ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿನಗೆ ಹೋರಾಟ ಬೇಕೋ, ನೆಮ್ಮದಿ ಬೇಕೋ..’

ಸೇನಾನಿಯ ಸ್ವಗತ
Last Updated 27 ಫೆಬ್ರುವರಿ 2019, 10:22 IST
ಅಕ್ಷರ ಗಾತ್ರ

ಕೆಲವೇ ಮೀಟರ್‌ಗಳ ಅಂತರದಲ್ಲಿ ನನಗೆ ಶ್ರೀಲಂಕನ್‌ ಪೋಸ್ಟ್‌ ಕಾಣಿಸುತ್ತಿತ್ತು. ನಾನು ನನ್ನ ಸಹಾಯಕರೊಂದಿಗೆ ಎಲ್ಲಾ ’ಐಇಡಿ’ (ಇಂಪ್ರೂವೈಸ್ಡ್‌ ಎಕ್ಸ್‌ಪ್ಲೋಸಿವ್‌ ಡಿವೈಸ್‌)ಯನ್ನು ನಿಷ್ಕ್ರಿಯಗೊಳಿಸುತ್ತಾ ಅಲ್ಲಿಂದ ಔಟ್‌ಪೋಸ್ಟ್‌ ಹತ್ರ ಬರುವವೇಳೆಗೆ ಅಲ್ಲಿದ್ದ ಸೈನಿಕರಲ್ಲಿ ವಿಶ್ವಾಸ ಮೂಡಿತ್ತು. ಎಲ್‌ಟಿಟಿಇ ಅವರ ದಿಗ್ಬಂಧನದಿಂದ ಹೊರಬರಲು ಅವರು ಹಾತೊರೆಯುತ್ತಿದ್ದರು. ನಾನು ರೇಡಿಯೋ ಸೆಟ್‌ ಹಿಡಿದುಕೊಂಡು, ಡಿಫ್ಯೂಸ್‌ ಮಾಡುವ ತಜ್ಞರೊಬ್ಬರೊಡನೆ ಓಪನ್‌ ಜೀಪ್‌ನಲ್ಲಿ ಮುಂದುವರೆಯುತ್ತಿದ್ದೆ. ಕೆಟ್ಟ ರಸ್ತೆ. ನಾವು ಊಹಿಸಲೂ ಸಾಧ್ಯವಿಲ್ಲದಂತೆ ಅಲ್ಲಿ ಒಂದು ಐಇಡಿಯನ್ನು ಎಲ್‌ಟಿಟಿಇ ಅಳವಡಿಸಿತ್ತು. ಶ್ರೀಲಂಕನ್‌ ಪೋಸ್ಟ್‌ನ್ನು ನಾಶ ಮಾಡಲೆಂದೇ ಅವರು ಜಲ್ಲಿ ರಾಶಿಯೊಂದರ ಅಡಿಯಲ್ಲಿ ಐಇಡಿ ಹುಗಿದಿಟ್ಟಿದ್ದರು. ಜೀಪ್‌ ಚಾಲಕ ಕೆಟ್ಟ ರಸ್ತೆಯಲ್ಲಿ ತಾಳ್ಮೆಯಿಂದ ವಾಹನ ಚಲಾಯಿಸುತ್ತಾ ಬ್ರೇಕ್‌ ಹಾಕಬೇಕಾಯಿತು. ಆದರೆ ಎಲ್‌ಟಿಟಿಇಯವರು ಜೀಪ್‌ ಹಾದುಹೋಗಬಹುದು ಎಂಬ ಅಂದಾಜಿಗೆ ಐಇಡಿಯನ್ನು ಸ್ಫೋಟ ಮಾಡಿಬಿಟ್ಟರು. ಜೀಪ್‌ ಬ್ರೇಕ್‌ ಹಾಕಿದ್ದರಿಂದ ವೇಗ ತಗ್ಗಿತ್ತು. ಐಇಡಿ ಸ್ಫೋಟಕ್ಕೆ ಚಿಂದಿಚಿತ್ರಾನ್ನವಾಗಬೇಕಾಗಿದ್ದ ಜೀಪ್‌, ಮುಂಭಾಗವನ್ನಷ್ಟೆ ಸ್ಫೋಟಗೊಂಡು ಉರುಳಿತು. ತೆರೆದ ಜೀಪ್‌ ಆದುದರಿಂದ ನನ್ನ ತಲೆ ಉಳಿಯಿತು ಎಂದೇ ಹೇಳಬೇಕು. ಆದರೆ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಎಲ್ಲಕಡೆ ಕತ್ತಲು ಆವರಿಸಿದಂತಾಯಿತು.

ಎಚ್ಚರವಾದಾಗ ನಾನು ಸೇನೆಯ ಚಿಕಿತ್ಸಾ ಕೇಂದ್ರದಲ್ಲಿದ್ದೆ. ಸ್ಫೋಟದಿಂದಾಗಿ ನನ್ನ ಮುಖ ಎಡಭಾಗಕ್ಕೆ ಜಲ್ಲಿಕಲ್ಲುಗಳು, ಕಬ್ಬಿಣದ ಚೂರುಗಳು ಅಂಟಿ ಬಹಳಗಾಯವಾಗಿತ್ತು. ಕಿವಿಯು ಕೇಳುವ ಸ್ಥಿತಿಯಲ್ಲಿಲ್ಲ. ಘಟನೆಯ ಜಾಗದಿಂದ ನನ್ನನ್ನು ಟ್ರಕ್‌ಗೆ ಎತ್ತಿ ಇರಿಸಿ ಕರೆದುಕೊಂಡು ಬಂದಿದ್ದರು. ಒಬ್ಬ ಸೈನಿಕ ತಮ್ಮ ಟರ್ಬನ್‌ ತೆಗೆದು ನನ್ನನ್ನು ಮುಂದಿನ ಸೀಟಿಗೆ ಕಟ್ಟಿದರು. ಸಿಖ್‌ ಸೈನಿಕರು ಅತ್ಯಂತ ಪ್ರೀತಿಪಾತ್ರರ ವಿಚಾರಕ್ಕೆ ಮಾತ್ರ ಟರ್ಬನ್‌ ತೆಗೆಯುತ್ತಿದ್ದರು. ಅವರು ಅಷ್ಟೊಂದು ನನ್ನ ಪ್ರೀತಿಸುತ್ತಿದ್ದರೆಂಬುದನ್ನು ಅರಿತು ನನ್ನ ಹೃದಯ ತುಂಬಿ ಬಂತು. ನನ್ನ ಹೆಲಿಕಾಪ್ಟರ್‌ನಲ್ಲಿ ಪಲಾಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಚೈನ್ನೈಗೆ ಮತ್ತು ಚೆನ್ನೈಯಿಂದ ಬೆಂಗಳೂರಿಗೆ ಕರೆದೊಯ್ದು ನನಗೆ ಚಿಕಿತ್ಸೆ ಕೊಡಿಸಿದರು. ಮಾತು ಶುರು ಮಾಡಲು ನನಗೆ ಬಹಳ ಸಮಯ ಬೇಕಾಯಿತು. ಅಮ್ಮ , ಪತ್ನಿಎಲ್ಲರೂ ನನ್ನನ್ನು ಅಕ್ಕರೆಯಿಂದ ಆರೈಕೆ ಮಾಡಿದರು. ಸುಮಾರು 3 ತಿಂಗಳ ಕಾಲ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹುಶಾರಾದೆ. ಆದರೆ ಯುದ್ಧಕಣದಲ್ಲಿ ನಾನು ಕೆಲಸ ಮಾಡಬಾರದು. ಕಚೇರಿ ಕೆಲಸವನ್ನಷ್ಟೇ ನಿರ್ವಹಿಸಬಹುದು ಎಂದು ವೈದ್ಯರು ಪ್ರಮಾಣಪತ್ರವನ್ನು ಕೊಟ್ಟರು.

ಸರಿ. ಹುಶಾರಾದ ಮೇಲೆ ಏನು ಮಾಡುವುದು ? ನನ್ನ ರಜೆ ಅವಧಿಯು ಮುಗಿಯುತ್ತಲೇ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ನಾನು ಹೊರಟೆ. ನೇರವಾಗಿ ಚೆನ್ನೈಗೆ ಹೋಗಿ ಕರ್ತವ್ಯಕ್ಕೆ ಹಾಜರಾದೆ. ಆ ಸಂದರ್ಭದಲ್ಲಿ ವೈದ್ಯರು ಕೊಟ್ಟ ಪ್ರಮಾಣ ಪತ್ರವನ್ನೇನೂ ತೋರಿಸಲಿಲ್ಲ. ಆದರೆ ಮಾರನೆಯ ದಿನವೇ ಹಿರಿಯ ಅಧಿಕಾರಿಗಳಿಂದ ಬುಲಾವ್‌ ಬಂತು. ವೈದ್ಯರು ನೀಡಿದ ಪ್ರಮಾಣ ಪತ್ರವನ್ನು ನಿರ್ಲಕ್ಷಿಸಿ, ಯುದ್ಧತಂಡದ ಜೊತೆಗೆ ಕೆಲಸ ಮಾಡುವುದಕ್ಕೆ ಯಾಕೆ ಮುಂದಾಗಿದ್ದಿ ? ಎಂದು ದಬಾಯಿಸಿದರು. ನಾನು ತುಸು ಹೊತ್ತು ಸುಮ್ಮನೇ ಇದ್ದೆ. ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕಚೇರಿ ಕೆಲಸ ಮಾಡುತ್ತಾ ನಿವೃತ್ತಿಯವರೆಗೆ ಸೇನೆಯಲ್ಲಿ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವುದು. ಅಥವಾ ಯುದ್ಧಭೂಮಿಗೆ ತೆರಳುವ ಸೈನಿಕರ ಜೊತೆ ಹೋರಾಟದ ಕಣಕ್ಕೆ ಇಳಿಯುವುದು. ‘ನಿನಗೆ ಹೋರಾಟ ಬೇಕೋ, ನೆಮ್ಮದಿ ಬೇಕೋ..’ ಎಂಬ ಪ್ರಶ್ನೆಯನ್ನು ನಾನು ಕೇಳಿಕೊಂಡರೆ, ಮನಸ್ಸು ತಾಯ್ನಾಡಿಗಾಗಿ ಹೋರಾಟ ಮಾಡದೇ ಇರುವುದು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳಿತು.

ನಾನು ಸಾವಧಾನವಾಗಿ ಮೇಲಧಿಕಾರಿಗಳಿಗೆ ತಿಳಿಸಿ ಹೇಳಿದೆ: ‘ನನ್ನ ಆರೋಗ್ಯಕ್ಕೆ ನಾನೇ ಜವಾಬ್ದಾರಿ ಎಂದು ಪ್ರಮಾಣ ಪತ್ರವೊಂದನ್ನು ಬರೆದುಕೊಡುತ್ತೇನೆ ಸರ್‌. ನನ್ನನ್ನು ಆಡಳಿತಾತ್ಮಕ ಕಚೇರಿ ಕೆಲಸಕ್ಕೆ ದಯವಿಟ್ಟು ನಿಯೋಜಿಸಬೇಡಿ. ಯುದ್ಧರಂಗದಲ್ಲಿ ಕೆಲಸ ಮಾಡಲು ಅವಕಾಶ ಕೊಡಿ’

ಇವನಿಗೆ ನಿಜಕ್ಕೂ ತಲೆ ಕೆಟ್ಟಿದೆ ಎಂದು ಬೈದುಕೊಂಡು ಮೇಲಧಿಕಾರಿಗಳು ಸುಮ್ಮನಾದರು.

ನನ್ನ ಮೊದಲ ಆಯ್ಕೆ ಸೈನ್ಯವೇ ಆಗಿತ್ತು ಮತ್ತು ಸೈನ್ಯದಲ್ಲಿ ನನ್ನ ಮೊದಲ ಆಯ್ಕೆ ನನ್ನ ಪ್ರೀತಿಯ ಯೋಧರ ನಡುವೆ ಯುದ್ಧೋತ್ಸಾಹವೇ ಆಗಿತ್ತು- ಇದೇ ಕಾರಣದಿಂದ ನಾನು ಇಷ್ಟೆಲ್ಲಾ ಆಗಿಯೂ, ವೈದ್ಯಕೀಯವಾಗಿ ಅನರ್ಹತೆ ಕಾಡಿದರೂ ಯುದ್ಧಭೂಮಿಯನ್ನೇ ಆಯ್ದುಕೊಂಡಿದ್ದೆ. ಹಾಗೆಯೇ ಶ್ರೀಲಂಕಾಕ್ಕೆ ಮರಳಿ ಬಂದೆ.

ಆದರೆ ಇಲ್ಲಿ ನಡೆದದ್ದೇ ಬೇರೆ. ಶ್ರೀಲಂಕಾಕ್ಕೆ ಬಂದು ಕೆಲವೇ ಸಮಯದಲ್ಲಿ ನನಗೆ ಕರ್ನಲ್ ಆಗಿ ಪ್ರಮೋಶನ್ ದೊರೆಯಿತು. ಅತ್ಯಂತ ನೋವಿನಿಂದ ನನ್ನ ಪ್ರೀತಿಯ ಯೋಧರ ಪಡೆಯನ್ನು ಬಿಟ್ಟು ನಾನು ಅಲಹಾಬಾದ್‍ಗೆ ಮರಳಬೇಕಾದ ಅನಿವಾರ್ಯತೆ ಬಂತು. ಆದರೆ ನನ್ನ ಆರೋಗ್ಯದ ದೃಷ್ಟಿಯಿಂದ ಕಿವಿಗಡಚಿಕ್ಕುವ ಶಬ್ದ, ಸ್ಪೋಟ, ಗುಂಡುಗಳ ಹಾರಾಟದಂತ ವಾತಾವರಣದಿಂದ ನಾನು ದೂರ ಇರಬೇಕಾಗಿದ್ದುದೂ ಒಂದು ಕಾರಣವಾಗಿ ನಾನು ಈ ಪ್ರಮೋಶನ್ ಒಪ್ಪಿಕೊಳ್ಳಬೇಕಾಯಿತು.

ಅಂತೂ 1988ರ ಡಿಸೆಂಬರ್ ನಲ್ಲಿ ನಾನು ಎನ್‍ಸಿಸಿ ಮುಖ್ಯ ಕಚೇರಿಯಲ್ಲಿ ಕರ್ನಲ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಅಲಹಾಬಾದ್‍ನ ಈ ವಾತಾವರಣ ಬಹಳ ಸುಂದರವಾಗಿತ್ತು. ಅತ್ಯಂತ ಪ್ರಶಾಂತ ವಾತಾವರಣ, ನಾವು ವಾಸವಾಗಿರುವ ಮನೆ ಅಲಹಾಬಾದ್ ಯೂನಿವರ್ಸಿಟಿ, ನೆಹರೂ ಅವರ ಐತಿಹಾಸಿಕ ಆನಂದ ಭವನ, ಹೈಕೋರ್ಟ್ ಸಂಕೀರ್ಣ, ಪವಿತ್ರ ಸಂಗಮ...ಹೀಗೆ ಅದೊಂದು ಅತ್ಯಾಪ್ತ ವಾತಾವರಣವಾಗಿತ್ತು. ನಮ್ಮ ಮನೆಗೂ ಕಛೇರಿಗೂ ಕೇವಲ ಮೂರು ನಿಮಿಷದ ಅಂತರದ ನಡೆದುಹೋಗುವಷ್ಟು ಸಮೀಪವಾಗಿತ್ತು.

ಇಂತಹ ಆಹ್ಲಾದಕರ ವಾತಾವರಣದಲ್ಲಿ ಡಿಸೆಂಬರ್ 88ರಿಂದ ಡಿಸೆಂಬರ್ 90ರ ತನಕ ನಾವಿದ್ದೆವು. ಈ ಎರಡೂ ವರ್ಷಗಳು ಅತ್ಯಂತ ಸಂತೋಷ, ಸಮಾಧಾನದ ವರ್ಷಗಳಾಗಿದ್ದುವು. ಅಂತೂ ನನ್ನ ಗಾಯ ಸಂಪೂರ್ಣ ಗುಣವಾಗಿ ನಾನು ಈಗ ಫಿಟ್ ಆಗಿದ್ದೆ. ಈ ಎರಡು ವರ್ಷಗಳಲ್ಲಿ ನಾನು ಸೀನಿಯರ್ ಕಮಾಂಡ್ ಕೋರ್ಸ್‍ಗೆ ಆಯ್ಕೆಯಾದೆ. ಮಧ್ಯಪ್ರದೇಶದ ಮ್ಹಾವೋದಲ್ಲಿ ಮೂರು ತಿಂಗಳ ಕಾಲದ ಕೋರ್ಸ್ ಮುಗಿಸಿದೆ. ಇದೂ ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು. ಈ ಕೋರ್ಸ್‍ಗೆ ಆಯ್ಕೆಯಾಗುವ ಮೂಲಕ ನಾನು ಮತ್ತೆ ನನ್ನ ಕೆಲ ಹಳೇ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಇದರೊಂದಿಗೆ ಈ ತರಬೇತಿ ನನಗೂ ಮುಂದಿನ ಮತ್ತೂ ಉನ್ನತ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು, ನಿರ್ವಹಿಸಲು ನೆರವಾಯಿತು. ಅಲಹಾಬಾದ್ ನಿಂದ ಮಧ್ಯ ಪ್ರದೇಶಕ್ಕೆ ನಾನು ನನ್ನ ಪತ್ನಿ ಅನುರಾಧಾಳೊಂದಿಗೆ ಕಾರ್ ನಲ್ಲೇ ಸುಮಾರು ಎರಡು ದಿನಗಳ ಡ್ರೈವ್ ಮಾಡಿ ಬಂದೆ!. ಅಲ್ಲಿ ನಮಗೆ ಉಳಿಯಲು ಒಂದು ಬೆಡ್ ರೂಂ, ಕಿಚನ್ ಹಾಗೂ ಹಾಲ್ ಇರುವ ಪುಟ್ಟ ಮನೆಯನ್ನು ನೀಡಲಾಯಿತು. ಇನ್ನೊಂದು ಸಂತಸದ ವಿಷಯವೆಂದರೆ ಈ ಕೋರ್ಸ್‍ನ ಸಮಯದಲ್ಲಿ ನಾವು ಹೊರಗೆ ಸಾಮಾಜಿಕವಾಗಿಯೂ ಎಲ್ಲರೊಂದಿಗೆ ಬೆರೆತು ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT