ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲತಾ ರಾವ್‌ ಶೇಷಾದ್ರಿ ಅಂಕಣ| ಆರೋಗ್ಯ ವಲಯ: ಬದಲಾವಣೆಯ ಅಗತ್ಯ

ಅಸಮಾನ ಅವಕಾಶಗಳ ನಿವಾರಣೆಗಾಗಿ ನಾವು ಸಜ್ಜಾಗಬೇಕಿದೆ
Last Updated 22 ಜೂನ್ 2022, 19:31 IST
ಅಕ್ಷರ ಗಾತ್ರ

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿಸಂಪನ್ಮೂಲಗಳ ಕೊರತೆ ತೀವ್ರವಾಗಿದ್ದು, ಅದರಿಂದ ಸಮಾಜವು ಸಾಮರ್ಥ್ಯಕ್ಕೆ ಮೀರಿದ್ದನ್ನು ಬಯಸುತ್ತಿದೆ ಎಂಬುದು ಭಾರತದ ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಕಟುಸತ್ಯ ಮತ್ತೊಮ್ಮೆ ಅನಾವರಣಗೊಂಡಿತು.

ಶ್ರೀಲತಾ ರಾವ್‌ ಶೇಷಾದ್ರಿ
ಶ್ರೀಲತಾ ರಾವ್‌ ಶೇಷಾದ್ರಿ

ಲಸಿಕೆಯ ಅಭಿವೃದ್ಧಿ ಹಾಗೂ ವಿತರಣಾ ಕಾರ್ಯವನ್ನು ಅದು ಉತ್ತಮವಾಗಿ ನಿರ್ವಹಿಸಿತು ಎಂಬುದು ಗಮನಾರ್ಹ ವಾದರೂ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಇದ್ದ ಕೊರತೆಗಳು ಕಣ್ಣಿಗೆ ರಾಚುವಂತಿದ್ದವು. ಈ ಕೊರತೆಗಳ ಜೊತೆಗೆ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿನ ಅಸಮಾನತೆ ಹಾಗೂ ಅದರ ಬಾಧಕಗಳನ್ನು ಸರಿಪಡಿಸ ಬೇಕಾದುದೂ ಅಗತ್ಯ. ‘ನ್ಯಾಯಯುತವಾದ, ಕೈಗೆಟುಕುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳು ಎಲ್ಲರಿಗೂ ಸಿಗಬೇಕು’ ಎಂಬ ಗುರಿ ಸಾಧಿಸಲು ಸರ್ಕಾರ ಬಯಸಿದ್ದೇ ಆದಲ್ಲಿ ಈ ಕಾರ್ಯಕ್ಕೆ ಅದು ಮುಂದಾಗ ಬೇಕಾಗುತ್ತದೆ. ಸಮುದಾಯ ಸಂಘಟನೆಗಳೂ ಈ ದಿಸೆಯಲ್ಲಿ ಕೆಲಸ ಮಾಡುತ್ತಿವೆ, ಮುಂದೆಯೂ ಮುಖ್ಯ ಶಕ್ತಿಯಾಗಿ ಕೆಲಸ ಮಾಡಬೇಕಾಗಿದೆ.

ದೊಡ್ಡ ಮಟ್ಟದ ಕೆಲವು ಬದಲಾವಣೆಗಳಿಂದಾಗಿ ಆರೋಗ್ಯ ಅಸಮಾನತೆಗಳು ಹೆಚ್ಚಾಗಿವೆ. ಜನಸಂಖ್ಯೆಯ ವಿಚಾರದಲ್ಲಿ ನಾವು ಪರಿವರ್ತನೆಯ ಕಾಲಘಟ್ಟದಲ್ಲಿ ದ್ದೇವೆ. ಹೆಚ್ಚು ಜನರು ದೀರ್ಘಾಯುಷಿಗಳಾಗುತ್ತಿದ್ದಾರೆ.
ಮಧ್ಯ ವಯಸ್ಸು ದಾಟಿದ ಹಾಗೂ ವಯೋವೃದ್ಧರ ಆರೋಗ್ಯ ಅಗತ್ಯಗಳನ್ನು ಸಂಭಾಳಿಸುವ ಕೆಲಸಕ್ಕೆ ನಾವು ಸಜ್ಜಾಗಬೇಕಾಗಿದೆ. ಅಲ್ಲದೆ, ಹೆಚ್ಚಿನವರು ಜೀವನೋಪಾಯ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ನೋಡಿದಂತೆ, ಅವರು ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುವವರು. ಅಷ್ಟೇ ಅಲ್ಲ, ಆರೋಗ್ಯದ ವಿಷಯದಲ್ಲಿಯೂ ಪರಿವರ್ತನೆ ಆಗುತ್ತಿದೆ. ಕ್ಷಯ ಹಾಗೂ ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳ ಜೊತೆಗೆ ಹೃದ್ರೋಗ ಮತ್ತು ಪಾರ್ಶ್ವವಾಯುವಿನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳೂ ಹೆಚ್ಚಾಗುತ್ತಾ ದೊಡ್ಡ ಹೊರೆಯಾಗುತ್ತಿವೆ. ಇವನ್ನು ‘ಶ್ರೀಮಂತರ ಕಾಯಿಲೆ’ ಎಂದು ಕರೆಯಲಾಗುತ್ತಿತ್ತು. ಆದರೆ ವಾಸ್ತವದಲ್ಲಿ, ಇವು ಬಡವ- ಬಲ್ಲಿದ, ನಗರ- ಗ್ರಾಮೀಣ ಜನರನ್ನು ಬಹುತೇಕ ಸಮಾನ ಪ್ರಮಾಣದಲ್ಲೇ ಕಾಡುತ್ತಿರುವುದನ್ನು
ಕಾಣುತ್ತಿದ್ದೇವೆ. ಪ್ರವಾಹ ಹಾಗೂ ಬಿಸಿಗಾಳಿಯಂತಹ ಹವಾಮಾನ ಬದಲಾವಣೆಗೆ ಸಂಬಂಧಿಸಿದ ನೈಸರ್ಗಿಕ ಪ್ರಕೋಪಗಳು ಹೆಚ್ಚಾಗುತ್ತಿದ್ದು, ತಮ್ಮದೇ ಆದ ಆರೋಗ್ಯ ಸವಾಲುಗಳನ್ನು ಹೊತ್ತು ತರುತ್ತಿವೆ.

ಆರೋಗ್ಯ ವಲಯಕ್ಕೆ ದೊರೆಯುತ್ತಿರುವ ಬಜೆಟ್‌ ಅನುದಾನದಲ್ಲಿ ಏರಿಕೆ ಆಗುತ್ತಿಲ್ಲದ ಸಂದರ್ಭದಲ್ಲಿ ಈ ಎಲ್ಲ ಬದಲಾವಣೆಗಳೂ ಆಗುತ್ತಿವೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಕಲಿತ ಕಹಿ ಪಾಠಗಳ ನಡುವೆಯೂ ಆರೋಗ್ಯ ವಲಯಕ್ಕೆ ಅನುದಾನ ಹಂಚಿಕೆಯು ಜಿಡಿಪಿಯ ಶೇಕಡ 1ರ ಪ್ರಮಾಣದಲ್ಲೇ ಇದೆ. ಇದನ್ನು ಶೇಕಡ 2.5ರಿಂದ ಶೇ 3ಕ್ಕೆ ಏರಿಸಬೇಕೆಂದು ರಾಷ್ಟ್ರೀಯ ಆರೋಗ್ಯ ನೀತಿಯು (2017) ಶಿಫಾರಸು ಮಾಡಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ತೀವ್ರತರನಾದ ಆರೋಗ್ಯ ಸಮಸ್ಯೆಗಳಿಗೆ ಆಗುವ ದುಬಾರಿ ವೆಚ್ಚಕ್ಕೆ ‘ಆಯುಷ್ಮಾನ್ ಭಾರತ್’ ಯೋಜನೆಯ ಮೂಲಕ ಆರೋಗ್ಯ ವಿಮೆ ಒದಗಿಸಿರುವುದು ಸ್ವಾಗತಾರ್ಹ. ಆದರೆ ಇಲ್ಲಿಯೂ ವಿಮೆರಕ್ಷೆಯು ಅಸಮವಾಗಿದೆ. ಆರೋಗ್ಯ ವಲಯದಲ್ಲಿ ವಿವಿಧ ಬಗೆಯ ಸೇವೆಗಳನ್ನು ಒದಗಿಸುತ್ತಿರುವ ಖಾಸಗಿ ಕಂಪನಿಗಳ ವ್ಯಾಪ್ತಿ ವಿಸ್ತರಿಸಿದ್ದು, ಆರೋಗ್ಯ ‘ಪಾಲನೆ’ಯಿಂದ ಆರೋಗ್ಯ ‘ವಿಮಾ ರಕ್ಷಣೆ’ಗೆ ಒತ್ತು ದೊರೆತಿದೆ. ಅಂದರೆ, ತಾಯಿ ಹಾಗೂ ಮಗುವಿನ ಆರೋಗ್ಯ ಹಾಗೂ ರೋಗ ತಡೆಗೆ ಅಗತ್ಯವಿರುವ ಸೇವೆಗಳು ಇನ್ನಷ್ಟು ಹಿಂದಕ್ಕೆ ಸರಿಯುತ್ತಿವೆ.

ಆರೋಗ್ಯ ಪರಿಣಾಮಗಳ ಪ್ರಮುಖ ಸೂಚ್ಯಂಕಗಳಾದ ಮಾತೃ ಹಾಗೂ ಶಿಶುಮರಣ ಮತ್ತು ಆಯುಷ್ಯದ ಕುರಿತಾದ ಅಂಕಿಅಂಶಗಳು ಉತ್ತೇಜನ ಕಾರಿಯಾಗಿದ್ದರೂ ಇವು, ಜಾತಿ, ವರ್ಗ, ಲಿಂಗ, ವಯಸ್ಸು ಹಾಗೂ ಪ್ರದೇಶವನ್ನು ಆಧರಿಸಿದ ಪ್ರಮುಖ ಅಸಮಾನತೆಗಳನ್ನು ಮರೆಮಾಚುತ್ತಿವೆ. ತೀರಾ ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು (ಎನ್ಎಫ್ಎಚ್ಎಸ್-5, 2019-2021) ಇದಕ್ಕೆ ಬಹಳಷ್ಟು ನಿದರ್ಶನ
ಗಳನ್ನು ಒದಗಿಸುತ್ತದೆ. ಉದಾಹರಣೆಗೆ, ಶೇಕಡ 55ರಷ್ಟು ಗ್ರಾಮೀಣ ಮಹಿಳೆಯರು ಮಾತ್ರ ಪ್ರಸವಪೂರ್ವದಲ್ಲಿ
ನಾಲ್ಕು ಅಥವಾ ಹೆಚ್ಚಿನ ಬಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿರುತ್ತಾರೆ. ಆದರೆ ನಗರಗಳ ಮಹಿಳೆಯರಲ್ಲಿ ಈ ಪ್ರಮಾಣ ಶೇಕಡ 70. ಆರೋಗ್ಯ ಸೇವೆಗಳಿಗಾಗಿ, ವಿಶೇಷವಾಗಿ ಔಷಧಗಳಿಗಾಗಿ ಸ್ವಂತ ಹಣವನ್ನು ಖರ್ಚು ಮಾಡುವ ಕಾರಣದಿಂದ ಸುಮಾರು 5.5 ಕೋಟಿ ಭಾರತೀಯರು ಬಡತನಕ್ಕೆ ಜಾರುತ್ತಿದ್ದು, ಸುಮಾರು ಶೇಕಡ 18ರಷ್ಟು ಕುಟುಂಬಗಳು ವಾರ್ಷಿಕವಾಗಿ ಮಿತಿಮೀರಿದ ಆರೋಗ್ಯ ವೆಚ್ಚಗಳನ್ನು ಭರಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂದಾಜು ಮಾಡಿದೆ. ವರಮಾನ ಅಥವಾ ಆದಾಯದಲ್ಲಿ ಅಸಮಾನತೆಯು ತೀವ್ರವಾಗಿ ಬೆಳೆಯುತ್ತಿದೆ ಎಂಬುದನ್ನು ಅಂಕಿಅಂಶಗಳು ಸ್ಪಷ್ಟವಾಗಿ ತೋರಿಸುತ್ತಿರುವ ಸಂದರ್ಭದಲ್ಲಿ ಇದನ್ನು ಗ್ರಹಿಸಬೇಕು.

ಸಮುದಾಯ ಸಂಘಟನೆಗಳು ವಿವಿಧ ಮಾರ್ಗಗಳ ಮೂಲಕ ಈ ಅಂತರಗಳನ್ನು ಮುಚ್ಚಲು ಯತ್ನಿಸುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒಗಳು, ಪೀಪಲ್ಸ್ ಸೈನ್ಸ್ ಆಂದೋಲನ, ಸ್ತ್ರೀವಾದಿ ಸಂಘಟನೆಗಳು ರಾಷ್ಟ್ರವ್ಯಾಪಿ ಜಾಲಗಳ ಒಕ್ಕೂಟವಾದ ‘ಜನಸ್ವಾಸ್ಥ್ಯ ಅಭಿಯಾನ’ದಂತಹ ಗುಂಪುಗಳೊಂದಿಗೆ ಸೇರಿ, ಆರೋಗ್ಯ ಹಕ್ಕುಗಳನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಸರ್ಕಾರದ ನೀತಿಗಳ ಬದಲಾವಣೆಗಾಗಿ ನಡೆಸುವ ಪ್ರಯತ್ನವು ಇದರಲ್ಲಿ ಮುಖ್ಯವಾದುದು.

ಸರ್ಕಾರವನ್ನು ಉತ್ತರದಾಯಿಯಾಗಿಸಲು ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಸಹಭಾಗಿತ್ವದಲ್ಲಿ ಇಂತಹ ಗುಂಪುಗಳು ತಮ್ಮ ಕೆಲಸಕ್ಕೆ ಬಲ ತಂದುಕೊಳ್ಳಬಹುದು. ಚಿಕಿತ್ಸಾ ಸೌಲಭ್ಯ ಆಧಾರಿತ ಸೇವೆಗಳು ಹಾಗೂ ಸಮುದಾಯ ಆರೈಕೆ ಸೇವೆಗಳನ್ನು ಒದಗಿಸುವಂತಹ ಎನ್‌ಜಿಒಗಳ ಮೂಲಕ, ವಿಶೇಷವಾಗಿ ಸರ್ಕಾರಿ ಸೇವೆಗಳು ಇಲ್ಲದ ಪ್ರದೇಶಗಳಲ್ಲಿ ಮಧ್ಯಪ್ರವೇಶಿಸಿ ಕೆಲಸ ಮಾಡಲು ಸಮುದಾಯ ಸಂಘಟನೆಗಳಿಗೆ ಅವಕಾಶವಿದೆ.

ಇತ್ತೀಚೆಗೆ, ಸಾಂಕ್ರಾಮಿಕದ ಸಂದರ್ಭದಲ್ಲಿ, ವ್ಯಕ್ತಿಗತ ನೆಲೆಯಲ್ಲಿ ತೀರಾ ಬಡವರು ಹಾಗೂ ಕೈಲಾಗದವರಿಗೆ ಆಹಾರ, ಔಷಧ ಹಾಗೂ ಹಣಕಾಸು ಸಹಾಯ ಒದಗಿಸಲು ಜನಸಾಮಾನ್ಯರೂ ಮುಂದೆ ಬಂದಿದ್ದರು. ಶೈಕ್ಷಣಿಕ ಸಂಶೋಧನೆ ಮತ್ತು ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುವ ಅಗತ್ಯವೂ ಇದೆ.ಸರ್ಕಾರದ ಸೇವೆ ತಲುಪದೇ ಇರುವೆಡೆ ಸೇವೆಗಳನ್ನು ಒದಗಿಸಲು ಟಾಟಾ ಟ್ರಸ್ಟ್ ಅಥವಾ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಂತಹ ದೊಡ್ಡ ದಾನಿ ಸಂಸ್ಥೆಗಳ ಮಧ್ಯ ಪ್ರವೇಶವೂ ಹೆಚ್ಚುತ್ತಿರುವುದು ಗಮನಾರ್ಹ.

ಮಿತ ಸಂಪನ್ಮೂಲಗಳ ಸಂದರ್ಭದಲ್ಲಿಯೂ ಆರೋಗ್ಯ ಸೇವೆಗಳಲ್ಲಿನ ಅಂತರವನ್ನು ಹೇಗೆ ತಗ್ಗಿಸಬಹುದು ಎಂಬುದನ್ನು ಸಮುದಾಯ ಸಂಘಟನೆಗಳು ತೋರಿಸಿಕೊಡುವಲ್ಲಿ ಸಫಲವಾಗಿವೆ. ದುರ್ಬಲ ಸಮುದಾಯಗಳಿಗೆ ಹತ್ತಿರವಾಗಿರುವ ಮೂಲಕ, ಜನಕೇಂದ್ರಿತವಾದ ಹಾಗೂ ಸರ್ಕಾರದ ‘ಎಲ್ಲರಿಗೂ ಒಂದೇ ಬಗೆಯ ಪರಿಹಾರ’ ಎಂಬಂಥ ಏಕರೂಪಿ ವಿಧಾನವನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಬದಲಿಸುವಂತಹ ಸಾಧ್ಯತೆಗಳನ್ನು ರೂಪಿಸಲು ಸಮುದಾಯ ಸಂಘಟನೆಗಳಿಗೆ ಸಾಧ್ಯವಾಗಿದೆ.

ಆದರೆ, ಹೊಣೆಗಾರಿಕೆಯನ್ನು ಪ್ರಭುತ್ವ ಕಳಚಿಕೊಳ್ಳುವುದು ಹಾಗೂ ಸಮುದಾಯ ಸಂಘಟನೆಗಳು ನಂತರದಲ್ಲಿ ಈ ಹೊಣೆಯನ್ನು ನಿಭಾಯಿಸುವುದು ಅಪೇಕ್ಷಣೀಯವೇ ಎಂಬುದನ್ನು ಕೇಳಿಕೊಳ್ಳಬೇಕಾಗಿದೆ. ಆದರೆ, ಸರ್ಕಾರ ವಹಿಸಬೇಕಾದ ಪಾತ್ರವನ್ನು ನಿಭಾಯಿಸಲು ಇರುವ ಸಂಘಟನೆಗಳು ಇವು ಅಲ್ಲ. ಸರ್ಕಾರದ ಜೊತೆ ಸೇರಿ ಪ್ರಗತಿಪರಹಾಗೂ ಸ್ಪಂದನಶೀಲ ಆಡಳಿತ ಒದಗಿಸಲು ಹಾಗೂ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದೆಂಬ ಬಗ್ಗೆ ಒಳನೋಟಗಳನ್ನು ನೀಡಲು ಈ ಸಂಘಟನೆಗಳಿಗೆ ಸಾಧ್ಯವಾದಲ್ಲಿ ಅದು ಹೆಚ್ಚು ಪರಿಣಾಮಕಾರಿ. ಹೀಗಿರುವಾಗ, ಪರಿಣಾಮಕಾರಿಯಾದ ಸರ್ಕಾರಿ ಆರೋಗ್ಯ ವ್ಯವಸ್ಥೆಗೆ ಪರ್ಯಾಯ ಯಾವುದೂ ಇಲ್ಲ. ಆರೋಗ್ಯ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ಸಲುವಾಗಿ ಸರ್ಕಾರವು ಆರೋಗ್ಯ ವಲಯವನ್ನು ತನ್ನ ಆಡಳಿತದ ಪ್ರಮುಖ ಕ್ಷೇತ್ರಗಳಲ್ಲಿ ಒಂದು ಎಂದು ಪುನರ್‌ಪ್ರತಿಪಾದಿಸುವುದು ನಿರ್ಣಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT