ಮಂಗಳವಾರ, ಮಾರ್ಚ್ 21, 2023
20 °C

ಬೆರಗಿನ ಬೆಳಕು: ಮುದುಕನ ಹೆಂಡತಿಯ ಕಷ್ಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತಾವು ಕಟ್ಟಿಕೊಂಡ ಆಶ್ರಮದಲ್ಲಿ ವೆಸ್ಸಂತರ ಬೋಧಿಸತ್ವ ಮತ್ತು ಮಾದ್ರಿ ತಮ್ಮ ಮಕ್ಕಳೊಂದಿಗೆ ಏಳು ತಿಂಗಳುಗಳ ಕಾಲ ಬದುಕಿದರು. ಮಾದ್ರಿ ದಿನನಿತ್ಯ ಮಕ್ಕಳಿಗೆ ಸ್ನಾನ ಕರ್ಮಗಳನ್ನು ಮಾಡಿಸಿ, ಆಶ್ರಮವನ್ನು ಸ್ವಚ್ಛಗೊಳಿಸಿ, ಮಕ್ಕಳನ್ನು ತಂದೆಯ ಬಳಿಗೆ ಬಿಟ್ಟು ತಾನು ಬಿದಿರಿನ ಬುಟ್ಟಿ ಹಿಡಿದು ಹಣ್ಣು ಗಡ್ಡೆಗಳನ್ನು ತರಲು ಹೋಗುತ್ತಿದ್ದಳು. ಸಂಜೆಯ ಹೊತ್ತಿಗೆ ಮರಳಿ ಬಂದು ಮತ್ತೆ ಮಕ್ಕಳಿಗೆ ಸ್ನಾನ ಮಾಡಿಸಿ, ತಾನೂ ಮಾಡಿ, ತಂದ ಗೆಡ್ಡೆ-ಗೆಣಸು ಮತ್ತು ಹಣ್ಣುಗಳನ್ನು ಎಲ್ಲರಿಗೂ ಹಂಚುತ್ತಿದ್ದಳು. ನಾಲ್ಕೂ ಜನ ಸೇರಿ ಅವನ್ನೇ ತಿಂದು ತೃಪ್ತಿಯಿಂದಿರುತ್ತಿದ್ದರು. ನಂತರ ಮಕ್ಕಳನ್ನು ಕರೆದುಕೊಂಡು ತನ್ನ ಆಶ್ರಮಕ್ಕೆ ಹೋಗಿ ಮಲಗುತ್ತಿದ್ದಳು. ಇದೇ ನಿತ್ಯದ ದಿನಚರಿಯಾಗಿತ್ತು.

ಈ ಸಮಯದಲ್ಲಿ ಕಳಿಂಗ ರಾಷ್ಟ್ರದ ದುನ್ನಿವಿಟ್ಠ ಎಂಬ ಗ್ರಾಮದಲ್ಲಿ ಪೂಜಕ ಎಂಬ ಬ್ರಾಹ್ಮಣನಿದ್ದ. ಅವನಿಗಾಗಲೇ ಸಾಕಷ್ಟು ವಯಸ್ಸಾಗಿತ್ತು. ಆತ ಭಿಕ್ಷೆ ಬೇಡಿ ನೂರು ಕಹಾಪಣಗಳನ್ನು ಸಂಗ್ರಹ ಮಾಡಿದ್ದ. ಮತ್ತಷ್ಟು ಹಣ ಕೂಡಿಸಲೆಂದು ಬೇರೊಂದು ರಾಜ್ಯಕ್ಕೆ ಹೋಗುವಾಗ ತನ್ನಲ್ಲಿದ್ದ ಹಣವನ್ನು ಮತ್ತೊಬ್ಬ ಬ್ರಾಹ್ಮಣನ ಕಡೆಗೆ ಕೊಟ್ಟು ಹೋದ. ಹಣ ತೆಗೆದುಕೊಂಡ ಬ್ರಾಹ್ಮಣನಿಗೆ ಯಾವುದೋ ಆಪತ್ತು ಬಂದು ಹಣ ಬೇಕಾಯಿತು. ಆತ ಅನಿವಾರ್ಯವಾಗಿ ಪೂಜಕ ಬ್ರಾಹ್ಮಣನ ಹಣವನ್ನು ಬಳಸಿಕೊಂಡುಬಿಟ್ಟ. ಮುದುಕ ಪೂಜಕ ಬ್ರಾಹ್ಮಣ ಮರಳಿ ಬಂದು ತನ್ನ ಹಣವನ್ನು ಕೇಳಿದ.

ತಾನು ಬಳಸಿದ್ದ ನೂರು ಕಹಾಪಣಗಳನ್ನು ಮರಳಿ ಕೊಡಲು ಅಸಮರ್ಥನಾದ ಕಾರಣ ಆತ ಸುಂದರ ತರುಣಿಯಾದ ಅಮಿತ್ರತಾಪನಳೆಂಬ ತನ್ನ ಮಗಳನ್ನು ಪೂಜಕನಿಗೆ ಮದುವೆ ಮಾಡಿ ಕೊಟ್ಟುಬಿಟ್ಟ. ಆತ ಅವಳನ್ನು ಕರೆದುಕೊಂಡು ಮರಳಿ ಕಳಿಂಗ ರಾಷ್ಟ್ರದ ದುನಿವಿಟ್ಠಕ್ಕೆ ಬಂದು ವಾಸಿಸತೊಡಗಿದ. ಪಾಲಿಗೆ ಬಂದದ್ದೇ ಪಂಚಾಮೃತವೆಂದುಕೊಂಡು ಅಮಿತ್ರತಾಪನಳು ಮುದಿಗಂಡನ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದಳು. ಆಕೆಯ ನಡೆಗಳನ್ನು ಕಂಡ ನಗರದ ತರುಣ ಬ್ರಾಹ್ಮಣರು ತಮ್ಮ ಹೆಂಡಂದಿರನ್ನು ಟೀಕಿಸುತ್ತಿದ್ದರು. ‘ಆ ಅಮಿತ್ರತಾಪನಳು, ತನ್ನ ಗಂಡ ಮುದಿಯನಾಗಿದ್ದರೂ ಅದೆಷ್ಟು ಪ್ರೀತಿಯಿಂದ, ಗೌರವದಿಂದ ಸೇವಿಸುತ್ತಾಳೆ. ಆಕೆಯಿಂದ ನೋಡಿ ಕಲಿಯಿರಿ. ನಿಮಗೆಲ್ಲ ಆಕೆಯೊಂದು ಮಾದರಿ’ ಎನ್ನುತ್ತಿದ್ದರು. ಈ ಮಾತುಗಳನ್ನು ಕೇಳಿ ಕೇಳಿ ಆ ತರುಣಿಯರು ಒಟ್ಟಾಗಿ ಮಾತನಾಡಿಕೊಂಡರು.

‘ಯಾಕೋ, ಈ ಅಮಿತ್ರತಾಪನಳ ಪ್ರಭಾವ ಹೆಚ್ಚಾಯಿತು. ಆಕೆಯಿಂದಾಗಿ ನಾವು ನಮ್ಮ ಗಂಡಂದಿರ ಟೀಕೆ ಕೇಳಬೇಕಾಗಿದೆ ಅವಳನ್ನು ಹೇಗಾದರೂ ಮಾಡಿ ಈ ಗ್ರಾಮದಿಂದ ಓಡಿಸಿಬಿಡೋಣ’ ಎಂದು ಆಲೋಚನೆ ಮಾಡಿದರು. ಮರುದಿನದಿಂದ ನದಿಗೆ, ದೇವಸ್ಥಾನಕ್ಕೆ ಹೋದಾಗ ಅವಳನ್ನು ಕಂಡು ಅಪಹಾಸ್ಯ ಮಾಡತೊಡಗಿದರು. ‘ಅಯ್ಯೋ, ನಿನ್ನ ತಂದೆ-ತಾಯಿಯರಂಥ ಶತ್ರುಗಳು ಯಾರೂ ಇರಲಾರರು. ಅದಕ್ಕೇ ಈ ಮುದಿಗಂಡನಿಗೆ ನಿನ್ನಂಥ ಸುಂದರಿಯನ್ನು ಕಟ್ಟಿಬಿಟ್ಟಿದ್ದಾರೆ.

ನೀನೊಬ್ಬ ತರುಣನನ್ನು ಮದುವೆಯಾಗಿದ್ದರೆ ಅದೆಷ್ಟು ಸಂತೋಷ ಪಡುತ್ತಿದ್ದೆ? ಈ ಮುದಿಗಂಡನ ಜೊತೆಗೆ ಕ್ರೀಡೆಯೂ ಸಾಧ್ಯವಿಲ್ಲ, ರತಿಕ್ರೀಡೆಯೂ ಸಾಧ್ಯವಿಲ್ಲ. ಅವನೊಂದಿಗೆ ಬದುಕುವುದಕ್ಕಿಂತ ಹಾವು ಕಚ್ಚಿ ಸಾಯುವುದು ಮೇಲು. ನೀನು ನಿನ್ನ ತಂದೆಯ ಮನೆಗೆ ಹೋಗಿ ಮತ್ತೊಬ್ಬ ತರುಣನನ್ನು ಮದುವೆಯಾಗು’ ಈ ಪರಿಯ ಕೊಂಕು ಮಾತು ಅಮಿತ್ರತಾಪನಳ ಮನಸ್ಸಿಗೆ ಗಾಸಿಯನ್ನುಂಟುಮಾಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು