ಗುರುವಾರ , ಫೆಬ್ರವರಿ 25, 2021
30 °C

ಬೆರಗಿನ ಬೆಳಕು | ಮಿಶ್ರ ಸ್ವಭಾವ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಸನ್ನಿಹಿತ ಮನುಜನಲಿ ದೈವಪಾಶವವೆರಡು |
ಪುಣ್ಯಪಾಪದ ಮಿಶ್ರವವನ ಸ್ವಭಾವ ||
ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು |
ಮಣ್ಣೊಳುರುಳುವುದೊಮ್ಮೆ – ಮಂಕುತಿಮ್ಮ || 286 ||

ಪದ-ಅರ್ಥ: ಸನ್ನಿಹಿತ=ಹತ್ತಿರದಲ್ಲಿ ಇರುವುದು, ದೈವಪಾಶ ವವೆರಡು=ದೈವ(ದೈವಾಂಶ)+ಪಾಶವ(ಪಶು ಅಂಶ)+ಎರಡು, ಕಣ್ಣೊಮ್ಮೆಯಾ ಗಸದ=ಕಣ್ಣು+ಒಮ್ಮೆ+ಆಗಸದ, ಬೆಳಕಿನೊಡನಾಡುವುದು=ಬೆಳಕಿನೊಡೆ+ಆಡುವುದು, ಮಣ್ಣೊಳುರುಳು ವುದೊಮ್ಮೆ= ಮಣ್ಣೊಳು+ ಉರುಳುವುದು+ ಒಮ್ಮೆ.

ವಾಚ್ಯಾರ್ಥ: ಮನುಷ್ಯನಲ್ಲಿ ದೈವಾಂಶಗಳು ಮತ್ತು ಪಶುವಿನ ಅಂಶಗಳು ಜೊತೆಜೊತೆಯಾಗಿಯೇ ಇವೆ. ಅವನ ಸ್ವಭಾವವೂ ಪುಣ್ಯ-ಪಾಪಗಳ ಮಿಶ್ರಣ. ಒಮ್ಮೊಮ್ಮೆ ಆಗಸದ ಬೆಳಕಿನಂತೆ ಉನ್ನತಿಯೊಡನಾಡುವನು, ಮತ್ತೊಮ್ಮೆ ಕ್ಷುದ್ರನಾಗಿ ಮಣ್ಣಿನಲ್ಲಿ ಹೊರಳಾಡುವನು.

ವಿವರಣೆ: ಇದೊಂದು ಅತ್ಯಂತ ಮನೋಜ್ಞವಾದ ಚೌಪದಿ, ಮನುಷ್ಯ ಪೂರ್ಣವಾಗಿ ಒಳ್ಳೆಯವನೂ ಅಲ್ಲ, ಪೂರ್ತಿ ಕೆಟ್ಟವನೂ ಅಲ್ಲ. ಅವನಲ್ಲಿ ದೈವಾಂಶ ಮತ್ತು ರಾಕ್ಷಸಾಂಶಗಳು ಮಿಶ್ರಣವಾಗಿವೆ. ಮಿಶ್ವಾಮಿತ್ರರ ಮನದಲ್ಲಿದ್ದ ಕರುಣೆ ರಾಮನನ್ನು ಗೌತಮಾಶ್ರಮಕ್ಕೆ ಕರೆದೊಯ್ದು ಅಹಲ್ಯೆಯ ಉದ್ಧಾರವನ್ನು ಮಾಡಿಸಿತು. ಆದರೆ ಅದೇ ವಿಶ್ವಾಮಿತ್ರರು ಕೌಶಿಕ ರಾಜನಾಗಿದ್ದ ಕುದಿದ ಕೋಪ ವಶಿಷ್ಠರ ನೂರುಮಕ್ಕಳನ್ನು ಕೊಂದು ಹಾಕಿತು. ಇದು ಕರುಣೆ, ದ್ವೇಷಗಳ ಸಮಾವೇಶ.

ನಹುಷನಂತಹ ಪರಾಕ್ರಮಿ ರಾಜನೇ ಇರಲಿಲ್ಲ. ರಾಕ್ಷಸರೊಡನೆ ಹೋರಾಡಲು ಇಂದ್ರ ಕೂಡ ನಹುಷನ ಸಹಾಯ ಬೇಡಿದ. ಅವನು ಒಂದು ಸಂದರ್ಭದಲ್ಲಿ ಇಂದ್ರನೂ ಆದ. ಅಂತಹ ಅಸಾಮಾನ್ಯ ತಿಳುವಳಿಕೆಯ, ಶೌರ್ಯದ, ಜ್ಞಾನದ ಪ್ರತಿರೂಪವಾಗಿದ್ದವನು ನಹುಷ. ಆದರೆ ಶಚಿದೇವಿಯನ್ನು ಕಂಡೊಡನೆ ಆಕೆಯನ್ನು ಪಡೆಯಲೇಬೇಕೆಂದು ಹುಚ್ಚು ಮೋಹ ಅವನನ್ನು ಶತಮಾನಗಳು ಕಾಲ ಹೆಬ್ಬಾವಾಗಿ ಕಾಡಿನಲ್ಲಿ ಬೀಳುವಂತೆ ಮಾಡಿತು. ಇದು ಧೀರೋದಾತ್ತತೆ ಮತ್ತ್ತು ನೀಚತನದ ಮಿಶ್ರಣ, ದೇವತ್ವದ ಮತ್ತು ಪಶುಸ್ವಭಾವದ ಸೇರಿಕೆ.

ಇಂದ್ರ ದೇವತೆಗಳ ನಾಯಕ, ಸ್ವರ್ಗದ ಅಧಿದೈವ. ಆತ ನೂರು ಯಾಗಗಳನ್ನು ಮಾಡಿ ತನ್ನ ಭಕ್ತಿಯಿಂದ, ಶರಣಾಗತಿಯಿಂದ ಇಂದ್ರ ಪದವಿಯನ್ನು ಸಂಪಾದಿಸಿದವನು. ಅಂಥವನು ಅದೆಷ್ಟು ಬಾರಿ ತುಂಬ ಕೀಳುಮ ಟ್ಟದ ಚಟುವಟಿಕೆಗಳನ್ನು ಮಾಡಲಿಲ್ಲ? ಅದೆಷ್ಟು ಋಷಿಗಳ ಯಜ್ಞಗಳನ್ನು ನಾಶಮಾಡಲು ಪ್ರಯತ್ನಿಸಲಿಲ್ಲ? ಇದು ಶ್ರೇಷ್ಠತೆ ಮತ್ತು ಕ್ಷುದ್ರದೇವತೆಗಳ ಸಮಾಗಮ.

ದ್ರೌಪದಿ ಯಜ್ಞಸೇನಿ, ಯಜ್ಞದ ಕುಂಡದಿಂದ ಬಂದವಳು. ಎಲ್ಲರೂ ಯುದ್ಧ ಬೇಡ, ಸಂಧಾನ ಸಾಕು ಎಂದಾಗ ಕೃಷ್ಣನಿಗೆ ತನ್ನ ಬಿಚ್ಚಿದ ತಲೆಗೂದಲನ್ನು ತೋರಿಸಿ ಯುದ್ಧವನ್ನೇ ಕಟ್ಟಿಕೊಂಡು ಬರುವಂತೆ ಹೇಳಿದವಳು, ಭೀಮಸೇನ ದುಶ್ಯಾಸನನ್ನು ಸೀಳಿದಾಗ ಅಸಹ್ಯಪಟ್ಟುಕೊಳ್ಳದೆ ಹೋಗಿ ತನ್ನ ತಲೆಗೂದಲನ್ನು ಅವನ ರಕ್ತದಲ್ಲಿ ನೆನೆಸಿಕೊಂಡು, ದುರುಳನ ಹಲ್ಲುಗಳ ಬಾಚಣಿಗೆಯಿಂದ ಬಾಚಿಸಿಕೊಂಡವಳು ಆಕೆ ಸೇಡನ್ನು ಮರೆಯಲಾರಳು. ಆದರೆ ತನ್ನ ಐವರು ಬೆಳೆದ ಮಕ್ಕಳನ್ನು ಮಲಗಿದಾಗ ಕೊಂದ ಅಶ್ವತ್ಥಾಮನನ್ನು ಕೃಷ್ಣ, ಅರ್ಜುನರು ಹಿಡಿದುಕೊಂಡು ಬಂದು ಕೊಲ್ಲುತ್ತೇವೆ ಎಂದಾಗ, ಬೇಡ, ನನ್ನ ಕರುಳು ಬೆಂದ ಹಾಗೆ ಅವನ ತಾಯಿ ಕೃಪೆಯ ಕರುಳು ಬೇಯದಿರಲಿ ಎಂದು ಕ್ಷಮೆ ನೀಡಿದವಳು. ಆಕೆ ಕ್ರೋಧ ಮತ್ತು ಕ್ಷಮೆಗಳ ಸಂಗಮ.

ಈ ಕಗ್ಗ ಅದನ್ನೇ ಸಾರುತ್ತದೆ. ಮನುಷ್ಯನಲ್ಲಿ ಎರಡೂ ಗುಣಗಳಿವೆ. ಒಮ್ಮೊಮ್ಮೆ ಅವನ ಮನಸ್ಸು ಉದಾತ್ತವಾಗಿ, ಪರಿಷ್ಕಾರವಾಗಿ ಹೊಮ್ಮುವುದು. ಅದನ್ನು ಕಗ್ಗ ಸುಂದರವಾಗಿ ‘ಆಗಸದ ಬೆಳಕಿನೊಡನಾಡುವುದು’ ಎನ್ನುತ್ತದೆ. ಅದೇ ಮನಸ್ಸು ಯಾವಾಗಲೋ ತುಂಬ ಕೀಳಾಗಿ ಚಿಂತಿಸಿ, ಪೆಟ್ಟು ತಿಂದು, ನರಳಿ, ಮಣ್ಣಿನಲ್ಲಿ ಹೊರಳಾಡುತ್ತದೆ. ಎರಡೂ ಸ್ಥಿತಿಗಳಿಗೆ ಅವನ ಮನಸ್ಸೇ ಕಾರಣ. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ’. ಮನುಷ್ಯನ ಆತ್ಮೋನ್ನತಿಯ, ಬಿಡುಗಡೆಗೆ ಮತ್ತು ಅವನ ಹೀನತೆಯ ಬಂಧನಕ್ಕೆ ಮನಸ್ಸೇ ಹಾದಿ. ಅದು ಸ್ಥಿಮಿತದಲ್ಲಿದ್ದರೆ ಕ್ಷೇಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು