ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗರಿ ಅಪಘಾತ ತಪ್ಪಿಸಲು ಬಿಆರ್‌ಟಿಎಸ್‌ ಸುರಕ್ಷಾ

Last Updated 8 ಜೂನ್ 2019, 9:37 IST
ಅಕ್ಷರ ಗಾತ್ರ

ಅವಳಿನಗರಕ್ಕೆ ಬಿಆರ್‌ಟಿಎಸ್‌ ಯೋಜನೆ ಬಂದು ದಶಕ ಗತಿಸಿದ ನಂತರ ಈಗ ಚಿಗರಿ ಬಸ್ಸುಗಳು ಹುಬ್ಬಳ್ಳಿ–ಧಾರವಾಡದ ನಡುವೆ ಓಡಾಡಿಕೊಂಡಿವೆ. ಚಿಗರಿ ಓಡಾಟ ನೋಡಲೆಷ್ಟು ಮುದ ನೀಡಲಿದೆಯೋ ಹಾಗೆಯೇ ಇತ್ತೀಚೆಗೆ ಯಾಕೊ ಆಗಾಗ ಎಡವುತ್ತ ಆತಂಕವನ್ನು ಸೃಷ್ಟಿಸುತ್ತಿವೆ. ಸುರಕ್ಷತೆಯ ದೃಷ್ಟಿಯಿಂದ ಚಿಗರಿ ಬಸ್‌ಗಳಿಗಾಗಿ ಪ್ರತ್ಯೇಕ ಬಿಆರ್‌ಟಿಎಸ್‌ ಕಾರಿಡಾರ್‌ ಅನ್ನೇ ನಿರ್ಮಿಸಿದ್ದರೂ ಇತರ ವಾಹನ ಸವಾರರು ರಸ್ತೆ ದಾಟುವಾಗ ಅಪಘಾತಗಳು ಸಂಭವಿಸುತ್ತಲೇ ಇವೆ.

2018ರ ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದ ಬಿಆರ್‌ಟಿಎಸ್‌ ಯೋಜನೆಯಡಿ ಸದ್ಯ ಅವಳಿನಗರದಲ್ಲಿ ಪ್ರತಿದಿನ 70 ಚಿಗರಿ ಬಸ್‌ಗಳು ಓಡಾಡುತ್ತಿವೆ. ಸುಮಾರು 60 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸಂಚಾರ ಆರಂಭಿಸಿದ ಕೆಲವೇ ತಿಂಗಳಲ್ಲಿ ಫೆ.18ರಂದು ಕೆಎಂಎಫ್ ಬಳಿ ಚಿಗರಿ ಅಪಘಾತಕ್ಕೀಡಾಗಿತ್ತು. ಇದೀಗ ಮತ್ತೆ ಜೂನ್‌ 4ರಂದು ಉಣಕಲ್‌ ಬ್ರಿಡ್ಜ್‌ ಮೇಲೆ ಚಿಗರಿ ಬಸ್‌ಗಳು ಅಪಘಾತಕ್ಕೀಡಾಗಿವೆ. ಮಾರ್ಚ್‌ನಲ್ಲೂ ಸಹ ಚಿಗರಿ ಅಪಘಾತಕ್ಕೀಡಾಗಿತ್ತು.

ಚಿಗರಿ ಬಸ್‌ಗಳು ಮೇಲಿಂದ ಮೇಲೆ ಅಪಘಾತಕ್ಕೀಡಾಗುತ್ತಿರುವುದನ್ನು ಗಮನಿಸಿದ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ತೃತೀಯ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶಾನ್‌ವಾಜ್ ಮತ್ತು ಅವರ ತಂಡ ‘ಬಿಆರ್‌ಟಿಎಸ್ ಸುರಕ್ಷಾ’ ಎಂಬ ಯೋಜನೆಯನ್ನು ರೂಪಿಸಿದೆ.

ಯೋಜನೆಯ ಪ್ರಕಾರ ಬಿಆರ್‌ಟಿಎಸ್‌ ಬಸ್ ನಿಲ್ದಾಣಗಳಲ್ಲಿ ‘ಫೋರ್ಸ್ ಸೆನ್ಸಿಟಿವ್ ರೆಸಿಸ್ಟಾರ್’ ಬಳಸಿದಾಗ ಬಸ್‌ನ ಚಕ್ರಗಳು ರೆಸಿಸ್ಟಾರ್‌ನ ಮೇಲೆ ಹಾದುಹೋದರೆ ತಕ್ಷಣವೇ ಬಿಆರ್‌ಟಿಎಸ್‌ ಚಲಿಸುವ ಮುಂದಿನ ಮಾರ್ಗದಲ್ಲಿನ ಬ್ಯಾರಿಕೇಡ್‌ಗಳು ನೆಲದೊಳಗೆ ಹೋಗುತ್ತವೆ. ಬಿಆರ್‌ಟಿಎಸ್‌ನ ಎಡ ಮತ್ತು ಬಲ ಭಾಗದಲ್ಲಿ ಇತರೆ ವಾಹನ ಸವಾರರು ಬರಬಹುದಾದ ರಸ್ತೆಯಲ್ಲಿನ ಬ್ಯಾರಿಕೇಡ್‌ಗಳು ತೆರೆದುಕೊಳ್ಳುತ್ತವೆ. ಇದರಿಂದ ಯಾವುದೇ ವಾಹನ ಸವಾರರು ಚಿಗರಿ ಬಸ್ ಹೋಗುವವರೆಗೂ ರಸ್ತೆ ದಾಟಲು ಸಾಧ್ಯವಿಲ್ಲ. ಬಸ್ ಮುಂದೆ ಚಲಿಸಿದ ನಂತರ ಬಿಆರ್‌ಟಿಎಸ್‌ ಮಾರ್ಗದ ಬ್ಯಾರಿಕೇಡ್‌ಗಳು ತೆರೆದುಕೊಂಡು, ಇತರ ಎಡ ಮತ್ತು ಬಲ ಭಾಗದ ಬ್ಯಾರಿಕೇಡ್‌ಗಳು ನೆಲದೊಳಗೆ ಹೋಗುತ್ತವೆ. ಇದರಿಂದ ಅಪಘಾತವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಈ ಯೋಜನೆಗೆ ‘ಬಿಆರ್‌ಟಿಎಸ್‌ ಸುರಕ್ಷಾ’ ಎಂದು ಹೆಸರು ಇಡಲಾಗಿದೆ ಎಂದು ಶಾನವಾಜ್‌ ‘ಪ್ರಜಾವಾಣಿ ಮೆಟ್ರೊ’ಗೆ ತಿಳಿಸಿದರು.

ಶಾನವಾಜ್‌ ಮತ್ತು ತಂಡದವರು ಅಧ್ಯಯನದ ಭಾಗವಾಗಿ ಪ್ರಾಜೆಕ್ಟ್ ಸಿದ್ಧಪಡಿಸಬೇಕಿತ್ತು. ಆಗ ವಿವಿಯ ಸೆಂಟರ್‌ ಫಾರ್‌ ಇನ್ನೋವೇಷನ್ ಆ್ಯಂಡ್ ಪ್ರೊಡಕ್ಟ್ ಡೆವೆಲಪ್‌ಮೆಂಟ್ (ಸಿಐಪಿಡಿ) ತಂಡದವರು ಬಿಆರ್‌ಟಿಎಸ್‌ ಬಗ್ಗೆ ಯೋಜನೆ ರೂಪಿಸುವಂತೆ ತಿಳಿಸಿದರು. ಬಿಆರ್‌ಟಿಎಸ್‌ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸುವಾಗ‍‘ಫೋರ್ಸ್ ಸೆನ್ಸಿಟಿವ್ ರೆಸಿಸ್ಟಾರ್' ಬದಲು ಈಗಾಗಲೇ ಚಿಗರಿ ಬಸ್‌ಗಳಲ್ಲಿ ಅಳವಡಿಸಲಾಗಿರುವ ಜಿಪಿಎಸ್ (ಗ್ಲೋಬಲ್ ಪೋಜಿಸ್ನಿಂಗ್ ಸಿಸ್ಟಮ್) ಅನ್ನು ಅಭಿವೃದ್ಧಿಪಡಿಸಿ, ಸ್ವಯಂಚಾಲಿತವಾಗಿ ಕಾರಿಡಾರ್‌ಗಳು ಕಾರ್ಯನಿರ್ವಹಿಸುವಂತೆ ಮಾಡಬಹುದು.

ಕೆಲ ದಿನಗಳ ಹಿಂದೆ ಕಾರಿಡಾರ್ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಆಟೊ ಚಾಲಕನೊಬ್ಬ ಗುದ್ದಿಕೊಂಡು ಹೋಗಿದ್ದನು. ಹಾಗಾಗಿ ಕಾರಿಡಾರ್‌ಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದರಿಂದ ಇಂಥ ಅಪಾಯವನ್ನು ತಪ್ಪಿಸಬಹುದು. ಬಸ್‌ಗಳಲ್ಲಿ ಅಳವಡಿಸಲಾದ ಜಿಪಿಎಸ್‌ ಮೂಲಕ ಸ್ಥಳ ಮತ್ತು ನಿಲ್ದಾಣದ ಹೆಸರುಗಳು ಎಲ್‌ಇಡಿ ಪರದೆ ಮೇಲೆ ಕಾಣಿಸುತ್ತವೆ. ಈ ಜಿಪಿಎಸ್‌ಅನ್ನು ಅಭಿವೃದ್ಧಿಪಡಿಸುವ ಮೂಲಕ ಸುರಕ್ಷಾ ಯೋಜನೆಯನ್ನು ಜಾರಿಗೆ ತರಬಹುದು. ಅನುಮತಿ ದೊರೆತರೆ ಮೊದಲು ಬಿವಿವಿ ಮುಂಭಾಗದ ಬಿಆರ್‌ಟಿಎಸ್‌ ನಿಲ್ದಾಣಗಳಿಗೆ ಇದನ್ನು ಅಳವಡಿಸಿ ಫಲಿತಾಂಶ ಬಂದ ನಂತರ ಉಳಿದ ನಿಲ್ದಾಣಗಳಲ್ಲಿ ಅಳವಡಿಸಲಾಗುವುದು ಎಂದು ಶಾನವಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT