ಬಿಸಿಯೂಟದ ಜತೆ ಆಟೋಟದ ಸಂಭ್ರಮ..!

ಶನಿವಾರ, ಮೇ 25, 2019
33 °C

ಬಿಸಿಯೂಟದ ಜತೆ ಆಟೋಟದ ಸಂಭ್ರಮ..!

Published:
Updated:
Prajavani

ಬರ ಬೆಂಬಿಡದೆ ವಿಜಯಪುರಿಗರನ್ನು ಕಾಡುತ್ತಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ, ಜಿಲ್ಲೆಯ ಆಯ್ದ ಕೆಲ ಶಾಲೆಗಳಲ್ಲಿ, ಬೇಸಿಗೆ ರಜೆಯಲ್ಲೂ ಬಿಸಿಯೂಟ ಮುಂದುವರೆಸಿದೆ. ಸಹಸ್ರ, ಸಹಸ್ರ ಸಂಖ್ಯೆಯ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.

ಬಿಸಿಯೂಟಕ್ಕೆಂದು ಶಾಲೆಗೆ ಬರುವ ಮಕ್ಕಳಿಗಾಗಿ ವಿಭಿನ್ನ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ ಗ್ರಾಮದ ಹೆಣ್ಣು ಮಕ್ಕಳ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಎಲ್ಲರ ಗಮನವನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಹಿಟ್ನಳ್ಳಿಯ ಈ ಶಾಲೆಯಲ್ಲಿ ಇದೀಗ ನಿತ್ಯವೂ 40ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟದಲ್ಲಿ ಭಾಗಿಯಾಗುತ್ತಿದ್ದಾರೆ. ಶಾಲೆಯ 15 ಮಕ್ಕಳು ಇದರಲ್ಲಿದ್ದರೆ; ಉಳಿದವರು ರಜೆಗೆಂದು ಅಜ್ಜ–ಅಜ್ಜಿ ಊರಿಗೆ ಬಂದ ಪರವೂರಿನ ಚಿಣ್ಣರು. ಹೆಣ್ಣು ಮಕ್ಕಳ ಜತೆ ಗಂಡು ಮಕ್ಕಳಿಗೂ ಇಲ್ಲಿನ ಬಿಸಿಯೂಟದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ.

ಇದೀಗ ಕಡು ಬೇಸಿಗೆ. ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಊಟಕ್ಕೆಂದು ಮಧ್ಯಾಹ್ನದ ವೇಳೆ, ನೆತ್ತಿ ಸುಡುವ ಕೆಂಡದಂಥಹ ಪ್ರಖರ ಬಿಸಿಲಲ್ಲಿ ಚಿಣ್ಣರು ಶಾಲಾ ಆವರಣಕ್ಕೆ ನಡೆದು ಬರಲಿಕ್ಕೆ ತ್ರಾಸಾಗಲಿದೆ. ಇದನ್ನು ಮನಗಂಡ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ಹುಡೇದ ತಮ್ಮದೇ ಕಾರ್ಯ ಯೋಜನೆಯನ್ನು ರೂಪಿಸಿಕೊಂಡು, ಸರ್ಕಾರದ ಆಶಯ ಈಡೇರಿಕೆಗೆ ಮುಂದಾಗಿದ್ದಾರೆ.

ಬೆಳಿಗ್ಗೆ 9ರ ವೇಳೆಗೆ ವಿಜಯಲಕ್ಷ್ಮೀ ಶಾಲೆಗೆ ಹಾಜರಾಗಲಿದ್ದಾರೆ. ಇದರ ಬೆನ್ನಿಗೆ ಮಕ್ಕಳು ಖುಷಿಯಿಂದ ಶಾಲೆಗೆ ಕುಣಿಯುತ್ತಾ ಬರೋದು ವಿಶೇಷ. ಅಡುಗೆ ಸಿಬ್ಬಂದಿಯ ಜತೆ ಹುಡೇದ ನೇಮಿಸಿಕೊಂಡ ಅತಿಥಿ ಶಿಕ್ಷಕಿಯೂ ಹಾಜರಾಗುತ್ತಾರೆ.

ಅಡುಗೆ ಸಿಬ್ಬಂದಿ ಒಂದೆಡೆ ಬಿಸಿಯೂಟ ತಯಾರಿಯಲ್ಲಿ ಮಗ್ನರಾದರೆ, ಶಾಲೆಯ ತಂಪಿನ ವಾತಾವರಣ, ನೆರಳಲ್ಲಿ ವಿಜಯಲಕ್ಷ್ಮೀ ಹುಡೇದ, ಅತಿಥಿ ಶಿಕ್ಷಕಿ ಅಂಜನಾ ಬೂಸಾರಿ ಮಕ್ಕಳ ಜತೆ ಪಠ್ಯೇತರ ಚಟುವಟಿಕೆಯಲ್ಲಿ ತಲ್ಲೀನರಾಗುತ್ತಾರೆ.

ಬಿಸಿಯೂಟಕ್ಕೆ ಬರುವ ಮಕ್ಕಳ ಪಠ್ಯೇತರ ಚಟುವಟಿಕೆಯ ಭಾಗವಾದ ಆಟೋಟಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮೀ ಹುಡೇದ ಕೆಲ ಆಟಿಕೆ ಸಾಮಗ್ರಿಯನ್ನು ಸ್ವತಃ ಖರೀದಿಸಿ ತಂದಿದ್ದಾರೆ. ಮಕ್ಕಳಿಗಾಗಿ ಉಚಿತವಾಗಿ ಪೆನ್ನು, ಪೆನ್ಸಿಲ್‌, ರಬ್ಬರ್‌, ನೋಟ್‌ ಪುಸ್ತಕ ತಂದು ಹಂಚಿದ್ದಾರೆ. ಅತಿಥಿ ಶಿಕ್ಷಕಿಗೂ ತಾವೇ ತಮ್ಮ ಸಂಬಳದಲ್ಲಿ ಗೌರವಧನ ನೀಡಿ, ಪ್ರೋತ್ಸಾಹ ತುಂಬಿದ್ದಾರೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೂ ಶಾಲಾ ಆವರಣದಲ್ಲಿ ಚಿಣ್ಣರ ಕಲರವವೇ ಮೇಳೈಸಿರುತ್ತದೆ. ಗುಂಪು ಗುಂಪಾಗಿ ಮಕ್ಕಳು ವಿವಿಧ ಆಟೋಟಗಳಲ್ಲಿ ತಲ್ಲೀನರಾಗಿರುವ ಚಿತ್ರಣ ಗೋಚರಿಸುತ್ತದೆ. ಚೆಸ್‌, ಕೇರಂ, ಹಾವು–ಏಣಿ, ಲಗೋರಿ... ಚಿತ್ರಕಲೆ ಬಿಡಿಸುವಿಕೆ, ರಿಂಗ್‌ನ ಎಸೆದಾಟ ಇನ್ನಿತರೆ ಚಟುವಟಿಕೆ ಕಣ್ಣಿಗೆ ಕಾಣುತ್ತವೆ.

ಈ ಆಟೋಟದ ನಡುವೆಯೂ ಮಕ್ಕಳನ್ನು ಒಟ್ಟಾಗಿ ಕೂರಿಸಿಕೊಂಡು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬೋಧನೆಯೂ ನಡೆಯಲಿದೆ. ಇದು ಮಕ್ಕಳ ಮನ ಮುಟ್ಟುತ್ತಿದೆ. ರಾಷ್ಟ್ರ, ರಾಜ್ಯ, ಜಿಲ್ಲೆಯ ಪರಿಚಯ, ಇತಿಹಾಸ, ಭೌಗೋಳಿಕ ಮಹತ್ವ ಸೇರಿದಂತೆ ಇನ್ನಿತರೆ ವಿಷಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸಿಕೊಡುವ ಯತ್ನ ಸಾಂಗೋಪಸಾಂಗವಾಗಿ ನಡೆದಿದೆ.

ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ಹುಡೇದ ಒಬ್ಬರೇ ಅಡುಗೆ ಸಿಬ್ಬಂದಿ ಜತೆ ಬಿಸಿಯೂಟ ನಿಭಾಯಿಸುತ್ತಿದ್ದಾರೆ. ಮಕ್ಕಳ ವಿಕಸನಕ್ಕಾಗಿ ಸ್ವಂತ ಖರ್ಚಿನಲ್ಲಿ ವಿಭಿನ್ನ ಆಯಾಮದ ಚಟುವಟಿಕೆ ಹಮ್ಮಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !