ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಗಳು

Last Updated 4 ಏಪ್ರಿಲ್ 2020, 21:46 IST
ಅಕ್ಷರ ಗಾತ್ರ

ಹಿಂದೆ ಕಾಶಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ನಗರದಲ್ಲಿ ಒಬ್ಬ ಬಲಶಾಲಿಯಾದ ಬ್ರಾಹ್ಮಣ ತರುಣನಿದ್ದ. ಅವನು ತುಂಬ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ. ಆತ ಸುಂದರ ಮಾತ್ರವಲ್ಲ, ತುಂಬ ಬಲಿಷ್ಠ, ಆನೆಯಂತೆ ಶಕ್ತಿ ಹೊಂದಿದವನು. ಅವನು ತನ್ನ ದೇಹ ಸೌಂದರ್ಯವನ್ನು,ದೇಹಶಕ್ತಿಯನ್ನು ಬಲವಾಗಿ ನಂಬಿದವನು. ಅದೇ ತನ್ನ ಶಾಶ್ವತವಾದ ಆಸ್ತಿ ಎಂದು ಭಾವಿಸಿದವನು. ಆತನ ಯೋಚನೆ ಹೀಗಿತ್ತು, ‘ಯಾವ ಕಾರ್ಯವನ್ನಾದರೂ ಯಾಕೆ ಮಾಡಬೇಕು? ತಂದೆ-ತಾಯಿ, ಅಣ್ಣ, ತಮ್ಮ ಇವೆಲ್ಲ ಅರ್ಥಹೀನ ಸಂಬಂಧಗಳು. ಅವರನ್ನು ಸಾಕುವುದು, ಅದಕ್ಕಾಗಿ ದೇಹವನ್ನು ದುಡಿಸುವುದು ಸರಿಯಲ್ಲ. ದಾನ, ಪುಣ್ಯ, ದೇವರು ಇವೆಲ್ಲ ಮೂಢನಂಬಿಕೆಗಳು. ಇವೆಲ್ಲ ಹೇಡಿಗಳ ಸಿದ್ಧಾಂತಗಳು. ಆದ್ದರಿಂದ ಇವುಗಳನ್ನೆಲ್ಲ ಬಿಟ್ಟು ನನ್ನ ದೇಹವನ್ನು ಗಟ್ಟಿಯಾಗಿ, ಸುಂದರವಾಗಿ ಇಟ್ಟುಕೊಳ್ಳುವುದೇ ಸರಿ, ಅದರ ತೃಪ್ತಿಯೇ ಬದುಕಿನ ಉದ್ದೇಶ’.

ಹೀಗೆ ನಂಬಿದ ಆತ ಪರಿವಾರದವರನ್ನೆಲ್ಲ ಬಿಟ್ಟು ಕಾಡಿಗೆ ತನ್ನ ಆಯುಧಗಳನ್ನು ಹಿಡಿದುಕೊಂಡು ಹೋದ. ತನಗೆ ಮನಬಂದಂತೆ, ಮನಬಂದಲ್ಲಿ ಕಾಡಿನಲ್ಲಿ ಒಂಟಿಯಾಗಿ ತಿರುಗಾಡುತ್ತ, ತನಗೆ ಇಷ್ಟ ಬಂದ ಪ್ರಾಣಿಯನ್ನು ಹೊಡೆದು ಕೊಂದು ಅದರ ಮಾಂಸವನ್ನು ತಿಂದು, ತಾನೂ ಒಂದು ಬಲಿಷ್ಠ ಪ್ರಾಣಿಯಂತೆ ಬದುಕಿಬಿಟ್ಟ. ಹೀಗೆ ಹಿಮಾಲಯ ಪರ್ವತ ಶ್ರೇಣಿಗಳನ್ನು, ನದಿತೀರಗಳನ್ನು ಸುತ್ತುತ್ತ ಇರುವಾಗ ಅವನಿಗೆ ಮತ್ತೊಂದು ಆಲೋಚನೆ ಬಂದಿತು. ‘ಈಗ ಹತ್ತು ವರ್ಷಗಳಲ್ಲಿ ನನ್ನ ದೇಹ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಮೊದಲಿನ ಶಕ್ತಿ ಕಡಿಮೆಯಾದಂತೆ ಕಾಣುತ್ತದೆ. ಮುಂದೆ ನನಗೆ ಪ್ರಾಣಿಗಳನ್ನು ಬೆನ್ನತ್ತಿ ಬೇಟೆಯಾಡುವ ಶಕ್ತಿ ಉಳಿಯದೆ ಹೋಗಬಹುದು. ಆಗ ಆಹಾರಕ್ಕೆ ಏನು ಮಾಡುವುದು?’ ಹೀಗೆ ಚಿಂತಿಸಿ ಅರಣ್ಯದ ಒಂದು ಭಾಗದಲ್ಲಿ ತಾನೇ ಬಲವಾದ ಬೇಲಿ ಕಟ್ಟಿದ. ನಂತರ ತನಗೆ ಬೇಕಾದ ತರತರಹದ ಪ್ರಾಣಿಗಳನ್ನು ಆ ಪ್ರದೇಶದಲ್ಲಿ ತುಂಬಿಸಿದ. ಅದು ಸಾಕಷ್ಟು ವಿಶಾಲ ಪ್ರದೇಶವಾದ್ದರಿಂದ ಪ್ರಾಣಿಗಳು ಅಲ್ಲಿಯೇ
ಬೆಳೆಯುತ್ತಿದ್ದವು. ಆತ ಹೆಚ್ಚು ಸುತ್ತಾಡದೇ ತನಗೆ ಬೇಕಾದ ಪ್ರಾಣಿಯನ್ನು ಕೊಂದು ಬದುಕು ಸಾಗಿಸಿದ.

ಕಾಲ ಕಳೆದಂತೆ, ಅವನ ಶಕ್ತಿ ಕುಂದಿತು. ಕರ್ಮ ಸವೆಯುತ್ತ ಬಂದಿತು. ಅವನಿಗೆ ಮೇಲಕ್ಕೆ ಏಳಲೂ ತ್ರಾಣವಿರಲಿಲ್ಲ. ಎದ್ದು ಬಾಣ ಹೂಡಿ, ಪ್ರಾಣಿಗಳನ್ನು ಕೊಂದು, ಅದನ್ನು ಬೇಯಿಸುವುದಂತೂ ಅಸಾಧ್ಯವಾಯಿತು. ಸಹಾಯಕ್ಕೆ ಅವನ ಹತ್ತಿರ ಯಾರೂ ಇಲ್ಲ. ಈಗ ಅವನಿಗೆ ಪರಿವಾರದ, ತನ್ನ ಜನರ ಅವಶ್ಯಕತೆ ತಿಳಿಯಿತು. ಆದರೆ ಏನೂಮಾಡುವಂತಿರಲಿಲ್ಲ. ಬದುಕಲೂ ಆಗದೇ, ಸಾಯಲೂ ಸಾಧ್ಯವಿಲ್ಲದೆ ಒದ್ದಾಡುತ್ತಿದ್ದ. ಬರಬರುತ್ತ ಕಣ್ಣು ಕೂಡ ಕಾಣದಂತಾಯಿತು. ಹೊಟ್ಟೆಗೆ ಆಹಾರವಿಲ್ಲದೆ ದೇಹ ಸೊರಗಿ ಪ್ರೇತದಂತಾಯಿತು. ಯಾವ ದೇಹವನ್ನೇ ಶಾಶ್ವತ ಎಂದು ನಂಬಿದ್ದನೋ ಅದು ಅವನಿಗೇ ಭಾರವಾಗಿತ್ತು.

ಈ ಸಮಯದಲ್ಲಿ ಸಿವಿರಾಷ್ಟ್ರದ ರಾಜ ಸಿವಿರಾಜ ಕಾಡಿನ ಪ್ರಾಣಿಗಳನ್ನು ಬೇಟೆಯಾಡಿ ಮಾಂಸತಿನ್ನಬೇಕೆಂದು ಕಾಡಿಗೆ ಬಂದ. ಅಲ್ಲಿ ಸುತ್ತಾಡುತ್ತಿರುವಾಗ ಹೆಣದಂತಿದ್ದ ಈ ಮನುಷ್ಯನನ್ನು ಕಂಡು ಗಾಬರಿಯಾದ, ‘ಯಾರು ನೀನು?’ ಎಂದು ಕೇಳಿದ. ತನ್ನ ವಿಷಯವನ್ನು ಹೇಳಿದ. ಆಗ ಆ ಮನುಷ್ಯ, ‘ಮಹಾರಾಜ, ನಾನೂ ಪ್ರಾಣಿ ಮಾಂಸಕ್ಕಾಗಿಯೇ ಬಂದವನು. ದೇಹವೇ ಶಾಶ್ವತ ಎಂದು ನಂಬಿ ಸಂಬಂಧಗಳನ್ನೆಲ್ಲ ಕಡಿದುಕೊಂಡು ಇಲ್ಲಿಗೆ ಬಂದು ಹೆಣವಾಗಿ ಬಿದ್ದಿದ್ದೇನೆ’ ಎಂದು ಸ್ವಲ್ಪ ಹೊತ್ತಿಗೆ ಸತ್ತು ಹೋದ.

ದೇಹ ಮುಖ್ಯ. ಆದರೆ ಅದೇ ಪ್ರಮುಖವಲ್ಲ. ಸಂಬಂಧಗಳು, ಪ್ರೀತಿ, ಕರುಣೆಯ ನಂಟುಗಳುದೇಹಕ್ಕೊಂದು ಆಸರೆ ನೀಡುತ್ತವೆ, ಬದುಕಿಗೊಂದು ಅರ್ಥಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT