ಶನಿವಾರ, ಮಾರ್ಚ್ 25, 2023
30 °C

ಬೆರಗಿನ ಬೆಳಕು: ತರುಣಿ ಹೆಂಡತಿಯ ಅಪೇಕ್ಷೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಊರಲ್ಲಿ ತರುಣಿಯ ಕೊಂಕು ಮಾತುಗಳು ವಿಪರೀತವಾದಾಗ ಅಮಿತ್ರತಾಪನಳು ಮನೆಗೆ ಅಳುತ್ತ ಬಂದಳು. ನೀರಿನ ಕೊಡವನ್ನು ನೆಲಕ್ಕೆ ಕುಕ್ಕಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಮನೆಗೆ ಬಂದ ಮುದುಕ ಬ್ರಾಹ್ಮಣ ಆತಂಕದಿಂದ, ‘ಯಾಕೆ ಅಳುತ್ತೀ? ಏನು ತೊಂದರೆ?’ ಎಂದು ಕೇಳಿದ. ಆಕೆ ತನ್ನ ದುಃಖವನ್ನು ಹೇಳಿಕೊಂಡಳು. ‘ಬ್ರಾಹ್ಮಣ, ನಾನು ಇನ್ನು ನೀರು ತರಲು ನದಿಗೆ ಹಾಗೂ ದೇವಾಲಯಕ್ಕೆ ಹೋಗುವುದಿಲ್ಲ. ನಿನ್ನ ಮುದಿತನದ ಬಗ್ಗೆ ಮಾತನಾಡಿ ಗ್ರಾಮದ ಹೆಂಗಳೆಯರು ನನ್ನ ಬಗ್ಗೆ ಹಾಸ್ಯ ಮಾಡುತ್ತಾರೆ’. ಬ್ರಾಹ್ಮಣ ಹೇಳಿದ, ‘ಹೋಗಲಿ ಬಿಡು, ಅವರ ಮಾತಿನಿಂದೇನು? ಆಯಿತು, ನೀನು ನೀರು ತರುವುದು ಬೇಡ. ನಾನೇ ನೀರು ತರುತ್ತೇನೆ. ನೀನು ಕೋಪ ಮಾಡಿಕೊಳ್ಳಬೇಡ’. ಆಕೆ ಅಳುತ್ತಲೇ ಹೇಳಿದಳು, ‘ನಾನು ಗಂಡನಿಂದ ನೀರು ತರಿಸುವಂಥ ಕುಲದಲ್ಲಿ ಹುಟ್ಟಿಲ್ಲ. ನನಗೆ ನನ್ನ ತಂದೆ-ತಾಯಿಯರು ಸರಿಯಾದ ಸಂಸ್ಕಾರ ಕೊಟ್ಟಿದ್ದಾರೆ. ಗಂಡನಿಂದ ಇಂಥ ಕೆಲಸ ಮಾಡಿಸುವುದು ಪಾಪ ಎಂದು ನನಗೆ ತಿಳಿದಿದೆ. ಇನ್ನು ಮೇಲೆ ನಾನೂ ನೀರು ತರುವುದಿಲ್ಲ, ನೀನೂ ತರುವುದು ಬೇಡ’. ‘ಹಾಗಾದರೆ ಏನು ಮಾಡಲಿ?’ ಎಂದು ಗಾಬರಿಯಿಂದ ಬ್ರಾಹ್ಮಣ ಕೇಳಿದ.

ಆಕೆ ಕಣ್ಣೊರೆಸಿಕೊಂಡು, ‘ಅದಕ್ಕೊಂದು ಉಪಾಯವಿದೆ. ಮನೆಯ ಕೆಲಸಗಳಿಗೆ ಒಬ್ಬ ದಾಸಿಯನ್ನೋ, ದಾಸನನ್ನೋ ಗೊತ್ತು ಮಾಡು. ಅವರು ನೀರು ತರುವ ಮತ್ತು ಉಳಿದ ಕೆಲಸಗಳನ್ನು ಮಾಡಲಿ’ ಎಂದಳು. ಬ್ರಾಹ್ಮಣ ಹೌಹಾರಿದ. ‘ದೇವೀ, ನಾನು ಎಷ್ಟು ಬಡವ ಎಂಬುದು ನನಗೆ ಗೊತ್ತಿದೆ. ನನ್ನ ಬದುಕು ನಡೆಯುವುದೇ ಭಿಕ್ಷೆಯಿಂದ. ನನ್ನ ಬಳಿ ಬೇರೆ ಉದ್ಯೋಗವಾಗಲೀ, ಹಣವಾಗಲೀ, ಧಾನ್ಯವಾಗಲಿ ಇಲ್ಲ. ಇನ್ನು ದಾಸ, ದಾಸಿಯರಿಗೆ ಹಣವನ್ನು ಎಲ್ಲಿಂದ ತರಲಿ? ದಯವಿಟ್ಟು ಕೋಪ ಮಾಡಿಕೊಳ್ಳಬೇಡ. ನಾನು ನೀರು ತರುವುದು ಮಾತ್ರವಲ್ಲ, ಮನೆಯ ಎಲ್ಲ ಕೆಲಸಗಳನ್ನು ಮತ್ತು ನಿನ್ನ ಸೇವೆಯನ್ನು ಮಾಡುತ್ತೇನೆ’ ಎಂದು ಅಲವತ್ತುಕೊಂಡ. ಆದರೆ ಅಮಿತ್ರತಾಪನಳ ಮನಸ್ಸು ಕರಗಲಿಲ್ಲ. ಆಕೆ ಉಗ್ರವಾಗಿಯೇ ನುಡಿದಳು. ‘ಬ್ರಾಹ್ಮಣ, ನೀನು ಏನು ಮಾಡುತ್ತೀಯೋ ಗೊತ್ತಿಲ್ಲ. ನೀನು ಮನೆಗೆ ದಾಸಿ ಅಥವಾ ದಾಸನನ್ನು ಕರೆತರದಿದ್ದರೆ ನಾನು ಈ ಮನೆಯನ್ನು ಬಿಟ್ಟು ಹೋಗುತ್ತೇನೆ’ ಎಂದು ಅಬ್ಬರಿಸಿದಳು. ಆತ ಬರಸಿಡಿಲು ಬಡಿದಂತೆ ಕುಳಿತಾಗ ಆಕೆಯೇ ಅವನಿಗೆ ಒಂದು ಉಪಾಯವನ್ನು ಸೂಚಿಸಿದಳು. ‘ಬ್ರಾಹ್ಮಣ, ನಾನು ಹೇಳಿದಂತೆ ಕೇಳು. ಬೋಧಿಸತ್ವ ವೆಸ್ಸಂತರ ಬಹು ದೊಡ್ಡ ದಾನಿ. ಯಾರೂ ಅವನ ಬಳಿ ಹೋಗಿ ದಾನ ಪಡೆಯದೆ ಬಂದದ್ದಿಲ್ಲ. ಆತ ಈಗ ವಂಕಪರ್ವತದಲ್ಲಿ ಇದ್ದಾನಂತೆ. ನೀನು ಅಲ್ಲಿಗೆ ಹೋಗಿ ದಾಸ, ದಾಸಿಯರನ್ನು ಬೇಡು. ಆತ ಖಂಡಿತವಾಗಿಯೂ ಕೊಡುತ್ತಾನೆ’.

ಬ್ರಾಹ್ಮಣ ಹೇಳಿದ, ‘ದೇವಿ ಉಪಾಯವೇನೋ ಚೆನ್ನಾಗಿದೆ. ಆದರೆ ನಾನು ಮುದುಕ, ದುರ್ಬಲ. ವಂಕಪರ್ವತದ ಹಾದಿ ದೂರ ಹಾಗೂ ಕಷ್ಟವಾದದ್ದು’. ಆಕೆ ಕೋಪದಿಂದ, ‘ನೀನು ಹೇಡಿ. ಯುದ್ಧಕ್ಕೆ ಮೊದಲೇ ಸೋತು ಹೋದೆ. ಕಷ್ಟವೋ, ಸುಖವೋ ನೀನು ಹೋಗಿ ಕೇಳಲೇಬೇಕು. ಇಲ್ಲದಿದ್ದರೆ ನಾನು ಮನೆಯಲ್ಲಿ ಇರುವುದಿಲ್ಲ. ಇದ್ದರೂ ನಿನ್ನನ್ನು ನಿರ್ಲಕ್ಷಮಾಡಿ, ಉತ್ಸವ ಕಾಲದಲ್ಲಿ  ಅಲಂಕೃತಳಾಗಿ ಮತ್ತೊಬ್ಬ ತರುಣನ ಜೊತೆಗೆ ರಮಿಸುತ್ತೇನೆ. ಅದನ್ನು ಕಂಡ ನಿನಗೆ ಬದುಕೇ ಬೇಸರವಾಗುತ್ತದೆ. ನಿನಗೆ ಬಹುಬೇಗ ಮತ್ತಷ್ಟು ಮುದಿತನ ಮತ್ತು ಸಾವು ಬರುತ್ತದೆ’ ಎಂದಳು. ಹೆಂಗಸರ ಚುಚ್ಚುಮಾತು ಹರಿತವಾದ ಆಯುಧದಂತೆ. ಮುದಿಬ್ರಾಹ್ಮಣ ಪ್ರಯಾಣಕ್ಕೆ ಸಿದ್ಧನಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು