ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದುಸಿರು

Last Updated 13 ಮೇ 2019, 18:46 IST
ಅಕ್ಷರ ಗಾತ್ರ

ಪುಲಿ ಸಿಂಗದುಚ್ಛ್ಪಾಸ, ಹಸು ಹುಲ್ಲೆ ಹಯದುಸಿರುಹುಳು ಹಾವಿಲಿಯ ಸುಯ್ಲು, ಹಕ್ಕಿ ಹದ್ದುಯ್ಲು ||ಕಲೆತಿರ್ಪವೀಯೆಲ್ಲ ನಾಮುಸಿರ್ವೆಲರಿನಲಿ | ಕಲಬೆರಕೆ ಜಗದುಸಿರು – ಮಂಕುತಿಮ್ಮ || 131

||ಶಬ್ದಾರ್ಥ: ಸಿಂಗದುಚ್ಛ್ಪಾಸ,=ಸಿಂಗದ(ಸಿಂಹದ)+ಉಚ್ಛ್ಪಾಸ(ಉಸಿರು), ಹಯದುಸಿರು=ಹಯ(ಕುದುರೆ)+ಉಸಿರು, ಹಾವಿಲಿಯ=ಹಾವು+ಇಲಿಯ, ಸುಯ್ಲು=ನಿಟ್ಟುಸಿರು, ಹದ್ಯುಯ್ಲು=ಹದ್ದು+ಉಯ್ಲು(ಹುಯಿಲು) ಕಲೆತೀರ್ಪವೀಯೆಲ್ಲ=ಕಲೆತಿರ್ಪವು(ಬೆರೆತುಹೋಗಿವೆ)+ಈ+ಎಲ್ಲ, ನಾಮುಸಿರ್ವೆಲರಿನಲಿ=ನಾವು+ಉಸಿರ್ವ(ಉಸುರುವ)+ಎಲರಿನಲಿ(ಗಾಳಿಯಲಿ)
ವಾಚ್ಯಾರ್ಥ: ಹುಲಿ, ಸಿಂಹಗಳ ಉಸಿರು, ಹಸು, ಜಿಂಕೆ ಮತ್ತು ಕುದುರೆಗಳ ಉಸಿರು, ಹುಳುಗಳು, ಹಾವು ಮತ್ತು ಇಲಿಗಳ ನಿಟ್ಟುಸಿರು, ಹಕ್ಕಿ ಮತ್ತು ಹದ್ದಿನ ಕೂಗು ಇವೆಲ್ಲ ನಾವು ಉಸಿರಾಡುವ ಗಾಳಿಯಲ್ಲಿ ಸೇರಿಕೊಂಡಿವೆ. ಆದ್ದರಿಂದ ಈ ಜಗದ ಉಸಿರು ಕಲಬೆರಕೆಯಾದದ್ದು.

ವಿವರಣೆ: ನಾವು ಉಸಿರಾಡುವ ಗಾಳಿ ಎಲ್ಲಿಂದ ಬಂದದ್ದು? ಹೊಸದಾದ ಗಾಳಿ ಪ್ರಪಂಚದಲ್ಲಿ ಸೃಷ್ಟಿಯಾಗುತ್ತಿದೆಯೋ ಅಥವಾ ಪ್ರಪಂಚದ ಸೃಷ್ಟಿಯಾದಾಗ ಇದ್ದ ಗಾಳಿ ಅದೇ ಎಲ್ಲೆಡೆಗೆ ಸಂಚರಿಸುತ್ತಲಿದೆಯೋ? ಇತ್ತೀಚೆಗೆ ಖ್ಯಾತ ಭೌತವಿಜ್ಞಾನಿ ಲಾರೆನ್ಸ್ ಕ್ರಾಸ್ ಒಂದು ಪ್ರಸಿದ್ಧ ಲೇಖನದಲ್ಲಿ ಇದಕ್ಕೆ ಉತ್ತರವಾಗಿ ಇದು ಪ್ರತಿಶತ ನೂರಕ್ಕೆ ನೂರು ಸತ್ಯ ಎಂದಿದ್ದಾರೆ. ಅವರ ಪ್ರಕಾರ ನಾವು ಉಸಿರಾಡುವ ಗಾಳಿಯ ಅವೇ ಅಣುಗಳು ನೂರಾರು ಶತಮಾನಗಳಿಂದ ಪ್ರಪಂಚದಲ್ಲಿ ಸುತ್ತಾಡುತ್ತಿವೆ. ಅವರ ಸಿದ್ಧಾಂತದ ಪ್ರಕಾರ ನಮ್ಮ ಉಸಿರಿನ ನೂರಕ್ಕೆ ತೊಂಭತ್ತೊಂಭತ್ತು ಭಾಗ ಪ್ರಪಂಚದ ಬೇರೆಯವರ ಉಸಿರಿನಿಂದ ಬಂದ ಅಣುಗಳೇ ಅಗಿವೆ. ಅಂದರೆ ನಾನು ಇಂದು ಉಸಿರಾಡುವ ಗಾಳಿಯನ್ನೇ ಹಿಂದೆ ರಾಮ, ಕೃಷ್ಣ, ಬುದ್ಧ, ಮಹಾವೀರ, ಗಾಂಧಿ, ಮಂಡೆಲಾ, ಸಾಕ್ರೆಟಿಸ್, ಪ್ಲೇಟೋ, ವಿವೇಕಾನಂದ, ಇವರೆಲ್ಲ ಉಸಿರಾಡಿದ್ದರು ಎಂದಾಯ್ತು. ಅಷ್ಟೇ ಏಕೆ, ಇಂದು ಪ್ರಪಂಚದಲ್ಲಿ ಬದುಕಿರುವ ಎಲ್ಲರೂ ಹಿಂದೆ ಬದುಕಿ ಹೋದವರ ಮತ್ತು ಇಂದು ಬದುಕುತ್ತಿರುವವರ ಉಸಿರಿನ ಮಿಶ್ರಣವನ್ನೇ ಉಸಿರಾಡುವುದು. ಜೂನ್‌ 10, 1963 ರಂದು ಅಮೆರಿಕದ ರಾಷ್ಟ್ರಪತಿ ಜಾನ್ ಕೆನಡಿ ತಮ್ಮ ಅತ್ಯದ್ಭುತ ಭಾಷಣದಲ್ಲಿ ಹೇಳಿದರು, “ನಾವೆಲ್ಲ ಒಂದೇ ಉಸಿರನ್ನು ಹಂಚಿಕೊಳ್ಳುತ್ತಿದ್ದೇವೆ”. ಇದು ಒಂದು ರೀತಿಯಲ್ಲಿ ಎಲ್ಲ ಮನುಷ್ಯರಲ್ಲಿರುವ ಸಮಾನತೆಯನ್ನು ಹೇಳಿದರೆ, ಇನ್ನೊಂದು ರೀತಿಯಲ್ಲಿ ಇದೇ ಉಸಿರು ಅವರನ್ನೆಲ್ಲ ದೊಡ್ಡವರನ್ನಾಗಿ ಮಾಡಿದ್ದರೆ, ನಾನೇಕೆ ಅವರಂತೆ ದೊಡ್ಡವನಾಗಬಾರದು ಎಂಬ ಪ್ರಚೋದನೆ ನೀಡುತ್ತದೆ. ಕಗ್ಗ ಬಹುಸುಂದರವಾಗಿ ಮನದಲ್ಲಿ ನಿಲ್ಲುವಂತೆ, ನಮ್ಮ ಉಸಿರು ಕಲಬೆರಕೆ ಎನ್ನುತ್ತದೆ. ಈ ಉಸಿರಿನಲ್ಲಿ ಹಿಂದಿನ, ಇಂದಿನ ಮನುಷ್ಯರ ಉಸಿರು ಮಾತ್ರವಲ್ಲ, ಪಶುಪಕ್ಷಿಗಳ ಉಸಿರೂ ಸೇರಿಕೊಂಡಿದೆ. ಹುಲಿ, ಸಿಂಹಗಳ ಉಚ್ಛ್ವಾಸ, ಹಸು, ಜಿಂಕೆ, ಕುದುರೆಗಳ ಉಸಿರು, ಹುಳುಗಳು, ಹಾವು, ಇಲಿಗಳ ನಿಟ್ಟುಸಿರು, ಹಕ್ಕಿ ಹದ್ದುಗಳ ಉಸಿರು, ಇವೂ ನಮ್ಮ ಉಸಿರಿನಲ್ಲಿ ಬೆರೆತುಕೊಂಡಿವೆ. ಪರಸ್ಪರ ಸಹಕಾರಿಗಳಾದ, ಪರಸ್ಪರ ವೈರಿಗಳಾದ ಪ್ರಾಣಿ, ಪಶು ಪಕ್ಷಿಗಳು ಕೂಡ ಅನಿವಾರ್ಯವಾಗಿ, ಅಂತೆಯೇ ಮನುಷ್ಯನೂ ಕೂಡ ಅದೇ ಉಸಿರನ್ನು ಹಂಚಿಕೊಳ್ಳುವುದು ಪ್ರಪಂಚದ ನಿಯಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT