ಶುಕ್ರವಾರ, ಫೆಬ್ರವರಿ 21, 2020
19 °C

ಮಂಕುತಿಮ್ಮನ ಕಗ್ಗ | ಪರಮಾದ್ಭುತ ಮನಸ್ಸು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ |
ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ||
ಮನುಜರ ಪರಸ್ಪರೋದ್ರೇಕ ಜಗದ ವಿಲಾಸ |
ಮನವೆ ಪರಮಾದ್ಭುತವೊ – ಮಂಕುತಿಮ್ಮ || 247 ||

ಪದ-ಅರ್ಥ: ಪಾರ್ವುದು=ಹಾರುವುದು, ಬಾಳಿನುರಿಯ=ಬಾಳಿನ+ಉರಿಯ, ಮನೆಗಲೆವ=ಮನೆಗೆ+ಅಲೆವ(ಅಲೆಯುವ), ಪರಸ್ಪರೋದ್ರೇಕ=ಪರಸ್ಪರ+ಉದ್ರೇಕ

ವಾಚ್ಯಾರ್ಥ: ಬದುಕಿನ ಉರಿಯ ಕಿಡಿ ಮನದಿಂದ ಮನಕ್ಕೆ ಹಾರುತ್ತದೆ, ಮನೆಯಿಂದ ಮನೆಗೆ ಅಲೆಯುವ ಗಾಳಿ ಹೊಗೆಯಂತೆ. ಮನುಜರ ನಡುವಿನ ಪರಸ್ಪರ ಭಾವೋದ್ರೇಕವೇ ಈ ಜಗತ್ತಿನ ವಿಲಾಸ. ಈ ಮನಸ್ಸು ಒಂದು ಪರಮ ಅದ್ಭುತ.

ವಿವರಣೆ: ಮನುಷ್ಯ ಸಂಘಜೀವಿ. ಆತ ಒಬ್ಬನೇ ಬದುಕಲಾರ. ಆದರೆ ಹೀಗೆ ಗುಂಪಿನಲ್ಲಿ ಬದುಕುವಾಗ ಪರಸ್ಪರರೊಂದಿಗೆ ಸಂಪರ್ಕ ಆಗಿಯೇ ತೀರುತ್ತದೆ. ಈ ಸಂಪರ್ಕವಾಗುವಾಗ ಕೆಲವೊಮ್ಮೆ ಸ್ನೇಹವಾಗಬಹುದು, ಕೆಲವೊಮ್ಮೆ ಘರ್ಷಣೆಯಾಗಬಹುದು. ಸಂಘ ಜೀವನದಲ್ಲಿ ಈ ಭಾವನೆಗಳು ಪರಸ್ಪರರನ್ನು ಪ್ರೇಮದಲ್ಲಿ ಬಂಧಿಸಬಹುದು ಇಲ್ಲವೇ ದ್ವೇಷದಲ್ಲಿ ಒಡೆಯಬಹುದು. ದ್ವೇಷವನ್ನು ಈ ಕಗ್ಗ ಬಹಳ ಅರ್ಥಪೂರ್ಣವಾಗಿ ಬಾಳಿನ ಉರಿಯ ಕಿಡಿ ಎಂದು ವರ್ಣಿಸುತ್ತದೆ. ದ್ವೇಷ, ಕುಟುಂಬ, ಸಮಾಜ, ದೇಶಗಳನ್ನು ಸುಟ್ಟು ಬೂದಿ ಮಾಡುವ ದುಷ್ಟ ಶಕ್ತಿ. ಇದನ್ನು ಶರಣರು ಕಿಚ್ಚು ಅಥವಾ ಅಗ್ನಿ ಎಂದು ಕರೆದರು.
                             ***
ತನುವಿನ ಕೋಪ ತನ್ನ ಹಿರಿತನದ ಕೇಡು !
ಮನದ ಕೋಪ ತನ್ನ ಅರಿವಿನ ಕೇಡು !
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ,
ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ !

ಅನಾಹುತಕಾರಿಯಾದ ಕ್ರೋಧ ಅಥವಾ ದ್ವೇಷ ಹುಟ್ಟುವುದು ನಮ್ಮ ನಮ್ಮ ಮನಗಳಲ್ಲಿಯೇ. ಬೆಂಕಿಯನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೊಬ್ಬರ ಮೇಲೆ ತೂರ ಹೊರಟರೆ ಅದು ಮೊದಲು ಸುಡುವುದು ನಮ್ಮ ಕೈಯನ್ನೇ. ಅನಂತರ ಮತ್ತೊಬ್ಬರನ್ನು ಸುಡುತ್ತದೆ. ಅಂತೆಯೇ ನಮ್ಮ ಮನದಲ್ಲಿ ಹುಟ್ಟಿದ ಈ ದ್ವೇಷದ ಕಿಡಿ ಮನದ ಶಾಂತಿಯನ್ನು ಕದಡಿ ನಂತರ ಬೆಂಕಿ ಹತ್ತಿದ ಮನೆಯಿಂದ ಮತ್ತೊಂದು ಮನೆಗೆ ಸಾಗುವ ಹೊಗೆಯಂತೆ, ನೆರೆಮನೆಗೆ, ಪಕ್ಕದ ಊರಿಗೆ, ಬೇರೆ ದೇಶಕ್ಕೆ ಹಬ್ಬಿ ಇಡೀ ವಿಶ್ವವನ್ನೇ ಉಸಿರುಗಟ್ಟಿಸುತ್ತದೆ.

ಮನುಷ್ಯರ ಪರಸ್ಪರ ಸಂಪರ್ಕ ಬರೀ ದ್ವೇಷವನ್ನು ಅಥವಾ ಹೊಡೆದಾಟವನ್ನು ತರುತ್ತದೆ ಎಂದಲ್ಲ. ಈ ಸಂಪರ್ಕದಲ್ಲಿ ಹೊಸವಿಚಾರಗಳು, ಹೊಸ ನೀತಿಗಳು ಹೊಳೆದು ಪ್ರಪಂಚವನ್ನು ಬೆಳೆಸಿವೆ, ಕೋಟೆಗಳನ್ನು ಕಟ್ಟಿಸಿವೆ, ಬದುಕನ್ನು ಹಗುರಗೊಳಿಸಿವೆ, ಪ್ರಪಂಚವನ್ನು ಶ್ರೀಮಂತಗೊಳಿಸಿವೆ. ಹೀಗೆ ಮನುಷ್ಯ – ಮನುಷ್ಯರ ನಡುವಿನ ಸಂಪರ್ಕ ಸ್ವಾರ್ಥಕೇಂದ್ರಿತವಾದಾಗ ವಿಷಮತೆಯನ್ನು, ದ್ವೇಷವನ್ನು, ವಿಭಜನೆಯನ್ನು ತಂದು ಪ್ರಪಂಚವನ್ನು ಅಗ್ನಿಕುಂಡಕ್ಕೆ ನೂಕುತ್ತದೆ. ಅದೇ ಸಂಪರ್ಕ ಸ್ವಾರ್ಥರಹಿತವಾದಾಗ ಶಾಂತಿಯ ರಸ ಹರಿಯುತ್ತದೆ, ಪ್ರಪಂಚ ಆನಂದದಿಂದ ನಲಿಯುತ್ತದೆ.

ಇವೆರಡೂ ಸಾಧ್ಯತೆಗಳು ಹುಟ್ಟುವುದು ನಮ್ಮ ಮನಸ್ಸುಗಳಲ್ಲಿ. ಇವುಗಳಿಂದಲೇ ಪ್ರಪಂಚದ ವಿಲಾಸ. ಅದಕ್ಕೆ ಕಗ್ಗ ಮನಸ್ಸನ್ನು ಪರಮಾದ್ಭುತ ಎಂದು ಕರೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)