ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸುದೇವನ ಕಥೆ

Last Updated 25 ಮೇ 2020, 2:35 IST
ಅಕ್ಷರ ಗಾತ್ರ

ಉಪಸಾಗರ ದುಃಖರಹಿತನಾಗಿ ರಾಜ್ಯಭಾರ ಮಾಡುತ್ತಿದ್ದಾಗ ಅವರ ಮಗನಾದ ವಾಸುದೇವ ಹಾಗೂ ಹತ್ತು ಮಕ್ಕಳು ಮತ್ತು ಅವರ ಮಕ್ಕಳು ಉದ್ಧಟರಾದರು. ಅವರು ಸದಾ ಕುಡಿತ, ಜೂಜುಗಳಲ್ಲಿ ಮುಳುಗಿ ಹೋಗಿ ದರ್ಪ ತೋರಿಸುತ್ತ ಕಾಲ ಕಳೆಯುತ್ತಿದ್ದರು. ಒಂದು ದಿನ ಅವರಲ್ಲೊಬ್ಬ, ‘ನಮ್ಮ ನಗರದ ಹೊರಗೆ ಇರುವ ಋಷಿ ಕೃಷ್ಣ ದ್ವೈಪಾಯನನಿಗೆ ದಿವ್ಯಚಕ್ಷು’ ಇದೆ ಎಂದು ಹೇಳುತ್ತಾರೆ. ‘ಬನ್ನಿ, ಅದನ್ನು ಪರೀಕ್ಷೆ ಮಾಡೋಣ’ ಎಂದು ತಮ್ಮಲ್ಲಿಯೇ ಒಬ್ಬನಾದ ರಾಜಕುಮಾರನನ್ನು ಹುಡುಗಿಯಂತೆ ಸಿಂಗರಿಸಿ, ಹೊಟ್ಟೆಗೆ ದಪ್ಪ ಬಟ್ಟೆ ಕಟ್ಟಿ ಗರ್ಭಿಣಿಯಂತೆ ಮಾಡಿ ಕೃಷ್ಣ ದ್ವೆಪಾಯನನ ಕಡೆಗೆ ಕರೆ ತಂದರು.

‘ಭಂತೇ, ಈ ಮಹಿಳೆ ಏನು ಹೆರುತ್ತಾಳೆ?’ ಎಂದುಕೇಳಿದರು. ಜ್ಞಾನಿಯಾದ ಮುನಿ, ‘ಈ ವಂಶದ ರಾಜಕುಮಾರರ ವಿನಾಶ ಹತ್ತಿರವೇ ಬಂದಿದೆ’ ಎಂಬುದನ್ನು ತಿಳಿದು, ‘ರಾಜಕುಮಾರರೆ, ಆಗುವುದು ಆಗಿಯೇ ಆಗುತ್ತದೆ. ಅದನ್ನು ಈಗೇಕೆ ತಿಳಿಯಬಯಸುತ್ತೀರಿ?’ ಎಂದು ಕೇಳಿದ. ಅದಕ್ಕೆ, ‘ನಿಮಗೇನೋ ದಿವ್ಯಚಕ್ಷು ಇದೆಯಂತೆ, ಅದನ್ನು ಪರೀಕ್ಷಿಸಬೇಕು. ನೀವು ಹೇಳಿದ್ದು ತಪ್ಪಾದರೆ ನಿಮ್ಮ ತಲೆ ಭುಜದ ಮೇಲೆ ಇರುವುದಿಲ್ಲ’ ಎಂದರು. ಮುನಿ, ‘ಈಕೆ ಇಂದಿಗೆ ಸರಿಯಾಗಿ ಏಳನೇ ದಿನ ಒಂದು ಕಡ್ಡಿಯ ತುಂಡನ್ನು ಹೆರುತ್ತಾಳೆ, ಆ ಕಡ್ಡಿಯ ತುಂಡಿನಿಂದಲೇ ನಿಮ್ಮ ಇಡೀ ವಂಶ ನಾಶವಾಗಿ ಹೋಗುತ್ತದೆ. ಆದ್ದರಿಂದ ಆ ಕಡ್ಡಿಯ ತುಂಡನ್ನು ತಕ್ಷಣವೇ ಸುಟ್ಟು ಬೂದಿ ಮಾಡಿ ನದಿಯಲ್ಲಿ ಹಾಕಿಬಿಡಿ’ ಎಂದ. ವಾಸುದೇವ ಕುಮಾರರು ಅಬ್ಬರಿಸಿದರು, ‘ನಮಗೆ ಬುದ್ಧಿ ಹೇಳುವಷ್ಟು ಮತ್ತು ನಮ್ಮ ಮನೆತನದ ನಾಶವನ್ನು ಹೇಳುವಷ್ಟು ದೊಡ್ಡವನೇ ನೀನು? ನಮ್ಮ ವಂಶಕ್ಕೇನಾದರೂ ಆಗಲಿ, ನಿನ್ನ ಆಯುಷ್ಯ ಮಾತ್ರ ಮುಗಿಯಿತು’ ಎಂದವರೇ ಅವನನ್ನು ಹೊಡೆದು ಹಗ್ಗದಿಂದ ಬಿಗಿದು ಕೊಂದೇಬಿಟ್ಟರು.

ಈ ವಿಷಯವನ್ನು ಕೇಳಿದ ವಾಸುದೇವ ತನ್ನ ಮಕ್ಕಳ ಅಪಚಾರಕ್ಕೆ ದುಃಖಪಟ್ಟ. ಗರ್ಭಿಣಿ ಎಂದು ತೋರಿಸಿದ ಹುಡುಗನನ್ನು ಕಾವಲಿರಿಸಿ ಏಳನೆಯ ದಿನ ಅವನ ಗರ್ಭದಿಂದ ಬಂದ ಕಡ್ಡಿಯನ್ನು ಸುಟ್ಟು ಬೂದಿಯನ್ನು ನದಿಗೆ ಹಾಕಿ ಬಿಟ್ಟ. ಆದರೆ ಅದು ಪ್ರವಾಹಕ್ಕೆ ಸಿಕ್ಕು ಸಾಗದೆ, ನದೀತೀರಕ್ಕೆ ಬಂದು ನಿಂತಿತು. ಆ ಬೂದಿಯಿಂದ ಒಂದು ಹರಳುವೃಕ್ಷ ಹುಟ್ಟಿತು.

ಒಂದು ದಿನ ವಾಸುದೇವ ತನ್ನ ಸಮಸ್ತ ಪರಿವಾರವನ್ನು ನದಿ ಸ್ನಾನಕ್ಕೆಂದು ಕರೆದುಕೊಂಡು ಹೋದ. ಅವನ ಮಕ್ಕಳು ಚೆನ್ನಾಗಿ ಕುಡಿದು ಹೊಡೆದಾಡತೊಡಗಿದರು. ಒಬ್ಬ ಹರಳುವೃಕ್ಷದ ಪುಟ್ಟ ಕೊಂಬೆಯನ್ನೆಳೆದ. ಅದೊಂದು ಒನಕೆಯಾಯಿತು. ಅದನ್ನು ಕಂಡು ಪ್ರತಿಯೊಬ್ಬರು ಒಂದೊಂದು ಕೊಂಬೆಯನ್ನು ಕಿತ್ತು, ಬದಲಾದ ಒನಕೆಗಳಿಂದ ಹೊಡೆದಾಡಿ ಸತ್ತರು. ಅದನ್ನು ಕಂಡು ವಾಸುದೇವ, ಬಲದೇವ, ತನ್ನ ತಂಗಿ ಅಂಜನಾದೇವಿ ಮತ್ತು ಪುರೋಹಿತನನ್ನು ಕರೆದುಕೊಂಡು ಅಲ್ಲಿಂದ ಓಡಿ ಕಾಲಮತ್ತಿಕ ಅಡವಿಯನ್ನು ಸೇರಿದರು. ಬಲದೇವ ಅಲ್ಲಿಯ ಮಲ್ಲನೊಡನೆ ಹೋರಾಡಿ ಸತ್ತು ಹೋದ. ವಾಸುದೇವ, ಅಂಜನಾದೇವಿ ಮತ್ತು ಪುರೋಹಿತರೊಂದಿಗೆ ಪ್ರತ್ಯಂತ ಗ್ರಾಮಕ್ಕೆ ಬಂದ. ಪುರೋಹಿತ ಮತ್ತು ಸೋದರಿ ಆಹಾರ ತರಲು ಹೋದಾಗ ವಾಸುದೇವ ಗಿಡದ ಕೆಳಗೆ ಪೊದೆಯ ಮರೆಯಲ್ಲಿ ಮಲಗಿದ. ಆಗ ಜರಾ ಎಂಬ ಬೇಟೆಗಾರ ಅದು ಹಂದಿ ಇರಬಹುದೆಂದು ಬಾಣಬಿಟ್ಟ. ಅದು ವಾಸುದೇವನ ಅಂಗಾಲನ್ನು ಸೀಳಿತು. ಗಾಬರಿಯಾದ ಬೇಡನಿಗೆ ಸಮಾಧಾನ ಮಾಡಿ, ಪುರೋಹಿತನಿಗೆ ಮತ್ತು ತಂಗಿಗೆ ಬೋಧನೆ ಮಾಡಿ ಪ್ರಾಣ ತ್ಯಾಗ ಮಾಡಿದ.

ಇದು ಎರಡು ಸಾವಿರದ ಆರುನೂರು ವರ್ಷಗಳ ಹಿಂದಿನ ಕಥೆ. ಇದು ನಮ್ಮ ಕೃಷ್ಣನ ಕಥೆಯ ರೂಪಾಂತರದಂತಿಲ್ಲವೇ? ಹೇಗೆ ಒಂದು ಅಸಾಮಾನ್ಯವಾದ ಕಥೆ ಜನಮಾನಸವನ್ನು ತಲುಪುತ್ತ, ಶತಮಾನಗಳಾಚೆ ಮತ್ತೊಂದುಕಥೆಯಾಗಬಹುದೆಂಬುದಕ್ಕೆ ಇದೊಂದು ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT