ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎರಡು ಮಾದರಿಗಳು

Last Updated 10 ಜನವರಿ 2022, 19:31 IST
ಅಕ್ಷರ ಗಾತ್ರ

ತನ್ನ ಬೆವರಿನ ಕೊಳದಿ ತಾಂ ಮುಳುಗಿ ತೇಲುತ್ತೆ |

ಧನ್ಯನಾನೆನ್ನುವನದೊರ್ವ ಸ್ವತಂತ್ರನ್ ||

ಪುಣ್ಯತೀರ್ಥದೊಳಿಳಿದು ಕರಗಲ್ ಸ್ವತಂತ್ರ ತಾನ್ |

ಎನ್ನುವವನಿನ್ನೊರ್ವ – ಮಂಕುತಿಮ್ಮ || 538 ||

ಪದ-ಅರ್ಥ: ಧನ್ಯನಾನೆನ್ನುವನದೊರ್ವ=ಧನ್ಯ+ನಾನು+ಎನ್ನುವನು+ಅದು+ಒರ್ವ(ಒಬ್ಬ), ಕರಗಲ್=ಕರಗಲು, ಎನ್ನುವವನಿನ್ನೊರ್ವ=ಎನ್ನುವವನು+ಇನ್ನೊರ್ವ (ಇನ್ನೊಬ್ಬ)

ವಾಚ್ಯಾರ್ಥ: ತನ್ನ ಪರಿಶ್ರಮದ ಬೆವರಿನ ಕೊಳದಲ್ಲಿ ಮುಳುಗಿ, ತೇಲುತ್ತ, ತಾನು ಧನ್ಯನಾದೆ ಎನ್ನುವವನೊಬ್ಬ ಸ್ವತಂತ್ರ. ಪುಣ್ಯತೀರ್ಥಗಳಲ್ಲಿ ಇಳಿದು ಕರಗಿ ತಾನು ಸ್ವತಂತ್ರ ಎನ್ನುವವನು ಮತ್ತೊಬ್ಬ.

ವಿವರಣೆ: ಬದುಕಿನಲ್ಲಿ ತಮ್ಮ ಗಮ್ಯವನ್ನು ಪಡೆಯಲು ಜನರಿಗೆ ಅನೇಕ ದಾರಿಗಳಿವೆ. ರಾಮಣ್ಣ ಹುಟ್ಟಿದ್ದೇ ಬಡತನದ ಕುಲುಮೆಯಲ್ಲಿ. ಬೆಳೆದದ್ದೇ ಪೆಟ್ಟು ತಿನ್ನುತ್ತ. ರಾಮಣ್ಣನ ತಂದೆ ಎರಡೆಕರೆ ಜಮೀನಿನ ಯಜಮಾನ. ಮಳೆಯ ಮೇಲೆ ಬೆಳೆ. ಹೀಗಾಗಿ ಉಪವಾಸ ತಪ್ಪಿದ್ದಲ್ಲ. ಆದರೆ ತಂದೆ ಮಗನಿಗೆ ನೀತಿ, ನ್ಯಾಯಗಳ ಬೋಧನೆ ಮಾಡಿದರು. ಅದು ರಾಮಣ್ಣನ ಬದುಕಿನಲ್ಲಿ ನೆಲೆಯಾಗಿ ನಿಂತಿತು. ರಾಮಣ್ಣ ಕಷ್ಟಪಟ್ಟು ಓದಿದ. ಶಾಲಾ ಶಿಕ್ಷಣ ಮುಗಿದ ಮೇಲೆ ಮುಂದೆ ಕಲಿಯಲಾಗದೆ ಕೆಲಸಕ್ಕೆ ಸೇರಿದ. ಅತ್ಯಂತ ಪರಿಶ್ರಮದಿಂದ, ಬೇರೆಯವರಿಗೆ ತನ್ನಿಂದ ಅನ್ಯಾಯವಾಗದಂತೆ ಬದುಕಿದ. ದುಡ್ಡು ದುಡ್ಡು ಕೂಡಿಟ್ಟ. ಮಕ್ಕಳಿಗೆ ತನ್ನ ಶಕ್ತಿಯಂತೆ ಶಿಕ್ಷಣ ಕೊಟ್ಟ. ಅವರನ್ನು ಬೆಳೆಸಿ ಒಂದು ನೆಲೆಗೆ ತಂದ. ಪುಟ್ಟ ಮನೆ ಕಟ್ಟಿಸಿದ. ಮಕ್ಕಳಿಗೆ ಮದುವೆ ಮಾಡಿದ. ಇಡೀ ಜನ್ಮ ಸವೆದು ಹೋಯಿತು, ಮನೆಯನ್ನು ಒಂದು ಹಂತಕ್ಕೆ ತರಲು. ನಿವೃತ್ತಿ ಪಡೆದು ಮನೆಯಲ್ಲಿ ಕುಳಿತ ರಾಮಣ್ಣ ತನ್ನ ಹಿಂದಿನ ಬದುಕನ್ನು ನೆನೆಸಿಕೊಂಡು ಸಂತೋಷಪಟ್ಟ, ಮಕ್ಕಳೀಗ ಸಮರ್ಥರಾಗಿ ಬೆಳೆಯುತ್ತಿದ್ದಾರೆ. ಈಗ ತಾನು ಸ್ವತಂತ್ರ. ಯಾರ ಹಂಗಿಗೂ ಬೀಳದೆ, ಯಾವ ಊರ ಉಸಾಬರಿಗೂ ಹೋಗದೆ, ತನ್ನ ಬದುಕನ್ನು ಮಾತ್ರ ವೃತದಂತೆ ನಡೆಸಿದ ರಾಮಣ್ಣ ಧನ್ಯತೆಯನ್ನು ಅನುಭವಿಸಿದ.

ಭೀಮಣ್ಣನ ಮನೆ ಸ್ಥಿತಿ ಇದಕ್ಕಿಂತ ಬೇರೆಯಾಗಿರಲಿಲ್ಲ. ಅವನಿಗೂ ಎರಡು ಹೊತ್ತಿನ ಊಟ ಖಾತ್ರಿ ಇರಲಿಲ್ಲ. ಅವನೂ ಹಳ್ಳಿಯ ಶಾಲೆಗೆ ಹೋದ. ಶಾಲೆಯ ಪಕ್ಕದಲ್ಲಿ ಒಂದು ದೇವಸ್ಥಾನ. ಅವನಿಗೆ ಅರ್ಚಕರ ಜೊತೆ ಇಷ್ಟವಾಯಿತು. ಅವರು ಭೀಮಣ್ಣನಿಗೆ ರಾಮಾಯಣದ, ಮಹಾಭಾರತದ ಕಥೆಗಳನ್ನು ಹೇಳಿದರು. ಮಹಾನ್ ವ್ಯಕ್ತಿಗಳ ಜೀವನ ಸಾಧನೆಗಳನ್ನು ವರ್ಣಿಸಿದರು. ಭೀಮಣ್ಣನಿಗೆ ತಾನೂ ಅವರಂತಾಗುವ ಆಸೆ ಮೊಳೆಯಿತು. ಸಮಾಜ ಸೇವೆಗೆ ಮುಖ ಮಾಡಿದ, ಮತ್ತೊಬ್ಬರ ನೋವಿಗೆ ಧ್ವನಿಯಾದ. ಅವನು ಬೆಳೆದಂತೆ ಅಹಂಕಾರ ಕರಗಿ ಹೋಗಿ, ತಾನು ಇರುವುದೇ ಸಮಾಜಕಾರ್ಯಕ್ಕಾಗಿ ಎಂದು ದುಡಿದ. ಜನರನ್ನು, ಮನಗಳನ್ನು ಕೂಡಿಸಿದ, ಮನಸ್ಥಿತಿ ಭೇದಗಳನ್ನು ತೊಡೆಯಲು ಪ್ರಯತ್ನಿಸಿದ, ಅವನಿಗೆ ನಲವತ್ತು ವರ್ಷ ವಯಸ್ಸಾಗುವುದರೊಳಗೆ ಜನಮಾನ್ಯನಾಗಿದ್ದ, ತರುಣರಿಗೆ ಮಾರ್ಗದರ್ಶಿ, ಆದರ್ಶವಾಗಿದ್ದ. ದಿನದಿಂದ ದಿನಕ್ಕೆ ಊರೂರು ಸುತ್ತುತ್ತ ಜನಜಾಗೃತಿ ಮಾಡಿದ. ಅವನಿಗೆ ವೈಯಕ್ತಿಕವಾಗಿ ಯಾವ ಆಸೆಗಳೂ ಇಲ್ಲ. ಅವನ ಜೀವನ ಧನ್ಯ ಎಂದರು ಜನರು.

ಪ್ರಪಂಚದಲ್ಲಿ ಎರಡು ಬಗೆಯ ಜನರೂ ಇದ್ದಾರೆ. ಯಾರು ಸರಿ, ಯಾರು ತಪ್ಪು? ಕಗ್ಗ ತೀರ್ಮಾನ ಕೊಡುವುದಿಲ್ಲ. ಎರಡು ಬಗೆಯ ಜನರೂ ಇದ್ದಾರೆಂದು ವಾಸ್ತವವನ್ನು ಹೇಳುತ್ತದೆ. ರಾಮಣ್ಣನಂತಹ ಜನರೇ ಪ್ರಪಂಚದಲ್ಲಿ ಹೆಚ್ಚು. ಅವರದು ವ್ಯಷ್ಟಿಜೀವನ, ಸ್ವಕೇಂದ್ರಿತವಾದದ್ದು. ಭೀಮಣ್ಣನಂತಹವರು ಅಪರೂಪ. ಅವರದುಸಮಷ್ಟಿ ಜೀವನ, ಸಮಾಜ ಕೇಂದ್ರಿತವಾದದ್ದು. ಇಬ್ಬರೂ ಸ್ವತಂತ್ರರು, ತಮ್ಮ ದಾರಿ ತುಳಿಯಲು. ಇವು ಎರಡು ಮಾದರಿಗಳು. ಆಯ್ಕೆ ನಮ್ಮದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT