ಭಾನುವಾರ, ಫೆಬ್ರವರಿ 23, 2020
19 °C

ಮಂಕುತಿಮ್ಮನ ಕಗ್ಗ | ಒಲವಿನಿಂದ ಆತ್ಮ ವಿಸ್ತರಣೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು?|
ಒಲುಮೆ ಕರುಳಡಗಿಹುದು ಪಗೆತನದ ಪೊಡೆಯೊಳ್ ||
ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ |
ಒಲವಾತ್ಮವಿಸ್ತರಣ – ಮಂಕುತಿಮ್ಮ || 245 ||

ಪದ-ಅರ್ಥ: ಕೊಲೆಗಡಿಕನೆನಿಪ=ಕೊಲೆಗಡುಕ(ಕೊಲೆಮಾಡುವವ)+ಎನಿಪ(ಎಂದು ಹೆಸರಾದ), ಒಲುಮೆ ಕರುಳಡಗಿಹುದು=ಒಲುಮೆ+ಕರುಳು+ಅಡಗಿಹುದು, ಪಗೆತನದ=ಹಗೆತನದ, ಪೊಡೆಯೊಳ್=ಹೊಟ್ಟೆಯಲ್ಲಿ, ನರನುನ್ನತಿಕೆ=ನರನ+ಉನ್ನತಿಕೆ, ಒಲವಾತ್ಮವಿಸ್ತರಣ=ಒಲವು+ಆತ್ಮ+ವಿಸ್ತರಣ.

ವಾಚ್ಯಾರ್ಥ: ಕೊಲೆಗಡುಕ ಎಂದು ಹೆಸರು ಮಾಡಿದ ಹುಲಿ ತನ್ನ ಮರಿಗಳನ್ನು ಸಲಹುವುದಿಲ್ಲವೇ? ಹಗೆತನದ ಹೊಟ್ಟೆಯಲ್ಲೇ ಪ್ರೀತಿಯ ಕರುಳು ಅಡಗಿದೆ. ಈ ಬಗೆಯ ನಲ್ಮೆಯನು ಹೊರಹೊಮ್ಮಿಸುವುದೇ ಮನುಷ್ಯನ ಹೆಗ್ಗಳಿಕೆ. ಅದೇ ಆತ್ಮವಿಸ್ತರಣೆಯ ಬಗೆ.

ವಿವರಣೆ: ಅನ್ಯಪ್ರಾಣಿಗಳನ್ನು ನಿರ್ದಯವಾಗಿ ಹೊಡೆದು ತಿನ್ನುವ, ಕ್ರೂರವೆಂದೆನಿಸುವ ಹುಲಿ ಕೂಡ ತನ್ನ ಮರಿಗಳನ್ನು ಪ್ರೀತಿಯಿಂದ ಸಾಕುವುದಿಲ್ಲವೆ? ಅದರ ಹೃದಯದಲ್ಲೂ ಪ್ರೇಮದ ಬುಗ್ಗೆ ಇದೆ. ಅಂತೆಯೇ ದ್ವೇಷದ, ಕ್ರೌರ್ಯದ ಗರ್ಭದಲ್ಲೇ ಪ್ರೀತಿಯ ಸೆಲೆ ಚಿಮ್ಮುತ್ತದೆ. ಇದಕ್ಕೆ ಮಹಾಭಾರತದ ಕೆಲವು ಪ್ರಸಂಗಗಳು ನಿದರ್ಶನಗಳಾಗಿ ನಿಲ್ಲುತ್ತವೆ.

ಅಗ್ನಿಕುಂಡದಿಂದ ಬಂದವಳು ದ್ರೌಪದಿ. ತನಗಾದ ಅಪಮಾನವನ್ನು ಮರೆಯಲಾರದೆ ಯದ್ಧವನ್ನು ಕಟ್ಟಿಕೊಂಡೇ ಬಾ ಎಂದು ಕೃಷ್ಣನನ್ನು ಬೇಡಿದವಳು. ಯುದ್ಧದಲ್ಲಿ ಕೊಟ್ಟ ಮಾತಿನಂತೆ ದುಶ್ಯಾಸನನನ್ನು ಕೊಂದ ಭೀಮನಿಂದ ವೈರಿಯ ರಕ್ತದಲ್ಲಿ ತನ್ನ ಕೂದಲುಗಳನ್ನು ನೆನೆಸಿ ಸತ್ತವನ ಹಲ್ಲುಗಳಿಂದ ಬಾಚಿಸಿಕೊಂಡವಳು, ಸಂಭ್ರಮಿಸಿದವಳು, ಅಷ್ಟು ಪ್ರತಿಕಾರದ ಬೆಂಕಿ ಅವಳಲ್ಲಿ. ಆದರೆ ತನ್ನ ಐವರು ಬೆಳೆದ ಮಕ್ಕಳನ್ನು ನಿರ್ದಯವಾಗಿ, ಮಲಗಿದ್ದಾಗ ಕೊಂದು ಪಲಾಯನಗೈದ ಅಶ್ವತ್ಥಾಮನನ್ನು ಕೃಷ್ಣ, ಅರ್ಜುನರು ಹಿಡಿದು ಎಳೆತಂದು ಅವನ ತಲೆಯನ್ನು ಕತ್ತರಿಸಲು ಸಿದ್ಧರಾಗಿದ್ದಾಗ ಅಲ್ಲಿಗೆ ಬಂದ ದ್ರೌಪದಿ ಏನು ಮಾಡಬಹುದಾಗಿತ್ತು? ಆಕೆ ಅಗ್ನಿಕನ್ಯೆ, ಐವರು ಪುತ್ರರನ್ನು ಕಳೆದುಕೊಂಡವಳು ಯಾವ ರೀತಿ ತನ್ನ ದ್ವೇಷವನ್ನು ತೀರಿಸಿಕೊಳ್ಳಬಹುದಾಗಿತ್ತು? ಆದರೆ ಆಕೆ ಮಾಡುವುದು ಅತ್ಯಂತ ಶ್ರೇಷ್ಠವಾದ ಕ್ಷಮಾದಾನ. ಅದನ್ನು ಕುಮಾರವ್ಯಾಸ ಅದ್ಭುತವಾಗಿ ಚಿತ್ರಿಸುತ್ತಾನೆ. ಆಕೆ, ‘ಗುರು ಪುತ್ರನನ್ನು ಕೊಲ್ಲಬಾರದು. ಈತನನ್ನು ಕೊಂದರೆ ನನ್ನ ಪುತ್ರರ ಸಾವು ಬದಲಾದೀತೇ? ನನಗಾದ ಪುತ್ರಶೋಕದ ನೋವು ಅಶ್ವತ್ಥಾಮನ ತಾಯಿ ಕೃಪೆಗೂ ಆಗದಿರಲಿ’ ಎಂದು ಭೀಮಾರ್ಜುನರನ್ನು ಬದಿಗೆ ಸರಿಸಿ ಅಶ್ವತ್ಥಾಮನನ್ನು ಕ್ಷಮಿಸುತ್ತಾಳೆ. ಇದೇ ಹಗೆತನದ ಹೊಟ್ಟೆಯಲ್ಲಿರುವ ಪ್ರೀತಿಯ ಕರುಳು. ಇನ್ನೊಂದು ಅತ್ಯದ್ಭುತ ಪ್ರಸಂಗ ಅಭಿಮನ್ಯುವಿನ ಹೋರಾಟ. ಆತನ ಪರಾಕ್ರಮಕ್ಕೆ ಹೆದರಿ ಕೌರವ ಪಕ್ಷದ ಎಲ್ಲ ಅತಿರಥ, ಮಹಾರಥರು ಓಡಿ ಹೋಗಿದ್ದಾರೆ. ಕೌರವ ಸೈನ್ಯ ಚೆಲ್ಲಾಪಿಲ್ಲಿಯಾಗಿದೆ. ಇಂಥ ಪ್ರಸಂಗದಲ್ಲಿ ಛಲವೇ ಮೂರ್ತಿಗೊಂಡಂತಿದ್ದ, ಪಾಂಡವರ ದ್ವೇಷವನ್ನೇ ರಕ್ತವನ್ನಾಗಿಸಿಕೊಂಡ ದುರ್ಯೋಧನನಿಗೆ ಏನನ್ನಿಸಿರಬೇಕು? ಅವನು ಹೇಳುವ ಮಾತು ಕೇಳಿ.

‘ಹುರುಡ ಮರೆದೆನು ಮಗನೆ, ಸಾಲದೆ ಭರತಕುಲದಲಿ ನಿನ್ನ ಬೆಳವಿಗೆ
ಎರಡು ಕವಲನ್ಪಯಕೆ ಕೊಡದೆ ಸುಗತಿ ಸಂಪದವ’

ದ್ವೇಷ ಮರೆತೆನು ಮಗನೆ, ನಿನ್ನೊಬ್ಬನ ಬೆಳವಣಿಗೆಯಿಂದ ಕೌರವ, ಪಾಂಡವ ಎರಡೂ ವಂಶಕ್ಕೆ ಸದ್ಗತಿಯ ಸಂಪತ್ತು ದೊರಕೀತು, ಪಾರ್ಥ ಕೃತಾರ್ಥನಾದ ಎಂದು ಅಭಿಮಾನದಿಂದ ಬೀಗುತ್ತಾನೆ ಕೌರವರ ರಾಯ ದುರ್ಯೋಧನ. ಅಭಿಮನ್ಯುವಿನ ತಾಯಿಯನ್ನು ಹೊಗಳುತ್ತಾನೆ. ಇದು ಮನುಷ್ಯ ಸ್ವಭಾವದ ಅದ್ಭುತ. ಹೀಗೆ ನಲುಮೆಯನ್ನು, ಪ್ರೀತಿಯನ್ನು ಹೊಮ್ಮಿಸುವುದೇ ಮನುಷ್ಯನ ಶ್ರೇಷ್ಠತೆ. ನಮ್ಮ ಆತ್ಮದ ವಿಸ್ತರಣೆಯಾಗುವುದೇ ಈ ಒಲವಿನಿಂದ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)