ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಗೂಳಿ ಓಟ, ಏನಿದೆ ಭವಿಷ್ಯದ ನೋಟ?

Last Updated 8 ನವೆಂಬರ್ 2020, 19:58 IST
ಅಕ್ಷರ ಗಾತ್ರ
ADVERTISEMENT
""
""

ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕತೆ ಮತ್ತು ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಡುಬರುತ್ತಿರುವ ಚೇತರಿಕೆ ಪರಿಣಾಮ ನವೆಂಬರ್ 6ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಪ್ರಗತಿ ದಾಖಲಿಸಿವೆ. ವಾರದ ಐದು ವಹಿವಾಟಿನ ದಿನಗಳಲ್ಲಿಯೂ ಸೂಚ್ಯಂಕಗಳು ಏರಿಕೆ ಕಂಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದಿವೆ. ಕೆಲ ತಿಂಗಳಿಂದ ನಿಂತ ನೀರಂತೆ ಆಗಿದ್ದ ಮಾರುಕಟ್ಟೆಯಲ್ಲಿ ಈಗ ಗೂಳಿಯ ಓಟ ಶುರಾವಾಗಿದೆ. 41,893 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಮತ್ತು 12,263 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ (50) ಸೂಚ್ಯಂಕಗಳು ವಾರದ ಅವಧಿಯಲ್ಲಿ ಸುಮಾರು ಶೇ 5.5 ರಷ್ಟು ಹೆಚ್ಚಳ ದಾಖಲಿಸಿವೆ. ಕಳೆದ 5 ತಿಂಗಳ ಅವಧಿಯಲ್ಲಿ ವಾರವೊಂದರಲ್ಲಿ ಗಳಿಸಿರುವ ಗರಿಷ್ಠ ಏರಿಕೆ ಇದಾಗಿದೆ.

ಕಾರಣಗಳು ಹಲವು: ವಲಯವಾರು ಪ್ರಗತಿ ನೋಡಿದಾಗ ರಿಯಲ್ ಎಸ್ಟೇಟ್ ಹೊರತುಪಡಿಸಿ ಎಲ್ಲಾ ವಿಭಾಗಗಳೂ ಗಳಿಕೆ ಕಂಡಿವೆ. ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ವಲಯ ಶೇ 12 ರಷ್ಟು ಹೆಚ್ಚಳವಾಗಿವೆ. ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದರೆ ವೀಸಾ ನಿಯಮ ಕಠಿಣವಾಗಿರುವುದಿಲ್ಲ ಎಂಬ ಆಶಾಭಾವನೆಯಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಸೂಚ್ಯಂಕ ಜಿಗಿದಿದೆ, ಐಸಿಐಸಿಐ ಬ್ಯಾಂಕ್‌ನ ತ್ರೈಮಾಸಿಕ ಫಲಿತಾಂಶದ ಸಾಧನೆ, ವಿವಿಧ ಬ್ಯಾಂಕ್‌ಗಳ ತ್ರೈಮಾಸಿಕ ಫಲಿತಾಂಶದಲ್ಲೂ ಚೇತರಿಕೆ ಹಾಗೂ ವಸೂಲಾಗದ ಸಾಲದ ಪ್ರಮಾಣ ಶೇ 2 ರಿಂದ ಶೇ 3 ರಷ್ಟು ಮಾತ್ರ ಇರಲಿದೆ ಎಂಬ ಎಸ್‌ಬಿಐ ಅಂದಾಜಿನ ಕಾರಣದಿಂದ ಬ್ಯಾಂಕಿಂಗ್ ಸೂಚ್ಯಂಕ ಪುಟಿದೆದ್ದಿದೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 4 ರಷ್ಟು ಸುಧಾರಿಸಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 0.7 ರಷ್ಟು ಚೇತರಿಸಿಕೊಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲೂ ಓಟ: ಅಮೆರಿಕ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಲಿದೆ ಎಂಬ ಲೆಕ್ಕಾಚಾರಕ್ಕೆ ಮಾರುಕಟ್ಟೆಯಲ್ಲಿ ಬಂದಿದೆ, ವಿವಿಧ ದೇಶಗಳಲ್ಲಿ ಎರಡನೇ ಹಂತದ ಲಾಕ್‌ಡೌನ್ ಆಗುತ್ತಿದ್ದರೂ ನವೆಂಬರ್ ಅಂತ್ಯದ ವೇಳೆಗ ಕೋವಿಡ್‌ಗೆ ಲಸಿಕೆ ಸಿಗುವ ಸಾಧ್ಯತೆ ಹೆಚ್ಚಿರುವುದನ್ನು ಹೂಡಿಕೆದಾರರು ಸಕಾರಾತ್ಮಕವಾಗಿ ನೋಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ವಿಶ್ವದ ಪ್ರಮುಖ ಮಾರುಕಟ್ಟೆಗಳು ನವೆಂಬರ್ 6 ಕ್ಕೆ ಕೊನೆಗೊಂಡ ಐದು ದಿನಗಳ ವಹಿವಾಟಿನ ಲೆಕ್ಕಾಚಾರದಂತೆ ಶೇ 6 ರಿಂದ ಶೇ 10 ರ ವರೆಗೆ ಏರಿಕೆ ದಾಖಲಿಸಿವೆ.

ಗಳಿಕೆ-ಇಳಿಕೆ: ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 26, ಎಸ್‌ಬಿಐ ಶೇ 16, ಐಸಿಐಸಿಐ ಬ್ಯಾಂಕ್ ಶೇ 13, ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 11, ಆ್ಯಕ್ಸಿಸ್‌ ಬ್ಯಾಂಕ್ ಶೇ 10, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 11, ಬಜಾಜ್ ಫೈನಾನ್ಸ್ ಶೇ 14, ಬಜಾಜ್ ಫಿನ್ ಸರ್ವ್ ಶೇ 13, ಹಿಂಡಾಲ್ಕೋ ಶೇ 10 ಮತ್ತು ಸನ್ ಫಾರ್ಮಾ ಶೇ 9 ರಷ್ಟು ಜಗಿದಿವೆ. ಮಿಡ್ ಕ್ಯಾಪ್‌ನಲ್ಲಿ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಶೇ 22, ಬಂಧನ್ ಬ್ಯಾಂಕ್ ಶೇ 14, ಪಿವಿಆರ್ ಶೇ 14 , ಹ್ಯಾವೆಲ್ಸ್ ಶೇ 12 ಮತ್ತು ಎಸ್‌ಆರ್‌ಎಫ್ ಶೇ 12 ರಷ್ಟು ಗಳಿಕೆ ಕಂಡಿವೆ. ನಿಫ್ಟಿಯಲ್ಲಿ ಯುಪಿಎಲ್ ಶೇ 6, ರಿಲಯನ್ಸ್ ಶೇ 1.5, ಮಾರುತಿ ಸುಜುಕಿ ಶೇ 1 ರಷ್ಟು ಕುಸಿದಿವೆ. ಮಿಡ್ ಕ್ಯಾಪ್ ವಲಯದಲ್ಲಿ ಜಸ್ಟ್ ಡಯಲ್ ಶೇ 10, ಅಂಬುಜಾ ಸಿಮೆಂಟ್ ಶೇ 5 ಮತ್ತು ಕಾನ್ಕರ್ ಶೇ 3 ರಷ್ಟು ತಗ್ಗಿವೆ.

ಆಶಾಭಾವನೆ: ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ತಯಾರಿಸುವ ಕಂಪನಿಗಳು, ಗ್ರಾಮೀಣ ವಸತಿ ವಲಯ, ವಾಹನ ತಯಾರಿಕಾ ವಲಯ , ಮಾಹಿತಿ ತಂತ್ರಜ್ಞಾನ ವಲಯ, ವಾಹನ ಬಿಡಿ ಭಾಗಗಳ ವಲಯ, ಫಾರ್ಮಾ ವಲಯ, ಲೋಹ ವಲಯ ಮತ್ತು ಬ್ಯಾಂಕಿಂಗ್ ವಲಯದ ಷೇರುಗೆಳ ಬಗ್ಗೆ ಆಶಾಭಾವನೆ ಹೆಚ್ಚಾಗಿದೆ. ಕೆಲ ತಿಂಗಳುಗಳ ಮಟ್ಟಿಗೆ ಮಾರುಕಟ್ಟೆಯಲ್ಲಿ ಇವು ಮುಂಚೂಣಿಯಲ್ಲಿರಲಿವೆ.

ಮುನ್ನೋಟ: ಈ ವಾರ ಆಯಿಲ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ, ಬಾಟಾ, ಜೆಕೆ ಸಿಮೆಂಟ್, ಗೇಲ್, ಎಕ್ಸೈಡ್ ಇಂಡಸ್ಟ್ರೀಸ್, ಅಪೋಲೊ ಹಾಸ್ಪಿಟಲ್ಸ್, ಅಶೋಕ್‌ ಬಿಲ್ಡ್ ಕಾನ್, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಸನ್ ಟಿವಿ ಮತ್ತು ಪೇಜ್ ಇಂಡಸ್ಟ್ರೀಸ್ ತಮ್ಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಇದಲ್ಲದೆ ಸಗದು ದರ ಸೂಚ್ಯಂಕದ ದತ್ತಾಂಶ ಹೊರಬೀಳಲಿದೆ. ಅಮೆರಿಕದ ಅಕ್ಟೋಬರ್‌ನ ಹಣದುಬ್ಬರ ಅಂಕಿ- ಅಂಶ ಪ್ರಕಟಗೊಳ್ಳಲಿದೆ. ಸದ್ಯ ಆರ್ಥಿಕತೆ ಸರಿದಾರಿಗ ಬರುತ್ತಿದೆ ಎಂಬ ಆಶಾಭಾವನೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆ ಲೆಕ್ಕಾಚಾರ ಮೀರಿ ನಿಲ್ಲುತ್ತಿರುವುದರಿಂದ ಈ ತಿಂಗಳ ಅಂತ್ಯಕ್ಕೆ ನಿಫ್ಟಿ 12,800 ಅಂಶಗಳ ಗಡಿ ದಾಟುವ ನಿರೀಕ್ಷೆಯಿದೆ.

ಉಳಿತಾಯದ ಲೆಕ್ಕಾಚಾರ ಹೇಗೆ ?

ಕೋವಿಡ್ ನಂತರದ ಜಗತ್ತಿನಲ್ಲಿ ಉಳಿತಾಯದ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಬದುಕಿನ ಅನಿಶ್ಚಿತ ಸಂದರ್ಭಗಳನ್ನು ಎದುರಿಸಲು ಆರ್ಥಿಕವಾಗಿ ನಾವು ಸದಾ ಸಿದ್ಧರಿರಬೇಕಾಗುತ್ತದೆ ಎನ್ನುವುದನ್ನು ಕೊರೋನಾ ಕಲಿಸಿಕೊಟ್ಟಿದೆ. ಉಳಿತಾಯ ಎಂದ ತಕ್ಷಣ ನಾವು ಖರ್ಚು ಮಾಡಿದ ನಂತರದಲ್ಲಿ ಉಳಿಯುವ ಹಣ ಎಂದೇ ಭಾವಿಸುತ್ತೇವೆ. ಆದರೆ ಅಸಲಿಗೆ ಬಂದ ಆದಾಯದಲ್ಲಿ ಒಂದು ಭಾಗವನ್ನು ತೆಗೆದಿಟ್ಟು ನಂತರದಲ್ಲಿ ಇನ್ನುಳಿದ ಹಣವನ್ನು ಖರ್ಚಿಗೆ ಮೀಸಲಿಡುವುದು ಉಳಿತಾಯದ ಸರಿಯಾದ ರೀತಿ. ನಾವು ಎಷ್ಟು ಉಳಿತಾಯ ಮಾಡಿದ್ದೀವಿ ಎಂದು ಪ್ರಶ್ನೆ ಮಾಡಿಕೊಂಡಾಗ ನಮ್ಮ ಉತ್ತರ ಬಹುಪಾಲು ಸಂದರ್ಭದಲ್ಲಿ ಅಸ್ಪಷ್ಟವಾಗಿರುತ್ತದೆ. ನಿಮ್ಮ ಆದಾಯ ಗಳಿಕೆಯ ಎಷ್ಟು ಪಾಲನ್ನು ನೀವು ಉಳಿತಾಯ ಮಾಡಿದ್ದೀರಿ ಎನ್ನುವುದನ್ನು ಲೆಕ್ಕ ಹಾಕಲು ಸೂತ್ರವಿದೆ.

ಅವಿನಾಶ್ ಕೆ. ಟಿ.

ಉಳಿತಾಯದ ಸೂತ್ರ:

ಒಟ್ಟು ಉಳಿತಾಯ

–––––––––––––––X 100 = ಆದಾಯದಲ್ಲಿನ ಉಳಿತಾಯದ ಪಾಲು

ಒಟ್ಟು ಗಳಿಕೆ

(ಲೇಖಕ: ಇಂಡಿಯನ್ ಮನಿ ಡಾಟ್‌ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT