ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ| ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಆಯ್ಕೆಗಳು

Last Updated 2 ಜನವರಿ 2022, 19:31 IST
ಅಕ್ಷರ ಗಾತ್ರ

ನಿವೃತ್ತಿಯ ಸಮಯದಲ್ಲಿ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಗ್ರ್ಯಾಚುಯಿಟಿ, ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ಒಂದಿಷ್ಟು ಹಣ ಸಿಗುತ್ತದೆ. ಆ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಹೆಚ್ಚು ಬಡ್ಡಿ ಲಾಭ ಸಿಗದಿದ್ದರೂ ಪರವಾಗಿಲ್ಲ, ನಿರ್ದಿಷ್ಟ ಮಾಸಿಕ ಆದಾಯ ಸಿಗುವ ಜೊತೆಗೆ ಬಂಡವಾಳ ಸುರಕ್ಷಿತವಾಗಿರಬೇಕು ಎನ್ನುವುದು ಬಹುತೇಕರ ಇಂಗಿತವಾಗಿರುತ್ತದೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಹಿರಿಯ ನಾಗರಿಕರು. ಅವರು ನಿವೃತ್ತಿಯ ನಂತರ ಸಿಗುವ ಹಣವನ್ನುಪ್ರಧಾನಮಂತ್ರಿ ವಯೋವಂದನಾ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯಆಯ್ಕೆ.

1)‌ ಪ್ರಧಾನಮಂತ್ರಿ ವಯೋ ವಂದನಾ ಯೋಜನೆ (ಪಿಎಂವಿವಿವೈ): 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರ (ಹಿರಿಯ ನಾಗರಿಕರ) ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ವಯೋ ವಂದನಾ ಯೋಜನೆ ಜಾರಿಗೆ ತಂದಿದೆ. ಪಿಎಂವಿವಿವೈ ಯೋಜನೆಯಲ್ಲಿ ಕನಿಷ್ಠ ₹ 1,56,658 ಮತ್ತು ಗರಿಷ್ಠ ₹ 14,49,086 ಹೂಡಿಕೆ ಮಾಡಬಹುದು. ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ₹ 1 ಸಾವಿರದಿಂದ ₹ 9,250ರವರೆಗೆ ಮಾಸಿಕ ಪಿಂಚಣಿಪಡೆಯಲು ಸಾಧ್ಯವಿದೆ. ಹಿರಿಯ ನಾಗರಿಕರು ಮಾಸಿಕ ಆದಾಯಕ್ಕೆ ಕಷ್ಟಪಡುತ್ತಿರುವಂತಹ ಸನ್ನಿವೇಶದಲ್ಲಿ ನಿರ್ದಿಷ್ಟ ಆದಾಯ ಖಾತರಿಪಡಿಸುವ ಈ ಪಿಂಚಣಿ ಯೋಜನೆ ಮಹತ್ವ ಪಡೆದಿದೆ. ಈ ಯೋಜನೆಯಲ್ಲಿ ವಾರ್ಷಿಕ ಶೇಕಡ 7.4ರಷ್ಟು ಖಾತರಿಯ ದರದಲ್ಲಿ ಪಿಂಚಣಿಯನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಪಡೆಯುವ ಆಯ್ಕೆ ಇದೆ. 10 ವರ್ಷಗಳ ಪಾಲಿಸಿ ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ್ದ ಅಸಲು ಮೊತ್ತವನ್ನು ಪಿಂಚಣಿದಾರನಿಗೆ ನೀಡಲಾಗುತ್ತದೆ.

ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಒಂದೊಮ್ಮೆ ಸಾವನ್ನಪ್ಪಿದ ಪಕ್ಷದಲ್ಲಿ ನಾಮನಿರ್ದೇಶನ ಮಾಡಿರುವ ವ್ಯಕ್ತಿಗೆ ಹಣ ಸಿಗುತ್ತದೆ. ಇದು ಸರ್ಕಾರದ ಸಹಭಾಗಿತ್ವದ ಯೋಜನೆಯಾಗಿರುವುದರಿಂದ ಹೂಡಿಕೆ ಹಣದ ಸುರಕ್ಷತೆ ಬಗ್ಗೆ ಚಿಂತೆ ಮಾಡಬೇಕಿಲ್ಲ.

ಯೋಜನೆಯ ಲಭ್ಯತೆ: ಎಲ್‌ಐಸಿ ಜಾಲತಾಣ ಮತ್ತು ಎಲ್‌ಐಸಿಯ ಕಚೇರಿಗಳ ಮೂಲಕ ವಯೋ ವಂದನಾ ಯೋಜನೆ ಸೇರಿಕೊಳ್ಳಲು ಸಾಧ್ಯವಿದೆ. ಈ ಯೋಜನೆಯ ಲಭ್ಯತೆ ಅವಧಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಲಾಗಿದೆ.

ಅವಧಿಗೆ ಮುನ್ನ ಯೋಜನೆಯಿಂದ ಹೊರಬರಬಹುದೇ?: ಈ ಯೋಜನೆಯಲ್ಲಿ 10 ವರ್ಷ ಹೂಡಿಕೆ ಮಾಡಬೇಕು ಎನ್ನುವುದು ನಿಯಮ. ಆದರೆ ಹೂಡಿಕೆ ಮಾಡಿರುವ ವ್ಯಕ್ತಿಗೆ ಅಥವಾ ಆತನ ಪತ್ನಿಗೆ ತೀವ್ರ ಅನಾರೋಗ್ಯ ಇದ್ದ ಪಕ್ಷದಲ್ಲಿ ಅವಧಿಗೆ ಮುನ್ನ ಯೋಜನೆಯಿಂದ ಹೊರಬರಲು ಅವಕಾಶವಿದೆ. ಅಂತಹ ಸಂದರ್ಭದಲ್ಲಿ ಪಾಲಿಸಿ ದಾಖಲೆಗಳನ್ನು ಹಿಂದಿರುಗಿಸಿ ಹೂಡಿಕೆ ಮಾಡಿದ ಶೇ 98ರಷ್ಟು ಹಣವನ್ನು ಹಿಂಪಡೆಯಲು ಸಾಧ್ಯವಿದೆ.

ವೈದ್ಯಕೀಯ ಪರೀಕ್ಷೆ ಇದೆಯೇ?: ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವೈದ್ಯಕೀಯ ಪರೀಕ್ಷೆ ಇಲ್ಲ.

ಸಾಲ ಸಿಗುವುದೇ?: ಯೋಜನೆ ಆರಂಭಿಸಿ ಮೂರು ವರ್ಷಗಳ ಬಳಿಕ ಹೂಡಿಕೆ ಮಾಡಿರುವ ಹಣದ ಆಧಾರದಲ್ಲಿ ಸಾಲ ಸಿಗುತ್ತದೆ. ಒಟ್ಟು ಹೂಡಿಕೆಯ ಶೇ 75ರಷ್ಟು ಮಾತ್ರ ಸಾಲ ನೀಡಲಾಗುತ್ತದೆ.

2. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್):ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸರ್ಕಾರಿ ಸಹಭಾಗಿತ್ವದ ಹೂಡಿಕೆ ಯೋಜನೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆಯಬಹುದು.ಎಸ್‌ಸಿಎಸ್ಎಸ್‌ನಲ್ಲಿ ಕನಿಷ್ಠ ₹ 1 ಸಾವಿರ, ಗರಿಷ್ಠ ₹ 15 ಲಕ್ಷ ಹೂಡಿಕೆಗೆ ಅವಕಾಶವಿದೆ.

ಹಿರಿಯ ನಾಗರಿಕರಾಗಿರುವ ನಿಮ್ಮ ಮಡದಿಯ ಜತೆಗೆ ಜಂಟಿ ಖಾತೆ ತೆರೆಯಬಹುದು. ಸದ್ಯ ಇದರ ಬಡ್ಡಿ ದರ ಶೇ 7.4ರಷ್ಟಿದೆ.

ಈ ಹೂಡಿಕೆಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದು ನಿರ್ದಿಷ್ಟ ಆದಾಯ ನಿರೀಕ್ಷಿಸುವ ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಆಯ್ಕೆ.

ವರ್ಷಾಂತ್ಯದಲ್ಲಿ ಶೇ 2ರಷ್ಟು ಜಿಗಿದ ಷೇರುಪೇಟೆ

ಡಿಸೆಂಬರ್ 31, 2021ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 58,253 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.98ರಷ್ಟು ಗಳಿಕೆ ಕಂಡಿದೆ. 17,354 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2ರಷ್ಟು ಹೆಚ್ಚಳವಾಗಿದೆ. ಜಾಗತಿಕವಾಗಿ ಮತ್ತು ದೇಶಿಯವಾಗಿ ಯಾವುದೇ ಪ್ರಮುಖ ಬೆಳವಣಿಗೆ ಇಲ್ಲದ ಹೊರತಾಗಿಯೂ ಸೂಚ್ಯಂಕಗಳು ಉತ್ತಮ ಬೆಳವಣಿಗೆ ಸಾಧಿಸಿವೆ.

ಎಲ್ಲಾ ವಲಯಗಳು ಸಕಾರಾತ್ಮಕ ಬೆಳವಣಿಗೆ ಸಾಧಿಸಿದ್ದು ಬಿಎಸ್‌ಇ ಆರೋಗ್ಯ ವಲಯ ಸೂಚ್ಯಂಕ ಶೇ 5ರಷ್ಟು, ವಾಹನ ಮತ್ತು ಟೆಲಿಕಾಂ ವಲಯ ತಲಾ ಶೇ 3ರಷ್ಟು ಗಳಿಕೆ ಕಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಡಿಸೆಂಬರ್ ತಿಂಗಳಲ್ಲಿ ₹ 35,439.59 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 30,000 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ಬಿಎಸ್‌ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 2ರಷ್ಟು ಗಳಿಕೆ ಕಂಡಿದ್ದು ಟೈಟನ್, ಸನ್ ಫಾರ್ಮಾ, ಕ್ಯಾಡಿಲಾ ಹೆಲ್ತ್‌ ಕೇಕೇರ್, ಐಷರ್ ಮೋಟರ್ಸ್, ಲುಪಿನ್, ಟಾಟಾ ಮೋಟರ್ಸ್–ಡಿವಿಆರ್, ಡಾ. ರೆಡ್ಡೀಸ್, ಡಿವಿಸ್ ಲ್ಯಾಬೊರೇಟರಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್‌ ಶೇ 5ರಿಂದ ಶೇ 8ರಷ್ಟು ಜಿಗಿದಿವೆ.

ಮಿಡ್ ಕ್ಯಾಪ್ ಸೂಚ್ಯಂಕ ಶೇ 2.5ರಷ್ಟು ಹೆಚ್ಚಳ ಕಂಡಿದೆ. ವೋಡಾಫೋನ್ ಐಡಿಯಾ, ಆಯಿಲ್ ಇಂಡಿಯಾ, ಬಜಾಜ್ಹೋಲ್ಡಿಂಗ್ಸ್ ಆ್ಯಂಡ್‌ ಇನ್ವೆಸ್ಟ್‌ಮೆಂಟ್, ಟೊರೆಂಟ್ ಫಾರ್ಮಾ, ಎಸ್‌ಜೆವಿಎನ್, ಜಿಎಂಆರ್ ಇನ್ಫ್ರಾ, ಆದಿತ್ಯಾ ಬಿರ್ಲಾಕ್ಯಾಪಿಟಲ್, ನ್ಯಾಟ್ಕೋ ಫಾರ್ಮಾ, ಗ್ಲೆನ್ ಮಾರ್ಕ್ ಫಾರ್ಮಾ ಉತ್ತಮ ಗಳಿಕೆ ಕಂಡಿವೆ. ಆರ್‌ಬಿಎಲ್ ಬ್ಯಾಂಕ್, ಇಂದ್ರಪ್ರಸ್ಥ ಗ್ಯಾಸ್, ಕ್ರಿಸೆಲ್, ಜೀ ಎಂಟರ್‌ಟೇನ್ಮೆಂಟ್, ಜಿಂದಾಲ್ ಸ್ಟೀಲ್, ಸೇಲ್ ಕುಸಿತ ಕಂಡಿವೆ.

ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 4ರಷ್ಟು ಜಿಗಿದಿದೆ. ರೆಸ್ಪಾನ್ಸಿವ್ ಇಂಡಸ್ಟ್ರೀಸ್, ಶ್ರೀರಾಂ ಇಪಿಸಿ, ಜೂಬ್ಲಿಯಂಟ್ ಇಂಡಸ್ಟ್ರೀಸ್, ಬಿಜಿಆರ್ ಎನರ್ಜಿ ಸಿಸ್ಟಮ್ಸ್, ನ್ಯೂರೇಕಾ ಸಿನ್‌ಕಾಂ ಫಾರ್ಮ್ಯೂಲೇಷನ್ಸ್, ಸೈಬರ್ ಟೆಕ್ ಸಿಸ್ಟಮ್ಸ್ ಆ್ಯಂಡ್‌ ಸಾಫ್ಟ್‌ವೇರ್, ಕಿಂಗ್ ಫಾ ಸೈನ್ಸ್ ಆ್ಯಂಡ್‌ ಟೆಕ್ನಾಲಜಿ ಶೇ 30ರವರೆಗೆ ಗಳಿಸಿವೆ. ದಿಲೀಪ್ ಬಿಲ್ಡ್ ಕಾನ್, ರುಶಿಲ್ ಡೆಕೋರ್, ಪಿಟಿಎಲ್ ಎಂಟರ್‌ಪ್ರೈಸಸ್, ಮೆಡಿಕಾಮೆನ್ ಬಯೋಟೆಕ್, ಮ್ಯಾರಥಾನ್ ನೆಕ್ಸ್ಟ್‌ಜೆನ್‌ ರಿಯಾಲಿಟಿ ಕುಸಿತ ಕಂಡಿವೆ.

ಮುನ್ನೋಟ: ಈ ವಾರ ಡಿ-ಮಾರ್ಟ್‌, ಆನಂದ್ ರಾಠಿ, ಕನೇಲ್ ಇಂಡಸ್ಟ್ರೀಲ್ ಲಿಮಿಟೆಡ್, ಸ್ಪಂದನಾ ಸ್ಫೂರ್ತಿ ಫೈನಾನ್ಸಿಯಲ್ಲಿಮಿಟೆಡ್, ಜಿಎಂ ಬ್ರಿವೆರೀಸ್ ಲಿಮಿಟೆಡ್, ಎಸ್‌ಬಿಎಸ್ ಇಂಟರ್‌ನ್ಯಾಷನಲ್ ಸೇರಿ ಕೆಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಸಾಧನೆ, ಓಮೈಕ್ರಾನ್ ನಿಯಂತ್ರಣ, ದೇಶಿ ಮತ್ತು ಜಾಗತಿಕ ವಿದ್ಯಮಾನಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT