನಲ್ಲಿ ಪರೀಕ್ಷಿಸಿ ನೋಡು. ಸರಿ ಎನ್ನಿಸಿದರೆ ಬಳಸು. ಬೇರೆ ಬೇರೆ ಮನಸ್ಸುಗಳಿಗೆ ಬೇರೆ ಬೇರೆ ಆಯ್ಕೆಗಳು. ಅದಕ್ಕೇ ಕೃಷ್ಣ ಭಗವದ್ಗೀತೆಯಲ್ಲಿ ಕೊನೆಗೆ ಹೇಳುತ್ತಾನೆ. “ಯಥೇಚ್ಛಸಿ ತಥಾ ಕುರು”. ಎಲ್ಲವನ್ನು ವಿಮರ್ಶೆ ಮಾಡಿ ಕೊನೆಗೆ ನಿನಗೆ ಯಾವುದು ಸರಿಯೆನ್ನಿಸುತ್ತದೆಯೋ ಹಾಗೆಯೇ ಮಾಡು. ಬೇರೆ ಮತಿ, ಬೇರೆ ಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT